Advertisement

ಡಿಜಿ-ಧನ್‌ ಲಕ್ಕಿ ಡಿಪ್‌: 14,980 ಮಂದಿಗೆ ಬಹುಮಾನ

11:57 AM Jan 17, 2017 | |

ಬೆಂಗಳೂರು: ನಗದುರಹಿತ ವಹಿವಾಟು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ “ಡಿಜಿ ಧನ್‌’ ಲಕ್ಕಿ ಡ್ರಾ ಸೋಮವಾರ ಬೆಂಗಳೂರಿನಲ್ಲಿ ನಡೆದಿದ್ದು, ಈ ವೇಳೆ ವಿಜೇತರಾದ 14,980 ಮಂದಿಗೆ “ಲಕ್ಕಿ ಗ್ರಾಹಕ್‌’ ಅಡಿ ತಲಾ 1 ಸಾವಿರ ನಗದು ಬಹುಮಾನ ಘೋಷಿಸಲಾಯಿತು.

Advertisement

ಕೇಂದ್ರ ಸರ್ಕಾರವು ಡಿ. 25ರಿಂದ ಆನ್‌ಲೈನ್‌ ವಹಿವಾಟು ನಡೆಸುವವರಿಗೆ 100 ದಿನಗಳ ಕಾಲ ನಿತ್ಯ 15 ಸಾವಿರ ಮಂದಿಗೆ ತಲಾ 1 ಸಾವಿರ ರೂ.ನಂತೆ ಉಡುಗೊರೆ ನೀಡಲು ಲಕ್ಕಿ ಗ್ರಾಹಕ್‌ ಡ್ರಾ ಹಮ್ಮಿಕೊಂಡಿದೆ.

ಇದರಡಿ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸೋಮವಾರ ನಡೆದ “ಡಿಜಿ-ಧನ್‌ ಮೇಳ-ಬೆಂಗಳೂರು’ ವಸ್ತು ಪ್ರದರ್ಶನದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ತೆರೆದ ಲಕ್ಕಿ ಡಿಪ್‌ ಮೂಲಕ 14,980 ಮಂದಿಗೆ ಲಕ್ಕಿ ಗ್ರಾಹಕ್‌ ಅಡಿ ತಲಾ 1 ಸಾವಿರ ರೂ. ಬಹುಮಾನ ಘೋಷಿಸಿದರು.

ಈ 14,980 ವಿಜೇತ ಗ್ರಾಹಕರಿಗೆ ಆಯಾ ಬ್ಯಾಂಕ್‌ಗಳಿಂದ ಮಂಗಳವಾರ 1 ಸಾವಿರ ರೂ. ಗಳಿಸಿರುವ ಕುರಿತು ಸಂದೇಶ ಬರಲಿದ್ದು, ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆಯಾಗಲಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.

“ಕ್ಯಾಶ್‌ಲೆಸ್‌’ಗೆ ಸಂಚಾರಿ ವಿಜಯ್‌ ಸಾಥ್‌: ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ಸಂಚಾರಿ ವಿಜಯ್‌, ವೇದಿಕೆಯಲ್ಲೇ ಯುಪಿಐ ಭಿಮ್‌ (ಬಿಎಚ್‌ಐಎಂ) ಆ್ಯಪ್‌ ಮೂಲಕ ಬೆಂಗಳೂರು ವನ್‌ ಸೆಂಟರ್‌ಗೆ ತಮ್ಮ ವಿದ್ಯುತ್‌ ಬಿಲ್‌ ಪಾವತಿ ಮಾಡುವ ಮೂಲಕ ಕ್ಯಾಶ್‌ಲೆಸ್‌ ವಹಿವಾಟಿಗೆ ಸಾಥ್‌ ನೀಡಿದರು. 

Advertisement

ಕೇಂದ್ರ ಕುಡಿಯುವ ನೀರು ಹಾಗೂ ನೈರ್ಮಲ್ಯ ಖಾತೆ ರಾಜ್ಯ ಸಚಿವ ರಮೇಶ್‌ ಜಿಗಜಿಣಗಿ, ಸಂಸದ ಪಿ.ಸಿ.ಮೋಹನ್‌, ಬಿಬಿಎಂಪಿ ಸದಸ್ಯ ಆರ್‌.ವಸಂತಕುಮಾರ್‌, ನೀತಿ ಆಯೋಗದ ಅಧಿಕಾರಿಗಳು ಸೇರಿದಂತೆ ಹಲವರು ಹಾಜರಿದ್ದರು.

ಕಾಂಗ್ರೆಸ್ಸಿಗರ ಗೈರು
ಕೇಂದ್ರ ಸರ್ಕಾರದ ಅಪನಗದೀಕರಣ ಯೋಜನೆ ವಿರುದ್ಧ ಮೊದಲಿನಿಂದಲೂ ಹೋರಾಟ ನಡೆಸುತ್ತಿರುವ ಕಾಂಗ್ರೆಸ್‌ ನಾಯಕರು ಬೆಂಗಳೂರಿನಲ್ಲಿ ನಡೆದ ಡಿಜಿ-ಧನ್‌ ಮೇಳದ ವೇದಿಕೆ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌, ಹಜ್‌ ಖಾತೆ ಸಚಿವ ರೋಷನ್‌ಬೇಗ್‌, ಮೇಯರ್‌ ಜಿ.ಪದ್ಮಾವತಿ ಅವರ ಹೆಸರು ಆಮಂತ್ರಣ ಪತ್ರಿಕೆಯಲ್ಲಿದ್ದರೂ ಗೈರು ಹಾಜರಾಗಿದ್ದರು.

ಡಿಜಿ-ಧನ್‌ ಮೇಳಕ್ಕೆ ಅಭೂತಪೂರ್ವ ಪ್ರತಿಕ್ರಿಯೆ    
ಬೆಂಗಳೂರು:
ಕೇಂದ್ರ ಸರ್ಕಾರದ ನೋಟು ಅಮಾನ್ಯ ಆದೇಶದ ಬಳಿಕ ದೇಶಾದ್ಯಂತ ಬೀಸಿರುವ “ಕ್ಯಾಶ್‌ಲೆಸ್‌’ ಅಲೆಗೆ ಸಾರ್ವಜನಿಕರನ್ನು ಕರೆತರಲು ಹಾಗೂ ನಗದುರಹಿತ ವಹಿವಾಟು ಕುರಿತು ಅಗತ್ಯ ಮಾಹಿತಿ ನೀಡುವ ಸಲುವಾಗಿ ಸೋಮವಾರ ನಗರದಲ್ಲಿ ಏರ್ಪಡಿಸಿದ್ದ “ಡಿಜಿ-ಧನ್‌ ಮೇಳಕ್ಕೆ’ ಅಭೂತಪೂರ್ವ ಪ್ರತಿಕ್ರಿಯೆ ಲಭಿಸಿದೆ.

ಕೇಂದ್ರ ಸರ್ಕಾರವು ನೀತಿ ಆಯೋಗದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ಗೋ-ಕ್ಯಾಶ್‌ಲೆಸ್‌’, “ಗೋ-ಡಿಜಿಟಲ್‌’ ಘೋಷ ವ್ಯಾಖ್ಯೆಯ ಮೇಳದಲ್ಲಿ ಒಂದೇ ಸೂರಿನಡಿ ಎಲ್ಲಾ ಬ್ಯಾಂಕ್‌ಗಳ ನಗದುರಹಿತ, ಆನ್‌ಲೈನ್‌ ಹಾಗೂ ಡಿಜಿಟಲ್‌ ವಹಿವಾಟು ಬಗ್ಗೆ ಸಮಗ್ರ ಮಾಹಿತಿಯನ್ನು ಸಾರ್ವಜನಿಕರಿಗೆ ಪ್ರಾಯೋಗಿಕವಾಗಿ ತಿಳಿಸಿಕೊಡಲಾಯಿತು.

ಪ್ರಮುಖವಾಗಿ ರೈತರು ಹಾಗೂ ಗ್ರಾಮೀಣ ಭಾಗದ ಜನತೆಗೆ ಕ್ಯಾಶ್‌ಲೆಸ್‌ ಬಗ್ಗೆ ಮಾಹಿತಿ ನೀಡಲು ಏರ್ಪಡಿಸಿದ್ದ ಮೇಳದಲ್ಲಿ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ ರೈತರು ಭಾಗವಹಿಸಿ, ಸ್ಥಳದಲ್ಲೇ ಎಟಿಎಂ/ಡೆಬಿಟ್‌ ಕಾರ್ಡ್‌ ಪಡೆದು ಅದರ ಬಳಕೆ ಬಗ್ಗೆ ಪ್ರಾಯೋಗಿಕ ಮಾಹಿತಿ ಮೇಳದಲ್ಲಿ ಆಧಾರ್‌, ಇ-ಪಡಿತರ, 22 ಬ್ಯಾಂಕ್‌ಗಳು ಸೇರಿದಂತೆ ಖಾಸಗಿ ಡಿಜಿಟಲ್‌ ಹಣ ವಹಿವಾಟುದಾರರಾದ ಪೇಟಿಎಂ, ಐಡಿಯಾ, ಜಿಯೋ ವಿವಿಧ ಪೆಟ್ರೋಲಿಯಂ ಕಂಪನಿಗಳು ಭಾಗವಹಿಸಿ ಉಚಿತ ಸೇವೆ ನೀಡಿದವು.  

Advertisement

Udayavani is now on Telegram. Click here to join our channel and stay updated with the latest news.

Next