ಉಡುಪಿ: ಅಖಿಲ ಭಾರತೀಯ ಸಂತ ಸಮಿತಿಯ ನೇತೃತ್ವದಲ್ಲಿ ನಡೆಯುತ್ತಿರುವ ಅಯೋಧ್ಯೆಯ ಪ್ರಭು ಶ್ರೀ ರಾಮಚಂದ್ರ ದೇವರ ದಿಗ್ವಿಜಯ ರಥಯಾತ್ರೆಯು ನ. 7ರಂದು ಉಡುಪಿಗೆ ಪ್ರವೇಶಿಸಲಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅ. 5ರಂದು ರಥಯಾತ್ರೆಗೆ ಚಾಲನೆ ನೀಡಿದ್ದು, 60 ದಿನಗಳಲ್ಲಿ 27 ರಾಜ್ಯಗಳಲ್ಲಿ 15,000 ಕಿ.ಮೀ. ಸಂಚರಿಸಿದೆ. ಬೆಳಗ್ಗೆ 10 ಗಂಟೆಗೆ ಉಡುಪಿಯ ಸಂತೆಕಟ್ಟೆಯ ಜಂಕ್ಷನ್‌ನಲ್ಲಿ ಧಾರ್ಮಿಕ ಸಭೆ ನಡೆಯಲಿದೆ.
ಅಖಿಲ ಭಾರತೀಯ ಸಂತ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಶಕ್ತಿ ಶಾಂತಾನಂದ ಮಹರ್ಷಿಯವರು ಹಾಗೂ ಅಯೋಧ್ಯೆ ಶ್ರೀ ರಾಮ ಮಂದಿರದ ನಿರ್ಮಾಣ ಟ್ರಸ್ಟ್‌ನ ವಿಶ್ವಸ್ತರೂ ಆಗಿರುವ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ಡಾ| ಪ್ರಭಾಕರ ಭಟ್ ಕಲ್ಲಡ್ಕ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಕ್ಷೀರಾಭಿಷೇಕ: ರಥಯಾತ್ರೆ ಜತೆಗೆ ಅಯೋಧ್ಯೆಯಿಂದ ಬರುವ ಶ್ರೀ ರಾಮ ದೇವರ ವಿಗ್ರಹಕ್ಕೆ ಕ್ಷೀರಾಭಿಷೇಕ ಮಾಡುವ ಅವಕಾಶ ಭಕ್ತರಿಗೆ ಸಿಗ ಲಿದೆ. ಭಕ್ತರು ಶುದ್ಧ ಹಾಲಿನಲ್ಲಿ ಶ್ರೀರಾಮನ ಮೂರ್ತಿಗೆ ಅಭಿಷೇಕ ಮಾಡಬಹುದಾಗಿದೆ.
ಬೃಹತ್ ರ್ಯಾಲಿ: ಸಂತೆಕಟ್ಟೆಯಿಂದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ವರೆಗೂ ದಿಗ್ವಿಜಯ ರಥಯಾತ್ರೆ ಸಾಗಲಿದೆ. ದೇವಸ್ಥಾನದಲ್ಲಿ ಅನ್ನಸಂತರ್ಪಣೆ ಇರಲಿದೆ ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.