Advertisement

ಶಿಥಿಲಗೊಂಡ ಕಟ್ಟಡ: ಕ್ರೀಡಾಭ್ಯಾಸಕ್ಕೆ ನಿಷೇಧ  

05:13 PM Sep 27, 2018 | |

ಮಹಾನಗರ: ಮಂಗಳಾ ಕ್ರೀಡಾಂಗಣದ ಪೆವಿಲಿಯನ್‌ ಕಟ್ಟಡ ಸುಮಾರು 40 ವರ್ಷಗಳ ಹಳೆಯದಾಗಿದ್ದು, ಮೇಲ್ಫಾವಣಿಯು ಶಿಥಿಲ ಗೊಂಡಿರುವುದರಿಂದ ಸಿಮೆಂಟ್‌, ಸ್ಲ್ಯಾಬ್‌ನ ತುಂಡುಗಳ ಬೀಳುತ್ತಿವೆ. ಇದಕ್ಕಾಗಿ ಪೆವಿಲಿಯನ್‌ನಲ್ಲಿ ಕ್ರೀಡಾಭ್ಯಾಸ ಮಾಡುವುದನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನಿಷೇಧಿಸಿದೆ.

Advertisement

ಕ್ರೀಡಾಂಗಣದಲ್ಲಿ ಕ್ರೀಡಾಕೂಟಗಳು, ಅಭ್ಯಾಸ ಪ್ರಕ್ರಿಯೆಗಳು ಎಂದಿನಂತೆ ನಡೆಯುತ್ತಿವೆ. ಕ್ರೀಡಾಕೂಟಗಳು ಆಯೋಜನೆಗೊಂಡರೆ ವೀಕ್ಷಕರು ಪೆವಿಲಿಯನ್‌ನಲ್ಲೇ ಕುಳಿತುಕೊಳ್ಳಬೇಕಾಗಿರುವುದರಿಂದ ಅಪಾಯ ಸಾಧ್ಯತೆ ಹೆಚ್ಚು. ಇನ್ನೂ ಬಹುತೇಕ ಕ್ರೀಡಾಳುಗಳು ಕ್ರೀಡಾಂಗಣದಲ್ಲೇ ಅಭ್ಯಾಸ ಮಾಡುತ್ತಾರೆ. ಆದರೆ ಅವರ ಹೆತ್ತವರು ಅಥವಾ ಇತರರು ಪೆವಲಿಯನ್‌ನಲ್ಲಿ ಕುಳಿತುಕೊಂಡು ಅಭ್ಯಾಸ ವೀಕ್ಷಿಸುತ್ತಾರೆ.

ಗೋಡೆಯಲ್ಲಿ ನೋಟಿಸ್‌
ಇಲಾಖೆ ವತಿಯಿಂದ ಪೆವಿಲಿಯನ್‌ ಗೋಡೆಯಲ್ಲಿ ನೋಟಿಸ್‌ ಹಚ್ಚಲಾಗಿದ್ದು, ಇಲ್ಲಿ ಯಾವುದೇ ಅಭ್ಯಾಸ ಮಾಡಬಾರದು. ಮಾಡಿದರೆ ಮುಂದಾಗುವ ಅಪಾಯಗಳಿಗೆ ಅವರೇ ಹೊಣೆಗಾರರು ಎಂದು ಬರೆಯಲಾಗಿದೆ.

ಎನ್‌ಐಟಿಕೆಯಿಂದ ವರದಿ
1978ರಲ್ಲಿ ಕ್ರೀಡಾಂಗಣದ ಪೆವಿಲಿಯನ್‌ ನಿರ್ಮಾಣಗೊಂಡಿದ್ದು, ಹವಾಮಾನ ವೈಪರೀತ್ಯ ಮತ್ತು ಮಳೆಯ ಕಾರಣ ಕಟ್ಟಡ ಶಿಥಿಲಗೊಂಡಿದೆ. ಮೇಲ್ಛಾವಣಿಯ ಕೆಲವೆಡೆಗಳಲ್ಲಿ ಬಿರುಕು ಉಂಟಾಗಿ ಮಳೆಗಾಲದಲ್ಲಿ ಸೋರುತ್ತಿತ್ತು. ಈ ನಡುವೆ ಕ್ರೀಡಾಂಗಣದ ಮೇಲ್ಛಾವಣಿಯಲ್ಲಿ ಸೌರ ವಿದ್ಯುತ್‌ ಸ್ಥಾವರ ಅಳವಡಿಸುವ ಯೋಜನೆಗೆ ಪೂರಕವಾಗಿ ಎನ್‌ಐಟಿಕೆಯ ತಜ್ಞ ಎಂಜಿಯರ್‌ಗಳಲ್ಲಿ ವರದಿ ಕೇಳಿದಾಗ, ಪೆವಿಲಿಯನ್‌ ಬಹಳ ಹಳೆಯದಾಗಿದ್ದು, ಮೇಲ್ಛಾವಣಿಯ ಸರಳುಗಳು ತುಕ್ಕು ಹಿಡಿದಿವೆ. ಅವುಗಳನ್ನು ಸರಿಪಡಿಸದೆ ಮುಂದಿನ ಯಾವುದೇ ಕಾಮಗಾರಿ ನಡೆಸಲು ಸಾಧ್ಯವಿಲ್ಲ ಎಂದು ವರದಿ ನೀಡಿದೆ. ಹಾಗಾಗಿ ಪೆವಿಲಿಯನ್‌ ಮೇಲ್ಛಾವಣಿಯಲ್ಲಿ 20 ಕಿ.ವ್ಯಾ. ಸಾಮರ್ಥ್ಯದ ಸೌರ ವಿದ್ಯುತ್‌ ಫ್ಯಾನಲ್‌ ಆಳವಡಿಸುವ ಕುರಿತು ಕಾಮಗಾರಿ ಕೂಡ ವಿಳಂಬವಾಗುತ್ತಿದೆ.

ಕಾಮಗಾರಿ ಆರಂಭಗೊಂಡರೆ ಕ್ರೀಡಾಂಗಣ ಬಂದ್‌?
ಪೆವಿಲಿಯನ್‌ ಕಾಮಗಾರಿಗೆ ಬೇಕಾದ ಆಡಳಿತಾತ್ಮಕ ಪ್ರಕ್ರಿಯೆಗಳು ಮುಗಿದ ಬಳಿಕ ಕಾಮಗಾರಿ ಆರಂಭಗೊಂಡು ಮುಕ್ತಾಯಗೊಳ್ಳುವವವರೆಗೆ ಸುಮಾರು ಮೂರು ತಿಂಗಳು ಕ್ರೀಡಾಂಗಣ ಬಂದ್‌ ಆಗಲಿದೆ. ಇದರಿಂದ ಕ್ರೀಡಾಪಟುಗಳಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಆದರೆ ಸುರಕ್ಷೆ ದೃಷ್ಟಿಯಿಂದ ಇದು ಅನಿವಾರ್ಯ ಎಂದು ಜಿಲ್ಲಾ ಪಂಚಾಯತ್‌ನ ಎಂಜಿನಿಯರ್‌ ಪತ್ರಿಕೆಗೆ ತಿಳಿಸಿದ್ದಾರೆ.

Advertisement

ಅಂದಾಜು ಪಟ್ಟಿ ಸಲ್ಲಿಕೆ
ಕಟ್ಟಡ ಶಿಥಿಲವಾಗಿರುವುದರಿಂದ ಅದನ್ನು ದುರಸ್ತಿಪಡಿಸುವಂತೆ ಎನ್‌ಐಟಿಕೆ ಅಧಿಕಾರಿಗಳು ವರದಿ ನೀಡಿದ ಹಿನ್ನಲೆಯಲ್ಲಿ ಕ್ರೀಡಾಂಗಣ ನಿರ್ವಹಣೆ ಮತ್ತು ನಿರ್ಮಾಣ ಅಡಿಯಲ್ಲಿ 2017-18ನೇ ಸಾಲಿನಲ್ಲಿ16 ಲಕ್ಷ ರೂ. ಹಾಗೂ 2018-19ನೇ ಸಾಲಿನಲ್ಲಿ 18 ಲಕ್ಷ ರೂ. ಅನುದಾನ ಕಾದಿರಿಸಲಾಗಿದ್ದು, ಅಂದಾಜು ಪಟ್ಟಿ ಮಂಜೂರಾತಿಗಾಗಿ ಜಿಲ್ಲಾ ಪಂಚಾಯತ್‌ ಎಂಜಿನಿಯರಿಂಗ್‌ ವಿಭಾಗಕ್ಕೆ ಕಳುಹಿಸಲಾಗಿದೆ. ಅದಾದ ಬಳಿಕ ಕಾಮಗಾರಿ ಪ್ರಕ್ರಿಯೆಗಳು ಆರಂಭಗೊಳ್ಳಲಿದೆ.
– ಪ್ರದೀಪ್‌ ಡಿ’ಸೋಜಾ, ಉಪನಿರ್ದೇಶಕ,
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ

ಪ್ರಜ್ಞಾ ಶೆಟ್ಟಿ 

Advertisement

Udayavani is now on Telegram. Click here to join our channel and stay updated with the latest news.

Next