Advertisement

ಕೃಷ್ಣೆಯಲ್ಲಿ ನೀರಿದ್ರೂ ಸಮರ್ಪಕ ಪೂರೈಕೆಯಲ್ಲಿ ತೊಂದರೆ

02:44 PM Apr 25, 2022 | Team Udayavani |

ತೇರದಾಳ: ಪಟ್ಟಣದಲ್ಲಿ ಬೇಸಿಗೆ ಪ್ರಯುಕ್ತ ಕುಡಿಯುವ ನೀರಿನ ಸರಬರಾಜು ದಿನದಿಂದ ದಿನಕ್ಕೆ ಸವಾಲಾಗುತ್ತಿದೆ. ನೀರು ಪೂರೈಕೆಯ ಜಾಕ್‌ವೆಲ್‌ ಇರುವ ಸಮೀಪದ ಹಳಿಂಗಳಿ ಗ್ರಾಮದ ಕೃಷ್ಣಾ ನದಿಯಲ್ಲಿ ಸದ್ಯಕ್ಕೆ ಅಂದಾಜು 20-25 ಅಡಿಯಷ್ಟು ನೀರು ಸಂಗ್ರಹವಿದೆ. ಹೀಗಾಗಿ ಸದ್ಯಕ್ಕೆ ನೀರಿನ ಸಮಸ್ಯೆ ಕಾಣುತ್ತಿಲ್ಲ. ನದಿಯಲ್ಲಿ ರೈತರ ಪಂಪ್‌ಸೆಟ್‌ಗಳ ಜತೆಗೆ ಬಹು ಗ್ರಾಮಗಳ ಕುಡಿಯುವ ನೀರಿನ ಯೋಜನೆ ವ್ಯಾಪ್ತಿಯ ಹಳ್ಳಿಗಳಿಗೆ, ರಬಕವಿ-ಬನಹಟ್ಟಿ ನಗರಸಭೆ ಹಾಗೂ ತೇರದಾಳ ಪುರಸಭೆ ವ್ಯಾಪ್ತಿಗೆ ನೀರು ಸರಬರಾಜು ಆಗುತ್ತಿದೆ. ಎಲ್ಲೆಡೆ ಕಡು ಬೇಸಿಗೆಯಿಂದ ಬಾವಿ, ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾದ್ದರಿಂದ ಜಮೀನುಗಳಿಗೆ ಮತ್ತು ಗೃಹ ಬಳಕೆಗೂ ನದಿಯ ನೀರಿನ ಬಳಕೆಯೆ ಇನ್ನಷ್ಟು ಹೆಚ್ಚಾಗಿದೆ. ಹೀಗಾಗಿ ಕಳೆದ 8-10 ದಿನಗಳಿಂದ ನದಿಯಲ್ಲಿನ ನೀರಿನ ಮಟ್ಟ ಇಳಿಮುಖಗೊಳ್ಳುತ್ತಿದೆ.

Advertisement

ನದಿಯಲ್ಲಿ ನೀರಿದ್ದರೂ ಪೂರೈಕೆಯಲ್ಲಿ ತೊಂದರೆ: ಪಟ್ಟಣಕ್ಕೆ ಸಮೀಪದ ಕೃಷ್ಣಾ ನದಿಯಿಂದಲೆ ನೀರು ಪೂರೈಕೆಯಾಗುತ್ತಿದೆ. ಸದ್ಯದವರೆಗೂ ನೀರಿನ ಸಂಗ್ರಹದ ಮಟ್ಟ ಉತ್ತಮವಾಗಿದೆ. ಆದರೂ ಕೆಲವು ವಾರ್ಡ್‌ಗಳಲ್ಲಿ ಪುರಸಭೆಯವರು ನೀರು ಸರಿಯಾಗಿ ಪೂರೈಸುತ್ತಿಲ್ಲವೆಂದು ನಾಗರಿಕರ ದೂರಾಗಿದೆ. ಕೆಲ ವಾರ್ಡ್‌ಗಳಲ್ಲಿ 3ರಿಂದ 4 ದಿನಗಳಿಗೊಮ್ಮೆ ನಲ್ಲಿ ನೀರು ಪೂರೈಕೆಯಾಗುತ್ತಿದೆ. ಒಟ್ಟಿನಲ್ಲಿ ನದಿಯಲ್ಲಿ ನೀರಿದ್ದರೂ ನೀರಿನ ಬರ ತಪ್ಪುತ್ತಿಲ್ಲ.

ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿನ ವಾರ್ಡ್ ಗಳಲ್ಲಿ ನೂರಕ್ಕೂ ಹೆಚ್ಚು ಕೊಳವೆ ಬಾವಿಗಳಿವೆ. ಅವುಗಳಲ್ಲಿ ಕೆಲ ಕೊಳವೆ ಬಾವಿಗಳು ಚಾಲ್ತಿಯಲ್ಲಿವೆ. ಕೆಲವು ಕಡೆಗಳಲ್ಲಿ ನೀರೆತ್ತುವ ಮೋಟಾರ್‌ ಸಮಸ್ಯೆಯಿದೆ. ದೇವರಾಜ ನಗರದ ಶಿಕ್ಷಕರ ಕಾಲೋನಿಯಲ್ಲಿ ಮಾತ್ರ ಯಾವ ಕೊಳವೆ ಬಾವಿಯ ನೀರೂ ಪೂರೈಕೆಯಿಲ್ಲ. ಕೇವಲ ನಲ್ಲಿ ನೀರು ಮಾತ್ರ ಚಾಲ್ತಿಯಿದೆ.

ಕೃಷ್ಣಾ ನದಿಯ ಮುಖಾಂತರ ಬಹುಗ್ರಾಮಗಳ ಕುಡಿಯುವ ನೀರಿನ ಯೋಜನೆ ವ್ಯಾಪ್ತಿಯ ಹಳಿಂಗಳಿ, ತಮದಡ್ಡಿ, ಹನಗಂಡಿ, ಗೋಲಭಾವಿ, ಸಸಾಲಟ್ಟಿ, ಕಾಲತಿಪ್ಪಿ ಹಾಗೂ ಯರಗಟ್ಟಿ ಗ್ರಾಮಗಳಿಗೆ ಒಂದು ವಾರದಿಂದ ನೀರು ಪೂರೈಕೆ ಹೆಚ್ಚಾಗಿ ನಡೆಯುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೊಳವೆ ಬಾವಿಗಳು ಬೇಸಿಗೆಯಲ್ಲಿ ಕೈಕೊಡುತ್ತಿರುವುದರಿಂದ ನದಿ ನೀರು ಹೆಚ್ಚಾಗಿ ಬಳಕೆಯಾಗುತ್ತಿದೆ. ಪಟ್ಟಣದಲ್ಲೂ ಬೇಕಾಬಿಟ್ಟಿಯಾಗಿ ನೀರು ಬಳಕೆಯಾದರೆ ನೀರಿನ ಸಮಸ್ಯೆ ಉಲ್ಬಣಿಸುವ ಸಾಧ್ಯತೆ ಹೆಚ್ಚಾಗಿದೆ.

ಜೀವಜಲದ ಪೋಲು ನಿಲ್ಲಬೇಕಿದೆ: ಪಟ್ಟಣದ ಮಹಾವೀರ ವೃತ್ತದ ಬಳಿ, ಪೇಠಭಾಗ ಸೇರಿದಂತೆ ಅನೇಕ ಕಡೆಗಳಲ್ಲಿ ನಲ್ಲಿ ನೀರಿನ ಪೈಪ್‌ ಹಾಗೂ ವ್ಹಾಲ್ವಗಳು ಒಡೆದು ಜೀವಜಲನೀರು ಚರಂಡಿ ಸೇರುತ್ತಿದೆ. ಇದು ನಿಲ್ಲಬೇಕಿದೆ. ಒಡೆದ ಪೈಪ್‌ ಹಾಗೂ ವಾಲ್ವಗಳ ದುರಸ್ತಿಗೆ ಪುರಸಭೆ ಕ್ರಮ ಕೈಗೊಳ್ಳಬೇಕಾಗಿದೆ.

Advertisement

ಕೃಷ್ಣಾ ನದಿಯಲ್ಲಿ ನೀರಿನ ಸಂಗ್ರಹ ಚೆನ್ನಾಗಿದೆ. ಈಗಾಗಲೆ ಅರ್ಧ ಬೇಸಿಗೆ ಕಳೆದಿದೆ. ಅಲ್ಲದೆ ತೇರದಾಳ ಮತಕ್ಷೇತ್ರದಾದ್ಯಂತ ಬಾವಿ ಹಾಗೂ ಕೊಳವೆಬಾವಿಗಳ ಸಂಖ್ಯೆಯೂ ಹೆಚ್ಚಾಗಿದೆ. ಇದರಿಂದಾಗಿ ಈ ಬಾರಿ ಕ್ಷೇತ್ರದಲ್ಲಿ ನೀರಿನ ಸಮಸ್ಯೆಯಾಗುವ ಸಾಧ್ಯತೆಗಳಿಲ್ಲ. ಆದರೂ ಅವಶ್ಯವಿದ್ದಲ್ಲಿ ಇನ್ನಷ್ಟು ಕೊಳವೆಬಾವಿಗಳನ್ನು ಕೊರೆಸಲು ಕ್ರಮ ಕೈಗೊಳ್ಳುತ್ತೇವೆ. ತಾಲೂಕು ಆಡಳಿತದೊಂದಿಗೆ ಚರ್ಚಿಸಿ ಎಲ್ಲಿಯೂ ನೀರಿನ ಅಭಾವವಾಗದಂತೆ ನೋಡಿಕೊಳ್ಳಲಾಗುವುದು.  –ಸಿದ್ದು ಸವದಿ, ಶಾಸಕರು ತೇರದಾಳ

ತೇರದಾಳ ಪುರಸಭೆ ವ್ಯಾಪ್ತಿಯಲ್ಲಿನ ವಾರ್ಡ್‌ಗಳಿಗೆ ಪುರಸಭೆಯಿಂದ ನೀರು ಪೂರೈಕೆ ಈವರೆಗೆ ಸಮರ್ಪಕವಾಗಿದೆ. 3ನೇ ವಾರ್ಡ್‌ ಸೇರಿದಂತೆ ಕೆಲ ವಾರ್ಡ್‌ ಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಕ್ರಮ ಕೈಗೊಳ್ಳಲಾಗುವುದು. ಬಹುತೇಕ ವಾರ್ಡ್‌ಗಳಲ್ಲಿನ ಕೊಳವೆ ಬಾವಿಗಳು ಚಾಲ್ತಿಯಲ್ಲಿವೆ. ಸಾರ್ವಜನಿಕರು ಸಹ ನೀರನ್ನು ಮಿತವಾಗಿ ಬಳಸಬೇಕು. ವಿನಾಕಾರಣ ಜೀವಜಲವನ್ನು ಪೋಲು ಮಾಡಬಾರದು. ಬರ ನಿರ್ವಹಣೆಗಾಗಿ ಸರಕಾರ 3 ಲಕ್ಷ ರೂ. ಅನುದಾನ ಒದಗಿಸಿದೆ. ಕುಸುಮಾಂಡಿನಿ ಬಾಬಗೊಂಡ, ಪುರಸಭೆ ಅಧ್ಯಕ್ಷರು

ಹನಗಂಡಿ ಗ್ರಾಪಂ ವ್ಯಾಪ್ತಿಯ ಹನಗಂಡಿ ಹಾಗೂ ಯರಗಟ್ಟಿ ಗ್ರಾಮಗಳಲ್ಲಿ ನೀರಿನ ತೊಂದರೆ ಇಲ್ಲ. ಬಹು ಗ್ರಾಮಗಳ ನೀರಿನ ಯೋಜನೆ ಮೂಲಕ ಕೃಷ್ಣಾ ನದಿ ನೀರಿನ ಪೂರೈಕೆ ಸಮರ್ಪಕವಾಗಿದೆ.ಬಾವಿ ಹಾಗೂ ಕೊಳವೆ ಬಾವಿಗಳ ಮೂಲಕ ಗ್ರಾಮಸ್ಥರಿಗೆ ನೀರು ಪೂರೈಸುತ್ತೇವೆ. ಕೆರೆಗೆ ನೀರು ತುಂಬಿಸುತ್ತೇವೆ. ಬೌರವ್ವ ಮಾದರ, ಅಧ್ಯಕ್ಷರು, ಗ್ರಾಪಂ ಹನಗಂಡಿ

ಗೋಲಭಾವಿ ಗ್ರಾಪಂ ವ್ಯಾಪ್ತಿಯ ಕಾಲತಿಪ್ಪಿ ಗ್ರಾಮ ಸೇರಿದಂತೆ ಎರಡು ಗ್ರಾಮಗಳಿಗೆ ಬಹುಗ್ರಾಮಗಳ ನೀರಿನ ಯೋಜನೆ ಅಡಿಯಲ್ಲಿ ಕೃಷ್ಣಾ ನದಿಯಿಂದ ನೀರು ಪೂರೈಕೆಯಿದೆ. 3.5ಎಕರೆ ವಿಶಾಲವಾದ ಕೆರೆಯಲ್ಲಿ ಅರ್ಧದಷ್ಟು ನೀರಿದ್ದು, ಪೂರ್ಣ ತುಂಬಿಸುವ ಪ್ರಯತ್ನ ನಡೆದಿದೆ. ಗೋಲಭಾವಿಯಲ್ಲಿ 7, ಕಾಲತಿಪ್ಪಿಯಲ್ಲಿ 3 ಕೊಳವೆಬಾವಿಗಳು ಇವೆ. ಸಾರ್ವಜನಿಕರಿಗೆ 1ರಿಂದ 2ಗಂಟೆ ನೀರು ಪೂರೈಸುತ್ತೇವೆ.  –ಸುರೇಶ ಸಿದ್ದಾಪುರ, ಅಧ್ಯಕ್ಷರು ಗ್ರಾಪಂ ಗೋಲಭಾವಿ

ತೇರದಾಳ ಹೋಬಳಿ ವ್ಯಾಪ್ತಿಯಲ್ಲಿ ಸದ್ಯಕ್ಕೆ ನೀರಿನ ತೊಂದರೆಯಿಲ್ಲ. ಕೃಷ್ಣಾ ಹಾಗೂ ಘಟಪ್ರಭಾ ನದಿಗಳಿಂದ ಬಹುತೇಕ ಗ್ರಾಮಗಳಿಗೆ ನೀರು ಪೂರೈಕೆಯಾಗುತ್ತಿದೆ. ಹಿಪ್ಪರಗಿ ಜಲಾಶಯದಲ್ಲಿ ನೀರಿನ ಸಂಗ್ರಹ ಚೆನ್ನಾಗಿದೆ. ಹಿಡಕಲ್‌ ಜಲಾಶಯದಿಂದ ಕೆನಾಲ್‌ ನೀರು ಬರುತ್ತಿರುವುದರಿಂದ ನೀರಿನ ಬಳಕೆ ಸರಳವಾಗಲಿದೆ.  –ಶ್ರೀಕಾಂತ ಮಾಯನ್ನವರ, ಉಪತಹಶೀಲ್ದಾರ್‌, ತೇರದಾಳ

ನಮ್ಮೂರಲ್ಲಿ ಬಾವಿ ಹಾಗೂ ಕೊಳವೆ ಬಾವಿಗಳು ಹೆಚ್ಚಾಗಿವೆ. ಬಹುಗ್ರಾಮಗಳ ನೀರಿನ ಯೋಜನೆ ಅಡಿಯಲ್ಲಿ ಕೃಷ್ಣಾ ನದಿ ನೀರಿನ ಪೂರೈಕೆ ಇರುವುದರಿಂದ ಈ ಬೇಸಿಗೆಯಲ್ಲಿ ನೀರಿನ ತೊಂದರೆಯಾಗುವ ಭೀತಿ ಇಲ್ಲ. ಕೆಲವು ಬಾವಿಗಳಿಗೆ ನೀರಿನ ಮಟ್ಟ ಕಡಿಮೆಯೂ ಆಗುತ್ತಲಿದೆ. ಅದಕ್ಕಾಗಿ ನೀರಿನ ಮಿತ ಬಳಕೆ ಕುರಿತು ಗ್ರಾಮದಲ್ಲಿ ಢಂಗೂರ ಮೂಲಕ ಜಾಗೃತಿ ಮೂಡಿಸುತ್ತೇವೆ. –ಈರವ್ವ ನಿರ್ವಾಣಿ, ಅಧ್ಯಕ್ಷರು ಗ್ರಾಪಂ ಸಸಾಲಟ್ಟಿ       

-ಬಿ.ಟಿ. ಪತ್ತಾರ

Advertisement

Udayavani is now on Telegram. Click here to join our channel and stay updated with the latest news.

Next