Advertisement

ಕಂಡಿದೀರಾ ರಥ ಬೆಂಡೆ

04:17 AM Jan 28, 2019 | |

ರಥ ಬೆಂಡೆಯ ಬೀಜ ಬಿತ್ತಿದ ಬಳಿಕ ಗಿಡ ದೊಡ್ಡದಾಗಿ ಹೂ ಬಿಟ್ಟು ಕಾಯಿ ಕೈಗೆ ಸಿಗಬೇಕಿದ್ದರೆ ತೊಂಭತ್ತು ದಿವಸ ಕಾಯಬೇಕು. ಆಮೇಲೆ 120 ದಿನಗಳ ಕಾಲ ಗಿಡವು ಕಾಯಿಗಳಿಂದ ತುಂಬಿ ನೆಲದವರೆಗೂ ಹರಡುತ್ತದೆ.

Advertisement

ಒಂದಾಳಿಗಿಂತ ಹೆಚ್ಚು ಎತ್ತರ, ತೋಳಿನಷ್ಟು ದಪ್ಪ ಬೆಳೆಯುವ ಈ ಬೆಂಡೆ ಗಿಡದ ನೋಟವೇ ಶೋಭಾಯಮಾನ. ಬಳ್ಳಿಯ ಹಾಗೆ ಬೆಂಡೆಕಾಯಿಗಳನ್ನು ಹೊತ್ತು ಅದರ ರೆಂಬೆ, ಕೊಂಬೆಗಳು ಕೆಳಗೆ ಬಾಗುತ್ತವೆ. ಪ್ರತಿದಿನ ಕಾಯಿ ಕೊಯ್ದು ಪಲ್ಯ, ಸಾಂಬಾರು, ಗೊಜ್ಜು ಮುಂತಾದ ವೈವಿಧ್ಯಮಯ ಪಾಕಗಳಿಗೆ ಬಳಸಬಹುದು. ಮಜ್ಜಿಗೆ ಹುಳಿಗಂತೂ ಈ ಬೆಂಡೆ ಮುದ ನೀಡುವ ಸ್ವಾದ ಕೊಡುತ್ತದೆ. ಬಣ್ಣದಲ್ಲಿ, ಊರಿನಲ್ಲಿ ಬೆಳೆಯುವ ಹಾಲು ಬೆಂಡೆಯ ವರ್ಣವಿದ್ದರೂ ಈ ದಪ್ಪ ಬೆಂಡೆಯ ಗಾತ್ರ ಮಾತ್ರ ಬೆರಳಿನಷ್ಟೇ ಇದೆ ಎಂಬುದು ಅದರ ವಿಶೇಷ.

ಇದು ರಥ ಬೆಂಡೆ. ಗಿಡದಲ್ಲಿ ಬೆಳೆಯುವ ಸಾಲು ಸಾಲು ಕಾಯಿಗಳು ಅದನ್ನು ರಥದ ಹಾಗೆ ಸಿಂಗರಿಸಿ ಬಿಡುತ್ತವೆ. ಅಪರೂಪದ ಬೆಂಡೆ ತಳಿಯನ್ನು ಬೆಳೆಯುವ ಮೂಲಕ ಇದನ್ನು ಉಳಿಸಿಕೊಂಡವರು ಪ್ರಗತಿಪರ ರೈತರಾದ ಎಂ. ಜಿ. ಸತ್ಯನಾರಾಯಣ. ಸುಳ್ಯ ತಾಲೂಕಿನ ಕುಕ್ಕುಜಡ್ಕದ ಬಳಿ ಮಾಯಿಪಡ್ಕದಲ್ಲಿದೆ ಅವರ ಮೆಗೊಸಾನ್‌ ಫಾಮ್ಸ್‌ರ್. ಹತ್ತಾರು ಎಕರೆಗಳಲ್ಲಿ ಬಹು ಬಗೆಯ ಬೆಳೆಗಳನ್ನು ಬೆಳೆಯುತ್ತಿರುವ ಅವರು ಕೃಷಿಯ ಕೌಶಲಗಳನ್ನು ಕಾಣಲೆಂದು ದೇಶ ವಿದೇಶಗಳಿಗೆ ಹೋಗಿ ಬಂದವರು. ಜೊತೆಗೆ, ಸಸ್ಯ ವೈವಿಧ್ಯ ಸಂಗ್ರಹದ ಫ‌ಲವಾಗಿ ರಥ ಬೆಂಡೆ ಅವರ ಮನೆಯಂಗಳಕ್ಕೆ ಬಂದಿದೆ. ಗಿಡದಲ್ಲಿ ಸಾವಿರಾರು ಕಾಯಿಗಳಾಗಿ ನಿತ್ಯದ ತರಕಾರಿ ಅಗತ್ಯವನ್ನು ಪೂರೈಸಿದೆ.

ರಥ ಬೆಂಡೆಗೆ ಹಲವು ಗುಣ ವಿಶೇಷಗಳಿವೆ. ಪ್ರಮುಖವಾಗಿ ಅದರ ರೋಗ ನಿರೋಧಕ ಶಕ್ತಿ. ಯಾವುದೇ ಕೀಟಗಳ ಬಾಧೆ ಇಲ್ಲ. ಹಳದಿ ರೋಗ ಬಳಿಗೆ ಸುಳಿಯುವುದಿಲ್ಲ. ಸತ್ಯನಾರಾಯಣರು ಅಪ್ಪಟ ಸಾವಯವ ಕೃಷಿಕ. ಹತ್ತಾರು ಹಸು ಸಾಕಿ ಹೈನುಗಾರಿಕೆ ಮಾಡುತ್ತಿದ್ದಾರೆ. ಗೋಬರ್‌ ಅನಿಲ ಸ್ಥಾವರವಿದೆ. ಗೋಬರ್‌ ಬಗ್ಗಡ, ಸುಡುಮಣ್ಣು, ಕಟ್ಟಿಗೆಯ ಬೂದಿಯ ಬಳಕೆಯಿಂದ ಸಮೃದ್ಧವಾಗಿ ತರಕಾರಿ ಮತ್ತಿತರ ಬೆಳೆಗಳ ಕೃಷಿ ಸಾಧ್ಯವೆಂಬುದನ್ನು ಅವರು ತೋರಿಸಿಕೊಟ್ಟಿ­ದ್ದಾರೆ. ರಥ ಬೆಂಡೆಯ ಬೀಜ ಬಿತ್ತಿದ ಬಳಿಕ ಗಿಡ ದೊಡ್ಡದಾಗಿ ಹೂ ಬಿಟ್ಟು ಕಾಯಿ ಕೈಗೆ ಸಿಗಬೇಕಿದ್ದರೆ ತೊಂಭತ್ತು ದಿವಸ ಕಾಯಬೇಕು. ಆಮೇಲೆ 120 ದಿನಗಳ ಕಾಲ ಗಿಡ ಕಾಯಿಗಳಿಂದ ತುಂಬಿ ನೆಲದವರೆಗೂ ಹರಡುತ್ತದೆ. ಎರಡು ದಿನಗಳಿಗೊಮ್ಮೆ ಬಳಸದಿದ್ದರೆ ಬಲಿತು ಗಟ್ಟಿಯಾಗುತ್ತದೆ. ಒಂದು ಗಿಡವಿದ್ದರೂ ಪುಟ್ಟ ಸಂಸಾರಕ್ಕೆ ದಿನನಿತ್ಯ ಬಳಸುವಷ್ಟು ಕಾಯಿಗಳಾಗುತ್ತವೆ. ಈ ಕಾಯಿಗಳನ್ನು ಉರುಟಾಗಿ ಕತ್ತರಿಸಿ ಹುರಿಯ ಬಹುದು. ಇದರಿಂದ ಬೋಂಡಾ ಮಾಡಬಹುದು, ಒಣಗಿಸಿಟ್ಟು, ಬೇಕಾದಾಗ ಬಾಳಕದಂತೆ ಬಳಸಬಹುದು ಎನ್ನುತ್ತಾರೆ ಸತ್ಯನಾರಾಯಣರ ಶ್ರೀಮತಿ. ಹಾಗೆಯೇ, ಗಿಡದ ಬುಡದಲ್ಲಿ ಒಂದು ಅಲಸಂದೆ ಬೀಜ ಬಿತ್ತಿದರೆ ಅದರ ಬಳ್ಳಿಗೆ ಬೆಂಡೆ ಗಿಡ ಆಧಾರದ ಗೂಟವೂ ಆಗುವುದಂತೆ.

ಈ ಬೆಂಡೆಯ ಸಾಕಷ್ಟು ಕಾಯಿಗಳನ್ನು ಒಣಗಿಸಿಟ್ಟು ಮನೆಗೆ ಬಂದ ಅತಿಥಿಗಳಿಗೆ ಬೆಂಡೆಯ ರುಚಿಕರ ಪಲ್ಯದ ಊಟದ ಜೊತೆಗೆ ಹೋಗುವಾಗ ಒಂದು ಕಾಯಿಯನ್ನೂ ಕೊಟ್ಟು ಅದರ ಕೃಷಿ ಮಾಡಲು ಪ್ರೇರೇಪಿಸುತ್ತಾರೆ ಈ ರೈತರು.

Advertisement

•ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next