ಮಂಗಳೂರು: ಯಾಂತ್ರಿಕ ಮೀನುಗಾರಿಕೆ ದೋಣಿಗಳಿಗೆ ಡೀಸೆಲ್ ಮಾರಾಟ ತೆರಿಗೆ ಮರುಪಾವತಿ ಯೋಜನೆಯಡಿ 2020-21ರಲ್ಲಿ ವಾರ್ಷಿಕ 150 ಲಕ್ಷ ಕಿ.ಲೀ. ಡೀಸೆಲ್ ಮೇಲಿನ ಮಾರಾಟ ತೆರಿಗೆ ಮರುಪಾವತಿ ಮಾಡಲು ಅವಕಾಶವಿದೆ.
ಈ ಯೋಜನೆಯಡಿ ಕಳೆದ ಸಾಲಿನಲ್ಲಿ ಹೆಚ್ಚುವರಿ ಅನುದಾನ ಸೇರಿ ಒಟ್ಟು 127 ಕೋಟಿ ರೂ. ಬಿಡುಗಡೆಯಾಗಿದ್ದು, 2020ರ ಡಿಸೆಂಬರ್‌ವರೆಗಿನ ಬಿಲ್ ಪಾವತಿಸಲು ಸಾಧ್ಯವಾಗಿದೆ ಎಂದು ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ತಿಳಿಸಿದರು.
2021ರ ಜನವರಿ ಮತ್ತು ಫೆಬ್ರವರಿ ತಿಂಗಳ ಒಟ್ಟು 35.81 ಕೋಟಿ ರೂ. ಮೀನುಗಾರರಿಗೆ ಪಾವತಿಸಲು ಬಾಕಿ ಉಳಿದಿತ್ತು. ದೋಣಿ ಮಾಲಕರು ಪೂರ್ಣ ಮೊತ್ತ ಪಾವತಿಸಿ ಡೀಸೆಲ್ ಖರೀದಿಸಿ ರಾಜ್ಯ ಮಾರಾಟ ತೆರಿಗೆ ಮೊತ್ತ ಮರು ಪಾವತಿಗಾಗಿ ಅನುದಾನದ ನಿರೀಕ್ಷೆಯಲ್ಲಿದ್ದಾರೆ.
ಇದನ್ನೂ ಓದಿ:ತೆರಿಗೆ ವಂಚನೆ ಆರೋಪ; ಚೀನದ ಹುವಾಯ್ ಕಚೇರಿಗಳ ಮೇಲೆ ಐಟಿ ದಾಳಿ
ಈಗ ಪಾವತಿಗೆ ಬಾಕಿ ಉಳಿದ ಕಳೆದ ಸಾಲಿನ ಜನವರಿ ಮತ್ತು ಫೆಬ್ರವರಿ ತಿಂಗಳ ಬಿಲ್‌ಗಳನ್ನು ಪಾವತಿಸಲು ಅಗತ್ಯ ಅನುದಾನವನ್ನು ಸರಕಾರದಿಂದ ಬಿಡುಗಡೆಗೊಳಿಸಲಾಗಿದೆ. ಈ ಬಗ್ಗೆ ಮೀನುಗಾರರು ಆತಂಕ ಪಡುವ ಅಗತ್ಯ ಇಲ್ಲ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.