ಫೋಟೋಗ್ರಫಿಯ ಕಲಿಕೆಗೆ ಕ್ಯಾಮೆರಾ ಒಂದಿದ್ದರೆ ಸಾಕೇ? ಈ ಪ್ರಶ್ನೆ ಹೇಗಿದೆ ಅಂದರೆ, ಕವಿ ಹೃದಯದವಗೆ ಕಾವ್ಯ ರಚನೆಗೆ ಲೇಖನಿ, ಬಿಳಿ ಹಾಳೆ ಮಾತ್ರ ಸಾಕೇ ಎಂದು ಕೇಳಿದಂತಾಯಿತು. ಕವಿಗೆ ಮತ್ತೂ ಬೇಕಾದ್ದು ಕಾವ್ಯದ ವಸ್ತು, ಭಾಷೆ. ಅಂತೆಯೇ, ಛಾಯಾಗ್ರಾಹಕರಿಗೆ ಅವಶ್ಯಕವಾದದ್ದು ಸೂಕ್ತವಸ್ತು ಮತ್ತು ಪರಿಕಲ್ಪನೆಗೆ ಬೆಳಗಿಸಲು ಸರಿಯಾದ ಬೆಳಕು. ಚಿತ್ರ ಕಲಾವಿದನಿಗೆ ಬೇಕಾಗುವ ವಸ್ತುವಿನ ರೂಪ, ವರ್ಣ, ಭಾವದ ಪರಿಜ್ಞಾನದಂತೆಯೇ ಕ್ಯಾಮೆರಾದಲ್ಲಿ ಪೋರ್ಟ್‌ರೇಟ್ ಸೆರೆ ಹಿಡಿಯಲು ಹೊರಟವರಿಗೂ ಅನ್ವಯ. ಆಶಯಕ್ಕೆ ತಕ್ಕಂತೆ ಆಗ ಕುಂಚದ ಸ್ಪರ್ಶ ನೀಡಬಲ್ಲ ಬೆಳಕಿನ ರಶ್ಮಿಯನ್ನು ಬಳಸುವ ಚಾಕಚಕ್ಯತೆ ಮುಖ್ಯವಾದದ್ದು. ಅದಕ್ಕೆ ಸ್ವಲ್ಪ ತರಬೇತಿ ಮತ್ತು ಅಭ್ಯಾಸಬೇಕು. ಈ ಎರಡೂ ಅಂಶಗಳ ಬಗ್ಗೆ ಸ್ವಲ್ಪ ತಿಳಿಯೋಣ.
ಪೋರ್ಟ್‌ರೇಟ್‌ಗೆ ಸುಲಭವಾಗಿ ಸಿಗುವುದು ಮುದ್ದು ಮಕ್ಕಳು. ಹರ್ಷದ ಹೊನಲು ಹರಿಸುವ, ಭಾವಾವೇಗದ, ಕೌತುಕುದ, ಕ್ಷಣಕ್ಷಣಕ್ಕೂ ಬದಲಾಗುವ ಸ್ನಿಗª ಸೌಂದರ್ಯ ಸೂಸುವ ಮುಖಚರ್ಯೆಯನ್ನು ಗಮನಿಸುತ್ತಾ, ಬೆಳಕಿನ ( Light Direction) ನೋಡಿಕೊಂಡು , ಅದಕ್ಕೆ ಹೊಂದುವಂತೆ ಹಿನ್ನೆಲೆಗೆ ( Back ground) ಸೂಕ್ತವಾದ ದಪ್ಪ ಪರದೆ ಇಳಿಬಿಟ್ಟು, ಅದಕ್ಕೆ ಹೊಂದುವಂತೆ ಮಗುವಿನ ಕುಳಿತಿರುವ ಅಥವಾ ನಿಂತಿರುವ ಭಂಗಿಯ ಚಿತ್ರಣಕ್ಕೆ ತಕ್ಕುದಾದ ಕ್ಯಾಮೆರಾದ ಕೋನವನ್ನು ಅಳವಡಿಸಿ ಕೊಳ್ಳುವುದು ಮೊದಲಿನ ಕೆಲಸ. ಮಗುವಿನ ದೃಷ್ಟಿ ನೇರವಾಗಿ ಕ್ಯಾಮೆರಾದ ಮಸೂರ (Lens ) ಅಥವಾ ಬೇರೆಡೆಗೆ ನೋಡುತ್ತಿರುವ ಸಾಧ್ಯವೂ ಇದೆ. ಎರಡರಲ್ಲಿ ಒಂದು ಛಾಯಾಗ್ರಾಹಕರ ಆಶಯಕ್ಕೆ ಪೂರಕವಾಗಿದ್ದರೆ ಸಾಕು. ಈ ಹಿನ್ನೆಲೆಯಲ್ಲಿ ಈ ಎರಡು ಮಕ್ಕಳ ಚಿತ್ರಣಗಳನ್ನು ಗಮನಿಸೋಣ:
ಮಿಥಾಲಿಯ ಮಿಂಚಿನ ನೋಟ : 90 ಎಂ.ಎಂ. ಫೋಕಲ್ ಲೆಂಗ್ತ್ ಜೂಂ ಲೆನ್ಸ್‌ನಲ್ಲಿ, ಅಪಾರ್ಚರ್ F 4.5 , ಕವಾಟ ವೇಗ 1/ 160 ಸೆಕೆಂಡ್, 200 ಐ.ಎಸ್.ಒ
ಮೊದಲನೆಯದು, ಚಲುವೆ ಸಬಾಹ್‌ಳದ್ದು. ಇಂದು ಅಂತಾರಾಷ್ಟ್ರೀಯ ಛಾಯಾಚಿತ್ರ ಪ್ರದರ್ಶನದ ಖ್ಯಾತಿಯ ಮೊಹಮ್ಮದ್ ಆರ್ಫಾನ್ ಆಸಿಫ್ ತೆಗೆದದ್ದು. ಮಗುವಿನ ಹಿಂದೆ ದೂರದಲ್ಲಿ ಕಪ್ಪು ಉಣ್ಣೆಯ ಶೀಟ್‌ಅನ್ನು ಇಳೆಬಿಟ್ಟು, ಓರೆಯಾಗಿ ಬೀಳುತ್ತಿದ್ದ ಸೂರ್ಯನ ರಶ್ಮಿಯನ್ನು ಹಿಂದಿನಿಂದ ಗುಂಗುರು ಕೂದಲುಗಳ ಅಂಚುಗಳನ್ನಷ್ಟೇ ಮಿಂಚಿಸುವಂತೆ ( Rim& Contour Lighting) ಕುಳ್ಳಿರಿಸಿರುವುದು. ಆಗ ಮುಖದ ಭಾಗಗಳು ಗಾಢವಾದ ನೆರಳಿನಿಂದ ಕಪ್ಪಿಡುವುದು ಸಹಜ. ಮೂರು, ನಾಲ್ಕು ಅಡಿ ದೊಡ್ಡ ಕಾರ್ಡ್ ಬೋರ್ಡ್‌ಗೆ ಟೀ ಪೆಟ್ಟಿಗೆಯಲ್ಲಿ ಪೊಟ್ಟಣಗಳನ್ನು ಸುತ್ತಿ, ಅದರಿಂದ ಬರುವ ತವರದ ಹಾಳೆಗಳನ್ನು ಮುದುಡಿಸಿ ಅಂಟಿಸಿ, ಅದನ್ನೇ ಸಹಜ ಸೂರ್ಯನ ರಶ್ಮಿಗೆ ಪ್ರತಿಫಲನ reflector ) ವಾಗಿಸಿಕೊಂಡಿದ್ದಾರೆ. ಮುಗುವಿನ ಮುಖದಿಂದ 5 ಅಡಿ ದೂರದ ತುಸು ಎತ್ತರದಲ್ಲಿ ಹಿಡಿದು, ಪೂರಕ ಬೆಳಕಾಗಿಸಿಕೊಂಡು, ಕ್ಯಾಮೆರಾವನ್ನು ಟ್ರೈಪಾಡ್ ಮೇಲೆ ಭದ್ರೀಕರಿಸಿ, ಮಗುವಿನೊಡನೆ ಹರಟುತ್ತಾ ಸಿಕ್ಕ ಅನನ್ಯ ಕ್ಷಣವೊಂದನ್ನು ಆಸಿಫ್ ಸೆರೆಹಿಡಿದಿದ್ದಾರೆ. ಇದು ಅವರ ಸೂಕ್ಷ್ಮ ಕ್ಯಾಮೆರಾ ಪ್ರಜ್ಞೆಗೆ ಸಾಕ್ಷಿ.
ಮತ್ತೂಂದು ಚಿತ್ರದ ಹುಡುಗಿ ಹೆಸರು ಮಿಥಾಲಿಯ. ಎರಡು ವರ್ಷಹಿಂದಿನದ್ದು. ಮಹಡಿಯ ಪೂರ್ವದಿಕ್ಕಿನ ತೆರೆದ ಬಾಲ್ಕನಿಯಲ್ಲಿ ಸೂರ್ಯರಶ್ಮಿ ಓರೆಯಾಗಿ ಬೀಳುತ್ತಿತ್ತು. ಅದಕ್ಕೆ ಎದುರಾಗಿ ಮಗುವನ್ನು ಸ್ಟೂಲ್ ಮೇಲೆ ಕುಳ್ಳರಿಸಿ, ತಲೆಗೊಂದು ಹಳದಿ ಹ್ಯಾಟ್ ಹಾಕಿ, ಸಹಜ ಬೆಳಕಲ್ಲೇ ಸೆರೆಹಿಡಿಯಲು ಆಕೆಯ ಹಿಂದಷ್ಟೇ ಅಡ್ಡ ಮಾಡುವ ದಪ್ಪ ಕಂದುಬಣ್ಣದ ಬಟ್ಟೆಯನ್ನು ಇಳೆಬಿಡುವಷ್ಟರಲ್ಲಿ, ತೆಳುವಾದ ಮೋಡ ಸೂರ್ಯನೆದುರು ಹಾಯ್ದು ಬರುತ್ತಿದ್ದುದು ಗಮನಕ್ಕೆ ಬಂತು. ಅಲ್ಪ ಸ್ವಲ ಸಹಜ ಬೆಳಕು. ಮೋಡದ ದೆಸೆಯಿಂದ ಬಾಲ್ಕನಿಯಲ್ಲಿದ್ದ ಮಗುವಿನ ಎದುರು ಭಾಗ ಗಾಢವಾದ ನೆರಳಿನಿಂದ ಕಪ್ಪಿಡುತ್ತಿತ್ತು . ಕೂಡಲೇ, ದೊಡ್ಡ ಥರ್ಮೋಕೊಲ್ ಶೀಟ್ ತಂದು, ಮುಖದೆದುರು 4 ಅಡಿ ಎತ್ತರಕ್ಕೆ ಜೋಡಿಸಿ ಅದನ್ನೇ ಪೂರಕ ಬೆಳಕಿನ ಪ್ರತಿಫಲನವಾಗಿಸಿ, ಮಗುವಿನ ತುಂಟ ಭಂಗಿಯನ್ನು ಸೆರೆಹಿಡಿದೆ. ಒಂದು ವಿಧದಲ್ಲಿ ನಾನು ಮೊದಲು ಬಗೆದಿದ್ದ ಚಿತ್ರಣದ ದಿಕ್ಕನೇ, ಮೋಡ ಬಂದು ಬದಲಾಯಿಸಿತ್ತು. ಇದು ಸಮಯಪ್ರಜ್ಞೆಗೆ ಇನ್ನೊಂದು ಉದಾಹರಣೆಯಷ್ಟೇ !
ಕೆ.ಎಸ್.ರಾಜಾರಾಮ್