Advertisement

“ಎಲ್ಲಿಂದ ಬೇಕಾದರೂ ಕೆಲಸ’ನೀತಿ ಬಂದ್‌: ಎಲಾನ್‌ ಮಸ್ಕ್ ಕಟು ಆದೇಶ

08:19 PM Nov 10, 2022 | Team Udayavani |

ನವದೆಹಲಿ: ಟ್ವಿಟರ್‌ ಅನ್ನು ಎಲಾನ್‌ ಮಸ್ಕ್ ಖರೀದಿಸಿ ಕೇವಲ 2 ವಾರಗಳು ಕಳೆದಿವೆ. ಅಷ್ಟರಲ್ಲೇ ಉದ್ಯೋಗಿಗಳಿಗೆ ಚಳಿಜ್ವರ ಬಿಡಿಸಿದ್ದಾರೆ. ಜಾಹೀರಾತಿನ ಮೇಲೆ ಅವಲಂಬಿತರಾಗಿರುವ ಟ್ವಿಟರ್‌ನಂತಹ ಸಂಸ್ಥೆಗಳ ಕೆಲಸದ ವಿಚಾರದಲ್ಲಿ ಸಕ್ಕರೆ ಹಚ್ಚಿ ಮಾತನಾಡುವ ಅಗತ್ಯವಿಲ್ಲ. ಮುಂದಿನ ದಿನಗಳು ಬಹಳ ಕಠಿಣವಾಗಿರಲಿವೆ ಎಂದು ನೇರವಾಗಿ ಹೇಳಿದ್ದಾರೆ.

Advertisement

ಬುಧವಾರ ರಾತ್ರೋರಾತ್ರಿ ತಮ್ಮ ಉದ್ಯೋಗಿಗಳಿಗೆ ಅವರು ಕಳುಹಿಸಿರುವ ಇ-ಮೇಲ್‌ನಲ್ಲಿ, ನೇರವಾಗಿ ಕಚೇರಿಗೇ ಬಂದು ಕೆಲಸ ಮಾಡಬೇಕು. ಎಲ್ಲಿಂದ ಬೇಕಾದರೂ ಕೆಲಸ ಮಾಡಬಹುದು ಎಂಬ ನೀತಿ ಇನ್ನು ಬಂದ್‌. ಯಾರಿಗಾದರೂ ದೂರದಿಂದಲೇ ಕೆಲಸ ಮಾಡಲು ಅವಕಾಶ ಕೊಡುವುದಾದರೆ, ತಮ್ಮಿಂದ ನೇರವಾಗಿ ಅನುಮತಿ ಪಡೆದಿರಬೇಕು ಎಂದು ಹೇಳಿದ್ದಾರೆ! ಮಸ್ಕ್ ಟ್ವಿಟರ್‌ ಕೊಳ್ಳುವುದಕ್ಕೆ ಮುನ್ನ, ಆ ಸಂಸ್ಥೆಯಲ್ಲಿ ಎಲ್ಲಿಂದ ಬೇಕಾದರೂ ಕೆಲಸ ಮಾಡುವುದಕ್ಕೆ ಅವಕಾಶ ನೀಡಲಾಗಿತ್ತು.

ಹಾಗೆಯೇ ವಾರಕ್ಕೆ ಕನಿಷ್ಠ 40 ಗಂಟೆಗಳ ಕಾಲ ಕಚೇರಿಯಲ್ಲಿ ಇರಲೇಬೇಕು. ಖಾತೆಗಳ ಬ್ಲೂಟಿಕ್‌ನಿಂದ ಬರುವ ಚಂದಾದಾರಿಕೆ ಹಣವೇ ಟ್ವಿಟರ್‌ನ ಅರ್ಧ ಆದಾಯದ ಮೂಲವಾಗಿರಬೇಕು ಎಂದು ಕಠಿಣವಾಗಿ ಹೇಳಿದ್ದಾರೆ.

“ಅಫಿಶಿಯಲ್‌’ ಗುರುತು:

ಗುರುವಾರ ಟ್ವಿಟರ್‌ ಭಾರತ ಸರ್ಕಾರದ ಅಧಿಕೃತ ಖಾತೆಗಳಿಗೆ “ಅಧಿಕೃತ ಗುರುತು’ ಹಾಕಲು ಆರಂಭಿಸಿತ್ತು. ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಖಾತೆಗಳಿಗೆ ನೀಲಿ ಗುರುತಿನೊಂದಿಗೆ ಅಫಿಶಿಯಲ್‌ ಎಂಬ ಲೇಬಲ್‌ ಸೇರಿಸಲಾಗಿತ್ತು. ಆದರೆ, ಇದಾದ ಸ್ವಲ್ಪ ಹೊತ್ತಲ್ಲೇ ಈ ಲೇಬಲ್‌ ಕಾಣೆಯಾಗಿದೆ. “ಅಧಿಕೃತ ಖಾತೆ’ ಲೇಬಲ್‌ ವಿಫ‌ಲವಾಗಿದೆ. ಹೀಗಾಗಿ, ಅದನ್ನು ತೆಗೆದುಹಾಕಿದ್ದೇವೆ ಎಂದು ಮಸ್ಕ್ ಟ್ವೀಟ್‌ ಮಾಡಿದ್ದಾರೆ.

Advertisement

ಎರಡೇ ದಿನದಲ್ಲಿ ಕೆಲಸ ಕಳೆದುಕೊಂಡ! :

ಫೇಸ್‌ಬುಕ್‌ ಮಾತೃಸಂಸ್ಥೆ ಮೆಟಾ ಕೆಲಸದಿಂದ ಕಿತ್ತುಹಾಕಿದ 11 ಸಾವಿರ ಉದ್ಯೋಗಿಗಳಲ್ಲಿ ಭಾರತದ ಐಐಟಿ ಖರಗ್ಪುರ ಪದವೀಧರ ಹಿಮಾನ್ಮು ಕೂಡ ಒಬ್ಬರು. ಅದರಲ್ಲಿ ವಿಶೇಷವೇನಿದೆ ಎಂದು ಯೋಚಿಸುತ್ತಿದ್ದೀರಾ? ಕೆಲಸಕ್ಕೆ ಸೇರಿದ ಎರಡೇ ದಿನಗಳಲ್ಲಿ ಇವರು ಕೆಲಸ ಕಳೆದುಕೊಂಡಿದ್ದಾರೆ. ಮೆಟಾದಲ್ಲಿ ಕೆಲಸ ಸಿಕ್ಕಿತು ಎಂಬ ಖುಷಿಯಲ್ಲಿ ಭಾರತದಿಂದ ಕೆನಡಾಗೆ ತೆರಳಿದ್ದ ಹಿಮಾನ್ಮು, ಕೆನಡಾದ ಕಚೇರಿಯಲ್ಲಿ ಉದ್ಯೋಗ ಆರಂಭಿಸಿದ ಎರಡೇ ದಿನದಲ್ಲಿ ಅವರನ್ನು ಕೆಲಸದಿಂದ ಕಿತ್ತುಹಾಕಲಾಗಿದೆ. ಮುಂದೇನು ಮಾಡಬೇಕೆಂದು ತೋಚುತ್ತಿಲ್ಲ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next