Advertisement

ವಿವಿಧ ರೀತಿಯ ಪಡ್ಡುಗಳು

06:00 AM Sep 21, 2018 | |

ಪಡ್ಡುಗಳೆಂದರೆ ಎಲ್ಲರಿಗೂ ಇಷ್ಟವಾಗುವ ತಿಂಡಿ. ವಿವಿಧ ರೀತಿಯ ಕಾಳುಗಳಿಂದ, ಸೊಪ್ಪಿನಿಂದ ಪಡ್ಡು ತಯಾರಿಸಬಹುದು.

Advertisement

ಅಲಸಂಡೆಕಾಳಿನ ದಿಢೀರ್‌ ಪಡ್ಡು
ಬೇಕಾಗುವ ಸಾಮಗ್ರಿ: 1 ಕಪ್‌ ಅಲಸಂಡೆಕಾಳು, 2-3 ಹಸಿಮೆಣಸು, 1 ಎಸಳು ಕರಿಬೇವು, ಸಣ್ಣ ತುಂಡು ಶುಂಠಿ, 2 ಬೆಳ್ಳುಳ್ಳಿ, 1/2 ಚಮಚ ಜೀರಿಗೆ, 2 ಚಮಚ ಕೊತ್ತಂಬರಿಸೊಪ್ಪು , ಉಪ್ಪು ರುಚಿಗೆ ತಕ್ಕಷ್ಟು , 1/2 ಕಪ್‌ ಬಾಂಬೆ ರವೆ, 1 ಈರುಳ್ಳಿ , 1/4 ಕಪ್‌ ಸಬ್ಬಸಿಗೆ ಸೊಪ್ಪು , 1/4 ಕಪ್‌ ಎಣ್ಣೆ.

ತಯಾರಿಸುವ ವಿಧಾನ: ಅಲಸಂಡೆಕಾಳು ರಾತ್ರಿಯಿಡಿ ನೆನೆಸಿ. ಮಾರನೆ ದಿನ ತೊಳೆದು, ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ ಎಸಳು, ಜೀರಿಗೆ, ಕೊತ್ತಂಬರಿಸೊಪ್ಪು , ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ. ನಂತರ ಬಾಂಬೆ ರವೆ, ಈರುಳ್ಳಿ ಚೂರು, ಸಬ್ಬಸಿಗೆ ಸೊಪ್ಪು ಹಾಕಿ ಬೆರೆಸಿ. ನಂತರ ಅಪ್ಪದ ಗುಳಿಗೆ ಎಣ್ಣೆ ಸವರಿ ರುಬ್ಬಿದ ಹಿಟ್ಟು ಹಾಕಿ ಮೇಲೆ ಎಣ್ಣೆ ಹಾಕಿ ಕವುಚಿ ಹಾಕಿ ಎರಡೂ ಬದಿ ಬೇಯಿಸಿ ತೆಗೆಯಿರಿ. ಈಗ ರುಚಿಯಾದ ಅಲಸಂಡೆಕಾಳಿನ ಪಡ್ಡು ಸವಿಯಲು ಸಿದ್ಧ.

ಕಲ್ಲಂಗಡಿ ಬಿಳಿ ತಿರುಳಿನ ಮಸಾಲ ಪಡ್ಡು 
ಬೇಕಾಗುವ ಸಾಮಗ್ರಿ:
1 ಕಪ್‌ ಬೆಳ್ತಿಗೆ ಅಕ್ಕಿ, ಕಲ್ಲಂಗಡಿ ಬಿಳಿ ತಿರುಳು 1 ಕಪ್‌, 1 ಚಮಚ ಉದ್ದಿನಬೇಳೆ, 1 ಚಮಚ ಕಡ್ಲೆಬೇಳೆ, 1 ಚಮಚ ಮೆಂತೆ, 1/2 ಚಮಚ ಜೀರಿಗೆ, 1/2 ಚಮಚ ಧನಿಯಾ, 5-6 ಒಣಮೆಣಸು, 1 ಚಮಚ ಬೆಲ್ಲ , 1 ಈರುಳ್ಳಿ , ಕರಿಬೇವು ಸೊಪ್ಪು – 2 ಚಮಚ, ಕೊತ್ತಂಬರಿಸೊಪ್ಪು- 2 ಚಮಚ, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಅಕ್ಕಿ, ಉದ್ದಿನಬೇಳೆ, ಕಡ್ಲೆಬೇಳೆ, ಮೆಂತೆಯನ್ನು 6-8 ಗಂಟೆ ನೆನೆಸಿ, ನಂತರ ಚೆನ್ನಾಗಿ ತೊಳೆಯಿರಿ. ಅದಕ್ಕೆ ಧನಿಯಾ, ಜೀರಿಗೆ, ಒಣಮೆಣಸು, ಬೆಲ್ಲ ಸೇರಿಸಿ ರುಬ್ಬಿ ನೀರು ಹಾಕಬೇಡಿ. ಇಡ್ಲಿ ಹಿಟ್ಟಿನ ಹದಕ್ಕಿರಲಿ. ಉಪ್ಪು ಸೇರಿಸಿ 6-8 ಗಂಟೆ ಕಾಲ ಇಡಿ. ಹಿಟ್ಟು ಉಬ್ಬಿ ಬಂದ ನಂತರ ಈರುಳ್ಳಿ, ಕರಿಬೇವು, ಕೊತ್ತಂಬರಿಸೊಪ್ಪು ಸಣ್ಣಗೆ ಹೆಚ್ಚಿ ಹಾಕಿ. ಪಡ್ಡಿನ ತವಾಕ್ಕೆ ಎಣ್ಣೆ ಹಾಕಿ ಹಿಟ್ಟು ಹಾಕಿ ಮುಚ್ಚಿ ಚೆನ್ನಾಗಿ ಬೇಯಿಸಿ ನಂತರ ಕವುಚಿ ಹಾಕಿ ಇನ್ನೊಂದು ಬದಿ ಬೇಯಿಸಿ. ಯಾವುದೇ ಚಟ್ನಿಯೊಂದಿಗೆ ಸವಿಯಲು ಚೆನ್ನಾಗಿರುತ್ತದೆ.

Advertisement

ಸೊಪ್ಪುಗಳ ಮಸಾಲೆ ಪಡ್ಡು 
ಬೇಕಾಗುವ ಸಾಮಗ್ರಿ:
1 ಕಪ್‌ ಬೆಳ್ತಿಗೆ ಅಕ್ಕಿ , 1/4 ಕಪ್‌ ಉದ್ದಿನಬೇಳೆ, 1 ಚಮಚ ಮೆಂತೆ, 1-2 ಒಣಮೆಣಸು, 1 ಚಮಚ ಬೆಲ್ಲ, 1/2 ಚಮಚ ಹುಳಿರಸ, ಸಣ್ಣಗೆ ಹೆಚ್ಚಿದ ಪಾಲಕ್‌, ಮೆಂತೆ ಸೊಪ್ಪುಗಳ ಮಿಶ್ರಣ 1/2 ಕಪ್‌, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ: ಬೆಳ್ತಿಗೆ ಅಕ್ಕಿ, ಉದ್ದಿನಬೇಳೆ, ಮೆಂತೆ 5-6 ಗಂಟೆ ನೆನೆಸಿ. ನಂತರ ಒಣಮೆಣಸು, ಬೆಲ್ಲ , ಹುಳಿ, ಉಪ್ಪು ಸೇರಿಸಿ ರುಬ್ಬಿ. ಮಾರನೆ ದಿನ ತೊಳೆದು ಸಣ್ಣಗೆ ಹೆಚ್ಚಿದ ಪಾಲಕ್‌, ಮೆಂತೆಸೊಪ್ಪಿನ ಮಿಶ್ರಣ ಸೇರಿಸಿ ಚೆನ್ನಾಗಿ ಕಲಸಿ. ನಂತರ ಅಪ್ಪದ ಗುಳಿಗೆ ಎಣ್ಣೆ ಹಾಕಿ ಹಿಟ್ಟು ಹಾಕಿ ಮುಚ್ಚಿ ಚೆನ್ನಾಗಿ ಬೇಯಿಸಿ. ನಂತರ ಕವುಚಿ ಹಾಕಿ ಇನ್ನೊಂದು ಬದಿ ಬೇಯಿಸಿ. ಯಾವುದೇ ಚಟ್ನಿಯೊಂದಿಗೆ ಸವಿಯಿರಿ.

ಮುಳ್ಳುಸೌತೆ ಸಿಹಿ ಅಪ್ಪ 
ಬೇಕಾಗುವ ಸಾಮಗ್ರಿ:
1 ಕಪ್‌ ಬೆಳ್ತಿಗೆ ಅಕ್ಕಿ, 1 ಕಪ್‌ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು, 2 ಕಪ್‌ ಮುಳ್ಳುಸೌತೆ ಹೆಚ್ಚಿದ ಹೋಳು, 1/4 ಕಪ್‌ ಎಣ್ಣೆ. 

ತಯಾರಿಸುವ ವಿಧಾನ: ಅಕ್ಕಿಯನ್ನು 1-2 ಗಂಟೆ ನೆನೆಸಿ. ನಂತರ ಚೆನ್ನಾಗಿ ತೊಳೆದು ಒಂದು ತೂತಿನ ಪಾತ್ರೆಯಲ್ಲಿ ಬಸಿಯಲು ಹಾಕಿ. ಮುಳ್ಳುಸೌತೆ ಸಿಪೆ³ ತಿರುಳು ತೆಗೆದು, ಸಣ್ಣಗೆ ಹೆಚ್ಚಿ ಅಕ್ಕಿಯೊಂದಿಗೆ ಒರಳಲ್ಲಿ ಹಾಕಿ ನುಣ್ಣಗೆ ರುಬ್ಬಿ. ನಂತರ ಉಪ್ಪು ಮತ್ತು ಬೆಲ್ಲ ಹಾಕಿ ರುಬ್ಬಿ. ನಂತರ ಒಂದು ಪಾತ್ರೆಯಲ್ಲಿ ಹಾಕಿ ಒಲೆಯ ಮೇಲಿಟ್ಟು ಸಣ್ಣ ಉರಿಯಲ್ಲಿ ಮಗುಚಿ. ಹಿಟ್ಟು ಸ್ವಲ್ಪ ದಪ್ಪಗೆ ಆದಾಗ ಒಲೆಯಿಂದ ಇಳಿಸಿ. ಒಲೆಯ ಮೇಲೆ ಅಪ್ಪದ ಕಾವಲಿ ಇಟ್ಟು ಅಪ್ಪದ ಗುಳಿಗೆ ಎಣ್ಣೆ ಹಾಕಿ. ಬಿಸಿಯಾದಾಗ ಸ್ವಲ್ಪ ಹಿಟ್ಟನ್ನು ಹಾಕಿ. ಬೆಂದಾಗ ಅಪ್ಪದ ಸೂಜಿಯಲ್ಲಿ ಮಗುಚಿ ಹಾಕಿ. ಕೆಂಪಗೆ ಆದಾಗ ತೆಗೆಯಿರಿ. ಇದು ಬಿಸಿ ಇರುವಾಗಲೂ, ಆರಿದ ಮೇಲೂ ರುಚಿಯಾಗಿರುತ್ತದೆ.

ಮಿಶ್ರ ಬೇಳೆ ಪಡ್ಡು 
ಬೇಕಾಗುವ ಸಾಮಗ್ರಿ:
2 ಕಪ್‌ ಬೆಳ್ತಿಗೆ ಅಕ್ಕಿ, 1/4 ಕಪ್‌ ಉದ್ದಿನಬೇಳೆ, 1/4 ಕಪ್‌ ಕಡಲೆಬೇಳೆ, 1/4 ಕಪ್‌ ತೊಗರಿಬೇಳೆ, 1/4 ಕಪ್‌ ಹೆಸರುಬೇಳೆ, 1/4 ಕಪ್‌ ಅವಲಕ್ಕಿ, 1 ಚಮಚ ಧನಿಯಾ, 1 ಕಪ್‌ ತೆಂಗಿನತುರಿ, 2-3 ಒಣಮೆಣಸು, ರುಚಿಗೆ ತಕ್ಕಷ್ಟು ಉಪ್ಪು , ಸ್ವಲ್ಪ ಈರುಳ್ಳಿ ಚೂರು.

ತಯಾರಿಸುವ ವಿಧಾನ: ಅಕ್ಕಿ, ಉದ್ದಿನಬೇಳೆ, ಕಡಲೆಬೇಳೆ, ತೊಗರಿಬೇಳೆ, ಹೆಸರುಬೇಳೆ 3-4 ಗಂಟೆ ನೆನೆಸಿ. ನಂತರ ತೊಳೆದು ನೆನೆಸಿದ ಅವಲಕ್ಕಿ, ಒಣಮೆಣಸು, ಧನಿಯಾ, ತೆಂಗಿನತುರಿ, ಉಪ್ಪು ಸೇರಿಸಿ ರುಬ್ಬಿ. 5-6 ಗಂಟೆ ಕಳೆದ ನಂತರ ನೀರುಳ್ಳಿ ಚೂರು ಸೇರಿಸಿ ಎಣ್ಣೆ ಪಸೆ ಮಾಡಿದ ಅಪ್ಪದ ಗುಳಿಗೆ ಎಣ್ಣೆ ಸವರಿ ಹಿಟ್ಟು ಹಾಕಿ 2 ಬದಿ ಕೆಂಪಗೆ ಬೇಯಿಸಿ ತೆಗೆದರೆ ರುಚಿಕರವಾದ ಮಿಶ್ರ ಬೇಳೆ ಪಡ್ಡು ಸವಿಯಲು ಸಿದ್ಧ.

ಸರಸ್ವತಿ ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next