ಡಾ. ರಾಜಕುಮಾರ್, ಪುಟ್ಟಣ್ಣ ಕಣಗಾಲ್, ಕೆ. ಬಾಲಚಂದರ್ ಹೀಗೆ ಎಲ್ಲರಿಗೂ ಅವಮಾನ ಮಾಡುತ್ತಿದ್ದೀನಿ ನಾನು. ಮರ್ಯಾದೆ ತೆಯುತ್ತಿದ್ದೀನಿ. ಈ ಹುಡುಗ ಬೆಳೆಯುತ್ತಾನೆ, ಚಿತ್ರರಂಗಕ್ಕೆ ಏನೋ ಮಾಡುತ್ತಾನೆ ಅಂತ ಅವರೆಲ್ಲಾ ನನ್ನ ಮೇಲೆ ನಂಬಿಕೆ ಇಟ್ಟು ಬೆಳೆಸಿದ್ದರು. ನಾನು ನೋಡಿದರೆ, ಏನೂ ಮಾಡದೆ ಅವರಿಗೆಲ್ಲಾ ಮೋಸ ಮಾಡುತ್ತಿದ್ದೀನಿ. ನನ್ನ ಕೈಯಲ್ಲಿ ಏನೂ ಇಲ್ಲ. ಈಗಲೂ ಜನ ಸಿಕ್ಕಾಗೆಲ್ಲಾ, ನನ್ನ ಅಭಿನಯದ ಬಗ್ಗೆ ಮೆಚ್ಚಿ ಮಾತಾಡುತ್ತಾರೆ. ಎಲ್ಲೇ ಸಿಕ್ಕರೂ ನಮಸ್ಕಾರ ಮಾಡುತ್ತಾರೆ. ಇನ್ನು ನಿರ್ಮಾಪಕರು ಮತ್ತು ನಿರ್ದೇಶಕರು ಕೈ ತುಂಬಾ ದುಡ್ಡು ಕೊಟ್ಟು, ಹೊಟ್ಟೆ ತುಂಬಾ ಊಟ ಹಾಕಿ ಕಳಿಸಿಕೊಡ್ತಾರೆ. ಆದರೆ, ಪಾತ್ರ …’
Advertisement
ಹಾಗಾದರೆ, ರಾಮಕೃಷ್ಣರಿಗೆ ಒಳ್ಳೆಯ ಪಾತ್ರ ಸಿಗುತ್ತಿಲ್ಲ ಎಂಬ ಬೇಸರವಿದೆಯಾ? ಹೌದು ಎಂದು ಅವರು ನೇರವಾಗಿ ಹೇಳುವುದಿಲ್ಲವಾದರೂ, ಆ ನೋವನ್ನು ಅವರ ಮಾತುಗಳಲ್ಲೇ ಅರ್ಥ ಮಾಡಿಕೊಳ್ಳಬಹುದು. “ಕೆಲವು ಚಿತ್ರಗಳಲ್ಲಿನ ನನ್ನ ಅಭಿನಯ ನೋಡಿ, ಯಾಕೆ ಇಂಥ ಪಾತ್ರ ಮಾಡುತ್ತೀರಾ ಎಂದು ಸಾರ್ವಜನಿಕರು ಕೇಳ್ತಾರೆ. ಅವರಿಗೆ ನಾನೇನು ಉತ್ತರ ಕೊಡಲಿ. ಉತ್ತರ ನನಗೂ ಗೊತ್ತಿಲ್ಲ. ಮಾಧ್ಯಮದವರೆಲ್ಲಾ ಆಗಲೇ ನನಗೆ ಭವಿಷ್ಯ ಇಲ್ಲ, ನಾನು ಯೂಸ್‌ಲೆಸ್ ಅಂದುಬಿಟ್ಟಿದ್ದರೆ, ನಾನು ಎಲ್ಲೋ ಕೆಲಸ ಮಾಡಿಕೊಂಡು ಇದ್ದುಬಿಡುತ್ತಿದ್ದೆ. ಆದರೆ, ಮಾಧ್ಯಮದವರು ಎಲ್ಲಿಗೋ ತೆಗೆದುಕೊಂಡು ಹೋದ್ರಿ. ಈಗ ಏನಾಯ್ತು? ಇಷ್ಟಕ್ಕೂ ಯಾರನ್ನ ನಾನು ಧೂಷಣೆ ಮಾಡಬೇಕು. ಇದ್ಯಾವ ಪ್ರಶ್ನೆಗೂ ನನ್ನಲ್ಲಿ ಉತ್ತರ ಇಲ್ಲ. ಒಟ್ಟಾರೆ, ನಾನು ಮೋಸ ಮಾಡ್ತಿದ್ದೀನಿ ಅಂತ ಅನಿಸುತ್ತೆ. ಹಾಗೆ ನೋಡಿದರೆ, ನಾನು ಆಶಾವಾದ ತೋರಿಸಬೇಕು. ಭಗವಂತ ನನ್ನನ್ನ ಚೆನ್ನಾಗಿ ಇಟ್ಟಿದ್ದಾನೆ.
Related Articles
ಇದುವರೆಗೂ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ರಾಮಕೃಷ್ಣ, ಒಂದು ಕಾಲದಲ್ಲಿ ಅದ್ಭುತ ದಿನಗಳನ್ನು ಕಂಡಿದ್ದರಂತೆ. “ನಾನು ಮೊದಲು ಬಣ್ಣ ಹಚ್ಚಿದ್ದು 76ರಲ್ಲಿ. “ಬಬ್ರು ವಾಹನ’ದಲ್ಲಿ ನಟಿಸಿದ್ದು 1977ರಲ್ಲಿ. ಆ ಚಿತ್ರದಲ್ಲಿ ನನ್ನದು ಕೃಷ್ಣನ ಪಾತ್ರ. ಡಾ. ರಾಜಕುಮಾರ್, ಬಿ. ಸರೋಜಾದೇವಿ, ಕಾಂಚನಾರಂಥ ಹಿರಿಯ ಕಲಾವಿದರೆಲ್ಲಾ ಇದ್ದಾರೆ. ನನಗೇನೂ ಗೊತ್ತಿಲ್ಲ. ಮೊದಲ ದಿನ ಮೇಕಪ್ ಹಾಕಿಸಿ, ಅಂತಹ ದಿಗ್ಗಜರೆದುರು ಕರೆದುಕೊಂಡು ಬಂದು ಬಿಟ್ಟರು ಹುಣಸೂರು ಕೃಷ್ಣಮೂರ್ತಿಗಳು. “ಎಲ್ಲಿ, ಕಲ್ಯಾಣಮಸ್ತು ಅಂತ ಹೇಳು’ ಎಂದರು. ಅಷ್ಟೇನಾ ಅಂತ ಕೇಳಿದೆ. “ಇವತ್ತಿಗೆ ಇಷ್ಟೇ. ಕಲ್ಯಾಣಮಸ್ತು, ಕಲ್ಯಾಣಮಸ್ತು, ಕಲ್ಯಾಣಮಸ್ತು ಅಂತ ಮೂರು ಸಾರಿ ಹೇಳಬೇಕು. ಇವತ್ತೆಲ್ಲಾ ಇಷ್ಟೇ. ಹೇಗೆ ಹೇಳಬೇಕು ಅಂತ ರಾಜಕುಮಾರ್ ತೋರಿಸ್ತಾರೆ’ ಅಂತ ಅವರ ಬಳಿ ಕಳಿಸಿದರು. ಅಂತಹ ದಿಗ್ಗಜ ಕಲಾವಿದರನ್ನ ಫೇಸ್ ಮಾಡೋದಕ್ಕೆ ನಿಜಕ್ಕೂ ಭಯ ಆಗೋದು’ ಎಂದು ನೆನಪಿಸಿಕೊಳ್ಳುತ್ತಾರೆ ರಾಮಕೃಷ್ಣ.
Advertisement
ಯಾವ ಕ್ಷಣದಲ್ಲಿ ಕೃಷ್ಣನ ಪಾತ್ರದಲ್ಲಿ ಕಾಣಿಸಿಕೊಂಡೆನೋ, ಜನ ನನ್ನಲ್ಲಿ ಕೃಷ್ಣನ ಅಂಶ ಕಂಡರು ಎಂದು ನೆನಪಿಸಿಕೊಳ್ಳುವ ರಾಮಕೃಷ್ಣ ಅವರು, “ಇಂಥ ಭಾಗ್ಯ ಯಾವ ಕಲಾವಿದರಿಗೆ ಸಿಗತ್ತೋ ಗೊತ್ತಿಲ್ಲ. “ಬಬ್ರುವಾಹನ’ ಚಿತ್ರದ ನಂತರ ಅದೆಷ್ಟೋ ಜನ, ನನ್ನನ್ನು ಮನೆಗೆ ಕರೆದು ಹಾಲು-ಬೆಣ್ಣೆ ಕೊಡೋರು. ನನ್ನ ಜೀವನದಲ್ಲಿ ಎರಡು ಪ್ರಮುಖ ಹಂತಗಳೆಂದರೆ ಒಂದು “ಬಬ್ರುವಾಹನ’, ಇನ್ನೊಂದು “ರಂಗನಾಯಕಿ”. “ರಂಗನಾಯಕಿ’ ನಂತರ ಅದೆಷ್ಟೋ ಹೆಂಗಸರು, ನನ್ನ ಮಗ ಅಂತ ಊಟ ಹಾಕೋರು. ಎಷ್ಟೋ ಮನೆಗಳಿಗೆ ಹೋಗಿ ಊಟ ಮಾಡಿಕೊಂಡು ಬಂದಿದ್ದೀನಿ. ಇನ್ನು ರಾಶಿರಾಶಿ ಪತ್ರಗಳು ಬರೋದು. ಬೆಳ್ಳಿ ಕಡಗ, ರಿಂಗು, ಟೋಪಿ, ಗಾಗಲ್ಸ್ ಎಲ್ಲಾ ಉಡುಗೊರೆಯಾಗಿ ಕಳಿ ಸೋರು. ಈ ತರಹದ ಭಾಗ್ಯ ಯಾರಿಗೆ ಸಿಗುತ್ತದೆ ಹೇಳಿ’ ಎಂದು ಪ್ರಶ್ನಿಸುತ್ತಾರೆ ರಾಮಕೃಷ್ಣ.
ಚೇತನ್