Advertisement

ಬಾಲಕರ ಪ್ರೌಢಶಾಲೆಗೆ ಡಿಜಿಟಲ್‌ ಲೈಬ್ರರಿ

01:31 PM Jun 03, 2017 | Team Udayavani |

ದಾವಣಗೆರೆ: ಐತಿಹಾಸಿಕ ಹಿನ್ನೆಲೆಯ ದಾವಣಗೆರೆಯ ಸರ್ಕಾರಿ ಬಾಲಕರ ಪ್ರೌಢಶಾಲೆಗೆ ಡಿಜಿಟಲ್‌ ಲೈಬ್ರರಿ ಸೌಲಭ್ಯ ಒದಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ತಿಳಿಸಿದ್ದಾರೆ. 

Advertisement

ಜಿಲ್ಲಾಡಳಿತ, ಜಿಲ್ಲಾ,ತಾಲ್ಲೂಕು ಪಂಚಾಯತ್‌, ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವ ಶಿಕ್ಷಣ ಅಭಿಯಾನ ಸಂಯುಕ್ತಾಶ್ರಯದಲ್ಲಿ ಸರ್ಕಾರಿ ಪದವಿ ಪೂರ್ವಕಾಲೇಜು (ಪ್ರೌಢಶಾಲೆ ವಿಭಾಗ)ದಲ್ಲಿ ಶುಕ್ರವಾರ ನಡೆದ ಶಾಲಾ ಪ್ರಾರಂಭೋತ್ಸವ ಹಾಗೂ 2017-18 ನೇ ಸಾಲಿನ ಶಾಲಾ ಚಟುವಟಿಕೆಗಳ ಆರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಈಗ ಕಂಪ್ಯೂಟರ್‌ ಕೊಠಡಿ ಪ್ರಾರಂಭಿಸಲಾಗಿದೆ. ಡಿಜಿಟಲ್‌ ಲೈಬ್ರರಿಯ ಪ್ರಸ್ತಾವನೆ ಇದೆ. ಆದಷ್ಟು ಬೇಗ ಆ  ಸೌಲಭ್ಯ ಒದಗಿಸಲಾಗುವುದು ಎಂದರು. 1941-42 ನೇ ಇಸವಿಯಲ್ಲಿ ಆರಂಭವಾದ ಈ ಶಾಲೆಯಿಂದ ಹಲವಾರು  ಪ್ರತಿಭಾವಂತರು ಹೊರ ಬಂದಿದ್ದಾರೆ.

ಮಹಾತ್ಮಾ ಗಾಂಧೀಜಿಯವರು  ದಾವಣಗೆರೆ ಬಂದಾಗ ಇದೇ ಶಾಲಾ ಮೈದಾನದಲ್ಲಿ ಭಾಷಣ ಮಾಡಿದ್ದರು. ಅಷ್ಟೊಂದು ಮಹತ್ವವಿರುವ ಶಾಲೆ ಇದಾಗಿದೆ. ಈ ಶಾಲೆಗೆ ಬೇಕಾದ ಎಲ್ಲಾ ರೀತಿಯ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು. ನಾಗಾಲೋಟದ ಸ್ಪರ್ಧೆ ಇರುವ ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಯ ಮಕ್ಕಳು ಹಿಂದುಳಿಯದಂತೆ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ವಿದ್ಯಾರ್ಥಿಗಳನ್ನು ತಯಾರು ಮಾಡಬೇಕಾಗಿದೆ.

ಶಿಕ್ಷಕರು ಸಹ ಅದಕ್ಕೆ ತಕ್ಕಂತೆ ಸಿದ್ಧರಾಗಬೇಕು ಎಂದು ತಿಳಿಸಿದರು. ರಾಜ್ಯ ಸರ್ಕಾರ ಶಾಲೆಗಳಿಗೆ ಎಲ್ಲಾ ರೀತಿಯ ಸೌಲಭ್ಯ ನೀಡಿದೆ. ಮುಂದಿನ ದಿನಗಳಲ್ಲಿ ಈ ಶಾಲೆಯಲ್ಲಿ ಡಿಜಿಟಲ್‌ ಲೆ„ಬ್ರರಿ ಆರಂಭಿಸುವ ಮೂಲಕ ವಿದ್ಯಾರ್ಥಿಗಳ ಬೆರಳ ತುದಿಯಲ್ಲೇ ದೊರೆಯುವ ವ್ಯವಸ್ಥೆ ಮಾಡಲಾಗುವುದು. 

Advertisement

ಈಗ ಪಿಯುಸಿ ನಂತರ ರಾಷ್ಟ್ರ ಮಟ್ಟದ ನೀಟ್‌, ಜೆಇಇ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಅಗತ್ಯ ತರಬೇತಿ ನೀಡಿ ರಾಷ್ಟ್ರಮಟ್ಟದಲ್ಲಿ ಫಲಿತಾಂಶದಲ್ಲಿ ದಾಖಲಾಗುವಂತೆ ಶಿಕ್ಷಕರು ಶ್ರಮಿಸ ಬೇಕು ಎಂದು ತಿಳಿಸಿದರು. ಸರ್ಕಾರ ಶಾಲಾ ಕಟ್ಟಡಗಳನ್ನು ಉನ್ನತೀಕರಿಸಿದೆ. ಉಚಿತವಾಗಿ ಪಠ್ಯಪುಸ್ತಕ, ಸಮವಸ್ತ್ರ, ಬೈಸಿಕಲ್‌, ಶೂ ಹಾಗೂ ಸಾಕ್ಸ್‌ ನೀಡುತ್ತಿದೆ.

ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಐದು ದಿನ ಹಾಲು, ಮೊಟ್ಟೆ ನೀಡಲಾಗುತ್ತಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವಾಗಲು ಲ್ಯಾಪ್‌ಟಾಪ್‌ ಸಹ ವಿತರಿಸುತ್ತಿದೆ. ಹಳ್ಳಿಗಾಡಿನ ಬಡಮಕ್ಕಳು ಬರಿಗಾಲಿನಲ್ಲಿ ನಡೆದು ಬರುತ್ತಿರುವುದನ್ನು ಗಮನಿಸಿ ಈ ವರ್ಷದಿಂದ ಶೂ  ಭಾಗ್ಯ ಕಲ್ಪಿಸಲಾಗಿದೆ. ಹೆಣ್ಣು ಮಕ್ಕಳಿಗೆ ಚೂಡಿದಾರ ನೀಡಲು ಸಿದ್ಧತೆ ನಡೆಯುತ್ತಿದೆ.

ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು. ಮಕ್ಕಳು ಎಲ್ಲಾ ಸೌಲಭ್ಯ ಸದುಪಯೋಗ ಪಡಿಸಿಕೊಂಡು ಒಳ್ಳೆಯ ವಿದ್ಯಾರ್ಥಿಗಳಾಗಬೇಕು ಎಂದು ಆಶಿಸಿದರು. 2003 ರಲ್ಲಿ ದಾವಣಗೆರೆ ಜಿಲ್ಲೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಹತ್ತರ ಸ್ಥಾನದಲ್ಲಿರುತ್ತಿತ್ತು. ಕಳೆದ ವರ್ಷ 17 ನೇ ಸ್ಥಾನಕ್ಕೆ ಕುಸಿದಿದ್ದ ಫಲಿತಾಂಶ ಈ ವರ್ಷ 14ನೇ ಸ್ಥಾನಕ್ಕೆ ಬಂದಿರುವುದು ಸ್ವಲ್ಪ ಮಟ್ಟಿನ ಸಮಾಧಾನದ ವಿಷಯ.

ಮುಂದಿನ ದಿನಗಳಲ್ಲಿ ಎಲ್ಲಾ ಶಾಲೆಗಳ ಶಿಕ್ಷಕರು ಅರ್ಪಣಾ ಮನೋಭಾವದಿಂದ ಕಾರ್ಯ ನಿರ್ವಹಿಸಿ ನಂಬರ್‌ 1ಸ್ಥಾನ ಪಡೆಯಲು ಶ್ರಮಿಸಬೇಕು ಎಂದು ತಿಳಿಸಿದರು. ಪ್ರಾಸ್ತಾವಿಕ ಮಾತುಗಳಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಎಚ್‌.ಎಂ. ಪ್ರೇಮಾ, ದಾವಣಗೆರೆ ಜಿಲ್ಲೆ ಎಸ್ಸೆಸ್ಸೆಲ್ಸಿ ಫಲಿತಾಂಶ ಕಳೆದ ವರ್ಷ 17 ನೇ ಸ್ಥಾನದಿಂದ ಈ ವರ್ಷ 14ನೇ ಸ್ಥಾನಕ್ಕೆ ಬಂದಿದೆ.

402 ಶಾಲೆಯ ಪೈಕಿ 21 ಶಾಲೆಯಲ್ಲಿ ಶೇ.  100, 302 ಶಾಲೆಯಲ್ಲಿ ಶೇ. 80, 18 ಶಾಲೆಯಲ್ಲಿ ಶೇ. 40 ರಷ್ಟು ಫಲಿತಾಂಶ ಬಂದಿದೆ. 1,500 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ ಗಳಿಸಿದ್ದಾರೆ. ಮುಂದಿನ ವರ್ಷದಲ್ಲಿ 10 ರ ಒಳಗೆ ಬರುವಂತೆ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು. 

ಜಿಲ್ಲಾ ಪಂಚಾಯತ್‌ ಸದಸ್ಯರಾದ ಶೈಲಜಾ ಬಸವರಾಜ್‌, ಕೆ.ಎಸ್‌. ಬಸವಂತಪ್ಪ, ಜಿ.ಸಿ. ನಿಂಗಪ್ಪ,  ಕೆ.ಎಚ್‌. ಓಬಳೇಶಪ್ಪ, ದಾವಣಗೆರೆ-ಹರಿಹರ ಪ್ರಾಧಿಕಾರದ ಅಧ್ಯಕ್ಷ ಜಿ.ಎಚ್‌. ರಾಮಚಂದ್ರಪ್ಪ, ದಾವಣಗೆರೆ ಎಪಿಎಂಸಿ ಅಧ್ಯಕ್ಷ ಮುದೇಗೌಡ್ರು ಗಿರೀಶ್‌, ನಗರಪಾಲಿಕೆ ಸದಸ್ಯ ದಿನೇಶ್‌ ಕೆ. ಶೆಟ್ಟಿ, ಎಸ್‌ಡಿಎಂಸಿ ಅಧ್ಯಕ್ಷರಾದ ಎಚ್‌.ಕೆ. ಮುಷರಫ್‌, ಶಕುಂತಲಾ ಇತರರು ಇದ್ದರು. 

ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ. ಸಿದ್ದಪ್ಪ ಸ್ವಾಗತಿಸಿದರು. ವಿವಿಧ ಶಾಲಾ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ, ಬೈಸಿಕಲ್‌, ಶೂ, ಸಾಕ್ಸ್‌ ವಿತರಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಸನ್ಮಾನಿಸಲಾಯಿತು.  

Advertisement

Udayavani is now on Telegram. Click here to join our channel and stay updated with the latest news.

Next