Advertisement
ಕ್ಷೀರಸಾಗರದ ಮೇಲೆ ಶೇಷಶಾಯಿಯಾಗಿ ಶ್ರೀಮನ್ನಾರಾಯಣ ವಿಶ್ರಮಿಸಿಕೊಂಡಿರುವಾಗ ನಾಭಿಯಿಂದ ಹುಟ್ಟಿದ ಕಮಲದಲ್ಲಿ ಕುಳಿತ ಬ್ರಹ್ಮ ಜಗತ್ತಿನ ಸೃಷ್ಟಿ ಕಾರ್ಯದಲ್ಲಿ ಮಗ್ನರಾಗಿರುವ ಪರಿಕಲ್ಪನೆ ಜನಪ್ರಿಯವಾಗಿದೆ. ಕಮಲದಲ್ಲಿ ಬ್ರಹ್ಮ ಹೊರಬಂದ ಕಾರಣ ವಿಷ್ಣುವನ್ನು ಪದ್ಮನಾಭ ಎಂದು ಕರೆದರು. ಬ್ರಹ್ಮಾಂಡದ ಕಾಲ್ಪನಿಕ ರೂಪವಿದು. ಈ ಚಿತ್ರಣಕ್ಕೂ ಅನಂತಪದ್ಮನಾಭ ವ್ರತಕ್ಕೂ ಸಂಬಂಧವಿದೆ. ವ್ರತದಲ್ಲಿ ಏಳು ಹೆಡೆಯ ನಾಗನ ಬಿಂಬವನ್ನು ದರ್ಭೆಯಲ್ಲಿ ರಚಿಸಿ ವರ್ತುಲಾಕಾರದ (ಇರಿಕೆ) ಮೇಲೆ ಸಾಲಿಗ್ರಾಮ ಶಿಲೆಯನ್ನು ಇರಿಸಿ ಪೂಜಿಸಲಾಗುತ್ತದೆ.
Related Articles
Advertisement
ಈ ವ್ರತದ ಉಲ್ಲೇಖ ಮಹಾಭಾರತದ ಅರಣ್ಯ ಪರ್ವದಲ್ಲಿದೆ. ಪಾಂಡವರು ಅರಣ್ಯದಲ್ಲಿರುವಾಗ ಶ್ರೀಕೃಷ್ಣನು ಧರ್ಮರಾಯನಿಗೆ ಈ ವ್ರತವನ್ನು ಆಚರಿಸಲು ಹೇಳುತ್ತಾನೆ. ವ್ರತದ ಆಚರಣೆಯಿಂದ ಸಂಪತ್ತು, ದಾಂಪತ್ಯ ಜೀವನದ ಏಕತೆ, ಸಮಸ್ಯಾಪರಿಹಾರ ಇತ್ಯಾದಿ ಫಲವನ್ನು ವ್ರತದ ಫಲಭಾಗದಲ್ಲಿ ತಿಳಿಸಲಾಗಿದೆ.
ಕಾಡಿನಲ್ಲಿದ್ದ ಪಾಂಡವರಿಗೆ ಕಾಡಿಂದ ಪಾರಾಗಲು ವ್ರತಾಚರಣೆ ಸಲಹೆ ಹೇಳಿದಂತೆ ಸಂಸಾರವೆಂಬ ಕಾಡಿನಲ್ಲಿದ್ದವರಿಗೆ ಪಾರಾಗಲೂ ಈ ವ್ರತ ದಾರಿ ಎಂಬುದು ಆಧ್ಯಾತ್ಮಿಕ ಅನುಸಂಧಾನ. ಪರಮಾತ್ಮನ ಅನುಗ್ರಹ ಯಾಚನೆ ಜತೆಗೆ ಸಂಕಷ್ಟ ಪರಿಹಾರವೂ ಗುರಿಯಾಗಿರುವುದರಿಂದಲೇ ಶ್ರೀಕೃಷ್ಣ, ಧರ್ಮರಾಯನಿಗೆ ವ್ರತವನ್ನು ಆಚರಿಸಲು ಸಲಹೆ ಕೊಡುತ್ತಾನೆ. ಇದರಿಂದಾಗಿ ಪಾಂಡವರು ಯಶಸ್ವಿಯೂ ಆದರು. ಮಹಾಭಾರತಕ್ಕೆ ವಿಜಯ ಗ್ರಂಥವೆಂಬ ಹೆಸರು ಇರುವಂತೆ ಪಾಂಡವರು ಗೆಲುವು ಸಾಧಿಸುವ ದಿನ ವಿಜಯದಶಮಿ ಎನಿಸಿದೆ. ಜನಕ, ಸಗರ, ದಿಲೀಪ, ಹರಿಶ್ಚಂದ್ರ ಮೊದಲಾದ ರಾಜರ್ಷಿಗಳೂ ಈ ವ್ರತವನ್ನು ಆಚರಿಸಿ ಮನೋಭಿಲಾಷೆಯನ್ನು ಈಡೇರಿಸಿಕೊಂಡಿರುವುದು ಪುರಾಣಗಳಲ್ಲಿ ಕಂಡುಬರುತ್ತದೆ.
ಅನಂತಪದ್ಮನಾಭ ರೂಪವು ಭಗವಂತನ ಮೂಲರೂಪವಾಗಿದೆ. ಇದರ ವರ್ಣನೆ ಶ್ರೀಮದ್ಭಾಗವತ ಪುರಾಣದಲ್ಲಿದೆ. ಉಳಿದೆಲ್ಲ ಅವತಾರರೂಪಗಳು ಬಂದಿರುವುದು ಅನಂತರ. ಈ ಹಿನ್ನೆಲೆಯಲ್ಲಿಯೂ ವ್ರತಕ್ಕೆ ಹೆಚ್ಚಿನ ಮಹತ್ವವಿದೆ. ಅನಂತಪದ್ಮನಾಭ, ಅನಂತ ಹೆಸರಿನಿಂದ ಕೂಡಿದ ಎಲ್ಲ ದೇವಸ್ಥಾನಗಳಲ್ಲಿ, ಮಠಗಳಲ್ಲಿ, ವೆಂಕಟರಮಣ ದೇವಸ್ಥಾನಗಳಲ್ಲಿ ಅನಂತವ್ರತವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಸ್ವಾಮೀಜಿಯವರು ಕೈಗೊಂಡ ಚಾತುರ್ಮಾಸ ವ್ರತವು ಕೊನೆಗೊಳ್ಳುವುದೂ ಇದೇ ದಿನ. ಗಣೇಶ ಚತುರ್ಥಿಯಂದು ಪೂಜೆಗೊಂಡ ವಿಗ್ರಹವನ್ನು ವಿಸರ್ಜಿಸುವ ಕೊನೆಯ ದಿನವೂ ಇದೇ ಆಗಿದೆ. ಗಣೇಶ ಹಬ್ಬಕ್ಕೆ ಹೆಸರಾದ ಮುಂಬಯಿ, ಪುಣೆಯಲ್ಲಿ ಗಣೇಶನ ವಿಗ್ರಹವನ್ನು ವಿಸರ್ಜಿಸುವುದು ಇದೇ ದಿನ.
-ಮಟಪಾಡಿ ಕುಮಾರಸ್ವಾಮಿ