Advertisement

HD Revanna ಕೋರ್ಟ್‌ ಮೇಲೆ ನಂಬಿಕೆ ಇದೆ ನಿರ್ದೋಷಿಯಾಗುವೆ

12:38 AM May 15, 2024 | Team Udayavani |

ಬೆಂಗಳೂರು: “ನನಗೆ ನ್ಯಾಯಾಂಗದ ಮೇಲೆ ಅಪಾರ ಗೌರವ ಇದೆ. ಈ ಆಪಾದನೆಯಿಂದ ಹೊರಬರುತ್ತೇನೆಂಬ ನಂಬಿಕೆಯೂ ಇದೆ’.

Advertisement

– ಪೆನ್‌ಡ್ರೈವ್‌ ಪ್ರಕರಣದ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ಬಳಿಕ ಮಾಜಿ ಸಚಿವ ಎಚ್‌.ಡಿ. ರೇವಣ್ಣ ಅವರ ಪ್ರತಿಕ್ರಿಯೆ ಇದು.

ಮಂಗಳವಾರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾದ ಅನಂತರ ಅವರು ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ನಿವಾಸಕ್ಕೆ ತೆರಳಿ ದೇವರಿಗೆ ದೀಪ ಹಚ್ಚಿ ಪೂಜೆ ಸಲ್ಲಿಸಿ, ತಂದೆ-ತಾಯಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.

ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿ, “11 ದಿನಗಳಿಂದ ನ್ಯಾಯಾಲಯದ ಆದೇಶಗಳನ್ನು ಪಾಲಿಸಿದ್ದೇನೆ. ಮುಂದೆಯೂ ಪಾಲಿಸುತ್ತೇನೆ. ಹೆಚ್ಚಿಗೆ ಏನನ್ನೂ ಹೇಳಲು ಇಷ್ಟಪಡುವುದಿಲ್ಲ. ಈ ಆಪಾದನೆಯಿಂದ ನಿರ್ದೋಷಿಯಾಗಿ ಹೊರಬರುತ್ತೇನೆ ಎಂಬ ನಂಬಿಕೆ ಇದೆ’ ಎಂದಷ್ಟೇ ಹೇಳಿದರು.

“ಜೈಲಿಗೆ ಹೋಗುವ ಮುನ್ನ ಇದು ರಾಜಕೀಯ ಷಡ್ಯಂತ್ರ ಎಂದಿದ್ದಿರಿ’ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿ ತೆರಳಿದರು. ಬಳಿಕ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ಅರ್ಚನೆ ಮಾಡಿಸಿ ರಾತ್ರಿ ಬೆಂಗಳೂರಿಗೆ ಮರಳಿದರು.
ಇದಕ್ಕೆ ಮುನ್ನ ರೇವಣ್ಣ ಅವರು ಜೆ.ಪಿ. ನಗರದ ಶ್ರೀಲಕ್ಷ್ಮೀ ವೇಂಕಟೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಅಲ್ಲಿಂದ ಬಸವನಗುಡಿಯ ಕಾರಂಜಿ ಆಂಜನೇಯ ದೇವಸ್ಥಾನಕ್ಕೆ ತೆರಳಿ ದೇವರಿಗೆ ನಿಂಬೆಹಣ್ಣಿನ ಆರತಿ ಬೆಳಗಿದರು.

Advertisement

ಭಾವುಕರಾದ ಕುಟುಂಬಸ್ಥರು, ಕಾರ್ಯಕರ್ತರು
ಇದಕ್ಕೆ ಮುನ್ನ ದೇವೇಗೌಡರ ನಿವಾಸಕ್ಕೆ ರೇವಣ್ಣ ಆಗಮಿಸಿದಾಗ ಇಡೀ ಮನೆಯಲ್ಲಿ ಭಾವುಕತೆ ಆವರಿಸಿತ್ತು. ಎಲ್ಲರ ಕಣ್ಣಾಲಿಗಳಲ್ಲೂ ನೀರು ಜಿನುಗುತ್ತಿತ್ತು. ಕುಟುಂಬದವರೊಂದಿಗೆ ಸ್ವಲ್ಪ ಕಾಲ ಆತ್ಮೀಯ ಕ್ಷಣಗಳನ್ನು ಕಳೆದ ರೇವಣ್ಣ ಜತೆಯಾಗಿ ಊಟ ಮಾಡಿದರು.

ತಮ್ಮ ಭೇಟಿಗೆ ಆಗಮಿಸಿದ ಪಕ್ಷದ ಶಾಸಕರು, ಮುಖಂಡರ ಜತೆಗೆ ಸ್ವಲ್ಪ ಕಾಲ ಮಾತುಕತೆ ನಡೆಸಿದ ಅನಂತರ ಮನೆಯಿಂದ ಹೊರಬಂದರು. ಹೊರಗೆ ನೆರೆದಿದ್ದ ಕಾರ್ಯಕರ್ತರನ್ನು ಕಂಡು ಭಾವುಕರಾದರು. ಕಣ್ಣೀರಿಟ್ಟ ರೇವಣ್ಣ ಅವರಿಗೆ ಧೈರ್ಯ ಹೇಳಿದ ಕಾರ್ಯಕರ್ತರು, ರೇವಣ್ಣ ಪರ ಘೋಷಣೆಗಳನ್ನು ಕೂಗಿದರಲ್ಲದೆ ರಾಜ್ಯ ಸರಕಾರ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ವಿರುದ್ಧ ಧಿಕ್ಕಾರ ಕೂಗಿದರು.

Advertisement

Udayavani is now on Telegram. Click here to join our channel and stay updated with the latest news.

Next