ಮೊಬೈಲ್‌ನಲ್ಲಿಯೇ ಸಿಬ್ಬಂದಿಗೆ ಲಾಕರ್ ಓಪನ್ ಮಾಡಿ ತೋರಿಸಲು ಅವಕಾಶ
ಸದ್ವರ್ತನೆ ತೋರಲು ದೇಶಾದ್ಯಂತ ರೆಲ್ವೆ ಸಿಬ್ಬಂದಿಗೆ ತರಗತಿಗಳ ಆಯೋಜನೆಗೆ ನಿರ್ಧಾರ
27ರಿಂದ ಮೊದಲ ಹಂತದಲ್ಲಿ 150 ಮಂದಿಗೆ ಪಾಠ ಶುರು
ಹೊಸದಿಲ್ಲಿ: ರೈಲಲ್ಲಿ ಪ್ರಯಾಣಿಸುವಾಗ ಗುರುತಿನ ಚೀಟಿ ತೋರಿಸುವುದು ಕಡ್ಡಾಯ. ಆದರೆ, ಅದೇನಾದರೂ ಕಾಣೆಯಾದರೆ ಏನು ಮಾಡೋದು ಎಂದು ನೀವು ಹಲವು ಬಾರಿ ಚಿಂತೆ ಮಾಡಿರಬಹುದು? ಇನ್ನು ಮುಂದೆ ಅಂಥ ಚಿಂತೆ ಬೇಕಾಗಿಲ್ಲ. ಏಕೆಂದರೆ, ಪ್ರಯಾಣಿಕರ ಗುರುತು ದೃಢಪಡಿಸಲು ಆಧಾರ್ ಕಾರ್ಡ್, ಚಾಲನಾ ಪರವಾನಗಿ ಯಂಥ ಗುರುತಿನ ಚೀಟಿಗಳ ಸಾಫ್ಟ್ ಕಾಪಿಗಳನ್ನು ಕೂಡ ರೈಲ್ವೆ ಇಲಾಖೆ ಸ್ವೀಕರಿಸಲಿದೆ.
ನಿಮ್ಮ ಗುರುತಿನ ಚೀಟಿಗಳು ಡಿಜಿ ಲಾಕರ್‌ನಲ್ಲಿ ಭದ್ರವಾಗಿದ್ದರೆ, ಮೊಬೈಲ್‌ನಲ್ಲೇ ಡಿಜಿ ಲಾಕರ್ ಓಪನ್ ಮಾಡಿ, ಅದನ್ನು ತೋರಿಸಿ ಗುರುತು ದೃಢಪಡಿಸಿಕೊಳ್ಳುವಂಥ ಅವಕಾಶವನ್ನು ರೈಲ್ವೆ ಇಲಾಖೆ ನೀಡಿದೆ. ಎಲ್ಲ ವಲಯಗಳಿಗೂ ಇಂಥದ್ದೊಂದು ಸುತ್ತೋಲೆ ಕಳುಹಿಸಲಾಗಿದ್ದು, ಡಿಜಿ ಲಾಕರ್‌ನಲ್ಲಿರುವ ದಾಖಲೆಗಳನ್ನು ಅಸಲಿ ದಾಖಲೆಯೆಂದೇ ಪರಿಗಣಿಸುವಂತೆ ಸೂಚಿಸಲಾಗಿದೆ.
ನೈತಿಕತೆ ಪಾಠ: ಪ್ರಯಾಣಿಕರೊಂದಿಗೆ ಸದ್ವರ್ತನೆ ತೋರುವ ನಿಟ್ಟಿನಲ್ಲಿ ರೆಲ್ವೆ ಸಿಬ್ಬಂದಿಗೆ ಇಲಾಖೆಯು ರಾಷ್ಟ್ರವ್ಯಾಪಿ ತರಗತಿಗಳನ್ನು ಆಯೋಜಿಸಲಿದೆ. ಸಾರ್ವಜನಿಕರ ಸೇವೆಯ ವಿಚಾರಕ್ಕೆ ಬಂದಾಗ, ಹೌದು ಅಥವಾ ಇಲ್ಲ ಎಂದು ನಿಖರವಾಗಿ ಹೇಳುವ (ಇರಲೂಬಹುದು ಎಂದು ಹೇಳದಂತೆ), ಆ ಮೂಲಕ ಪ್ರಯಾಣಿಕರೊಂದಿಗೆ ಸರಿಯಾಗಿ ಮಾತನಾಡುವ ಕುರಿತು ಸಿಬ್ಬಂದಿಗೆ ಉಪನ್ಯಾಸ ನೀಡಲಾಗುತ್ತದೆ. ಮೊದಲ ತರಗತಿಯು ಇದೇ 27ರಂದು ನಡೆಯಲಿದ್ದು, 150 ಅಧಿಕಾರಿಗಳು ಮತ್ತು ಮೇಲ್ವಿಚಾರಕರಿಗೆ ತರಬೇತಿ ನೀಡಲಾಗುತ್ತದೆ. ಇದರ ವಿಡಿಯೋವನ್ನು ಎಲ್ಲ ವಲಯಗಳಲ್ಲೂ ಪ್ರಸಾರ ಮಾಡಲಾಗುತ್ತದೆ.