Advertisement

ಡಿಜಿಟಲ್‌ ಫ್ಲುಯೆನ್ಸಿ ಪರೀಕ್ಷೆಗೆ ಹಗ್ಗಜಗ್ಗಾಟ; ನಮಗೆ ಅವಕಾಶ ಕೊಡಿ: ಕಾಲೇಜುಗಳು

01:54 AM Mar 07, 2022 | Team Udayavani |

ಮಂಗಳೂರು: ಬಹುನಿರೀಕ್ಷಿತ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾದ ಬಳಿಕ ನಡೆ ಯುವ ಮೊದಲ ಪದವಿಯ “ಡಿಜಿಟಲ್‌ ಫ್ಲುಯೆನ್ಸಿ’ ವಿಷಯದ ಪರೀಕ್ಷೆ ಈಗ ವಿವಿಧ ಕಾಲೇಜು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಮಧ್ಯೆ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ.

Advertisement

“ಡಿಜಿಟಲ್‌ ಫ್ಲುಯೆನ್ಸಿ’ ವಿಷಯವನ್ನು ಕಾಲೇಜಿನಲ್ಲಿ ಬಹಳ ತಡವಾಗಿ ಬೋಧಿಸಲಾಗಿದೆ ಹಾಗೂ ಸಂಬಂಧಿಸಿದ ಉಪ ನ್ಯಾಸಕರಿಗೆ ತರಬೇತಿಯನ್ನೂ ಸರಕಾರ ನೀಡಿಲ್ಲ. ಪ್ರಶ್ನೆಗಳಿಗೆ ವಿವರಣೆಯೂ ದೊರಕಿಲ್ಲ. ಉಪನ್ಯಾಸ ಕರ ನೇಮಕ ತಡವಾಗಿದ್ದುದು ಒಂದೆಡೆ ಯಾದರೆ, ಅತಿಥಿ ಉಪನ್ಯಾಸಕರ ಪ್ರತಿ ಭಟನೆಯಿಂದ “ಡಿಜಿಟಲ್‌ ಫ್ಲುಯೆನ್ಸಿ’ ಬೋಧನೆ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಹೀಗಾಗಿ ಈ ವರ್ಷ ಈ ಪರೀಕ್ಷೆಯನ್ನು ಕಾಲೇಜು ಮಟ್ಟದಲ್ಲೇ ನಡೆಸಲು ಅವಕಾಶ ನೀಡುವಂತೆ ವಿವಿಯನ್ನು ಕೋರ ಲಾಗಿದೆ. ಆದರೆ ನೂತನ ಶಿಕ್ಷಣ ನೀತಿ ಕಾರಣ ದಿಂದ ಪರೀಕ್ಷೆಯನ್ನು ಕಾಲೇಜು ಮಟ್ಟದಲ್ಲಿ ನಡೆಸುವುದು ಸೂಕ್ತವಲ್ಲದ ಕಾರಣ ತಾನೇ ನಡೆಸಲು ವಿವಿ ಆಸಕ್ತಿ ವಹಿಸಿದೆ. ಒಂದು ವೇಳೆ ಅನುತ್ತೀರ್ಣರಾದರೆ ಕೃಪಾಂಕ (ಗ್ರೇಸ್‌ ಮಾರ್ಕ್‌) ನೀಡುವ ಬಗ್ಗೆಯೂ ವಿವಿ ಚಿಂತನೆ ನಡೆಸಿದೆ.

36 ಕಾಲೇಜಿನಿಂದ ವಿವಿಗೆ ಪತ್ರ
ಡಿಜಿಟಲ್‌ ಫ್ಲುಯೆನ್ಸಿಗೆ ಸಂಬಂಧಿಸಿ ಈ ಬಾರಿ ಬಹುತೇಕ ಕಾಲೇಜಿನಲ್ಲಿ ಪಾಠಗಳು ಸಮರ್ಪಕವಾಗಿ ನಡೆದಿಲ್ಲ.ಜತೆಗೆ ಅದು ಅತ್ಯಂತ ಕಠಿನ ವಿಷಯವಾಗಿದ್ದು, ಅದರ ಬೋಧನೆಗೆ ಬಹುತೇಕ ಕಾಲೇಜಿನಲ್ಲಿ ಉಪನ್ಯಾಸಕರಿಲ್ಲ. ಜತೆಗೆ ಬಹುತೇಕ ಕಾಲೇಜಿನಲ್ಲಿ ಅರ್ಹ ಉಪನ್ಯಾಸಕರು ಬೋಧಿಸಿಲ್ಲ. ಹೀಗಾಗಿ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಮನದಟ್ಟಾಗಿಲ್ಲ. ಇದರಿಂದಾಗಿ ಕಾಲೇಜು ಮಟ್ಟದಲ್ಲಿ ನಾವು ಬೋಧಿಸಿರುವ ಸ್ವರೂಪದಲ್ಲೇ ಪರೀಕ್ಷೆ ನಡೆಸುತ್ತೇವೆ ಎಂದು 36 ಕಾಲೇಜಿನ ಪ್ರಾಂಶುಪಾಲರು ಮಂಗಳೂರು ವಿವಿಗೆ ಪತ್ರದ ಮೂಲಕ ಕೋರಿಕೊಂಡಿದ್ದಾರೆ.

ಆಂತರಿಕವಾಗಿಯೇ ನಡೆಯಲಿದೆ ಪ್ರಾಯೋಗಿಕ ಪರೀಕ್ಷೆ
ಪದವಿ ಪರೀಕ್ಷೆಯನ್ನು 1 ತಿಂಗಳು ಮುಂದೂಡುವಂತೆ ಸರಕಾರ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಈ ಅವಧಿಯೊಳಗೆ ಎಲ್ಲ ಕಾಲೇಜಿನ ಪ್ರಾಯೋಗಿಕ ಪರೀಕ್ಷೆಯನ್ನು ಮುಗಿಸಬೇಕಾದ ಅನಿವಾರ್ಯತೆ ವಿವಿಗೆ ಎದುರಾಗಿದೆ. ಆದರೆ ಇದು ಕಷ್ಟದಾಯಕ. ಯಾಕೆಂದರೆ ಈ ಹಿಂದೆ ಪ್ರಾಯೋಗಿಕ ಪರೀಕ್ಷೆಯನ್ನು ಆಂತರಿಕ ಹಾಗೂ ಬಾಹ್ಯ ವೀಕ್ಷಕರ ಮೂಲಕ ನಡೆಸಲಾಗುತ್ತಿತ್ತು. ಇದಕ್ಕಾಗಿ ಒಂದು ಪ್ರೊಫೆಸರ್‌ ಮತ್ತೊಂದು ಕಾಲೇಜಿಗೆ ಮೂರು ವಾರ ಹೋಗಬೇಕಾಗಿದೆ. ಇದು ಬೇರೆ ಬೇರೆ ಕಾಲೇಜಿನ ವಿದ್ಯಾರ್ಥಿಗಳ ಕಲಿಕೆಗೆ ಹೊಡೆತ ಬೀಳಲಿದೆ. ಹೀಗಾಗಿ ಈ ಬಾರಿಯೂ ಪ್ರಾಯೋಗಿಕ ಪರೀಕ್ಷೆ ಆಯಾ ಕಾಲೇಜಿನ ಆಂತರಿಕವಾಗಿಯೇ ನಡೆಸಲು ತೀರ್ಮಾನಿಸಲಾಗಿದೆ. ಸ್ನಾತಕೋತ್ತರ ವಿದ್ಯಾರ್ಥಿಗಳಿಗೂ ಇದೇ ಮಾದರಿ ಅನುಸರಿಸಲು ಆಗ್ರಹ ಕೇಳಿಬಂದಿದೆ.

ಏನಿದು “ಡಿಜಿಟಲ್‌ ಫ್ಲುಯೆನ್ಸಿ’?
ಸದ್ಯ ಜಾಗತಿಕವಾಗಿ ಡಿಜಿಟಲ್‌ ಕ್ಷೇತ್ರ ದಲ್ಲಿ ಆಮೂಲಾಗ್ರ ಅವಕಾಶಗಳ ಹಿನ್ನೆಲೆ ಯಲ್ಲಿ ಕಂಪ್ಯೂಟರ್‌ ಕೇಂದ್ರಿತ ವಿವಿಧ ಆಯಾಮ ಗಳಲ್ಲಿ ಡಿಜಿಟಲ್‌ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ನೂತನ ಶಿಕ್ಷಣ ನೀತಿಯಡಿ “ಡಿಜಿಟಲ್‌ ಫ್ಲುಯೆನ್ಸಿ’ ವಿಷಯವನ್ನು ಪದವಿಯ ಪ್ರಥಮ ಸೆಮಿಸ್ಟರ್‌ ಮಕ್ಕಳಿಗೆ ಇದೇ ಮೊದಲ ಬಾರಿಗೆ ಬೋಧಿಸಲಾಗಿದೆ. ಸುಮಾರು 25 ಸಾವಿರ ವಿದ್ಯಾರ್ಥಿಗಳು ಮಂಗಳೂರು ವಿವಿ ವ್ಯಾಪ್ತಿಯಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಒಟ್ಟು 50 ಮಾರ್ಕ್‌ನ ಪರೀಕ್ಷೆಯಿದು.

Advertisement

ಒಂದೆರಡು ದಿನದಲ್ಲಿ
ಅಂತಿಮ ತೀರ್ಮಾನ
“ಡಿಜಿಟಲ್‌ ಫ್ಲುಯೆನ್ಸಿ’ ವಿಷಯದ ಪರೀಕ್ಷೆ ಯನ್ನು ಈ ಬಾರಿ ಕಾಲೇಜು ಮಟ್ಟದಲ್ಲೇ ಮಾಡಲು ಅವಕಾಶ ಕಲ್ಪಿಸುವಂತೆ ವಿವಿಧ ಕಾಲೇಜಿನಿಂದ ಪತ್ರ ಬಂದಿದೆ. ಆದರೆ ಶೈಕ್ಷಣಿಕ ಹಿತದೃಷ್ಟಿಯಿಂದ ವಿವಿ ವತಿಯಿಂದಲೇ ಮಾಡುವ ಬಗ್ಗೆಯೂ ಚಿಂತನೆ ನಡೆದಿದೆ. ಮೂರು ದಿನದೊಳಗೆ ಮಂಗಳೂರು ವಿವಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಜತೆಗೆ ಪದವಿ ಪ್ರಾಯೋಗಿಕ ಪರೀಕ್ಷೆಯನ್ನು ಈ ಬಾರಿ ಆಂತರಿಕವಾಗಿ ನಡೆಸಲು ಈಗಾಗಲೇ ಸೂಚನೆ ನೀಡಲಾಗಿದೆ.
– ಪ್ರೊ| ಪಿ.ಎಲ್‌. ಧರ್ಮ,
ಕುಲಸಚಿವರು (ಪರೀಕ್ಷಾಂಗ) ಮಂಗಳೂರು ವಿವಿ

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next