Advertisement

3 ದಿನ ರೇವಣ್ಣ ಭೇಟಿಗಿಲ್ಲ ಅವಕಾಶ; ಮಾಜಿ ಸಚಿವರಿಗೆ ಈಗ ಬೆನ್ನು ನೋವು

12:09 AM May 11, 2024 | Team Udayavani |

ಬೆಂಗಳೂರು: ಮಹಿಳೆಯ ಅಪಹರಣ ಪ್ರಕರಣದಲ್ಲಿ ವಿಶೇಷ ತನಿಖಾ ದಳ (ಎಸ್‌ಐಟಿ)ದಿಂದ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿರುವ ಎಚ್‌.ಡಿ.ರೇವಣ್ಣರಿಗೆ ಮೂರು ದಿನಗಳ ಕಾಲ ಯಾರನ್ನೂ ಭೇಟಿಯಾಗುವ ಅವಕಾಶವಿಲ್ಲದೆ ಇನ್ನಷ್ಟು ಕುಗ್ಗಿ ಹೋಗಿದ್ದಾರೆ.

Advertisement

ಶುಕ್ರವಾರ ರಜೆ ಇದ್ದು, ಶನಿವಾರ ಮತ್ತು ರವಿವಾರ ಸರಕಾರಿ ರಜೆ ಇರುವ ಹಿನ್ನೆಲೆಯಲ್ಲಿ ಜೈಲಲ್ಲಿರುವ ಎಚ್‌.ಡಿ. ರೇವಣ್ಣ ಅವರನ್ನು ಆಪ್ತರು, ಕುಟುಂಬಸ್ಥರು ಭೇಟಿ ಯಾಗುವಂತಿಲ್ಲ. ಇದುವರೆಗೆ ಆಪ್ತ ಶಾಸಕರು ರೇವಣ್ಣರನ್ನು ಜೈಲಿನಲ್ಲಿ ಭೇಟಿಯಾಗಿ ಧೈರ್ಯ ತುಂಬುತ್ತಿದ್ದರು.

ರೇವಣ್ಣ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಇದುವರೆಗೆ ಹೊಟ್ಟೆ ನೋವು ಕಾಣಿಸಿಕೊಂಡ ಬೆನ್ನಲ್ಲೇ ಬೆನ್ನು ನೋವು ಕಾಣಿಸಿಕೊಂಡಿದೆ. ವೈದ್ಯ ಡಾ| ಹರ್ಷವರ್ಧನ್‌ ಅವರು ರೇವಣ್ಣರಿಗೆ ಚಿಕಿತ್ಸೆ ನೀಡಿದ್ದಾರೆ. ಜತೆಗೆ ಇವರ ಆರೋಗ್ಯದ ಮೇಲೆ ಜೈಲಿನ ಸಿಬಂದಿಯೂ ಹೆಚ್ಚಿನ ನಿಗಾ ಇಟ್ಟಿದ್ದಾರೆ. ಜೈಲಲ್ಲಿ ಚಿಕಿತ್ಸೆ ಪಡೆದ ಬಳಿಕ ವಿಶ್ರಾಂತಿ ಪಡೆಯಲು ಜೈಲಿನ ಕ್ವಾರಂಟೈನ್‌ ರೂಮ…ನಲ್ಲಿ ದಿವಾನ್‌ ಕಾಟ್‌ ವ್ಯವಸ್ಥೆ ಒದಗಿಸಲಾಗಿದೆ.

ಜೈಲಲ್ಲಿ 3 ರಾತ್ರಿ ಕಳೆದ ರೇವಣ್ಣ
ಮೂರು ದಿನಗಳಿಂದ ಜೈಲಿನಲ್ಲಿರುವ ರೇವಣ್ಣರಿಗೆ ಪ್ರತ್ಯೇಕ ಕೊಠಡಿ ನೀಡಲಾಗಿದೆ. ಕೊಠಡಿ ಪಕ್ಕದಲ್ಲಿ 6 ಮಂದಿ ಎಸ್ಕಾರ್ಟ್‌ ನೀಡಲಾಗಿದೆ. ಇಬ್ಬರು ಸೆಕ್ಯೂರಿಟಿ ನಿಯೋಜಿಸಲಾಗಿದೆ. ಜೈಲಿನ ಮೆನು ಪ್ರಕಾರ ಶುಕ್ರವಾರ ಎಲ್ಲ ಕೈದಿಗಳಿಗೂ ಕೊಟ್ಟ ಟೊಮೆಟೋ ಬಾತ್‌ ಅನ್ನು ರೇವಣ್ಣರಿಗೂ ನೀಡಲಾಗಿತ್ತು. ಬೆಳಗ್ಗೆ ಕಾಫಿ ಸೇವಿಸಿ ದಿನಪತ್ರಿಕೆಯ ಮೇಲೆ ಕಣ್ಣಾಡಿಸಿದರು. ಬಳಿಕ ಜೈಲಿನ ಕಾರಿಡಾರ್‌ನಲ್ಲಿ ಬೆಳಗ್ಗೆ ವಾಕ್‌ ಮಾಡಿದ್ದಾರೆ.

ಮಧ್ಯಾಹ್ನ ವಿಶ್ರಾಂತಿಗೆ ಜಾರಿದರು. ರಾತ್ರಿ ಮು¨ªೆ, ಚಪಾತಿ, ಅನ್ನ, ಸಾಂಬಾರ್‌ ಜತೆಗೆ ಮಜ್ಜಿಗೆ ನೀಡಲಾಗುತ್ತಿದೆ. ಜೈಲಿನಲ್ಲಿರುವ ಫಿಲ್ಟರ್‌ ನೀರನ್ನೇ ಸೇವಿಸುತ್ತಿದ್ದಾರೆ. ಗುರುವಾರ ರಾತ್ರಿ ನಿಯಮ ದಂತೆ ಜೈಲು ಸಿಬಂದಿ ರೇವಣ್ಣನವರ ಸೆಲ್‌ ಲಾಕ್‌ ಮಾಡಿ ಬೆಳಗ್ಗೆ ತೆರೆದಿದ್ದಾರೆ. ಇಷ್ಟೆಲ್ಲ ವ್ಯವಸ್ಥೆ ಮಾಡಿದರೂ ರೇವಣ್ಣ ಸರಿಯಾಗಿ ನಿದ್ದೆ ಮಾಡದೆ ಚಿಂತೆಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.ಈ ಹಿಂದೆ ಪಿಎಸ್‌ಐ ನೇಮಕಾತಿಯ ಅಕ್ರಮ ಪ್ರಕರಣದಲ್ಲಿ ಜೈಲು ಸೇರಿದ್ದ ಅಮೃತ್‌ ಪೌಲ್‌ ಕೂಡ ಇದೇ ಕೊಠಡಿಯಲ್ಲಿದ್ದರು ಎನ್ನಲಾಗಿದೆ.

Advertisement

ಭವಾನಿ ರೇವಣ್ಣಗೆ 2ನೇ ನೋಟಿಸ್‌
ಮೈಸೂರಿನ ಕೆ.ಆರ್‌.ನಗರದ ಸಂತ್ರಸ್ತೆಯನ್ನು ಅಪಹರಿಸಿದ ಪ್ರಕರಣದಲ್ಲಿ ಕೆಲವು ಮಾಹಿತಿ ಪಡೆಯಲು ವಿಚಾರಣೆಗೆ ಹಾಜರಾಗುವಂತೆ ಎಚ್‌.ಡಿ. ರೇವಣ್ಣ ಅವರ ಪತ್ನಿ ಭವಾನಿಗೆ ಎರಡನೇ ಬಾರಿ ನೋಟಿಸ್‌ ಜಾರಿ ಮಾಡಲಾಗಿದೆ. ಅವರು ಮೊದಲ ನೋಟಿಸ್‌ಗೆ ಪ್ರತಿಕ್ರಿಯಿಸಿರದ ಕಾರಣ ಮತ್ತೊಂದು ನೋಟಿಸ್‌ ನೀಡಲಾಗಿದೆ. ಎಫ್ಐಆರ್‌ನಲ್ಲಿ ಭವಾನಿ ಹೆಸರು ಇಲ್ಲದಿದ್ದರೂ ಪ್ರಕರಣದಲ್ಲಿ ಕುಮ್ಮಕ್ಕು ಕೊಟ್ಟ ಆರೋಪದಲ್ಲಿ ಮಾಹಿತಿ ಕಲೆ ಹಾಕಲು ಎಸ್‌ಐಟಿ ಮುಂದಾಗಿದೆ ಎಂದು ತಿಳಿದು ಬಂದಿದೆ.

2ನೇ ಬಾರಿ ಮನೆ ಮಹಜರು
ಪೆನ್‌ಡ್ರೈವ್‌ ಪ್ರಕರಣದ ಸಂಬಂಧ ತನಿಖೆ ಚುರುಕುಗೊಳಿಸಿರುವ ಎಸ್‌ಐಟಿ ತನಿಖಾಧಿಕಾರಿಗಳು ಶುಕ್ರವಾರ ಬೆಂಗಳೂರಿನ ಬಸವನಗುಡಿಯಲ್ಲಿರುವ ಎಚ್‌.ಡಿ. ರೇವಣ್ಣ ನಿವಾಸದಲ್ಲಿ ಮಹಜರು ಪ್ರಕ್ರಿಯೆ ನಡೆಸಿದ್ದಾರೆ. ರೇವಣ್ಣ ನಿವಾಸದಲ್ಲಿ ನಡೆದಿದೆ ಎನ್ನಲಾದ ಅತ್ಯಾಚಾರ ಪ್ರಕರಣದ ತನಿಖೆ ಭಾಗವಾಗಿ ಎಸ್‌ಐಟಿ 2ನೇ ಬಾರಿ ಇಲ್ಲಿ ಸ್ಥಳ ಮಹಜರು ನಡೆಸಿದೆ. ಎರಡು ಜೀಪ್‌ಗ್ಳಲ್ಲಿ ಬಂದಿದ್ದ 5ಕ್ಕೂ ಹೆಚ್ಚಿನ ಎಸ್‌ಐಟಿ ಅಧಿಕಾರಿಗಳು ಪರಿಶೀಲನೆ ವೇಳೆ ಸಂತ್ರಸ್ತೆ ಸಮ್ಮುಖದಲ್ಲಿ ವೀಡಿಯೊ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಮನೆಯ ಒಳಾಂಗಣದ ಅಡುಗೆ ಮನೆ, ಬಾಲ್ಕನಿ, ಹಾಲ್‌, ಪಾರ್ಕಿಂಗ್‌ ಪ್ರದೇಶ ಸಹಿತ ಹಲವು ಕಡೆ ಪರಿಶೀಲಿಸಿ, ಸಂತ್ರಸ್ತೆಯಿಂದ ಮಾಹಿತಿ ಪಡೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next