ಮುಂಬೈ: ದಕ್ಷಿಣ ಆಫ್ರಿಕಾ ಪ್ರವಾಸದ ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಿಲಾಗಿದೆ. ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯ ಕಾರಣದಿಂದ ಕೆ.ಎಲ್.ರಾಹುಲ್ ಗೆ ನಾಯಕತ್ವ ವಹಿಸಲಾಗಿದೆ. ಇದೇ ವೇಳೆ ವೇಗಿ ಜಸ್ಪ್ರೀತ್ ಬುಮ್ರಾಗೆ ಉಪನಾಯಕ ಸ್ಥಾನ ನೀಡಲಾಗಿದೆ.
ಬುಮ್ರಾಗೆ ಉಪನಾಯಕನ ಸ್ಥಾನ ನೀಡಿರುವುದು ಹಲವರ ಅಚ್ಚರಿಗೆ ಕಾರಣವಾಗಿದೆ. ಮಾಜಿ ವಿಕೆಟ್ ಕೀಪರ್ ಮತ್ತು ಆಯ್ಕೆ ಸಮಿತಿಯ ಮಾಜಿ ಸದಸ್ಯ ಸಬಾ ಕರೀಮ್ ಕೂಡಾ ಈ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದು, ಬುಮ್ರಾಗಿಂತ ಮುಂಚಿತವಾಗಿ ಉಪನಾಯಕನ ಪಾತ್ರಕ್ಕೆ ರಿಷಬ್ ಪಂತ್ ಆಯ್ಕೆಯಾಗುತ್ತಾರೆ ಎಂದು ತಾನು ನಿರೀಕ್ಷಿಸಿದ್ದೇನೆ ಎಂದು ಹೇಳಿದ್ದಾರೆ.
“ನನಗೆ ತುಂಬಾ ಆಶ್ಚರ್ಯವಾಯಿತು, ಜಸ್ಪ್ರೀತ್ ಬುಮ್ರಾ ಅವರನ್ನು ಉಪನಾಯಕನನ್ನಾಗಿ ಮಾಡುತ್ತಾರೆ ಎಂದು ನಾನು ನಿರೀಕ್ಷಿಸಿರಲಿಲ್ಲ” ಎಂದು ಸಬಾ ಕರೀಮ್ ಇಂಡಿಯಾ ನ್ಯೂಸ್ ಗೆ ತಿಳಿಸಿದರು.
ಇದನ್ನೂ ಓದಿ:ಬೈಕ್ ನಂಬರ್ ಪ್ಲೇಟ್ ನ್ನು ಅಕ್ರಮವಾಗಿ ಬಳಸಿದ್ದಾರೆಂದು ವಿಕ್ಕಿ ಕೌಶಲ್- ಸಾರಾ ವಿರುದ್ಧ ದೂರು
“ರಿಷಭ್ ಪಂತ್ ಅವರು ಬಹು-ಮಾದರಿ ಆಟಗಾರರೂ ಆಗಿರುವುದರಿಂದ ಉಪನಾಯಕರಾಗಲು ಹೆಚ್ಚಿನ ಅವಕಾಶಗಳಿವೆ ಎಂದು ನಾನು ಭಾವಿಸುತ್ತೇನೆ, ಅವರು ಎಲ್ಲಾ ಮೂರು ಸ್ವರೂಪಗಳನ್ನು ಆಡುತ್ತಾರೆ. ಡೆಲ್ಲಿ ಕ್ಯಾಪಿಟಲ್ಸ್ ನಾಯಕನಾಗಿ ಪಂತ್ ಅವರ ಪ್ರದರ್ಶನಗಳು ತುಂಬಾ ಚೆನ್ನಾಗಿವೆ. ಅವರು ಪಂದ್ಯವನ್ನು ಹೇಗೆ ಅರಿಯುತ್ತಾರೆ ಎಂಬುದನ್ನು ನಾವು ನೋಡುತ್ತಿದ್ದೇವೆ, ಅವರಿಗೆ ಸಾಕಷ್ಟು ಆಟದ ಅರಿವು ಇದೆ” ಎಂದು ಸಬಾ ಕರೀಂ ಹೇಳಿದ್ದಾರೆ.
ಮೂರು ಪಂದ್ಯಗಳ ಏಕದಿನ ಸರಣಿಗೆ 18 ಸದಸ್ಯರ ತಂಡವನ್ನು ಹೆಸರಿಸಲಾಗಿದೆ. ರೋಹಿತ್ ಜೊತೆಗೆ, ಆಲ್ ರೌಂಡರ್ ರವೀಂದ್ರ ಜಡೇಜಾ ಕೂಡ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದಾರೆ. ಋತುರಾಜ್ ಗಾಯಕ್ವಾಡ್ ಮತ್ತು ವೆಂಕಟೇಶ್ ಅಯ್ಯರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.