Advertisement

ಹೈನು ಉದ್ಯಮಕ್ಕೆ ಡಿಜಿಟಲ್‌ ಸ್ಪರ್ಶ; ಕರಾವಳಿಗರ My MPCS ಆ್ಯಪ್‌ಗೆ ರಾಜ್ಯವ್ಯಾಪಿ ಬೇಡಿಕೆ

01:42 AM Oct 21, 2020 | mahesh |

ಕಾರ್ಕಳ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಊರಿಗೊಂದರಂತೆ ಹಾಲಿನ ಡೇರಿಗಳಿವೆ. ಕೋವಿಡ್ ಸಂದರ್ಭ ಹಾಲು ಉತ್ಪಾದಕ ಸಂಘಗಳಿಗೆ ಹೈನುಗಾರರು ಹಾಲು ಪೂರೈಸಿ ಸ್ಲಿಪ್‌ ಪಡೆಯುವಾಗ ಆಗಬಹುದಾದ ಸೋಂಕು ಪ್ರಸರಣ ತಡೆಗಟ್ಟುವುದಕ್ಕಾಗಿ ಕಲ್ಲಡ್ಕದ ಯುವಕರಿಬ್ಬರು ಆವಿಷ್ಕರಿಸಿದ ನೂತನ ಡಿಜಿಟಲ್‌ ಸ್ಲಿಪ್‌ ವಿಧಾನ “ಮೈ ಎಂಪಿಸಿಎಸ್‌ ಆ್ಯಪ್‌’ ಇಂದು ಬಹು ಉಪಯೋಗಿಯಾಗಿ ಪರಿವರ್ತನೆಯಾಗಿದೆ.

Advertisement

ಆ್ಯಪ್‌ನಲ್ಲಿ ಹೈನುಗಾರರು ಪ್ರತೀ ದಿನ ಡೇರಿಗೆ ಪೂರೈಸಿದ ಹಾಲಿನ ಪ್ರಮಾಣ ಮತ್ತು ಗುಣಮಟ್ಟವನ್ನು ಯಾವಾಗ ಬೇಕಾದರೂ ಪರೀಕ್ಷಿಸಬಹುದು. ಒಂದು ವರ್ಷ ತನಕದ ವಿವರ ಸಿಗುತ್ತದೆ. ಲಭ್ಯ ವಿಶ್ಲೇಷಣೆಯಿಂದ ಹಾಲಿನ ಗುಣಮಟ್ಟ ಅಭಿವೃದ್ಧಿಯ ಯೋಚನೆ ಮಾಡಬಹುದು, ಡೇರಿಯವರು ಹೈನುಗಾರರಿಗೆ ಸೂಚನೆಗಳನ್ನು ನೀಡಬಹುದು. ಪ್ರಸ್ತುತ 25 ಡೇರಿಗಳಲ್ಲಿ 200 ಹೈನುಗಾರರು ಈ ಆ್ಯಪ್‌ ಬಳಸುತ್ತಿದ್ದಾರೆ. ಅನ್ಯ ಜಿಲ್ಲೆಗಳಿಂದಲೂ ಬೇಡಿಕೆ ಬಂದಿದ್ದು, ರಾಜ್ಯವ್ಯಾಪಿ ವಿಸ್ತರಿಸುವ ಸಾಧ್ಯತೆಯಿದೆ.

ಏನಿದು ಮೈ ಎಂಪಿಸಿಎಸ್‌ ಆ್ಯಪ್‌?
ಬಹಳ ಸರಳವಾದ ಮೈ ಎಂಪಿಸಿಎಸ್‌ ಆ್ಯಪ್‌ ವಾಣಿಜ್ಯ ದೃಷ್ಟಿಯಿಂದ ಸಿದ್ಧವಾದುದಲ್ಲ. ಹೈನುಗಾರರ ಉಪಯೋಗಕ್ಕಾಗಿ ರೂಪುಗೊಂಡಿದ್ದು, ಉಚಿತ ವಾಗಿದೆ. ರಾಜ್ಯದಲ್ಲಿ ಹೈನುಗಾರರಿಗಾಗಿಯೇ ಅಭಿವೃದ್ಧಿಗೊಂಡು ದೊಡ್ಡ ಮಟ್ಟದಲ್ಲಿ ಬಳಕೆಯಾಗುತ್ತಿರುವ ಆ್ಯಪ್‌ ಇಲ್ಲ. ಈ ಶೂನ್ಯವನ್ನು ಮೈ ಎಂಪಿಸಿಎಸ್‌ ತುಂಬುತ್ತಿದೆ. ಕೇವಲ 5 ಎಂಬಿ ಗಾತ್ರ ಹೊಂದಿದ್ದು, ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಲಭ್ಯವಿದೆ. ಹಾಲಿನ ಡೈರಿಯವರು ಅತೀ ಕಡಿಮೆ ಸರ್ವರ್‌ ದರ ಪಾವತಿಸಿ, ತಮ್ಮ ಸಂಘಕ್ಕೆ ಹಾಲು ಪೂರೈಸುವ ಹೈನುಗಾರರಿಗೆ ಈ ಆ್ಯಪ್‌ ಬಳಸುವ ಅವಕಾಶ ಮಾಡಿಕೊಡಬಹುದು.

1ತಿಂಗಳ ಉಚಿತ ಡೆಮೊ, ತರಬೇತಿ
ಈ ಆ್ಯಪ್‌ ಆವಿಷ್ಕರಿಸಿರುವ ಯುವಕರು ಆಸಕ್ತ ಡೈರಿಗಳಿಗೆ ಒಂದು ತಿಂಗಳ ಉಚಿತ ಡೆಮೋ ಮತ್ತು ತರಬೇತಿ ನೀಡುತ್ತಾರೆ. ಸಂಘದಲ್ಲಿ ಅಳವಡಿಸಿ ಸಂಘದ ಎಲ್ಲ ಸದಸ್ಯರಿಗೆ ಈ ಸೌಲಭ್ಯ ಲಭಿಸುವಂತೆ ಮಾಡಬಹುದು. ಬಳಿಕ ಸಂಘವು ಸರ್ವರ್‌ ಚಾರ್ಜ್‌ ಮೂಲಕ ಈ ಸೌಲಭ್ಯವನ್ನು ಮುಂದುವರಿಸಬಹುದು.

=ಈಗ ಆ್ಯಪ್‌ ಬಳಸುತ್ತಿರುವ ಡೈರಿಗಳು 25
=ಉಪಯೋಗಿಸುತ್ತಿರುವ ಸದಸ್ಯರು 2,000
=200 ಮಂದಿಗೆ ತಗಲುವ ವೆಚ್ಚ 150 ರೂ. (1 ತಿಂಗಳಿಗೆ)
=ದ.ಕ. ಹಾ.ಉ. ಮಂಡಳಿಯ ಸದಸ್ಯ ಸಹಕಾರಿ ಸಂಘಗಳ ಸಂಖ್ಯೆ 726
=ಹೈನುಗಾರರ ಸಂಖ್ಯೆ 80 ಸಾವಿರ
=ಪ್ರತಿನಿತ್ಯ ಹಾಲು ಸಂಗ್ರಹ 5 ಲಕ್ಷ ಲೀ.

Advertisement

ರಾಜ್ಯಕ್ಕೆ ವಿಸ್ತರಣೆಗೂ ಅನುಕೂಲ
ಹಾಲು ಉತ್ಪಾದಕ ಸಂಘಗಳು ಹಾಲು ಸಂಗ್ರಹದ ದತ್ತಾಂಶ ದಾಖಲಾತಿಗಾಗಿ ಯಾವುದೇ ಸಾಫ್ಟ್ವೇರ್‌ ಬಳಸುತ್ತಿದ್ದರೂ ಅದರಿಂದ ಲಭಿಸುವ ಸಮ್ಮರಿ ರಿಪೋರ್ಟ್‌ ಮೂಲಕ ಈ ಆ್ಯಪ್‌ ದತ್ತಾಂಶವನ್ನು ರವಾನಿಸುವಂತೆ ರೂಪಿಸಲಾಗಿದೆ. ಹೀಗಾಗಿ ರಾಜ್ಯಾದ್ಯಂತ ಯಾವುದೇ ಡೇರಿ ಇದನ್ನು ಬಳಸಬಹುದು. ಅನ್ಯ ಜಿಲ್ಲೆಗಳಿಂದ ಬೇಡಿಕೆ ಬಂದಿದ್ದು, ರಾಜ್ಯವ್ಯಾಪಿ ವಿಸ್ತರಿಸುವ ಸಾಧ್ಯತೆಯಿದೆ.

ಹಾಲು ಉತ್ಪಾದಕ ಸಂಘಗಳಿಗೆ ಏನು ಲಾಭ?
– ಹೈನುಗಾರರು ಮತ್ತು ಹಾಲು ಉತ್ಪಾದಕ ಸಂಘದ ಮಧ್ಯೆ ಸಂಪರ್ಕ ಸೇತು.
– ಸ್ಲಿಪ್‌, ರಶೀದಿ ಪೇಪರ್‌ ಅಥವಾ ಸಾಮಾನ್ಯ ಮೆಸೇಜ್‌ ವ್ಯವಸ್ಥೆಗೆ ತಗಲುವ ಬೆಲೆಗಿಂತ ಕಡಿಮೆಗೆ ಹಾಲಿನ ವಿವರವನ್ನು ಸದಸ್ಯರಿಗೆ ಒದಗಿಸುತ್ತದೆ.
– ಡಿಜಿಟಲ್‌ ತಂತ್ರಜ್ಞಾನ ಬಳಕೆಯ ಮೂಲಕ ವೈಯಕ್ತಿಕ ಸಂಪರ್ಕ ಕಡಿಮೆ ಮಾಡುತ್ತದೆ. ಇದು ಇಂದಿನ ಪರಿಸ್ಥಿತಿಗೆ ಪೂರಕ.
– ಸಂಪೂರ್ಣ ಪಾರದರ್ಶಕ.

ಆ್ಯಪ್‌ನ ಪ್ರಮುಖ ಅಂಶಗಳು
- ಹೈನುಗಾರರ ಮಾಹಿತಿ ಸೋರಿಕೆಯಾಗದಂತೆ ವಿಶೇಷ ಒತ್ತು.
- ಒಬ್ಬ ಹೈನುಗಾರನ ಮಾಹಿತಿ ಇನ್ನೊಬ್ಬನಿಗೆ ಸಿಗುವುದಿಲ್ಲ.
– ಯಾವುದೇ ಅಕೌಂಟ್‌ ವಿವರಗಳನ್ನು ಕೇಳುವುದಿಲ್ಲ.

ಆ್ಯಪ್‌ ಅಳವಡಿಕೆಯ ಪ್ರಾಯೋಗಿಕ ಹಂತ ಪೂರ್ಣಗೊಂಡಿದೆ. ಹಲವು ಕಡೆಗಳಲ್ಲಿ ಸಂಘಗಳ ಸದಸ್ಯರು ಬಳಸುತ್ತಿದ್ದಾರೆ. ಅವಿಭಜಿತ ದ.ಕ. ಮಾತ್ರವಲ್ಲದೆ ಇತರ ಜಿಲ್ಲೆಗಳಿಂದಲೂ ಬೇಡಿಕೆ ಬರುತ್ತಿದೆ.
-ಶ್ರೀನಿಧಿ ಕಲ್ಲಡ್ಕ, ಕೇಶವ ಪ್ರಸಾದ್‌, ಆ್ಯಪ್‌ ರೂಪಿಸಿದವರು

ದೇಶವು ಆತ್ಮನಿರ್ಭರವಾಗುತ್ತಿದ್ದು, ಸ್ಥಳೀಯ ಯುವಕರ ಈ ಉಪಯುಕ್ತ ಆವಿಷ್ಕಾರವನ್ನು ಪ್ರೋತ್ಸಾಹಿಸಬೇಕಿದೆ.
-ಸಾಣೂರು ನರಸಿಂಹ ಕಾಮತ್‌ ನಿರ್ದೇಶಕರು, ದ.ಕ. ಹಾಲು ಒಕ್ಕೂಟ

-  ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next