Advertisement

ದಿಡ್ಡಳ್ಳಿ: ಗುಂಡು ಹಾರಿಸಿದಾತನ ಬಂಧನ

01:43 PM Apr 13, 2017 | Team Udayavani |

ಮಡಿಕೇರಿ: ಶಾಶ್ವತ ನಿವೇಶನಕ್ಕಾಗಿ ಆಗ್ರಹಿಸಿ ಹೋರಾಟದ ರೂಪದಲ್ಲಿ ದಿಡ್ಡಳ್ಳಿಯಲ್ಲಿ ನೆಲೆಸಿರುವ ಆದಿವಾಸಿ ಕುಟುಂಬಗಳ ಗುಡಿಸಲಿನ ಮೇಲೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದೆ.
ಮಾಲ್ದಾರೆಯ ಗೂಡೂರು ನಿವಾಸಿ ಎ. ಪೂಣಚ್ಚ ಬಂಧಿತ ಆರೋಪಿ. ಕೆಲಸಕ್ಕೆ ಬರುವುದಾಗಿ ಹೇಳಿ ಸಾಲ ಪಡೆದ ಕಾರ್ಮಿಕರು ಹಣವನ್ನು ಮರುಪಾವತಿಸಲಿಲ್ಲ ಎಂದು ಕುಪಿತಗೊಂಡು ಬೆದರಿಸುವ ಸಲುವಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾಗಿ ಪೊಲೀಸರ ವಿಚಾರಣೆ ವೇಳೆ ಆತ ಸಮಜಾಯಿಸಿಕೆ ನೀಡಿದ್ದಾನೆ ಎಂದು ತಿಳಿದು ಬಂದಿದೆ. 
ಆರೋಪಿ ದುಷ್ಕೃತ್ಯಕ್ಕೆ ಬಳಸಿದ್ದ ಬೈಕ್‌ ಹಾಗೂ ಬಂದೂಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Advertisement

ಘಟನೆಯ ವಿವರ
ಎ. 10ರಂದು ರಾತ್ರಿ ಮಳೆಯ ನಡುವೆಯೇ ಬೈಕ್‌ನಲ್ಲಿ ಆಗಮಿಸಿದ ದುಷ್ಕರ್ಮಿ ಗುಡಿಸಲೊಂದರ ಮೇಲೆ ಮೂರು ಸುತ್ತು ಗುಂಡು ಹಾರಿಸಿದ್ದಾನೆ. ಅದೃಷ್ಟವಶಾತ್‌ ಮಳೆ ಸುರಿಯುತ್ತಿದ್ದ ಕಾರಣ ಅಂದು ಆ ಗುಡಿಸಲಿನಲ್ಲಿ ಯಾರೂ ಇರಲಿಲ್ಲವಾದ್ದರಿಂದ ಭಾರೀ ದುರ್ಘ‌ಟನೆ ತಪ್ಪಿದೆ. ಗುಂಡಿನ ಶಬ್ದ ಕೇಳಿ ಸುತ್ತಮುತ್ತಲ ಆದಿವಾಸಿಗಳು ಗುಡಿಸಲಿನಿಂದ ಹೊರ ಬರುವಷ್ಟರಲ್ಲಿ ದುಷ್ಕರ್ಮಿ ಸ್ಥಳದಿಂದ ಪರಾರಿಯಾಗಿದ್ದ. ಆದರೆ ಸ್ಥಳದಲ್ಲಿ ಗುಂಡಿನ ಚಿಲ್ಲುಗಳು ದೊರಕಿವೆ.
ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ದಿಡ್ಡ‌ಳ್ಳಿಯ ಪಣಿಯರವರ‌ ಬಸವ, ತಾನು ರಾತ್ರಿ ವೇಳೆ ಮನೆಯ ಬಳಿ ಇರುವ ಸಂದರ್ಭ ಅಪರಿಚಿತ ವ್ಯಕ್ತಿಯೊಬ್ಟಾತ ಬೈಕ್‌ನಲ್ಲಿ ಆಗಮಿಸಿ ಗುಡಿಸಲಿನತ್ತ ಗುಂಡು ಹಾರಿಸಿದ್ದ. ಈ ಶಬ್ದ ಕೇಳಿ ತಾನು ಅತ್ತ ಧಾವಿಸಿದ ಸಂದರ್ಭ ಆತ ನೇರವಾಗಿ ನನ್ನ ಮೇಲೆ ಗುಂಡು ಹಾರಿಸಲು ಯತ್ನಿಸಿದ. ತಾನು ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡೆ. ಅನಂತರ ಹಾಡಿಯ ನಿವಾಸಿಗಳು ಆತನನ್ನು ಹುಡುಕುವ ಸಂದರ್ಭ ಆತ 
ರಾತ್ರಿ ತಲೆಮರೆಸಿಕೊಂಡಿರುವುದಾಗಿ ತಿಳಿಸಿದ್ದಾರೆ.

ಹಾಡಿಯ ನಿವಾಸಿ ರಂಜು ಮಾತನಾಡಿ, ಹೋರಾಟವನ್ನು ಹತ್ತಿಕ್ಕಲು ಯಾವುದೇ ರೀತಿಯ ಷಡ್ಯಂತ್ರಗಳು ನಡೆದರೂ ಶಾಶ್ವತ ಸೂರು ಸಿಗುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಹೇಳಿದರು.

ಘಟನೆಗೆ ಸಂಬಂಧಿಸಿದಂತೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಆದಿವಾಸಿಗಳು ಹಾಗೂ ದುರ್ಬಲರು ಸ್ವತಂತ್ರವಾಗಿ ಬದುಕಲು ಬಯಸುವುದನ್ನು ಅರಗಿಸಿಕೊಳ್ಳಲಾಗದ ಬಲಾಡ್ಯರು ದಿಡ್ಡಳ್ಳಿಯಲ್ಲಿ ನೆಲೆ ನಿಂತಿರುವ ನಿರಾಶ್ರಿತರ ಗುಡಿಸಲುಗಳ ಮೇಲೆ ಗುಂಡು ಹಾರಿಸಿ, ಹೋರಾಟವನ್ನು ಹತ್ತಿಕ್ಕುವ ಯತ್ನ ಮಾಡುತ್ತಿದ್ದಾರೆ ಎಂದು ಭೂು ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಪ್ರಮುಖರಾದ ಅಮಿನ್‌ ಮೊಹಿಸಿನ್‌ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next