Advertisement

ಸೈತಾನನ ಪ್ರತಿನಿಧಿಯನ್ನು ಸಾಯಿಸಿದ್ದಕ್ಕೆ ಶಾಪ ಸಿಕ್ಕಿತೇ?

06:00 AM Oct 25, 2018 | |

“ಕಾಗೆ ಕೂರುವುದಕ್ಕೂ ಕೊಂಬೆ ಮುರಿಯುವುದಕ್ಕೂ ಸರಿಯಾಯಿತು’ ಎಂಬ ಮಾತನ್ನು ಕೇಳಿರುತ್ತೀರಾ. ಈ ಮಾತಿಗೆ ಅಕ್ಷರಶಃ ಸರಿಹೊಂದುವ ಘಟನೆ ಇಲ್ಲಿದೆ. 12ನೇ ಶತಮಾನದಲ್ಲಿ ರೋಮ್‌ನಲ್ಲಿ 9ನೇ ಗ್ರೆಗೊರಿ ಎಂಬಾತ ಪೋಪ್‌ ಆಗಿದ್ದ. ಆತ ಬಹಳಷ್ಟು ಕ್ರಾಂತಿಕಾರಿ ಬದಲಾವಣೆಗಳನ್ನು, ವಿವಾದಾತ್ಮಕ ನಿಯಮಗಳನ್ನು ಜಾರಿಗೆ ತಂದಿದ್ದ. ಪ್ರಾಚೀನ ಕಾಲದಲ್ಲಿ ಗುರು ಎಂದರೆ ದೇವರಿಗೆ ಸಮಾನ. ದೇವರೇ ಆತನ ಮೂಲಕ ಆಜ್ಞೆ ನೀಡುತ್ತಿದ್ದಾನೆ ಎಂಬ ನಂಬಿಕೆ ಜನರಲ್ಲಿ ಬಲವಾಗಿ ಬೇರೂರಿತ್ತು. ಹೀಗಾಗಿ ಯಾರೊಬ್ಬರೂ ಆತನ ಮಾತನ್ನು ವಿರೋಧಿಸಲು ಹೋಗುತ್ತಿರಲಿಲ್ಲ. ದೇವರ ಆಜ್ಞೆಯನ್ನು ವಿರೋಧಿಸಿದರೆ ನರಕಕ್ಕೆ ಹೋಗುತ್ತಾರೆ ಎಂಬ ಭಯ ಅವರನ್ನು ಕಾಡುತ್ತಿತ್ತು. ಅವನ ಅನೇಕ ನಿಯಮಗಳಲ್ಲಿ ಇಂದಿಗೂ ನೆನಪಿಸಿಕೊಳ್ಳುವುದು ಬೆಕ್ಕನ್ನು ಸಾಯಿಸಬೇಕೆಂಬ ನಿಯಮ. ಗ್ರೆಗೊರಿಗೆ ಬೆಕ್ಕನ್ನು ಕಂಡರೆ ಆಗುತ್ತಿರಲಿಲ್ಲ. ಬೆಕ್ಕು ಸೈತಾನನ ಪ್ರತಿನಿಧಿ ಎನ್ನುವುದು ಆತನ ಅಭಿಪ್ರಾಯವಾಗಿತ್ತು! ಇಂತಿಪ್ಪ ಗ್ರೆಗೊರಿ, 1241ರಂದು ಮರಣ ಹೊಂದಿದ. 

Advertisement

ಮುಂದೆ,13 ಶತಮಾನದ ಆದಿಯಲ್ಲಿ ಪ್ರಪಂಚ “ಬ್ಲ್ಯಾಕ್‌ ಪ್ಲೇಗ್‌’ ಖಾಯಿಲೆಯಿಂದ ತತ್ತರಿಸಿ ಹೋಯಿತು. ಯುರೋಪಿನಲ್ಲೂ ಮನುಷ್ಯರು ಹುಳುಗಳಂತೆ ತುಪತುಪನೆ ಪ್ರಾಣ ಕಳೆದುಕೊಂಡರು. ಏನಿಲ್ಲವೆಂದರೂ 20 ಕೋಟಿ ಜನರನ್ನು ಈ ಸಾಂಕ್ರಾಮಿಕ ಖಾಯಿಲೆ ಬಲಿ ತೆಗೆದುಕೊಂಡಿರಬಹುದೆಂದು ಇತಿಹಾಸತಜ್ಞರು ಅಂದಾಜಿಸುತ್ತಾರೆ. ಪ್ಲೇಗ್‌ ಖಾಯಿಲೆ ಇಲಿಗಳಿಂದ ಹರಡುತ್ತದೆ ಎನ್ನುವುದು ನಿಮಗೆ ಗೊತ್ತೇ ಇರುತ್ತದೆ. 9ನೇ ಗ್ರೆಗೊರಿ ಬೆಕ್ಕುಗಳನ್ನು ಸಾಯಿಸಿದ್ದಕ್ಕೂ, ಯುರೋಪಿನಲ್ಲಿ ಪ್ಲೇಗ್‌ ಮಾರಿ ಹಬ್ಬಿದ್ದಕ್ಕೂ ನೇರ ಸಂಬಂಧ  ಇಲ್ಲ. ಆದರೆ ಅವೆರಡೂ ಘಟನೆಗಳಿಗೆ ಸಂಬಂಧ ಕಲ್ಪಿಸುವ ಜನರು, ಬೆಕ್ಕುಗಳು ಸೈತಾನನ ಪ್ರತಿನಿಧಿಯಲ್ಲ. ಅವನ್ನು ಸಾಯಿಸಿದ್ದಕ್ಕೇ ಶಾಪದ ರೂಪದಲ್ಲಿ ಪ್ಲೇಗ್‌ ಬಂದಿದ್ದು. ಬೆಕ್ಕುಗಳಿದ್ದಿದ್ದರೆ ಪ್ಲೇಗ್‌ ಖಾಯಿಲೆ ಸ್ವಲ್ಪವಾದರೂ ನಿಯಂತ್ರಣಕ್ಕೆ ಬರುತ್ತಿತ್ತು ಎಂದು ಮಾತಾಡಿಕೊಂಡರು. ಏನೇ ಇದ್ದರೂ ಬೆಕ್ಕುಗಳಿದ್ದಿದ್ದರೆ, ಇಲಿಗಳನ್ನು ಮುಗಿಸಿ ಪ್ಲೇಗ್‌ ಹಾನಿಯನ್ನು ತಗ್ಗಿಸುತ್ತಿತ್ತು ಎಂಬ ಮಾತನ್ನು ಅಲ್ಲಗಳೆಯಲಾಗದು. ಇವೆರಡೂ ಘಟನೆಗಳು ಇತಿಹಾಸದ ಅಚ್ಚರಿಯ ತುಣುಕುಗಳಾಗಿ ಉಳಿದುಕೊಂಡಿವೆ. 

– ಹವನ

Advertisement

Udayavani is now on Telegram. Click here to join our channel and stay updated with the latest news.

Next