ಹೊಸದಿಲ್ಲಿ: “ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ನಿವಾಸದಲ್ಲಿ ಧರಣಿ ನಡೆಸಲು ನಿಮಗೆ ಅನುಮತಿ ಕೊಟ್ಟವರು ಯಾರು?’ ಹೀಗೆಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ಗೆ ಮಾತಿನ ಛಡಿ ಕೊಟ್ಟದ್ದು ದಿಲ್ಲಿ ಹೈಕೋರ್ಟ್.
“ನೀವು ಲೆಫ್ಟಿನೆಂಟ್ ಗವರ್ನರ್ ನಿವಾಸದ ಒಳಗೆ ಕುಳಿತುಕೊಂಡಿದ್ದೀರಿ. ಒಂದು ವೇಳೆ ನೀವು ನಡೆಸುತ್ತಿ ರುವುದು ಧರಣಿಯಾಗಿದ್ದರೆ ಅದು ಕಚೇರಿಯಿಂದ ಹೊರಗೆ ನಡೆಯಬೇಕು. ಮತ್ತೂಬ್ಬರ ನಿವಾಸ ಅಥವಾ ಕಚೇರಿಯ ಒಳಭಾಗದಲ್ಲಿ ಧರಣಿ ನಡೆಸುವ ಹಾಗಿಲ್ಲ’ ಎಂದಿದೆ. ಈ ನಡುವೆ ಧರಣಿ ನಡೆಸುತ್ತಿದ್ದ ದಿಲ್ಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೊÕàಡಿಯಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೈಕೋರ್ಟ್ ತರಾಟೆ: ಐಎಎಸ್ ಅಧಿಕಾರಿಗಳ ಮುಷ್ಕರ ನಿಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಅವರ ನಿವಾಸಕ್ಕೆ ಪಾದಯಾತ್ರೆ ನಡೆಸಲು ಯತ್ನಿಸಿ ವಿಫಲರಾದ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ರನ್ನು ಸೋಮವಾರ ತರಾಟೆಗೆ ತೆಗೆದುಕೊಂಡ ಹೈಕೋರ್ಟ್, ಎಲ್‌ಜಿ ನಿವಾಸದಲ್ಲಿ ಧರಣಿ ನಡೆಸುವುದು ಸರಿಯಲ್ಲ ಎಂದಿದೆ. ಅಲ್ಲಿ ಅದನ್ನು ನಡೆಸಲು ಅನುಮತಿ ಕೊಟ್ಟವರು ಯಾರು ಎಂದು ನ್ಯಾ. ಎ.ಕೆ.ಚಾವ್ಲಾ ಮತ್ತು ನ್ಯಾ. ನವೀನ್ ಚಾವ್ಲಾ ಅವರನ್ನೊಳಗೊಂಡ ನ್ಯಾಯಪೀಠ ಮುಖ್ಯಮಂತ್ರಿ ಕೇಜ್ರಿವಾಲ್ ಮತ್ತು ಇತರರನ್ನು ಪ್ರಶ್ನೆ ಮಾಡಿದೆ. ಕೇಜ್ರಿವಾಲ್‌ರ ಧರಣಿ ಮತ್ತು ಐಎಎಸ್ ಅಧಿಕಾರಿಗಳ ಮುಷ್ಕರ ಪ್ರಶ್ನಿಸಿ ಸಲ್ಲಿಸಲಾಗಿದ್ದ 2 ಪ್ರತ್ಯೇಕ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಪೀಠ ಈ ಆಕ್ಷೇಪ ಮಾಡಿದೆ.
ನ್ಯಾಯಪೀಠದ ಪ್ರಶ್ನೆಗೆ ಉತ್ತರ ನೀಡಿದ ದಿಲ್ಲಿ ಸರಕಾರದ ಪರ ವಕೀಲ ಸುಧೀರ್ ನಂದ್ರಾಜೋಗ್, ಸಿಎಂ ಕೇಜ್ರಿವಾಲ್ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ವೈಯಕ್ತಿಕ ನಿರ್ಧಾರದಿಂದಲೇ ಧರಣಿಗೆ ಮುಂದಾಗಿದ್ದರು. ಸಂವಿಧಾನದ ಅನ್ವಯ ಅವರಿಗೆ ಆ ರೀತಿ ನಿರ್ಧಾರ ಕೈಗೊಳ್ಳಲು ಅವಕಾಶ ಇದೆ ಎಂದರು. ಮುಷ್ಕರ ನಡೆಸುತ್ತಿರುವ ಐಎಎಸ್ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗಲು ನ್ಯಾಯಪೀಠವೇ ಸೂಚನೆ ನೀಡಬೇಕು. ಅಧಿಕಾರಿಗಳೇ ಭಾನುವಾರ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ದೈನಂದಿನ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ ಎಂದು ಒಪ್ಪಿಕೊಂಡಿದ್ದಾರೆ ಎಂದರು.
ಇದೇ ವೇಳೆ ಕೇಂದ್ರ ಸರಕಾರ ಕೂಡ ವಾದಿಸಿ, ದಿಲ್ಲಿ ಸರಕಾರದ ಮಟ್ಟದಲ್ಲಿ ಐಎಎಸ್ ಅಧಿಕಾರಿಗಳು ಮುಷ್ಕರ ನಡೆಸುತ್ತಿಲ್ಲ. ಲೆಫ್ಟಿನೆಂಟ್ ಗವರ್ನರ್ ನಿವಾಸದಿಂದ ಕೇಜ್ರಿವಾಲ್ ಮತ್ತು ಅವರ ಸಂಪುಟ ಸದಸ್ಯರು ತೆರಳುವಂತೆ ಸೂಚಿಸಬೇಕು ಎಂದು ಒತ್ತಾಯಿಸಿತು. ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ ನ್ಯಾಯಪೀಠ ಪ್ರಕರಣದ ವಿಚಾರಣೆಯನ್ನು 22ಕ್ಕೆ ಮುಂದೂಡಿದೆ.
ಸಿಸೊಡಿಯಾ ಆಸ್ಪತ್ರೆಗೆ: ಭಾನುವಾರ ರಾತ್ರಿ ಸಚಿವ ಸತ್ಯೇಂದ್ರ ಜೈನ್ ಆಸ್ಪತ್ರೆಗೆ ದಾಖಲಾಗಿರುವಂತೆಯೇ ಸೋಮವಾರ ಡಿಸಿಎಂ ಮನೀಷ್ ಸಿಸೊÕàಡಿಯಾರನ್ನು ಲೋಕನಾಯಕ ಜಯಪ್ರಕಾಶ್ ನಾರಾಯಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ.
ಮಾತುಕತೆಗೆ ಸಿದ್ಧ: ಐಎಎಸ್ ಅಧಿಕಾರಿಗಳಿಗೆ ರಕ್ಷಣೆ ನೀಡಲು ಸಿದ್ಧವೆಂದು ಸಿಎಂ ಕೇಜ್ರಿವಾಲ್ ಭರವಸೆ ನೀಡಿದ ಹಿನ್ನೆಲೆಯಲ್ಲಿ ಈ ಬಗ್ಗೆ ಮುಕ್ತ ಮಾತುಕತೆಗೆ ಸಿದ್ಧರಿರುವುದಾಗಿ ದಿಲ್ಲಿಯ ಐಎಎಸ್ ಅಧಿಕಾರಿಗಳು ತಿಳಿಸಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಉಪಸ್ಥಿತಿಯಲ್ಲಿಯೇ ಮಾತುಕತೆ ನಡೆಯಬೇಕೆಂದು ಸಿಸೊÕàಡಿಯಾ ಒತ್ತಾಯಿಸಿದ್ದಾರೆ.
ಲೆ| ಗವರ್ನರ್ ನಿವಾಸದಲ್ಲಿ ದಿಲ್ಲಿ ಸಿಎಂ ಧರಣಿ ನಡೆಸುತ್ತಿದ್ದಾರೆ. ಬಿಜೆಪಿ ಸಿಎಂ ನಿವಾಸದಲ್ಲಿ ಪ್ರತಿಭಟಿಸುತ್ತಿದೆ. ದಿಲ್ಲಿಯ ಅಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸುತ್ತಿದ್ದಾರೆ. ಈ ಅರಾಜಕತೆ ಬಗ್ಗೆ ಪ್ರಧಾನಿಯವರು ಕಣ್ಣೆತ್ತಿಯೂ ನೋಡುತ್ತಿಲ್ಲ.
– ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ
ದಿಲ್ಲಿ ಸಿಎಂ ಕೇಜ್ರಿವಾಲ್ ಪಕ್ಷದ ನಾಯಕ ಉದ್ಧವ್ ಠಾಕ್ರೆಯವರಿಗೆ ಫೋನ್ ಮಾಡಿದ್ದರು. ಈ ಸಂದರ್ಭ ದಲ್ಲಿ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ದಿಲ್ಲಿ ಸಿಎಂಗೆ ಠಾಕ್ರೆ ಬೆಂಬಲ ನೀಡಿದ್ದಾರೆ.
– ಹರ್ಪಲ್ ಪ್ರಧಾನ್, ಉದ್ಧವ್ ಠಾಕ್ರೆ, ಮಾಧ್ಯಮ ಸಲಹೆಗಾರ