ಉಡುಪಿ: ಜಿಎಸ್‌ಬಿ ಸಮಾಜದ ಗುರು ಪೀಠ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 24ನೇ ಮಠಾಧೀಶರಾದ ಶ್ರೀಮದ್ ವಿದ್ಯಾಧೀಶತೀರ್ಥ ಶ್ರೀಪಾದ ವಡೆಯರ್ ಸ್ವಾಮೀಜಿ ಚಾತುರ್ಮಾಸ್ಯ ವ್ರತವನ್ನು ಬೆಂಗಳೂರಿನ ಬಸವನಗುಡಿಯಲ್ಲಿರುವ ಶ್ರೀ ದ್ವಾರಕನಾಥ ಭವನದಲ್ಲಿ ನೆರವೇರಿಸಿದರು.
ಸೆ.18ರಂದು ಚಾತುರ್ಮಾಸ್ಯ ವ್ರತವನ್ನು ಮೃತಿಕ ವಿಸರ್ಜನೆ ಮೂಲಕ ಸಂಪನ್ನಗೊಳಿಸಿದರು. ಈ ಪ್ರಯುಕ್ತ ಬೆಂಗಳೂರಿನ ನೆಟ್‌ಕಲ್ಲಪ್ಪ ಸರ್ಕಲ್, ದ್ವಾರಕನಾಥ ಭವನ ಬಸವನಗುಡಿಯಲ್ಲಿ ಸೆ.28-29ರಂದು ವಿಶೇಷ ಕಾರ್ಯಕ್ರಮ ಜರಗಿತು.
ಗೋವಾದ ಶ್ರೀ ಪರ್ತಗಾಳಿ ಜೀವೋತ್ತಮ ಮಠದಲ್ಲಿ 2025ರ ನ.27ರಿಂದ ಡಿ.7ರ ವರೆಗೆ ನಡೆಯಲಿರುವ ಮಠದ 550 ವರ್ಷದ ಮಹೋತ್ಸವದ ಸಮಯದಲ್ಲಿ ಸ್ಥಾಪಿಸಲಿರುವ 77 ಅಡಿ ಬೃಹತ್ ಶ್ರೀ ರಾಮಚಂದ್ರ ದೇವರ ಕಂಚಿನ ಪ್ರತಿಮೆಯ ಪ್ರತಿಕೃತಿಯನ್ನು ಸ್ವಾಮೀಜಿ ಅನಾವರಣಗೊಳಿಸಿದರು. ಭಕ್ತರಿಂದ ಶ್ರೀ ರಾಮ ನಾಮ ಜಪ ಅಭಿಯಾನ ನಡೆಯಿತು.
ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. 250ಕ್ಕೂ ಅಧಿಕ ಜನರು ರಕ್ತದಾನದಲ್ಲಿ ಭಾಗಿಯಾದರು. ಭಕ್ತರು ಶ್ರೀಪಾದರಿಂದ ಆಶೀರ್ವಾದ ಪಡೆದರು. ಶ್ರೀಪಾದರ ದಿಗ್ವಿಜಯ ಮಹೋತ್ಸವ ದ್ವಾರಕನಾಥ ಭವನದಿಂದ ಪ್ರಾರಂಭಿಸಿ ನ್ಯಾಷನಲ್ ಕಾಲೇಜ್ ಸಿಗ್ನಲ್, ಗಾಂಧಿ ಬಜಾರ್ ರೋಡ್ ಮೂಲಕ ಪುನಃ ದ್ವಾರಕನಾಥ ಭವನಕ್ಕೆ ವೈಭವದಿಂದ ನೆರವೇರಿತು.
ಶ್ರೀ ಮಠದ ಸೆಂಟ್ರಲ್ ಕಮಿಟಿ ಅಧ್ಯಕ್ಷ ಶ್ರೀನಿವಾಸ್ ದೆಂಪೊ, ಬೆಂಗಳೂರು ಚಾತುರ್ಮಾಸ್ಯ ಸಮಿತಿ ಗೌರವಾಧ್ಯಕ್ಷ ದಯಾನಂದ ಪೈ, ಅಧ್ಯಕ್ಷ ಅಮರನಾಥ್ ಕಾಮತ್, ಗೋವಾದ ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್, ಸಂಸದ ತೇಜಸ್ವಿ ಸೂರ್ಯ ಮೊದಲಾದ ಗಣ್ಯರು, ಭಕ್ತರು ದಿಗ್ವಿಜಯದಲ್ಲಿ ಪಾಲ್ಗೊಂಡರು. ಸ್ವಾಮೀಜಿ ಅವರು ಅ.1ರಂದು ತಮ್ಮ ಮುಂದಿನ ಬೆಂಗಳೂರಿನ ಅನಂತನಗರದ ಮೊಕ್ಕಾಂಗೆ ತೆರಳಲಿದ್ದಾರೆ ಎಂದು ಬೆಂಗಳೂರು ಚಾತುರ್ಮಾಸ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ ಕಾಮತ್ ತಿಳಿಸಿದ್ದಾರೆ.