ಧಾರವಾಡ: ಕೃಷಿಕರಿಗೆ, ಕೂಲಿ ಕಾರ್ಮಿಕರಿಗೆ, ಗ್ರಾಮೀಣ ಜನರಿಗೆ ಅನುಕೂಲವಾಗುವಂತೆ ಸರ್ಕಾರ ವಿವಿಧ ಯೋಜನೆ ರೂಪಿಸಿದೆ. ಅವು ಅರ್ಹ ಫಲಾನುಭವಿಗಳಿಗೆ ಮುಟ್ಟುವಂತೆ ಜಾಗೃತಿ ಮೂಡಿಸಿ, ಮುತುವರ್ಜಿ ವಹಿಸಬೇಕು ಎಂದು ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ ಹೇಳಿದರು. ಜಿಪಂ ಸಭಾಂಗಣದಲ್ಲಿ
ಮಂಗಳವಾರ ಜರುಗಿದ ಜಿಲ್ಲಾಮಟ್ಟದ ಅಧಿಕಾರಿಗಳ ವಿಶೇಷ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಕೃಷಿ ಪೂರಕ ಚಟುವಟಿಕೆಗಳು ಆರಂಭಗೊಂಡಿವೆ. ರೈತರಿಗೆ ಬೀಜ, ರಸಗೊಬ್ಬರ ಕೊರತೆ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಕೂಲಿಕಾರ್ಮಿಕರಿಗೆ, ಜಮೀನು ರಹಿತ ಕುಟುಂಬಗಳಿಗೆ ಮತ್ತು ಉದ್ಯೋಗ ಬಯಸುವವರಿಗೆ ಉದ್ಯೋಗ ಕಲ್ಪಿಸಬೇಕು ಎಂದರು.
ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ ಮಾತನಾಡಿ, ಸರ್ಕಾರ ಎಲ್ಲ ಇಲಾಖೆಗಳಿಂದ ಅನುಷ್ಠಾನಗೊಳಿಸುವ ಯೋಜನೆ, ಕಾಮಗಾರಿಗಳ ಕುರಿತು ಜಿಪಂ ಸದಸ್ಯರಿಗೆ, ಗ್ರಾಪಂ ಪ್ರತಿನಿಧಿಗಳಿಗೆ ಮಾಹಿತಿ ನೀಡಬೇಕು. ಇದರಿಂದ ಎಲ್ಲ ಜನಪ್ರತಿನಿಧಿಗಳು ಸಕ್ರಿಯವಾಗಿ ಭಾಗವಹಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಪ್ರಗತಿ ಸಾಧನೆ ವ್ಯತ್ಯಾಸ: ಜಿಪಂ ಸಿಇಒ ಡಾ| ಬಿ.ಸಿ. ಸತೀಶ ಮಾತನಾಡಿ, ಲಾಕ್‌ಡೌನ್ ಹಿನ್ನಲೆಯಲ್ಲಿ ಬಹುತೇಕ ಎಲ್ಲ ಇಲಾಖೆ ಸಿಬ್ಬಂದಿ ಕೋವಿಡ್ ನಿಯಂತ್ರಣ ಕರ್ತವ್ಯಕ್ಕೆ ಹಾಜರಾಗಿದ್ದರಿಂದ ಯೋಜನೆಗಳ ಪ್ರಗತಿ ಸಾಧನೆ ವ್ಯತ್ಯಾಸವಾಗಿದೆ. ಎಂಜಿಎನ್ ಆರ್‌ಜಿ ಯೋಜನೆ ಮೂಲಕ ಕೃಷಿಕರಿಗೆ, ಕೂಲಿ ಕಾರ್ಮಿಕರಿಗೆ ಅಗತ್ಯ ಉದ್ಯೋಗ ನೀಡಲು ಕ್ರಮ ಕೈಗೊಳ್ಳಲಾಗಿದೆ. ಜಲಸಂರಕ್ಷಣಾ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ ಎಂದರು. ಅಲ್ಲದೆ ಜಿಪಂ ಸದಸ್ಯರಿಗೆ ಹಾಗೂ ಅಧಿಕಾರಿಗಳಿಗೆ ಕೋವಿಡ್ ಜಾಗೃತಿ ಪಾಠ ಮಾಡಿದರು.
ಜಿಪಂ ಉಪಕಾರ್ಯದರ್ಶಿ ಬಿ.ಎಸ್. ಮುಗನೂರಮಠ ಮಾತನಾಡಿ, ಗ್ರಾಪಂ ವ್ಯಾಪ್ತಿಯ ಪ್ರತಿ ಗ್ರಾಮದಲ್ಲಿನ ರೈತರ ಜಮೀನುಗಳಲ್ಲಿ ಕನಿಷ್ಠ 15 ಬದು ನಿರ್ಮಾಣ, 5 ಕೃಷಿಹೊಂಡ ಹಾಗೂ 5 ದನದ ಕೊಟ್ಟಿಗೆ ನಿರ್ಮಾಣ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ ಒಟ್ಟು 41 ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಲಾಗಿದೆ. 8 ಘಟಕಗಳು ಈಗಾಗಲೇ ಕಾರ್ಯಾರಂಭ ಮಾಡಿದ್ದು, ಮೇ ಅಂತ್ಯದೊಳಗೆ ಎಲ್ಲವೂ ಚಾಲನೆಗೊಳ್ಳಲಿವೆ ಎಂದು ತಿಳಿಸಿದರು.
ವಿವಿಧ ಇಲಾಖೆಯ ಅಧಿಕಾರಿಗಳು 2019-20ನೇ ಸಾಲಿನ ಕಾಮಗಾರಿ ಮತ್ತು ಯೋಜನೆಗಳ ಪ್ರಗತಿ ವರದಿ ಸಲ್ಲಿಸಿದರು. ಜಿಪಂ ಸದಸ್ಯರು, ಜಿಪಂ ಯೋಜನಾಧಿಕಾರಿ ದೀಪಕ ಮಡಿವಾಳರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ಐ.ಬಿ., ಡಿಎಚ್‌ಒ ಡಾ|ಯಶವಂತ ಮದೀನಕರ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ| ರಾಮಚಂದ್ರ ಕೆ.ಎಂ., ಜಿಪಂ ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ಎಇ ಮನೋಹರ ಮಂಡೊಲಿ, ಡಿಡಿಪಿಐ ಎಂ.ಎಲ್. ಹಂಚಾಟೆ ಇದ್ದರು.