ಮುಂಬಯಿ: ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಎಲ್ಲದಕ್ಕೂ ಬೇಡಿಕೆ, ವಹಿವಾಟು ಕುಸಿದಿದ್ದರೆ, ದೇಶದಲ್ಲಿ ಡಿಜಿಟಲ್ ಪಾವತಿ ಮಾತ್ರ ಭರ್ಜರಿ ಬೇಡಿಕೆ ಸಂಪಾದಿಸಿದೆ. ಯುಪಿಐ ಭಾರತ್ ಬಿಲ್ ಪೇ, ಐಎಮ್‌ಪಿಎಸ್‌ನ ಮೇ ತಿಂಗಳ ವಹಿವಾಟು ದಾಖಲೆ ಸೃಷ್ಟಿಸಿದೆ.
ಕಳೆದ ತಿಂಗಳು ಭೀಮ್ ಯುಪಿಐ ಮೂಲಕ ನಡೆದ ವಹಿವಾಟು 123 ಕೋಟಿ ಕಳೆದಿದೆ. ಈ ಮೂಲಕ 2.18 ಲಕ್ಷ ಕೋಟಿ ರೂ. ಪಾವತಿಯಾಗಿದೆ. ಇಷ್ಟೊಂದು ಪ್ರಮಾಣವನ್ನು ಮುಟ್ಟುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಇದಕ್ಕೂ ಮುನ್ನ ಫೆಬ್ರವರಿಯಲ್ಲಿ 2.22 ಲಕ್ಷ ಕೋಟಿ ರೂ. ಪಾವತಿ ಮೂಲಕ ಅತಿ ಹೆಚ್ಚು ಪಾವತಿಯ ಸಾಧನೆ ಮಾಡಿತ್ತು.
ಎಪ್ರಿಲ್‌ನಲ್ಲಿ ಸಂಪೂರ್ಣ ಲಾಕ್‌ಡೌನ್‌ನಿಂದಾಗಿ ಇದರ ವಹಿವಾಟು 99 ಲಕ್ಷಕ್ಕೆ ಇಳಿದಿದ್ದು, ಈ ಮೂಲಕ 1.51 ಲಕ್ಷ ಕೋಟಿ ರೂ. ಮಾತ್ರ ಪಾವತಿಯಾಗಿತ್ತು.
ಮೇ ವೇಳೆ ಐಎಮ್‌ಪಿಎಸ್ ಮೂಲಕ ಪಾವತಿಯು 16.68 ಲಕ್ಷಕ್ಕೆ ಏರಿಕೆಯಾಗಿದ್ದು, ಒಟ್ಟು 1.69 ಲಕ್ಷ ಕೊಟಿ ರೂ. ಪಾವತಿ ಮಾಡಲಾಗಿತ್ತು. ಎಪ್ರಿಲ್‌ನಲ್ಲಿ ಇದು 12.24 ಲಕ್ಷ ವಹಿವಾಟು ನಡೆಸಿದ್ದು, 1.21 ಲಕ್ಷ ಕೋಟಿ ರೂ. ಪಾವತಿ ಮಾಡಲಾಗಿತ್ತು.
ಭಾರತ್ ಬಿಲ್ ಪೇ ಮೂಲಕ ಇದೇ ಅವಧಿಯಲ್ಲಿ 1.65 ಕೋಟಿ ವಹಿವಾಟು ನಡೆಸಿದ್ದು, 2.17 ಲಕ್ಷ ಕೋಟಿ ರೂ. ಪಾವತಿಯಾಗಿದೆ. ಎಪ್ರಿಲ್‌ನಲ್ಲಿ ಇದು 1.27 ಕೋಟಿ ಮತ್ತು 1.37 ಲಕ್ಷ ಕೋಟಿ ರೂ. ಆಗಿತ್ತು.
ಕಳೆದ ತಿಂಗಳು ಅಗತ್ಯ ವಸ್ತುಗಳಲ್ಲದೆ ಇತರ ವಸ್ತುಗಳ ಆನ್‌ಲೈನ್ ಖರೀದಿಗೆ ಕೇಂದ್ರ ಸರಕಾರ ಅನುವು ಮಾಡಿತ್ತು. ಇದರಿಂದ ಮತ್ತು ಅಂಗಡಿಗೆ ಹೋದರೂ ಜನರು ಹೆಚ್ಚಾಗಿ ಡಿಜಿಟಲ್ ಪಾವತಿಯನ್ನು ನೆಚ್ಚಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಡಿಜಿಟಲ್ ಮೇಮೆಂಟ್‌ನ ಎಲ್ಲ ಮಾದರಿಗಳೂ ಹೆಚ್ಚು ವಹಿವಾಟನ್ನು ಈ ಎರಡು ತಿಂಗಳುಗಳಲ್ಲಿ ಕಂಡಿವೆ.