ಶಿವಮೊಗ್ಗ: ಮೈತ್ರಿ ಪಕ್ಷಗಳ ಮಧ್ಯೆ ಈವರೆಗೂ ಹೊಂದಾಣಿಕೆಯೇ ಆಗಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಪರಸ್ಪರ ಬಡಿದಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಮಾಜಿ ಉಪಮುಖ್ಯಮಂತ್ರಿ, ಶಾಸಕ ಕೆ.ಎಸ್.ಈಶ್ವರಪ್ಪ ಟೀಕಿಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವಾಗಿ ಡಿ.ಕೆ.ಶಿವಕುಮಾರ್ ಹಾಗೂ ಎಂ.ಬಿ.ಪಾಟೀಲ್ ಅವರು ದಾರಿಯಲ್ಲಿ ಹೋಗುವ ಕುಡುಕರ ರೀತಿಯಲ್ಲಿ ಬಡಿದಾಡುತ್ತಿದ್ದಾರೆ. ಕುಡುಕರು ಕೂಡ ಹಾಗೆ ಬಡಿದಾಡುವುದಿಲ್ಲ.
ಜಾತಿ ವಿಚಾರ ಇವರಿಬ್ಬರ ಸ್ವತ್ತೇ ಎಂದು ಪ್ರಶ್ನಿಸಿದರು. ಡಿಕೆಶಿಯವರು ಕ್ಷಮೆ ಕೇಳುತ್ತೇನೆ ಎಂದು ಹೇಳುತ್ತಾರೆ. ಕ್ಷಮೆ ಕೇಳ್ಳೋಕೆ ಇವನ್ಯಾವನು ಎಂದು ಎಂ.ಬಿ.ಪಾಟೀಲ್ ಹೇಳುತ್ತಾರೆ. ಒಂದೇ ಪಕ್ಷದ ಮುಖಂಡರು, ಸಚಿವರು, ನಾಯಕರು ಬಡಿದಾಡುತ್ತಿರುವುದು ತೀರಾ ಅಪಮಾನ ಎಂದರು.
ಇನ್ನು, ಕಾಂಗ್ರೆಸ್ ಹಾಗೂ ಜೆಡಿಎಸ್‌ನಲ್ಲಂತೂ ಹೊಂದಾಣಿಕೆಯೇ ಇಲ್ಲ. ಕೇವಲ ತೋರಿಕೆಗಾಗಿ ಹೊಂದಾಣಿಕೆ ಎನ್ನಲಾಗುತ್ತಿದೆ. ಹೊಂದಾಣಿಕೆ ಕೆಳಮಟ್ಟ, ಮೇಲ್ಮಟ್ಟದಲ್ಲೂ ಇಲ್ಲ. ಶಿವಮೊಗ್ಗ ಸೇರಿದಂತೆ, ರಾಜ್ಯದಲ್ಲಿ ಮೈತ್ರಿ ಪಕ್ಷಗಳ ಮಧ್ಯೆ ಎಲ್ಲೂ ಹೊಂದಾಣಿಕೆ ಕಾಣುತ್ತಿಲ್ಲ.
ಆದರೆ, ನಿರೀಕ್ಷೆಗೂ ಮೀರಿ ಬಿಜೆಪಿ ಕಾರ್ಯಕರ್ತರು ಮತ್ತು ಹಿತೈಷಿಗಳು ಓಡಾಟ ಮಾಡುತ್ತಿದ್ದಾರೆ. ಹೀಗಾಗಿ, ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೆವೆಂಬ ವಿಶ್ವಾಸವಿದೆ ಎಂದರು.