Advertisement

ಡಿಜಿಟಲ್‌ಗೆ ಬದಲಾದ ಪತ್ರಿಕೋದ್ಯಮ: ಆನ್‌ಲೈನ್‌ನಲ್ಲಿ ಪತ್ರಿಕಾ ದಿನಾಚರಣೆ

11:24 AM Jul 02, 2020 | mahesh |

ಬಾಗಲಕೋಟೆ: ಆಧುನಿಕತೆಗೆ ತಕ್ಕಂತೆ ಇಂದು ಪತ್ರಿಕೋದ್ಯಮವೂ ಡಿಜಿಟಲೀಕರಣವಾಗಿ ಮಾರ್ಪಟ್ಟಿದೆ. ಮಾಧ್ಯಮಗಳು ಸುದ್ದಿಯೊಂದಿಗೆ ಮನರಂಜನೆ, ಮಾಹಿತಿ
ಹಾಗೂ ವಿವಿಧ ವಿಷಯ ಜನರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ|ತಹಮೀನಾ ಕೋಲ್ಹಾರ ಹೇಳಿದರು.

Advertisement

ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದಿಂದ ಬುಧವಾರ ಆನ್‌ಲೈನ್‌ನಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಕರ್ನಾಟಕದಲ್ಲಿ ವಾರ ಪತ್ರಿಕೆಯೊಂದಿಗೆ ಆರಂಭವಾದ ಪತ್ರಿಕಾ ರಂಗ, ಈಗ ದಿನ ಪತ್ರಿಕೆಯಾಗಿ ಹೊರಹೊಮ್ಮಿದೆ. 15 ವರ್ಷಗಳ ಈಚೆಗೆ ಪತ್ರಿಕೋದ್ಯಮ ಪ್ಯಾಷನ್‌ ಆಗಿ
ಮಾರ್ಪಟ್ಟಿದೆ. ಈಗಿನ ಕಾಲದಲ್ಲಿ ಮ್ಯಾಗಜೀನ್‌, ಪತ್ರಿಕೆ, ಟಿ.ವಿ, ರೇಡಿಯೋ, ಯೂಟೂಬ್‌ ಹೀಗೆ ವಿವಿಧ ಮಾಧ್ಯಮಗಳ ನಡುವೆ ಸ್ಪರ್ಧೆ ಹೆಚ್ಚಾಗಿದೆ. ಓದುಗರಿಗೆ ಅನುಕೂಲವಾಗಲು
ಮೊಬೈಲ್‌ನಲ್ಲಿ ಈ-ಪೇಪರ್‌ ಕಲ್ಪಿಸಿಕೊಟ್ಟಿದೆ.  ಓದುಗರಿಗೆ ಅನಕೂಲಕ್ಕೆ ತಕ್ಕಂತೆ ಮಾಧ್ಯಮವೂ ಮುನ್ನಡೆಯುತ್ತಿದೆ ಎಂದು ತಿಳಿಸಿದರು.

ಪ್ರಾಚಾರ್ಯ ಡಾ| ವಿ.ಎಸ್‌.ಕಟಗಿಹಳ್ಳಿಮಠ ಮಾತನಾಡಿ, ಪತ್ರಿಕೋದ್ಯಮ ಇಂದು ಬಹಳ ಮಹತ್ವ ಪಡೆದಿದೆ. ಹಳ್ಳಿ ವಿದ್ಯಾರ್ಥಿಗಳು ಪತ್ರಕರ್ತರಾಗಿ ಹೊರಹೊಮ್ಮಬೇಕು ಎನ್ನುವ ಉದ್ದೇಶದಿಂದ ನಮ್ಮ ಜಿಲ್ಲೆಯಲ್ಲಿ ಬಿವಿವಿ ಸಂಘವು ಮುಧೋಳ ಮತ್ತು ಬಾಗಲಕೋಟೆಯ ಪದವಿ ಮಹಾವಿದ್ಯಾಲಯಗಳಲ್ಲಿ ಪತ್ರಿಕೋದ್ಯಮ ವಿಭಾಗ ಆರಂಭಿಸಿ ಹಳ್ಳಿಯ ವಿದ್ಯಾರ್ಥಿಗಳಿಗೂ ಪತ್ರಿಕೋದ್ಯಮ ವಿಭಾಗ ಪರಿಚಯ ಮಾಡಿಕೊಟ್ಟಿದೆ. ಪತ್ರಕರ್ತರು ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿಗಳು ಪತ್ರಿಕೋದ್ಯಮ ಧರ್ಮ ಪಾಲಿಸಬೇಕು. ಪತ್ರಕರ್ತರಾಗುವ ವಿದ್ಯಾರ್ಥಿಗಳಿಗೆ ಸಮಯ ಪ್ರಜ್ಞೆ ಇರಬೇಕು ಎಂದರು.

ಸ್ವಾತಂತ್ರ್ಯ ಸಂದರ್ಭದಲ್ಲಿ ಪತ್ರಿಕೆಗಳು ಗಾಂಧಿ, ಅಂಬೇಡ್ಕರ್‌ ಹಾಗೂ ರಾಷ್ಟ್ರೀಯ-ಅಂತಾರಾಷ್ಟ್ರೀಯ ಸುದ್ದಿಗಳು ಜನರಿಗೆ ತಲುಪಿಸಿವೆ. ಅಂದಿನಿಂದ ಇಲ್ಲಿಯವರೆಗೆ ಜನರಿಗೆ ಸುದ್ದಿ ತಲುಪಿಸುವ ಕಾರ್ಯ ಮಾಡುತ್ತಿವೆ. ಕೇಂದ್ರ-ರಾಜ್ಯ ಸರ್ಕಾರ ಮಾಡಲು ಸಾಧ್ಯವಿರದ ಕೆಲಸಗಳು ಮಾಧ್ಯಮ ಮೂಲಕ ಸಾಧ್ಯವಿದೆ. ಆದ್ದರಿಂದ, ಭಾರತದಲ್ಲಿ ಕೋವಿಡ್ ಸಂಖ್ಯೆ ಕಡಿಮೆ ಪ್ರಮಾಣದಲ್ಲಿದೆ. ಪತ್ರಕರ್ತರು ತಮ್ಮ ಜೀವದ ಹಂಗು ತೊರೆದು ಕೊರೊನಾ ಸಮಯದಲ್ಲಿ ಹೋರಾಡಿದ್ದಾರೆ ಎಂದರು.

ಈ ವೇಳೆ ಐಕ್ಯೂಎಸಿ ಘಟಕದ ಸಂಯೋಜಕ ಪ್ರೊ| ಬಿ.ಆರ್‌. ಪಾಟೀಲ, ಸಾಂಸ್ಕೃತಿಕ ಚಟುವಟಿಕೆ ಸಮಿತಿ ಸಂಯೋಜಕ ಪ್ರೊ| ಎಸ್‌. ಆರ್‌. ಮೂಗನೂರಮಠ ಇತರರು ಇದ್ದರು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಪ್ರೊ| ಡಿ.ಎಚ್‌. ಪಾಟೀಲ ಸ್ವಾಗತಿಸಿದರು. ಪ್ರೊ| ಎಸ್‌.ವಿ. ಕಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪುಷ್ಪಾ ಪಾಟೀಲ ವಂದಿಸಿದರು.

Advertisement

ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಈ ಕ್ಷೇತ್ರದಲ್ಲಿ ಹಲವಾರು ರೀತಿಯ ಉದ್ಯೋಗಗಳಿವೆ. ರಿಪೋರ್ಟಿಂಗ್‌, ಎಡಿಟಿಂಗ್‌, ಜಾಹೀರಾತು ವಿಭಾಗ, ಫೋಟೋಗ್ರಾಫರ್‌ ಹೀಗೆ ವಿವಿಧ
ವಿಭಾಗಗಳಲ್ಲಿ ಕೆಲಸಗಳು ಸಿಗಲಿವೆ. ವಿದ್ಯಾರ್ಥಿಗಳು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಮಾತನಾಡುವ ಶೈಲಿ ಕಲಿಯಬೇಕು. ಒಬ್ಬ ಪತ್ರಕರ್ತರಾಗಲು ಶಬ್ದ ಸಂಗ್ರಹ ಬಹಳ ಮುಖ್ಯ. ಅದನ್ನೂ ವಿದ್ಯಾರ್ಥಿಗಳೂ ಪತ್ರಿಕೋದ್ಯಮ ಕಲಿಯುವ ಹಂತದಲ್ಲಿಯೇ ರೂಢಿಸಿಕೊಳ್ಳಬೇಕು. ಡಾ| ತಹಮೀನಾ ಕೋಲ್ಹಾರ, ಸಹಾಯಕ ಪ್ರಾಧ್ಯಾಪಕಿ

Advertisement

Udayavani is now on Telegram. Click here to join our channel and stay updated with the latest news.

Next