Advertisement

ಮೈಸೂರಿನಲ್ಲಿ ಶಿಲಾಶಾಸನಗಳ ಡಿಜಿಟಲೀಕರಣ: ಜಗತ್ತಿನ ಎಲ್ಲರಿಗೂ ಲಭ್ಯವಾಗಲಿವೆ ಶ್ರೀಮಂತ ಶಾಸನಗಳು

12:52 AM Jul 17, 2022 | Team Udayavani |

ಹೊಸದಿಲ್ಲಿ: ಭಾರತೀಯ ಪ್ರಾಚ್ಯ ವಸ್ತು ಇಲಾಖೆ (ಎಎಸ್‌ಐ)ಯ ಸಂಗ್ರಹ ದಲ್ಲಿರುವ ಶ್ರೀಮಂತ ಶಿಲಾಶಾಸನ ಸಂಗ್ರಹ ಶೀಘ್ರದಲ್ಲೇ ಡಿಜಿಟಲ್‌ ರೂಪದಲ್ಲಿ ಜಗತ್ತಿಗೆ ಲಭ್ಯವಾಗಲಿದೆ. ವಿಶೇಷವೆಂದರೆ, ಈ ಕೆಲಸ ಆರಂಭವಾಗಿರುವುದು ಮೈಸೂರಿನಲ್ಲಿ.

Advertisement

1887ರಿಂದೀಚೆಗೆ ಇಲ್ಲಿ ಸಂಗ್ರಹಿಸಿರುವ ಶಾಸನಗಳ ಡಿಜಿಟಲೀಕರಣಕ್ಕೆ ಪ್ರಕ್ರಿಯೆಗೆ ಮೈಸೂರಿನಲ್ಲಿ ಇರುವ ಪ್ರಾಚ್ಯವಸ್ತು ಇಲಾಖೆಯ ಶಿಲಾಶಾಸನ ವಿಭಾಗದ ಕಚೇರಿಯಲ್ಲಿ ಶನಿವಾರ ಎಎಸ್‌ಐ ಪ್ರಧಾನ ನಿರ್ದೇಶಕಿ ವಿದ್ಯಾವತಿ ಚಾಲನೆ ನೀಡಿದ್ದಾರೆ. ಈ ಪ್ರಕ್ರಿಯೆ ಪೂರ್ಣಗೊಂಡಾಗ ಆಸಕ್ತರ ಅಧ್ಯಯನಕ್ಕೆ ಲಭ್ಯವಾಗಲಿವೆ.

ಮೈಕ್ರೋಫಿಲ್ಮ್ ರೂಪ
ಡಿಜಿಟಲೀಕರಣಗೊಂಡ ದತ್ತಾಂಶವನ್ನು ಮೈಕ್ರೋಫಿಲ್ಮ್ ಗಳ ರೂಪದಲ್ಲಿ ಆರ್ಕ್‌ಟಿಕ್‌ ವರ್ಲ್ಡ್ ಆರ್ಕೈವ್ (ಎಡಬ್ಲ್ಯುಎ)ನಲ್ಲಿ ವಿಶ್ವದ ನಾಗರಿಕತೆಯ ನೆನಪಾಗಿ ಶಾಶ್ವತವಾಗಿ ಇರಿಸಲಾಗುತ್ತದೆ. ಮೈಸೂರಿನ ಘಟಕವು 1887ರಿಂದ ಹಸ್ತಚಾಲಿತವಾಗಿ ತೆಗೆದಿರುವ ಶಾಸನಗಳ ಕಾಗದದ ಪ್ರತಿಗಳ ಭಂಡಾರ ವಾಗಿದೆ.

ಕನ್ನಡ ಸೇರಿ ಹಲವು ಭಾಷೆಗಳ ಶಾಸನ
ಕನ್ನಡ, ತಮಿಳು, ಸಂಸ್ಕೃತ, ಪಾಲಿ, ಪ್ರಾಕೃತ, ತೆಲುಗು, ಬಂಗಾಳಿ, ಅರೇಬಿಕ್‌, ಪರ್ಷಿಯನ್‌ ಸಹಿತ ಹಲವು ಭಾಷೆಗಳ ಸುಮಾರು ಒಂದು ಲಕ್ಷದಷ್ಟು ಶಿಲಾಶಾಸನಗಳು ಮೈಸೂರಿನಲ್ಲಿವೆ.

ಈಗ ಇಲ್ಲಿ ಸುಮಾರು 40 ಶಾಸನಶಾಸ್ತ್ರಜ್ಞರು ಮತ್ತು ಪುರಾತತ್ವಜ್ಞರು ಶಿಲಾಶಾಸನಗಳ ದೃಢೀಕರಣ ಕೆಲಸ ಆರಂಭಿಸಿದ್ದಾರೆ. 20 ಡೇಟಾ ಎಂಟ್ರಿ ಆಪರೇಟರ್‌ಗಳು ಇವುಗಳನ್ನು ಮೆಟಾ ಡೇಟಾ ಮಾದರಿಯಲ್ಲಿ ಲಭ್ಯವಾಗುವಂತೆ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಈ ಪಾರ್ಜೆಕ್ಟ್‌ನಲ್ಲಿ ಭಾರತೀಯರು ಮಾತ್ರವಲ್ಲದೆ ಐರೋಪ್ಯ ದೇಶಗಳ ತಜ್ಞರು ಕೂಡ ಭಾಗಿಯಾಗಿದ್ದಾರೆ.

Advertisement

ಏನಿದು ಆರ್ಕ್‌ಟಿಕ್‌ ವರ್ಲ್ಡ್ಆರ್ಕೈವ್?
2017ರಲ್ಲಿ ಸ್ಥಾಪನೆಯಾದ ಆರ್ಕ್‌ಟಿಕ್‌ ವರ್ಲ್ಡ್ ಆರ್ಕೈವ್ (ಎಡಬ್ಲ್ಯುಎ) ಸುಮಾರು 15ಕ್ಕೂ ಹೆಚ್ಚು ದೇಶಗಳ ಮೌಲ್ಯಯುತ ಡಿಜಿಟಲ್‌ ಕಲಾಕೃತಿಗಳು ಮತ್ತು ಮಾಹಿತಿಯ ಸಂಪತ್ತನ್ನು ಹೊಂದಿದೆ. ನಾರ್ವೆಯ ಸ್ವಾಲ್‌ಬಾರ್ಡ್‌ ದ್ವೀಪ ಸಮೂಹದಲ್ಲಿರುವ ಆರ್ಕ್‌ಟಿಕ್‌ ಪರ್ವತವೊಂದರ ಒಳಗೆ ಇದನ್ನು ನಿರ್ಮಿಸಲಾಗಿದೆ. ಈ ಪ್ರದೇಶವನ್ನು 42 ದೇಶಗಳು ಸೇನಾ ರಹಿತ ವಲಯವೆಂದು ಘೋಷಿಸಿವೆ. ಎಲ್ಲ ರೀತಿಯ ಸೈಬರ್‌ ಮತ್ತು ಪರಮಾಣು ದಾಳಿಯಿಂದ ಜಗತ್ತಿನ ದತ್ತಾಂಶ ಗಳನ್ನು ಸುರಕ್ಷಿತವಾಗಿಡುವ ಕೆಲಸವನ್ನು ಈ ಕೇಂದ್ರ ಮಾಡುತ್ತಿದೆ.

 

Advertisement

Udayavani is now on Telegram. Click here to join our channel and stay updated with the latest news.

Next