ಕೃಷಿಯನ್ನು ನಂಬಿದವನು ಖುಷಿಯಾಗಿ ಇರಬಲ್ಲ ಎಂಬ ಮಾತನ್ನು ರೈತ ಲೋಕೇಶ್ ನಿಜ ಮಾಡಿದ್ದಾರೆ. ಹಾಗಲಕಾಯಿ ಮತ್ತು ಅಲಸಂದೆ ಬೆಳೆಯಿಂದ ಅವರಿಗೆ ನಿರೀಕ್ಷೆ ಮೀರಿ ಲಾಭ ಸಿಕ್ಕಿದೆ.
ತರಕಾರಿ ಮಾರುಕಟ್ಟೆಯಲ್ಲಿ ಬಗೆ ಬಗೆಯ ತರಕಾರಿಗೆ ಯಾವಾಗಲೂ ಬೇಡಿಕೆ ಇರುತ್ತದೆ. ಉತ್ತಮ ದರ ಯಾವುದಕ್ಕೆ ಸಿಗುತ್ತದೆ ಎಂದು ಮುಂದಾಲೋಚನೆ ಮಾಡಿದರೆ ಖಂಡಿತ ಲಾಭ ಗಳಿಸಲು ಸಾಧ್ಯ ಅನ್ನೋದನ್ನು ಶಿವಮೊಗ್ಗ ತಾಲೂಕು ವ್ಯಾಪ್ತಿಯ ಬೀರನಕೆರೆಯ ರೈತ ಲೋಕೇಶ್ ಸಾಧಿಸಿ ತೋರಿಸಿದ್ದಾರೆ.
ಕಳೆದ ಬೇಸಿಗೆಯಲ್ಲಿ ಸುಮಾರು 1.5 ಎಕರೆ ಜಮೀನಿನಲ್ಲಿ ಅಲಸಂದೆ ಮತ್ತು ಹಾಗಲಕಾಯಿ ಹಾಕಿದ್ದರು. ಇವತ್ತು ಈ ಎರಡೂ ತರಕಾರಿಯಿಂದ ಕೈ ತುಂಬ ಲಾಭ ಬರುತ್ತಿದೆ. ಬೀಜ ಹಾಕಲು ಅನುಕೂಲವಾಗುವಂತೆ ಹೊಲದ ಉದ್ದಕ್ಕೂ ಸುಮಾರು 300ಅಡಿ ಉದ್ದದ ಪಟ್ಟೆ ಸಾಲು ನಿರ್ಮಿಸಿದ್ದಾರೆ. ಒಟ್ಟು 120 ಪಟ್ಟೆ ಸಾಲು ನಿರ್ಮಿಸಿಕೊಂಡು ಗಿಡದಿಂದ ಗಿಡಕ್ಕೆ 1.5 ಅಡಿ ಮತ್ತು ಸಾಲಿನಿಂದ ಸಾಲಿಗೆ 3.5 ಅಡಿ ಅಂತರ ಕೊಟ್ಟಿದ್ದಾರೆ. ಪ್ರತಿ ಗುಣಿಯಲ್ಲಿ 2 ಬೀಜದಂತೆ ಬೀಜ ಬಿತ್ತನೆ ಮಾಡಿದ್ದರು. ಹೀಗೆ ಬಿತ್ತನೆ ಮಾಡುವಾಗ ಸರಾಸರಿ 5 ಗ್ರಾಂ.ನಷ್ಟು ಕಾಂಪ್ಲೆಕ್ಸ್ ಗೊಬ್ಬರ ನೀಡಿದ್ದರು. ಪ್ರತಿ 300 ಅಡಿಯಲ್ಲಿ 150 ಗಿಡ ಬೆಳೆಸಿದ್ದಾರೆ. ಇಂತಹ 60 ಸಾಲುಗಳಲ್ಲಿ ಒಟ್ಟು ಸುಮಾರು 9 ಸಾವಿರ ಅಲಸಂದೆ ಗಿಡವಿದೆ. ಬೀಜ ಮೊಳಕೆಯೊಡೆದು ತಲಾ ಮೂರು ಎಲೆ ಕಾಣಿಸಿಕೊಳ್ಳುತ್ತಿದ್ದಂತೆ 20:20ಕಾಂಪ್ಲೆಕ್ಸ್ ಗೊಬ್ಬರ ನೀಡಿ ಕೃಷಿ ಮುಂದುವರೆಸಿದರು. ಕೊಳವೆ ಬಾವಿಗೆ ಅಳವಡಿಸಿದ ಪಂಪ್ ಮೂಲಕ ಪ್ರತಿ 2 ದಿನಕ್ಕೊಮ್ಮೆ ಅಲಸಂದೆ ಗಿಡದ ಪಟ್ಟೆ ಸಾಲಿಗೆ ನೀರು ಹಾಯಿಸುತ್ತಾರೆ. ಗಿಡ ಬೆಳೆದು ಬಳ್ಳಿಯಾಗುತ್ತಿದ್ದಂತೆ ಕೋಲು ನೆಟ್ಟು ತಂತಿ ಬಿಗಿದು ಹಬ್ಬುವಂತೆ ನೋಡಿಕೊಂಡಿದ್ದಾರೆ. ನಂತರ 20 ದಿನಕ್ಕೊಮ್ಮೆ ಪ್ರತಿ ಗಿಡಕ್ಕೆ ಸರಾಸರಿ 5 ಗ್ರಾಂ.ನಷ್ಟು ಗೊಬ್ಬರ ಸಿಗುವಂತೆ 20:20 ಕಾಂಪ್ಲೆಕ್ಸ್ ಗೊಬ್ಬರ ನೀಡಿದ್ದರು .ಒಟ್ಟು ಮೂರು ಸಲ ಗೊಬ್ಬರ ನೀಡಿ ಗಿಡ ಹುಲುಸಾಗಿ ಬೆಳೆಯುವಂತೆ ನೋಡಿಕೊಂಡರು. ಗಿಡಗಳಿಗೆ 40 ದಿನವಾಗುತ್ತಿದ್ದಂತೆ ಹೂವಾಗಿ ಮಿಡಿ ಆರಂಭವಾಯಿತು. 60 ನೇ ದಿನಕ್ಕೆ ಕಟಾವಿಗೆ ಸಿದ್ಧಗೊಂಡಿತು.
ಲಾಭ ಹೇಗೆ ?
ಲೋಕೇಶ್ ಈ ಅಲಸಂದೆ ಬೆಳೆಯಲು ರೂ.50 ಸಾವಿರ ವೆಚ್ಚ ಮಾಡಿದ್ದಾರೆ. ಒಟ್ಟು 9 ಸಾವಿರ ಅಲಸಂದೆ ಬಳ್ಳಿಗಳನ್ನು ಹಬ್ಬಿಸಿದ್ದಾರೆ. ಮಾರ್ಚ್ ಮೊದಲ ವಾರದಿಂದ ಏಪ್ರಿಲ್ 20 ರ ವರೆಗೆ, ಅಂದರೆ ಒಂದೂವರೆ ತಿಂಗಳು ಫಸಲು ಮಾರಾಟ ಮಾಡಿದ್ದಾರೆ. ಪ್ರತಿ ಗಿಡದಿಂದ ಒಟ್ಟು ಸರಾಸರಿ 3 ಕಿ.ಗ್ರಾಂ. ಅಲಸಂದೆ ದೊರೆತಿದೆ. ವಾರಕ್ಕೆ 2 ದಿನ ಫಸಲು ಕಿತ್ತಿದ್ದರು. ತರಕಾರಿ ವ್ಯಾಪಾರಿಗಳು ಹೊಲಕ್ಕೇ ಬಂದು ಖರೀದಿಸಿ ಒಯ್ಯುತ್ತಿದ್ದಾರೆ. ಕಿ.ಗ್ರಾಂ.ಒಂದಕ್ಕೆ ರೂ.4 ರಂತೆ ಮಾರಾಟವಾಗಿದೆ. ಈ ವರ್ಷ 9 ಸಾವಿರ ಬಳ್ಳಿಯಿಂದ ಒಟ್ಟು 270 ಕ್ವಿಂಟಾಲ್ ಅಲಸಂದಿ ಫಸಲು ದೊರೆತಿದೆ. ಕ್ವಿಂಟಾಲ್ ಗೆ ರೂ.400 ರಂತೆ ಸುಮಾರು ರೂ.1 ಲಕ್ಷ ಆದಾಯ ಬಂದಿರುವುದಾಗಿ ಲೆಕ್ಕಸಿಕ್ಕಿದೆ. ಖರ್ಚನ್ನೆಲ್ಲ ಕಳೆದರೆ ಅಲಸಂದೆ ಕೃಷಿಯಿಂದ ಇವರಿಗೆ 50 ಸಾವಿರ ಲಾಭ ದೊರೆತಿದೆ. ಒಟ್ಟು ಸುಮಾರು ಒಂದು ಸಾವಿರ ಹಾಗಲಬಳ್ಳಿ ಹಬ್ಬಿಸಿದ್ದರು. ಪ್ರತಿ ಗಿಡದಿಂದ ಸರಾಸರಿ 3 ಕಿ.ಗ್ರಾಂ. ಫಸಲು ದೊರೆತಿದೆ.ಕಿ.ಗ್ರಾಂ.ಒಂದಕ್ಕೆ ರೂ.10 ರಂತೆ ಮೂರು ತಿಂಗಳ ಅವಧಿಯಲ್ಲಿ ಒಟ್ಟು ಸುಮಾರು 3,000 ಕಿ.ಗ್ರಾಂ. ಹಾಗಲ ಮಾರಿದ್ದರಿಂದ 30 ಸಾವಿರ ಆದಾಯ ದೊರೆತಿದೆ.
ಹೀಗೆ ಲೋಕೇಶ್ ಹಾಗಲ, ಅಲಸಂದೆಯಿಂದಲೇ ಕೃಷಿ ಬದುಕನ್ನು ನಿರಾಳವಾಗಿಸಿಕೊಂಡಿದ್ದಾರೆ.
ಮಾಹಿತಿಗೆ-7353004490.
– ಎನ್.ಡಿ.ಹೆಗಡೆ ಆನಂದಪುರಂ