Advertisement

ಪರಾಠೇವಾಲಿ ಗಲಿ

10:01 PM Aug 24, 2019 | Team Udayavani |

ಜುಲೈ-ಆಗಸ್ಟ್‌ ತಿಂಗಳ ರಾಕ್ಷಸ ಧಗೆಯು ದಿಲ್ಲಿಗೆ ಹೊಸತೇನಲ್ಲ.
ಇನ್ನು ಹಳೇದಿಲ್ಲಿಯ ಇಕ್ಕಟ್ಟಾದ ಗಲ್ಲಿಗಳಿಗೆ ಬಂದರಂತೂ ಹೇಳುವುದೇ ಬೇಡ. ಇಕ್ಕಟ್ಟಾದ ರಸ್ತೆಗಳು, ಪಾದಚಾರಿಗಳು ಹೆಜ್ಜೆಹಾಕುವ ಪುಟ್ಟ ಓಣಿಗಳಲ್ಲೂ ಓಡಾಡುವ ದ್ವಿಚಕ್ರ ವಾಹನಗಳು, ಸೈಕಲ್‌ ರಿಕ್ಷಾಗಳು ! ಇತ್ತ ಬಂದರೆ ಥೇಟು ಅಭಿಮನ್ಯುವಿನ ಚಕ್ರವ್ಯೂಹದಂತೆ ಎಂಬ ಬೆಚ್ಚಿಬೀಳುವ ಸತ್ಯವು ಗೊತ್ತಿದ್ದರೂ ಧೈರ್ಯ ಮಾಡಿ ಸಾಗುವ ಬೆರಳೆಣಿಕೆಯ ಆಟೋಸಮೂಹ ! ಇವುಗಳೆಲ್ಲ ಹಳೇದಿಲ್ಲಿಯ ಗಲ್ಲಿಗಳನ್ನು

Advertisement

ಕೊಂಚ ಹೆಚ್ಚೇ ಜೀವಂತವಾಗಿಡುತ್ತವೆ. ಇನ್ನು ಈಗಾಗಲೇ
ಇರುವ ಅಂಗಡಿಮುಗ್ಗಟ್ಟುಗಳೊಂದಿಗೆ ಸ್ಪರ್ಧೆಗಿಳಿದಂತೆ
ಕಾಣುವ ಕೈಗಾಡಿಗಳು, ಧಗೆಯ ದಾಹದಿಂದ ಬಳಲುವವರಿ
ಗೆಂದೇ ಹಲವು ಬಗೆಯ ರಸಾಯನಗಳನ್ನು ಸಿದ್ಧಪಡಿಸುತ್ತಿ
ರುವ ಗೂಡಿನಂತಿನ ವ್ಯವಸ್ಥೆಯನ್ನಿಟ್ಟುಕೊಂಡಿರುವ ವ್ಯಾಪಾರಿಗಳು, ಜೋಳದ ಕೋಡುಗಳಿಂದ ಹಿಡಿದು ಫ‌ಲೂದಾ-ಕುಲ್ಫಿà-ಚಾಟ್‌ಗಳನ್ನೂ ಇರಿಸಿಕೊಂಡು ಗ್ರಾಹಕ ರನ್ನು ಸೆಳೆಯುತ್ತಲಿರುವ ಪುಟ್ಟ ವ್ಯವಸ್ಥೆಗಳು ಹಳೇದಿಲ್ಲಿ- ಚಾಂದನೀಚೌಕ್‌ ಏರಿಯಾಗಳನ್ನು ಆಹಾರಪ್ರಿಯರ ಸ್ವರ್ಗವನ್ನಾಗಿಸಿರುವುದು ಬಹುತೇಕರಿಗೆ ತಿಳಿದೇ ಇದೆ.
ಇತ್ತ ದೊಡ್ಡ ಬಾಣಲೆಗಳಲ್ಲಿ ಹುರಿಯುತ್ತಿರುವ ಕಚೌರಿ- ಪಕೋಡಾ- ಸಮೋಸಗಳು, ಬಿಸಿ ಎಣ್ಣೆಯಲ್ಲಿ ಹಾಕಿರುವ ಹಳದಿ ರಂಗೋಲಿಯಂತೆ ಕಾಣುವ ರುಚಿಕರ ಜಿಲೇಬಿಗಳೂ ಕೂಡ ಶಹರದ ಧಗೆಯೊಂದಿಗೆ ತನ್ನ ಹಬೆಯನ್ನೂ ಸೇರಿಸಿ ಹಳೇದಿಲ್ಲಿಯ ಹವೆಯನ್ನು ಮತ್ತಷ್ಟು “ಹಾಟ್‌’ ಆಗಿಸುತ್ತ, ಶಹರವನ್ನು “ಕೂಲ್‌’ ಟ್ರೆಂಡ್‌ನ‌ತ್ತ ತಂದಿದೆ. ಗಲ್ಲಿಯ ಮೂಲೆಗಳ

ಈ ಬಿಸಿ ಬಾಣಲೆಗಳಿಂದ, ಅಗಲವಾದ ಸುಡು ಕಾವಲಿ
ಗಳಿಂದ ಜಗತ್ತಿನ ಪರಿವೆಯೇ ಇಲ್ಲದಂತೆ ಮೇಲೇರುತ್ತಿರು
ವುದು ಕೇವಲ ಹೊಗೆಯಷ್ಟೇ ಅಲ್ಲ. ಅದು ಹಳೇದಿಲ್ಲಿಯಲ್ಲಿ ಯಥೇತ್ಛವಾಗಿ ಸಿಗುವ ತರಹೇವಾರಿ ತಿನಿಸುಗಳ ಮೋಹಕ
ಘಮ. ಬೇರೆಲ್ಲೂ ಕಾಣಸಿಗದ ದಿಲ್ಲಿಯ ಆಹಾರವೈವಿಧ್ಯಗಳಲ್ಲಷ್ಟೇ
ಕಾಣಸಿಗುವ ಅಪ್ಪಟ ದೇಸಿತನದ ಸುಗಂಧ. ಹೀಗಾಗಿ, ಈಗಾ ಗಲೇ ಬೇಸಿಗೆಯ ಧಗೆಯಲ್ಲಿ ಸುಡುತ್ತಿರುವ ಶಹರಕ್ಕೂ, ಇಲ್ಲಿಯ
ಮಂದಿಗೂ ಹೆಜ್ಜೆಯಿಟ್ಟಲ್ಲಿ ಕಾಣಸಿಗುವ ಒಲೆಗಳ ಹಬೆಯು
ಭಾರವೆನಿಸುವುದಿಲ್ಲ. ಈ ಪ್ರದೇಶಗಳಲ್ಲಿ ನಿತ್ಯವೂ ಕಾಣ ಸಿಗುವ ಎಡೆಬಿಡದ ಜನಜಂಗುಳಿಯೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿ.
“ಪರಾಠಾ’ ಸಾಮ್ರಾಜ್ಯ

ಪರಾಠಾಗಳು ಉತ್ತರಭಾರತೀಯರಿಗೆ ಹೊಸತಲ್ಲ. ಬೆಳಗ್ಗಿನ ಉಪಾಹಾರವೆಂದರೆ ಪರಾಠಾ ಎಂಬಷ್ಟರ ಮಟ್ಟಿಗೆ ಎಲ್ಲರ ಜೀವನಶೈಲಿಯ ಭಾಗವಾಗಿರುವ ಜನಪ್ರಿಯ ತಿನಿಸಿದು. ದಿಲ್ಲಿ, ರಾಜಸ್ಥಾನ, ಪಂಜಾಬ್‌, ಚಂಡೀಗಢ, ಹರಿ ಯಾಣಾ, ಉತ್ತರಪ್ರದೇಶ, ಹಿಮಾಚಲಗಳನ್ನೂ ಸೇರಿದಂತೆ ಉತ್ತರಭಾರತದ ಹಲವು ಭಾಗಗಳ ಮೆಚ್ಚಿನ ಮತ್ತು ನಿತ್ಯದ ಖಾದ್ಯ. ಪಂಜಾಬಿಗಳಿಗೋ ಇದು ನೆಚ್ಚಿನ “ಪರಾಂಠಾ’. ಒಂದು ರೀತಿಯಲ್ಲಿ ದಕ್ಷಿಣದವರಿಗೆ ಉಪ್ಪಿಟ್ಟಿರು ವಂತೆ ಉತ್ತರದ ಮಂದಿಗೆ ಪರಾಠಾ ಎನ್ನಬಹುದೇನೋ! ಬೆಳಗ್ಗಿನ ಉಪಾಹಾರಕ್ಕೆ ದೇಸಿತುಪ್ಪದೊಂದಿಗೆ ನೆಂಜಿಕೊಂಡು ಒಂದೆರಡು ಪರಾಠಾ ತಿಂದುಬಿಟ್ಟರೆ ಹಸಿವು ಅಷ್ಟು ಸುಲಭ ವಾಗಿ ಹತ್ತಿರ ಸುಳಿಯುವುದಿಲ್ಲ. ಈಚೆಗೆ ಪರಾಠಾಗಳಲ್ಲಿ ಹಲವು ಬಗೆಯ ವೈವಿಧ್ಯಗಳು ಬಂದಿವೆಯಾದರೂ ಮೊಸರು ಮತ್ತು ಉಪ್ಪಿನಕಾಯಿಗಳ ಕಾಂಬೋಗಳನ್ನು ಹೊಂದಿರುವ ಪರಾಠಾಗಳು ದಿಲ್ಲಿಯೂ ಸೇರಿದಂತೆ ಭಾರತದ ಬಹುತೇಕ ಭಾಗಗಳಲ್ಲಿ ಜನಪ್ರಿಯ ಪರಾಠಾ ಕಾಂಬೋಗಳಲ್ಲೊಂದು.

ಇನ್ನು “ಸ್ಟ್ರೀಟ್‌ ಫ‌ುಡ್‌’ಗಳೆಂದು ಸಾಮಾನ್ಯವಾಗಿ ಕರೆಯಲ್ಪಡುವ, ರಸ್ತೆಬದಿಗಳಲ್ಲಿ ಸಿಗುವ ರುಚಿಯಾದ ತಿಂಡಿತಿನಿಸು ಗಳಿಂದ ಖ್ಯಾತಿಯನ್ನು ಪಡೆದಿರುವ ದಿಲ್ಲಿಯು ಈ ಮಟ್ಟಿನಲ್ಲಿ ಹಿಂದುಳಿಯು ವುದು ಸಾಧ್ಯವೆ? ಪರಾಠಾಗಳ ಹೆಸರಿನಲ್ಲಂತೂ ಹಳೇದಿಲ್ಲಿಯಲ್ಲಿ ಒಂದು ಗಲ್ಲಿಯೇ ಮೀಸಲಾಗಿದೆ. ಅದುವೇ ದಿಲ್ಲಿಯ ನಿತ್ಯನೂತನ ಪರಾಠೇವಾಲೀ ಗಲಿ. ಕಾಲಾನುಕ್ರಮ ದಲ್ಲಿ ಶಹರಕ್ಕೆ ಅದೆಷ್ಟು ಐಷಾರಾಮಿಗಳು ಹೊಟೇಲುಗಳು ಬಂದಿದ್ದರೂ ಪರಾಠೇವಾಲಿ ಗಲಿಯು ತನ್ನ ಪ್ರಾಮುಖ್ಯವನ್ನು ಕಳೆದುಕೊಂಡಿಲ್ಲವೆನ್ನಿ. ಈ ಗಲ್ಲಿಯು ಜನಸಾಮಾನ್ಯರಿಂದ ಹಿಡಿದು ಖ್ಯಾತನಾಮರವರೆಗೂ ತನ್ನ ಆತಿಥ್ಯವನ್ನು ನೀಡಿದೆ ಮತ್ತು ಈಗಲೂ ನೀಡುತ್ತಲಿದೆ.

Advertisement

ಗಲ್ಲಿಯು ನಡೆದುಬಂದ ಹಾದಿ
ಅಸಲಿಗೆ ಪರಾಠೇವಾಲೀ ಗಲ್ಲಿಯ ಇತಿಹಾಸವನ್ನು 1650ರ ಸುಮಾರಿನಲ್ಲಿ ಮೊಗಲ್‌ ದೊರೆಯಾಗಿದ್ದ ಶಹಜಹಾ ನನ ಮಗಳು ಜಹಾನಾರಾ ಬೇಗಂರ ಹಿನ್ನೆಲೆಯೊಂದಿಗೆ ಕಾಣಲಾಗುತ್ತದೆ. ತನ್ನ ಆರಂಭದ ದಿನಗಳಲ್ಲಿ ಈ ಭಾಗವು ಬೆಳ್ಳಿ ವ್ಯಾಪಾರಿಗಳ, ಚಿಕ್ಕಪುಟ್ಟ ಅಕ್ಕಸಾಲಿಗರ ತಾಣವೆಂದೇ ಹೆಸರಾಗಿತ್ತು. ನಂತರ ಇದರ ಚಿತ್ರಣವೇ ಬದಲಾಗಿದ್ದು 19ನೇ ಶತಮಾನದ ಕೊನೆಯ ಭಾಗದಲ್ಲಿ. 1872 ರಲ್ಲಿ ಪಂಡಿತ್‌ ಗಯಾಪ್ರಸಾದ್‌ ಎಂಬ ಹೆಸರಿನ ಆಗ್ರಾ ಮೂಲದ ಯುವಕನೊಬ್ಬ ಈ ಭಾಗಕ್ಕೆ ಬಂದು ಚಿಕ್ಕದೊಂದು ಪರಾಠಾ ಸ್ಪೆಷಲ್‌ ಖಾನಾವಳಿಯನ್ನು ಆರಂಭಿಸಿದ್ದ. ಖಾನಾವಳಿಯು ನೋಡನೋಡುತ್ತಲೇ ಅದೆಷ್ಟು ಜನಪ್ರಿಯವಾಯಿತೆಂದರೆ ಈತನ ಕುಟುಂಬದ ಹಲವರು ಇತ್ತ ವಲಸೆ ಬಂದು ತಮ್ಮದೇ ಆದ ಪರಾಠಾ ಕ್ಯಾಂಟೀನುಗಳನ್ನು ತೆರೆಯಲಾರಂಭಿಸಿ ಗಲ್ಲಿಯ ಖ್ಯಾತಿಯನ್ನು ಪರಾಠಾದ ಗಲ್ಲಿಯೆಂದೇ ಹೆಸರಾಗಿಸುವಲ್ಲಿ ಯಶಸ್ವಿಯಾಗಿದ್ದರು.

ಇಂದಿಗೂ ಗಯಾಪ್ರಸಾದ್‌ ಮತ್ತು ಅವರ ದೂರದ ಕೆಲ ಸಂಬಂಧಿ ಸದಸ್ಯರು ಪರಾಠಾಗಳನ್ನು ಸಿದ್ಧಪಡಿಸುತ್ತ ಈ ಪರಂಪರೆಯನ್ನು ಜೀವಂತವಾಗಿಟ್ಟಿರುವುದು ವಿಶೇಷ. ಐದಾರು ಪೀಳಿಗೆಗಳು ಕಳೆದ ನಂತರವೂ ಇವರ ಪರಾಠಾಗಳು ತಮ್ಮ ಜನಪ್ರಿಯತೆಯನ್ನು ಒಂದಿಷ್ಟೂ ಕಳೆದುಕೊಳ್ಳದಿರುವುದು ಇಲ್ಲಿ ಲಭ್ಯವಾಗುವ ಅತ್ಯುತ್ಕೃಷ್ಟ ಮತ್ತು ಸ್ವಾದಿಷ್ಟ ಪರಾಠಾಗಳ ಖ್ಯಾತಿಗೊಂದು ಉತ್ತಮ ನಿದರ್ಶನ. ಜವಾಹರಲಾಲ್‌ ನೆಹರೂ, ಇಂದಿರಾಗಾಂಧಿ, ವಿಜಯಲಕ್ಷ್ಮೀ ಪಂಡಿತ್‌, ಲಾಲ್‌ ಬಹಾದ್ದೂರ್‌ ಶಾಸ್ತ್ರಿಯವರಂಥ ಖ್ಯಾತನಾಮರು ಪರಾಠಾಗಳನ್ನು ಮೆಲ್ಲುತ್ತಿರುವ ಛಾಯಾಚಿತ್ರಗಳನ್ನು ಇಲ್ಲಿ ಕಾಣಬಹುದು. ಜಯಪ್ರಕಾಶ ನಾರಾಯಣರಿಗೂ ಕೂಡ ಇದು ಬಲುಪ್ರಿಯವಾದ ತಾಣವಾಗಿತ್ತಂತೆ. ಮುಂದೆಯೂ ಚಿತ್ರತಾರೆಗಳಿಂದ ಹಿಡಿದು ಕಲಾವಿದರವರೆಗೂ ಇಲ್ಲಿ ಹಲವಾರು ಖ್ಯಾತನಾಮರು ಬಂದುಹೋಗಿದ್ದಾರೆ. ಹೀಗೆ ತಮ್ಮಲ್ಲಿಗೆ ಬಂದುಹೋಗಿರುವ ಖ್ಯಾತನಾಮರ ಚಿತ್ರಗಳು ಈ ಪುಟ್ಟ ಹೊಟೇಲುಗಳ ಗೋಡೆಗಳನ್ನು ಅಲಂಕರಿಸುವುದಷ್ಟೇ ಅಲ್ಲದೆ ಇವರುಗಳು ನಡೆಸುತ್ತಿರುವ ಯಶಸ್ವಿ ಪ್ರಚಾರ ತಂತ್ರದ ಭಾಗವೂ ಆಗಿಬಿಟ್ಟಿದೆ.

ಅಷ್ಟೇನೂ ದುಬಾರಿಯಲ್ಲದ ಮತ್ತು ಮೂವತ್ತಕ್ಕೂ ಹೆಚ್ಚಿನ ಅಪರೂಪದ ವೈವಿಧ್ಯಗಳನ್ನು ಹೊಂದಿರುವ ರುಚಿ ಕರ ಪರಾಠಾಗಳು ಪರಾಠೇವಾಲೀ ಗಲಿಯನ್ನು ಪ್ರವಾಸಿ ಗರು- ಸ್ಥಳೀಯರೆಂಬ ಭೇದವಿಲ್ಲದೆ ಎಲ್ಲರನ್ನೂ ತನ್ನತ್ತ ಸೆಳೆಯುತ್ತಲಿವೆ. ಇನ್ನು ಫ‌ುಡ್‌ ಬ್ಲಾಗರ್‌- ವ್ಲಾಗರ್‌ಗಳಿ ಗಂತೂ ಇದು ಎಂದಿನ ಸ್ವರ್ಗ. ಮುಗಿದಷ್ಟೂ ನಿಲ್ಲದೆ ಬೆಳೆ ಯುತ್ತಿರುವಂತೆ ಕಾಣುವ, ಪರಾಠಾಗಳಿಗಾಗಿ ಕಾಯುತ್ತಿರುವ ಇಲ್ಲಿಯ ಜನರ ಸಾಲುಗಳು ಇಂದಿನ ಜಂಕ್‌ಫ‌ುಡ್‌ ಆಹಾರಶೈಲಿಯ ಆರ್ಭಟದಲ್ಲೂ ರುಚಿಕರವಾದ ದೇಸಿ ಶೈಲಿಯ ಖಾದ್ಯಗಳಿಗಿರುವ ಬೇಡಿಕೆಗೆ ಕನ್ನಡಿ ಹಿಡಿದಂತಿದೆ.

ಅದಕ್ಕೇ ಹೇಳುವುದು ಆಹಾರಪ್ರಿಯರು- ಹಳೇದಿಲ್ಲಿಯ ಕಡೆ ಕಾಲಿಡುವುದಾದರೆ ಹಸಿದಿದ್ದರಷ್ಟೇ ಸಾಲದು, ತಮ್ಮ ಸರದಿ ಯು ಬರುವಷ್ಟು ಕಾಯುವಂತಿನ ತಾಳ್ಮೆಯನ್ನೂ ಹೊಂದಿರಬೇಕು.

ಪ್ರಸಾದ್‌ ನಾೖಕ್‌

Advertisement

Udayavani is now on Telegram. Click here to join our channel and stay updated with the latest news.

Next