ಕೋಲ್ಕತಾ: ತೃಣಮೂಲ ಕಾಂಗ್ರೆಸ್ ನಾಯಕಿ, ಸಿಎಂ ಮಮತಾ ಬ್ಯಾನರ್ಜಿ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಪ್ರಕರಣ ಬಿಗ್ ಟ್ವಿಸ್ಟ್ ಪಡೆದಿದೆ. “ಮಮತಾ ಮೇಲೆ ಯಾರೂ ದಾಳಿ ಮಾಡಿಲ್ಲ. ಕಾರ್‌ನ ಬಾಗಿಲು ಬಡಿದು, ಅವರ ಕಾಲಿಗೆ ಪೆಟ್ಟಾಗಿದೆ’ ಎಂದು ಸ್ವತಃ ಪ. ಬಂಗಾಲ ಮುಖ್ಯ ಕಾರ್ಯದರ್ಶಿ, ಚುನಾವಣ ಆಯೋಗಕ್ಕೆ ವರದಿ ಸಲ್ಲಿಸಿದ್ದಾರೆ.
ಮುಖ್ಯ ಕಾರ್ಯದರ್ಶಿ ಅಲಾಪನ್ ಬಂದ್ಯೋಪಧ್ಯಾಯ ಶುಕ್ರವಾರ ರಾತ್ರಿ ಈ ವರದಿ ಸಲ್ಲಿಸಿದ್ದಾರೆ. “ಕಬ್ಬಿಣದ ಕಂಬವೊಂದಕ್ಕೂ, ಮಮತಾ ಅವರ ಕಾರಿಗೂ ಹೆಚ್ಚು ಅಂತರವೇನೂ ಇರಲಿಲ್ಲ’ ಎಂದಿರುವ ವರದಿ, ಕಬ್ಬಿಣ ಕಂಬಕ್ಕೇ ಕಾರಿನ ಡೋರ್ ಬಡಿದು ಈ ಅನಾಹುತ ಸಂಭವಿಸಿದೆ ಎನ್ನುವುದರ ಬಗ್ಗೆಯೂ ಸ್ಪಷ್ಟವಾಗಿ ಹೇಳಿಲ್ಲ.
ಸ್ಪಷ್ಟನೆ ಕೇಳಿದ ಆಯೋಗ: ಮುಖ್ಯ ಕಾರ್ಯದರ್ಶಿಗಳ ವರದಿಯಲ್ಲಿ ಸಾಕಷ್ಟು ಗೊಂದಲವಿದ್ದ ಕಾರಣ ಚುನಾವಣ ಆಯೋಗ ಸ್ಪಷ್ಟನೆ ಕೇಳಿದ್ದು, “ನಂದಿ ಗ್ರಾಮದಲ್ಲಿ ಮಮತಾ ಅವರ ಮೇಲೆ ದಾಳಿ ನಡೆದಿತ್ತೇ? ಅಥವಾ ಆಕಸ್ಮಿಕವಾಗಿ ಅವರಿಗೆ ಪೆಟ್ಟಾಗಿತ್ತೇ?’ ಎಂದು ಪ್ರಶ್ನಿಸಿದೆ. ಅಲ್ಲದೆ, ವರದಿಯಲ್ಲಿ ಮಮತಾ ಅವರು ಕಾರು, ಕಂಬಕ್ಕೆ ಗುದ್ದಿದೆ ಎನ್ನುವುದರ ಬಗ್ಗೆಯೂ ಸ್ಪಷ್ಟತೆ ಇಲ್ಲ’ ಎಂದೂ ಹೇಳಿದೆ.
“ಸರಕಾರದ ವರದಿಯಲ್ಲಿ ಪರಿಪೂರ್ಣತೆ ಇಲ್ಲ. ದುರ್ಘಟನೆ ಆಗಿದ್ದು ಹೇಗೆ? ಇದರ ಹಿಂದೆ ಯಾರಿದ್ದರು? ಎಂಬ ಅಂಶದ ಬಗ್ಗೆ ಎಲ್ಲೂ ಸ್ಪಷ್ಟತೆ ಇಲ್ಲ. ಪ್ರಕರಣ ಬಗ್ಗೆ ಮತ್ತಷ್ಟು ನಿಖರ ಮಾಹಿತಿ ಕಲೆ ಹಾಕಿ, ವರದಿ ಸಲ್ಲಿಸುವಂತೆ ಸೂಚಿಸಿದ್ದೇವೆ’ ಎಂದು ಆಯೋಗದ ಮೂಲಗಳು ಮಾಧ್ಯಮಕ್ಕೆ ತಿಳಿಸಿವೆ.
ಸುವೇಂದು ತಂದೆ ಬಿಜೆಪಿ ಸೇರುತ್ತಾರಾ?: ಪುತ್ರ ಸುವೇಂದು ಅಧಿಕಾರಿ ಬಿಜೆಪಿ ಸೇರಿದರೂ, ಟಿಎಂಸಿಯಲ್ಲೇ ಇರುವ ಅವರ ತಂದೆ ಮತ್ತು ಸಂಸದ ಸಿಸಿರ್ ಅಧಿಕಾರಿಯನ್ನು ಸೆಳೆಯಲು ಕಮಲ ಪಕ್ಷ ಯತ್ನಿಸುತ್ತಿದೆಯೇ? ಶನಿವಾರ ಮಿಡ್ನಾಪೋರ್‌ನ ಕಾಂತಿಯಲ್ಲಿರುವ ಸಿಸಿರ್ ನಿವಾಸಕ್ಕೆ ಬಿಜೆಪಿಯ ಹೂಗ್ಲಿ ಸಂಸದ ಲೊಕೆಟ್ ಚಟರ್ಜಿ ಭೇಟಿ ನೀಡಿ 1 ಗಂಟೆ ಕಾಲ ರಹಸ್ಯ ಮಾತುಕತೆ ನಡೆಸಿದ್ದಾರೆ. “ಇದೊಂದು ಔಪಚಾರಿಕ ಭೇಟಿ. ನಾವೇನೂ ರಾಜಕೀಯ ಮಾತಾಡಿಲ್ಲ. ಅವರ ಪತ್ನಿ ಮಾಡಿದ ಬೆಂಗಾಲಿ ಫಿಷ್ ಕರಿ ಸೇವಿಸಿ ಬಂದಿದ್ದೇನಷ್ಟೇ’ ಎಂದು ಲೊಕೆಟ್ ಹೇಳಿದ್ದರೂ, ಟಿಎಂಸಿಯಲ್ಲಿ ಮಾತ್ರ ಗುಸುಗುಸು ಜೋರಾಗಿದೆ.
ಕಂದಹಾರ್‌ಗೆ ಒತ್ತೆಯಾಳು ಆಗಲು ಹೊರಟಿದ್ದ ದೀದಿ!
ಶನಿವಾರ ಟಿಎಂಸಿ ಸೇರಿದ ಬೆನ್ನಲ್ಲೇ ಯಶ್‌ವಂತ್ ಸಿನ್ಹಾ, ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಅವರ ಗುಣಗಾನ ಆರಂಭಿಸುವ ಮೂಲಕ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. “ಮಮತಾ ಬ್ಯಾನರ್ಜಿ ಮೇಲಾದ ಆಕ್ರಮಣ ಖಂಡಿಸಿಯೇ ನಾನು ಬಿಜೆಪಿ ತೊರೆದು, ಟಿಎಂಸಿಯ ಬೆಂಬಲಕ್ಕೆ ಬಂದಿದ್ದೇನೆ’ ಎಂದಿದ್ದಾರೆ.
ಅಲ್ಲದೆ, ಸಿನ್ಹಾ ಈ ವೇಳೆ 1999ರ “ಕಂದಹಾರ್ ಹೈಜಾಕ್ ಪ್ರಕರಣ’ವನ್ನೂ ಮುನ್ನೆಲೆಗೆ ತಂದಿದ್ದಾರೆ. “ಅಂದಿನ ಕ್ಯಾಬಿನೆಟ್ ಸಭೆಯಲ್ಲಿ ಮಮತಾ ತಾವೇ ಒತ್ತೆಯಾಳಾಗಿ ಕಂದಹಾರ್ ತಲುಪಿ, 171 ಪ್ರಯಾಣಿಕರನ್ನು ಬಿಡಿಸಿಕೊಳ್ಳುವುದಾಗಿ ಉತ್ಸುಕತೆ ತೋರಿದ್ದರು. ಇದೆಲ್ಲ ಅವರು ಮಾಡಿದ್ದು ಕೇವಲ ದೇಶಕ್ಕಾಗಿ’ ಎಂದಿದ್ದಾರೆ. ಅಂದು ಐವರು ಉಗ್ರರು ಆಫ್ಘಾನಿಸ್ಥಾನದ ಕಂದಹಾರ್‌ನಲ್ಲಿ ಇಂಡಿಯನ್ ಏರ್‌ಲೈನ್ಸ್ ವಿಮಾನ ಹೈಜಾಕ್ ಮಾಡಿ, ಪ್ರಯಾಣಿಕರನ್ನು ಒತ್ತೆಯಾಳಾಗಿರಿಸಿಕೊಂಡಿದ್ದರು. ವಾಜಪೇಯಿ ಕಾಲದ ಬಿಜೆಪಿಯನ್ನು ಮೋದಿ ಯುಗದಲ್ಲಿ ಕಲ್ಪಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ ಎಂದಿರುವ ಸಿನ್ಹಾ, ಈ ಕಾರಣಕ್ಕಾಗಿ ಎನ್‌ಡಿಎ ಮೈತ್ರಿಯಿಂದ ಅಕಾಲಿ ದಳ ಮುಂತಾದ ಪಕ್ಷಗಳು ಹೊರಹೋಗುತ್ತಿವೆ ಎಂದು ಟೀಕಿಸಿದ್ದಾರೆ.