Advertisement
ಈ ವೇಳೆ ಮಾತನಾಡಿದ ಅನಂತ ಕುಮಾರ್, ವಿಜಯಕುಮಾರ್ ಅವರು ತಮ್ಮ ಹೃದಯವನ್ನು ಜಯನಗರದ ಅಭಿವೃದ್ಧಿಗೆ ಮೀಸಲಿಟ್ಟಿದ್ದರು. ಆದರೆ ಈಗ ದಾದಾಗಿರಿ, ಗೂಂಡಾಗಿರಿ ನಡೆಸಲು ಅವಕಾಶ ಪಡೆಯಲು ಕಾಂಗ್ರೆಸ್ ಹೊಂಚು ಹಾಕುತ್ತಿದೆ. ದಾದಾಗಿರಿ, ಡಾನ್‌ಗಿರಿ ಬೇಕಾಗಿಲ್ಲ. ಇದರ ವಿರುದ್ಧ ಪಕ್ಷ ಹೋರಾಟ ನಡೆಸಲಿದೆ ಎಂದು ಹೇಳಿದರು.
Related Articles
Advertisement
ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಬಾಬು ಮಾತನಾಡಿ, ಮತದಾನಕ್ಕೆ 15 ದಿನ ಬಾಕಿ ಇರುವಾಗಲೇ ಸಹೋದರ ವಿಜಯಕುಮಾರ್ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಅದರಂತೆ ಈಗಲೂ ಪಾಲಿಕೆ ಸದಸ್ಯರು, ಮಾಜಿ ಸದಸ್ಯರು ಸೇರಿದಂತೆ ಎಲ್ಲರೂ ಒಟ್ಟಿಗೇ ಇದ್ದೇವೆ. ಸಣ್ಣ ಪುಟ್ಟ ಗೊಂದಲಗಳನ್ನು ಸರಿಪಡಿಸಿಕೊಂಡಿದ್ದೇವೆ. ಇಂದಿನಿಂದಲೇ ಪ್ರಚಾರ ಆರಂಭಿಸುತ್ತೇವೆ ಎಂದು ತಿಳಿಸಿದರು.
ನಾಮಪತ್ರ ಸಲ್ಲಿಕೆಗೆ ಅಭ್ಯರ್ಥಿ ಸೇರಿದಂತೆ ಐದು ಮಂದಿಯಷ್ಟೇ ಚುನಾವಣಾಧಿಕಾರಿ ಕಚೇರಿಗೆ ಹೋಗಲು ಅವಕಾಶವಿರುವುದರಿಂದ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್ ಕಚೇರಿಯ ಹೊರಗೇ ಇದ್ದರು. ಸುಮಾರು 20 ನಿಮಿಷಕ್ಕೂ ಹೆಚ್ಚು ಹೊತ್ತು ವಾಣಿಜ್ಯ ಸಂಕೀರ್ಣದ ಹೊರ ಆವರಣದಲ್ಲಿ ನಿಂತಿದ್ದರು.
ಸಂಧಾನ ಯಶಸ್ವಿ; ಅತೃಪ್ತರು ಹಾಜರ್!ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿದ್ದ ಕ್ಷೇತ್ರದ ಕೆಲ ಹಾಲಿ, ಮಾಜಿ ಪಾಲಿಕೆ ಸದಸ್ಯರೊಂದಿಗೆ ಬಿಜೆಪಿ ನಾಯಕರು ನಡೆಸಿದ ಸಂಧಾನ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಉಂಟಾಗಿದ್ದ ಗೊಂದಲ ತಕ್ಕ ಮಟ್ಟಿಗೆ ನಿವಾರಣೆಯಾದಂತಾಗಿದೆ. ಆದರೆ ಬಿಜೆಪಿ ಕಾರ್ಪೊರೇಟರ್ ಎನ್.ನಾಗರಾಜ್ ಪಕ್ಷದ ಚಟುವಟಿಕೆಯಿಂದ ಈಗಲೂ ದೂರ ಉಳಿದಿದ್ದಾರೆ. ತಮ್ಮಲ್ಲೇ ಒಬ್ಬರಿಗೆ ಟಿಕೆಟ್ ನೀಡಿದರೆ ಎಲ್ಲರೂ ಸಂಘಟಿತರಾಗಿ ಗೆಲುವಿಗೆ ಶ್ರಮಿಸುವುದಾಗಿ ಮಾಜಿ ಮೇಯರ್ ಎಸ್.ಕೆ.ನಟರಾಜ್, ಪಾಲಿಕೆ ಸದಸ್ಯ ಎನ್.ನಾಗರಾಜ್, ಮಾಜಿ ಸದಸ್ಯರಾದ ಸಿ.ಕೆ.ರಾಮಮೂರ್ತಿ ಪಕ್ಷದ ನಾಯಕರಿಗೆ ಮನವಿ ಮಾಡಿದ್ದರು. ಇದಕ್ಕೆ ಮಾಜಿ ಕಾರ್ಪೊರೇಟರ್ ಬಿ.ಸೋಮಶೇಖರ್ ಬೆಂಬಲಿಸಿದ್ದರು. ಆದರೆ ಪಕ್ಷ ಪ್ರಹ್ಲಾದ್ ಬಾಬು ಅವರಿಗೆ ಟಿಕೆಟ್ ನೀಡಿದ್ದರಿಂದ ಇವರೆಲ್ಲ ಅಸಮಾಧಾನಗೊಂಡಿದ್ದರು. ಬುಧವಾರ, ಗುರುವಾರ ಪಕ್ಷದವರ ಸಂಪರ್ಕಕ್ಕೂ ಸಿಗದೆ, ಪಕ್ಷದ ಚಟುವಟಿಕೆಗಳಲ್ಲೂ ಪಾಲ್ಗೊಳ್ಳದೆ ತಟಸ್ಥರಾಗಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಕೇಂದ್ರ ಸಚಿವ ಅನಂತ ಕುಮಾರ್, ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್ ಅವರು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ನಿವಾಸದಲ್ಲಿ ನಡೆಸಿದ ಸಂಧಾನ ಯಶಸ್ವಿಯಾಯಿತು. ಚುನಾವಣೆ ಸಮೀಪದಲ್ಲಿರುವ ಸಂದರ್ಭದಲ್ಲಿ ತಟಸ್ಥರಾಗಿ ಉಳಿದರೆ ಪಕ್ಷಕ್ಕೆ ಹಿನ್ನಡೆಯಾಗಲಿದೆ. ಅಭ್ಯರ್ಥಿ ಆಯ್ಕೆ ವೇಳೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗದೆ ಲೋಪವಾಗಿರಬಹುದು. ಅದನ್ನೆಲ್ಲಾ ಮರೆತು ಪಕ್ಷದ ಗೆಲುವಿಗೆ ಎಲ್ಲರೂ ಶ್ರಮಿಸಬೇಕು ಎಂದು ಮುಖಂಡರು ಸೂಚಿಸಿದ್ದು, ಇದಕ್ಕೆ ಎಲ್ಲರೂ ಸಮ್ಮತಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್.ಕೆ.ನಟರಾಜ್, ಮೂವರು ಆಕಾಂಕ್ಷಿಗಳಿಗೂ ಟಿಕೆಟ್ ತಪ್ಪಿದ್ದರಿಂದ ಬೇಸರವಾಗಿತ್ತು. ಸಭೆಯಲ್ಲಿ ನಾಯಕರು ಎಲ್ಲವನ್ನೂ ಮನವರಿಕೆ ಮಾಡಿಕೊಟ್ಟಿದ್ದಾರೆ. ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುವಂತೆ ಸೂಚಿಸಿದ್ದು, ಅದರಂತೆ ಕಾರ್ಯ ನಿರ್ವಹಿಸುತ್ತೇವೆ. ಈಗಿನಿಂದಲೇ ಪ್ರಚಾರದಲ್ಲಿ ಪಾಲ್ಗೊಳ್ಳುತ್ತೇವೆ ಎಂದು ಹೇಳಿದರು. ಮುಂದುವರಿದ ಅಸಮಾಧಾನ
ಟಿಕೆಟ್ ಕೈತಪ್ಪಿದ್ದರಿಂದ ತೀವ್ರ ಅಸಮಾಧಾನಗೊಂಡಿರುವ ಬೈರಸಂದ್ರ ವಾರ್ಡ್‌ನ ಎನ್.ನಾಗರಾಜ್ ಶುಕ್ರವಾರದ ಸಭೆಯಲ್ಲೂ ಪಾಲ್ಗೊಳ್ಳಲಿಲ್ಲ. ಈ ಕುರಿತು “ಉದಯವಾಣಿ’ಗೆ ಪ್ರತಿಕ್ರಿಯಿಸಿದ ನಾಗರಾಜ್, ಬಿಜೆಪಿಗೆ ಸೇರ್ಪಡೆಯಾಗಿ ಬಿಜೆಪಿಯೇತರ ಮತಗಳನ್ನು ಸೆಳೆದಿದ್ದೇನೆ. ಬೈರಸಂದ್ರ ವಾರ್ಡ್‌ನಲ್ಲಿ ಮುಸ್ಲಿಂ ಬಾಂಧವರೂ ಬಿಜೆಪಿಗೆ ಮತ ಹಾಕುವಷ್ಟರ ಮಟ್ಟಿಗೆ ಸಂಘಟನೆ ಮಾಡಿದ್ದೇನೆ. ನನಗಲ್ಲದಿದ್ದರೂ, ನಟರಾಜ್, ರಾಮಮೂರ್ತಿ ಪೈಕಿ ಯಾರಿಗೇ ಟಿಕೆಟ್ ನೀಡಿದ್ದರೂ ಸಂತೋಷವಾಗುತ್ತಿತ್ತು. ಇಲ್ಲವೇ ಪಕ್ಷದ ಕಾರ್ಯಕರ್ತರಿಗೆ ನೀಡಿದ್ದರೂ ಶ್ರಮಿಸುತ್ತಿದ್ದೆವು. ಆದರೆ ಒಂದು ದಿನವೂ ಪಕ್ಷದಲ್ಲಿ ಕೆಲಸ ಮಾಡದವರಿಗೆ ಟಿಕೆಟ್ ನೀಡಿರುವುದು ಬೇಸರ ತಂದಿದೆ. ಭಾನುವಾರ ನನ್ನ ನಿಲುವು ಪ್ರಕಟಿಸಲಿದ್ದೇನೆ,’ ಎಂದು ಹೇಳಿದ್ದಾರೆ. 19 ಮಂದಿ ಕಣದಲ್ಲಿ
ಈಗಾಗಲೇ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸೌಮ್ಯರೆಡ್ಡಿ, ಜೆಡಿಎಸ್‌ನಿಂದ ಕಾಳೇಗೌಡ, ಪಕ್ಷೇತರ ಅಭ್ಯರ್ಥಿಯಾಗಿ ರವಿ ಕೃಷ್ಣಾರೆಡ್ಡಿ ನಾಮಪತ್ರ ಸಲ್ಲಿಸಿದ್ದು, ಒಟ್ಟು 19 ಮಂದಿ ಕಣದಲ್ಲಿದ್ದಾರೆ. ವಿಜಯಕುಮಾರ್ ಅವರ ನಿಧನ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮಾತ್ರ ನಾಮಪತ್ರ ಸಲ್ಲಿಸಲು ಅವಕಾಶವಿತ್ತು.