Advertisement

ಇಷ್ಟು ನೋವಿರುತ್ತೆ ಎಂದು ಗೊತ್ತಿರಲಿಲ್ಲ…

03:12 PM Jul 14, 2020 | mahesh |

ಹೌದು, ನನ್ನ ಸ್ನೇಹಿತರ ಕಾಲೇಜಿನ ದಿನಗಳ ಪ್ರೀತಿ- ಪ್ರೇಮ ಪುರಾಣಗಳ ಕಥೆ ಕೇಳಿ, ಅಯ್ಯೋ …! ನನಗೆ ಇಂಥ ಅನುಭವವೇ ಆಗಲಿಲ್ಲವಲ್ಲ ಎಂದು  ಪರಿತಪಿಸಿದ ದಿನಗಳಲ್ಲೇ ನಿನ್ನ ಪರಿಚಯವಾಗಿದ್ದು. ಅರೆ, ಏನಿದು? ನನ್ನ ಪ್ರಾರ್ಥನೆ ದೇವರಿಗೆ ಇಷ್ಟು ಬೇಗ ತಲುಪಿತೆ? ಎಂದುಕೊಂಡಿದ್ದೆ. ನೀನು ಫೇಸ್‌
ಬುಕ್‌ನಲ್ಲಿ ಹಾಯ್ ಎಂದು ಸಂದೇಶ ಕಳುಹಿಸಿದಾಗ, ಅರೆಮನಸ್ಸಿನಿಂದಲೇ ಉತ್ತರ ಕಳಿಸಿದೆ. ಮರುಕ್ಷಣದಿಂದಲೇ ನಮ್ಮ ಸಂವಹನಕ್ಕೆ ತಡೆ
ಇಲ್ಲದಂತಾಯಿತು. ನಾನಂತೂ ನೀನೇ ನನ್ನ ಲೈಫ್ ಪಾರ್ಟ್‌ನರ್‌ ಅಂತ ನಿರ್ಧರಿಸಿ ಅದನ್ನು ಮನೆಯವರಿಗೂ ಹೇಳಿಬಿಟ್ಟೆ.

Advertisement

ಆನಂತರದಲ್ಲಿ ನಾನು ನಿನ್ನಲ್ಲಿ ಹಂಚಿಕೊಳ್ಳದ ವಿಷಯವಿಲ್ಲ, ನಿನ್ನನ್ನು ನೆನಪಿಸಿಕೊಳ್ಳದ ದಿನವಿಲ್ಲ. ಅಷ್ಟರಮಟ್ಟಿಗೆ ನೀನು ನನ್ನ ಬದುಕನ್ನು ಆವರಿಸಿಕೊಂಡಿದ್ದೆ. ಆಮೇಲೆ ನಡೆದದ್ದು ಎಲ್ಲಾ  ಕನಸಿನಂತೆ. ನಮ್ಮ ಪ್ರೀತಿಯ ವಿಷಯವನ್ನು ಮನೆಯಲ್ಲಿ ತಿಳಿಸುವೆ ಎಂದು ನೀನೂ ಹೇಳಿದೆಯಲ್ಲ; ಅವತ್ತು ನನಗಾದ ಖುಷಿಗೆ
ಪಾರವಿಲ್ಲ. ಅಂದು ದೀಪಾವಳಿಯ ದಿನ. ನಿನ್ನ ಕರೆಗಾಗಿ ಕಾಯುತ್ತಿದ್ದೆ. ಮನೆಯವರೆಲ್ಲ ಒಪ್ಪಿದ ಸುದ್ದಿಯನ್ನು ನೀನು ಗದ್ಗದಿತ ಸ್ವರದಲ್ಲಿ ಹೇಳಿದಾಗ ಆಗಸವೇ ಕೈಗೆ ಸಿಕ್ಕಷ್ಟು ಸಂತೋಷವಾಗಿತ್ತು. ಹುಚ್ಚುಮನಸ್ಸು ಎಲ್ಲೆಂದರಲ್ಲಿ ಹಾರಾಡಿ ಮದುವೆಯ ಸಿಹಿಗುಂಗಿನಲ್ಲೇ ಇತ್ತು. ಆದರೆ, ಅದು ಕೇವಲ ಕನಸಿನ ಕೋಟೆ, ನುಚ್ಚು
ನೂರಾಗಲು ಬಹಳ ಸಮಯ ಇಲ್ಲ ಎಂದು ಗೊತ್ತಿರಲಿಲ್ಲ.

ಮದುವೆ ಆಗೇಬಿಡುವೆ ಎನ್ನುತ್ತಿದ್ದ ನೀನು, ಹಿಂಜರಿಯಲು ಆರಂಭಿಸಿದೆ. ಈ ಕುರಿತು ಏನೇ ಪ್ರಶ್ನೆ ಕೇಳಿದರೂ ಸುತ್ತಿ ಬಳಸಿನ ಮಾತಾಡಿ ಮಾತು ಬದಲಿಸುತ್ತಿದ್ದೆ. ನೀನು ಕೈಕೊಡುವ ಆಸಾಮಿ ಎಂದು ನಮ್ಮ ಮನೆಯವರಿಗೆಲ್ಲ ಅನಿಸತೊಡಗಿದ್ದು ಆಗಲೇ. ಹೇಳು, ನಿನ್ನದು ಕೇವಲ ಬಣ್ಣದ ಮಾತುಗಳಾಗಿತ್ತಾ? ಎಲ್ಲವೂ ಸರಿಯಾ ಗಿದೆ ಎಂಬುದು ನನ್ನ ಊಹೆಯಾಗಿತ್ತಾ? ಉತ್ತರವಿಲ್ಲದ ಸಾವಿರ ಪ್ರಶ್ನೆಗಳು ಎದೆಯಲ್ಲೇ ಹುದುಗಿ ಹೋಗಿವೆ. ನಿನ್ನ ಪ್ರೀತಿ ಸುಳ್ಳು ಎಂಬುದನ್ನು ಈಗ
ಅನಿವಾರ್ಯವಾಗಿ ನಾನು ನಂಬಲೇಬೇಕಾಗಿದೆ. ಪ್ರೇಮದಲ್ಲಿ ಇಷ್ಟೊಂದು ನೋವಿರುತ್ತದೆ ಎಂದು ಗೊತ್ತಿದ್ದರೆ, ನನಗೂ ಪ್ರೇಮಿಯೊಬ್ಬ
ಬೇಕು ಎಂದು ಖಂಡಿತ ಹಂಬಲಿಸುತ್ತಿರಲಿಲ್ಲ. ನಿನ್ನವಳಲ್ಲದ ರಾಣಿ…

ಪ್ರೇರಣಾ

Advertisement

Udayavani is now on Telegram. Click here to join our channel and stay updated with the latest news.

Next