ಬೆಂಗಳೂರು: ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿಗೆ ಪೂರೈಕೆಯಾಗುವ ಡೀಸೆಲ್ ಟ್ಯಾಂಕರ್‌ಗಳಿಗೆ ಬಿಪಿಸಿಎಲ್ ಈಗ ಡಿಜಿಟಲ್ ಲಾಕಿಂಗ್ ಸ್ಟಿಸ್ಟ್‌ಂ ಅಳವಡಿಸಿದೆ. ಇದರಿಂದ ಡೀಸೆಲ್ ಕಳ್ಳತನಕ್ಕೆ ಬ್ರೇಕ್ ಬೀಳಲಿದೆ.
ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ಎಲ್ಲ ಸಾರಿಗೆ ಸಂಸ್ಥೆಗಳಿಗೆ ಬಿಪಿಸಿಎಎಲ್ ಡೀಸೆಲ್ ಪೂರೈಕೆ ಮಾಡುತ್ತಿದೆ. ಹೀಗೆ ಪೂರೈಕೆಯಾಗುವ ಟ್ಯಾಂಕರ್‌ಗಳಿಗೆ ಇನ್ಮುಂದೆ ಜಿಪಿಎಸ್ ಆಧಾರಿತ ಲಾಕಿಂಗ್ ವ್ಯವಸ್ಥೆ ಅಳವಡಿಸಲಾಗಿ. ಇದರಿಂದ ಟ್ಯಾಂಕರ್‌ಗಳನ್ನು ಟ್ಯಾಂಪರ್ ಮಾಡಲು ಸಾಧ್ಯವಿಲ್ಲ ಎಂದು ಬಿಪಿಸಿಎಲ್ ಪ್ರಾಂತ್ಯ ವ್ಯವಸ್ಥಾಪಕ ಮೇಜರ್ ಶಂಕರ್ ಕರಜಗಿ ತಿಳಿಸಿದರು.
ಕೆಎಸ್‌ಆರ್‌ಟಿಸಿ ಕೇಂದ್ರೀಯ ತರಬೇತಿ ಕೇಂದ್ರದಲ್ಲಿ ಗುರುವಾರ ನಡೆದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಬಸ್‌ಗಳ ಡೀಸೆಲ್ ಟ್ಯಾಂಕರ್‌ಗಳಿಗೆ ಜಿಪಿಎಸ್ ಆಧಾರಿತ ಲಾಕಿಂಗ್ ವ್ಯವಸ್ಥೆ ಅಳವಡಿಸಲಾಗುತ್ತಿದ್ದು, ಬಿಪಿಸಿಎಲ್ನಲ್ಲಿ ಇಂಧನ ತುಂಬಿದ ನಂತರ ಟ್ಯಾಂಕರ್‌ಗಳ ಸಾಗಾಣಿಕೆ ಹಂತದಲ್ಲಿ (ಜಿಯೊ-ಫೆನ್ಸಿಂಗ್) ನಿಗಮದ ಘಟಕಕ್ಕೆ ತಲುಪುವವರೆಗೆ ಮಾರ್ಗ ಮಧ್ಯದಲ್ಲಿ ಯಾರೂ ಟ್ಯಾಂಕ್‌ಗಳನ್ನು ತೆರೆಯಲು ಸಾಧ್ಯವಿಲ್ಲ ಎಂದರು.
ಸಾಗಾಣಿಕೆ ವಾಹನವು ಘಟಕಕ್ಕೆ ಆಗಮಿಸಿದ ನಂತರ, ಒಟಿಪಿ ಸ್ವೀಕರಿಸಿದ ಬಳಿಕ ತಾಳೆಯಾಗಬೇಕು. ಆಗ ಮಾತ್ರ ಟ್ಯಾಂಕರ್ ಮುಚ್ಚಳ ತೆರೆಯಲು ಸಾಧ್ಯವಾಗುತ್ತದೆ. ಈ ವ್ಯವಸ್ಥೆ ದೇಶದಲ್ಲೇ ಪ್ರಥಮ. ಇದಕ್ಕಾಗಿ ಟ್ಯಾಂಕರ್‌ಗಳಿಗೆ ಎಲೆಕ್ಟ್ರಾನಿಕ್ ಲಾಕಿಂಗ್ ಸಿಸ್ಟಂ ಅಳವಡಿಸಿದ್ದು, ಇದರಿಂದ ಗುಣಮಟ್ಟದ ಡೀಸಲ್ ಪೂರೈಕೆ ಜತೆಗೆ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ. ಡೀಸಲ್ ಸಾಗಿಸುವ ವಾಹನಗಳ ನಿಗಾ ವಹಿಸಲು ವೆಹಿಕಲ್ ಟ್ರ್ಯಾಕಿಂಗ್ ಸಿಸ್ಟ್‌ಂ ಕೂಡ ಅಳವಡಿಸಲಾಗಿದೆ ಎಂದರು.
ಇದಕ್ಕೂ ಮುನ್ನ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಬಿ. ಸತ್ಯನಾರಾಯಣ ಕಾರ್ಯಾಗಾರ ಉದ್ಘಾಟಿಸಿದರು. ಇದೇ ವೇಳೆ ಬಿಪಿಸಿಎಲ್ ಅಧಿಕಾರಿಗಳು ಡಿಜಿಟಲ್ ಲಾಕ್‌ಗಳನ್ನು ಸಾಂಕೇತಿಕವಾಗಿ ಹಸ್ತಾಂತರಿಸಿದರು. ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.