ಮುಂಬೈ: ಪ್ರತಿ ದಿನ ಸಂಜೆ 7 ಗಂಟೆಯಾದಾಕ್ಷಣ ಈ ಗ್ರಾಮದ ಊರಿನ ಮುಖ್ಯ ಶಿಕ್ಷಕರು ಜಿಲ್ಲಾ ಪರಿಷತ್ ಕಚೇರಿಯ ಮೇಲಿರುವ ಸೈರನ್ ಮೊಳಗಿಸುತ್ತಾರೆ. ತಕ್ಷಣಕ್ಕೆ ಇಡೀ ಊರಿನಲ್ಲಿ ಟಿವಿ, ಮೊಬೈಲ್, ಲ್ಯಾಪ್‌ಟಾಪ್‌ಗಳೆಲ್ಲವೂ ಬಂದ್!
7ರಿಂದ 8ಗಂಟೆಯವರೆ ಪ್ರತಿ ಮನೆಯಲ್ಲಿ ಮಕ್ಕಳು ಪುಸ್ತಕ ಹಿಡಿದು ಓದುತ್ತಾರೆ. ಹೌದು. ಎಲ್ಲ ಮಕ್ಕಳೂ ಮೊಬೈಲ್, ಆನ್‌ಲೈನ್ ಗೇಮ್‌ಗಳಲ್ಲಿ ಮುಳುಗಿರುವಂಥ ಈ ಕಾಲಮಾನದಲ್ಲಿ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಖೇರಾಡೆವಾಂಗಿ ಗ್ರಾಮ ಹೊಸ ಬದಲಾವಣೆಗೆ ನಾಂದಿ ಹಾಡಿದೆ.
ಕೊರೊನಾ ಸಮಯದಲ್ಲಿ ಮಕ್ಕಳು ಪುಸ್ತಕಗಳನ್ನು ಮರೆತು, ಮೊಬೈಲ್, ಲ್ಯಾಪ್‌ಟಾಪ್‌ನಲ್ಲೇ ತರಗತಿಗೆ ಹಾಜರಾಗುತ್ತಿದ್ದ ಹಿನ್ನೆಲೆಯಲ್ಲಿ ಊರಿನ ಕೆಲವರು ಸೇರಿಕೊಂಡು ಇಂಥದ್ದೊಂದು ಪ್ಲ್ಯಾನ್ ಮಾಡಿದ್ದಾರೆ. ಮಕ್ಕಳಿಗೆ ಪುಸ್ತಕ ಪ್ರೀತಿ ಬಿಟ್ಟುಹೋಗಬಾರದು ಎನ್ನುವ ದೃಷ್ಟಿಯಿಂದ ದಿನಕ್ಕೆ ಒಂದು ಗಂಟೆಯನ್ನು ಕಡ್ಡಾಯವಾಗಿ ಪುಸ್ತಕಗಳಿಗೇ ಮೀಸಲಿಡಲು ಮನೆಯವರು ಮುಂದಾಗಿದ್ದಾರೆ.
ಈ ಸಮಯದಲ್ಲಿ ಪೋಷಕರು, ಮನೆಯ ಸದಸ್ಯರು ಯಾರೂ ಕೂಡ ಡಿಜಿಟಲ್ ಸಲಕರಣೆ ಉಪಯೋಗ ಮಾಡುವುದಿಲ್ಲ ಎನ್ನುವುದು ವಿಶೇಷ. ಊರಿನ ಜನರು ಪ್ರತಿ ಮನೆಗೆ ತೆರಳಿ ಈ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
ಈ ಊರಿನ ವಿಶೇಷ ಅಭ್ಯಾಸದ ಬಗ್ಗೆ ಹಲವು ವಿಡಿಯೋಗಳು ಹರಿದಾಡಿದ್ದು, ಅದು ಸುತ್ತಮುತ್ತಲಿನ ಹಳ್ಳಿಗಳಿಗೂ ಇಷ್ಟವಾಗಿದೆ. ಇದೀಗ ಜಿಲ್ಲೆಯಲ್ಲಿ ಕನಿಷ್ಠ ಆರು ಗ್ರಾಮಗಳು ಈ ಅಭ್ಯಾಸವನ್ನು ರೂಢಿ ಮಾಡಿಕೊಂಡಿವೆ ಎನ್ನುತ್ತಾರೆ ಜಿಲ್ಲೆಯ ಅಧಿಕಾರಿ ಜಿತೇಂದ್ರ.