Advertisement

ಮೈಸೂರು : ಯಾವಾಗ ಪರಿಸ್ಥಿತಿ ಶಾಂತವಾಗಿರುತ್ತದೆಯೋ, ಮುಂದೆ ಮಹಾ ಸ್ಫೋಟ ಖಚಿತ ಎಂದು ಮುಂದಿನ ರಾಜಕೀಯ ಪರಿಸ್ಥಿತಿಯ ಬದಲಾವಣೆ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸುಳಿವು ನೀಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಈಗ ಶಾಂತವಾಗಿರುವಂತೆ ಕಾಣುತ್ತಿದ್ದೇನೆ ಅಷ್ಟೇ‌. ಅದು ಭವಿಷ್ಯದ ಸ್ಪೋಟಕದ ಸೂಚನೆ. ಪಕ್ಷದ ಒಳಿತಿಗಾಗಿ ಆ ಸ್ಪೋಟ ನಡೆಯುತ್ತದೆ‌ ಎಂದರು.

ನಾನು ಯಾವುದೇ ಸ್ಥಾನದ ಆಕಾಂಕ್ಷಿಯಲ್ಲ.ಒಂದು ವೇಳೆ ಪಕ್ಷ ಸಿಎಂ ಮಾಡಿದರೆ ಸಮರ್ಥವಾಗಿ ಆಡಳಿತ ನಡೆಸುತ್ತೇನೆ.ಸದ್ಯ ಎಲ್ಲಾ ಸಿಎಂಗಳು ತಮ್ಮ ಕ್ಷೇತ್ರದ ಸಿಎಂಗಳಾಗಿದ್ದಾರೆ. ಶಿವಮೊಗ್ಗದವರಾದರೆ ಶಿವಮೊಗ್ಗಕ್ಕೆ ಸಿಎಂ.ಮೈಸೂರಿನವರಾದರೆ ಮೈಸೂರಿಗೆ ಸಿಎಂ.ಹಾವೇರಿಯವರಾದರೆ ಹಾವೇರಿಗೆ ಸಿಎಂ.ನಾನು ಇಡೀ ರಾಜ್ಯದ ಸಿಎಂ ಆಗಿ ಸಮಗ್ರ ಅಭಿವೃದ್ಧಿ ಮಾಡುತ್ತೇನೆ. ಮೇಕೆದಾಟಿನಿಂದ ಹಿಡಿದು ಕೃಷ್ಣಾ ಮೇಲ್ದಂಡೆವರೆಗೂ ಅಭಿವೃದ್ಧಿ ಮಾಡುತ್ತೇನೆ.ಚಾಮರಾಜನಗರದಿಂದ ಬೀದರ್ ವರೆಗೂ ಸಿಎಂ ಆಗುತ್ತೇನೆ ಎಂದು ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ ಸೇರಿದಂತೆ ಹಾಲಿ, ಮಾಜಿ ಸಿಎಂ ಎಲ್ಲರಿಗೂ ಟಾಂಗ್ ನೀಡಿದರು.

ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಬರುವ ಸೋಮವಾರ ಅಥವಾ ಮಂಗಳವಾರ ಇದಕ್ಕೊಂದು ಸ್ಪಷ್ಟತೆ ಸಿಗಲಿದೆ. ನಾನು ಮಂತ್ರಿಯಾಗುವ ರೇಸ್‌ನಲ್ಲಿ ಇಲ್ಲ.ಸದ್ಯ ಪ್ರಾಂತ್ಯವಾರು ಆದ್ಯತೆ ನೀಡಿದರೆ ಒಳ್ಳೆಯದು. ಮೈಸೂರು, ಕೊಡಗು, ವಿಜಯಪುರ ಸೇರಿದಂತೆ ವಂಚಿತ ಜಿಲ್ಲೆಗಳಿಗೆ ಅವಕಾಶ ಕೊಡಿ. ಮಾಡುವುದಾದರೆ ಈಗ ಮಂತ್ರಿ ಮಾಡಿ, 1 ವರ್ಷವಾದರೂ ಕೆಲಸ ಮಾಡಬಹುದು. 6 ತಿಂಗಳಿಗೆ ಮಂತ್ರಿ ಮಾಡುವುದಾದರೆ ಮಾಡುವುದೇ ಬೇಡ. ಈಗ ಇರುವವರೇ ಖುಷಿಯಾಗಿ ಮಂತ್ರಿಗಳಾಗಿರಲಿ. ನಾವು ಶಾಸಕರಾಗಿಯೇ ಖುಷಿಯಾಗಿ ಇರುತ್ತೇವೆ.ಯಾರಿಗೆ ಸಚಿವ ಸ್ಥಾನ ಸಿಗದಿದ್ದರೂ ಅಸಮಾಧಾನ ಬೇಡ.ನನ್ನನ್ನು ಸೇರಿದಂತೆ ಯಾರು ಸಹ ಅಸಮಾಧಾನ ಮಾಡಿಕೊಳ್ಳಬಾರದು ಎಂದರು.

ಹಿಜಾಬ್ ಹಾಕಿಕೊಂಡು ಪಾಕಿಸ್ಥಾನಕ್ಕೆ ಹೋಗಿ

Advertisement

ಶಾಲೆಗಳಲ್ಲಿ ಹಿಜಾಬ್‌ಗೆ ಬೆಂಬಲಿಸುವವರು ದೇಶದ್ರೋಹಿಗಳು.ಶಾಲೆಗೆ ಹಿಜಾಬ್ ಹಾಕಿಕೊಂಡು ಹೋಗುವುದಾದರೆ ಪಾಕಿಸ್ಥಾನಕ್ಕೆ ಹೋಗಿ.ಈ ನೆಲದಲ್ಲಿ ಅದಕ್ಕೆ ಅವಕಾಶ ಇಲ್ಲ. ಇವತ್ತು ಹಿಜಾಬ್ ಕೇಳಿದವರು ನಾಳೆ ಶಾಲೆಯಲ್ಲಿ ಮಸೀದಿ ಬೇಕು ಅಂತಾರೆ. ಇದು ಹಿಂದೂಗಳಿಗಾಗಿ ಮಾಡಿರುವ ರಾಷ್ಟ್ರ. ಇಲ್ಲಿ ಗಣಪತಿ ಪೂಜೆಯು ನಡೆಯುತ್ತದೆ ಕುಂಕುಮಕ್ಕೂ ಅವಕಾಶ ಇದೆ. ಅದನ್ನು ಯಾರಿಗೂ ಪ್ರಶ್ನಿಸುವ ಹಕ್ಕಿಲ್ಲ.ಅದನ್ನು ಪ್ರಶ್ನಿಸಬೇಕಾದರೆ ಪಾಕಿಸ್ಥಾನಕ್ಕೆ ಹೋಗಿ. ಹಿಜಾಬ್ ಹೋರಾಟದ ಹಿಂದೆ ಉಗ್ರ ಸಂಘಟನೆಗಳ ಕೈವಾಡ ಇದೆ. ದೇಶದ ರಾಜ್ಯದ ಶಾಂತಿ ಕದಡಲು ಹುನ್ನಾರ ನಡೆದಿದೆ. ಈ ತಾಲಿಬಾನ್ ಸಂಸ್ಕೃತಿಗೆ ಅವಕಾಶ ಕೊಡುವುದಿಲ್ಲ.ಕರ್ನಾಟಕವನ್ನು ಮತ್ತೊಂದು ತಾಲಿಬಾನ್ ಮಾಡಲು ಬಿಡುವುದಿಲ್ಲ ಎಂದು ಯತ್ನಾಳ್ ಕಿಡಿ ಕಾರಿದರು.

ಸಿದ್ದರಾಮಯ್ಯ ಮುಸ್ಲಿಮರಾಗಿ ಮತಾಂತರಗೊಂಡಿದ್ದಾರಾ ?

ಹಿಜಾಬ್‌ಗೆ ಜೈ ಎಂದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿ, ಸಿದ್ದರಾಮಯ್ಯ ಹಿಂದೂನಾ ಅಥವಾ ಮುಸ್ಲಿಮರಾಗಿ ಮತಾಂತರಗೊಂಡಿದ್ದಾರಾ ಎಂದು ಪ್ರಶ್ನಿಸಿದರು. ಯಾವಾಗಲೂ ಮುಸ್ಲಿಮರನ್ನೇ ತಲೆ ಮೇಲೆ ಹೊತ್ತು ಮೆರೆಯುತ್ತಾರೆ.ಪ್ರತಿ ಬಾರಿಯೂ ಅವರನ್ನು ಓಲೈಸುವ ಗುಣ ಸಿದ್ದರಾಮಯ್ಯ ಅವರದ್ದು. ಇದು ಜಾತ್ಯ ತೀತಾನಾ ? ಜಾತ್ಯತೀತ ಬಗ್ಗೆ ಸಿದ್ದರಾಮಯ್ಯಗೆ ಪಾಠ ಮಾಡಿದ ಯತ್ನಾಳ್.
ಜ್ಯಾತ್ಯಾತೀತತೆ ಅಂದರೆ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವುದು.ಆ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next