ಭೋಪಾಲ/ಜೈಪುರ: ಸದ್ಯ ಬಿಜೆಪಿ ಸೇರಿರುವ ಜ್ಯೋತಿರಾಧಿತ್ಯ ಸಿಂಧಿಯಾಗೆ ಡಿಸಿಎಂ ಹುದ್ದೆಯ ಆಫರ್ ನೀಡಲಾಗಿತ್ತು ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಹೇಳಿದ್ದಾರೆ. ಆದರೆ ಅವರು ತಮ್ಮ ಬೆಂಬಲಿಗನೊಬ್ಬನನ್ನು ಆ ಹುದ್ದೆಗೆ ಏರಿಸಬೇಕೆಂದು ಹೇಳಿದ್ದ ಕಾರಣ ಸಿಎಂ ಕಮಲ್‌ನಾಥ್ ಅದನ್ನು ಒಪ್ಪಲಿಲ್ಲ ಎಂದಿದ್ದಾರೆ.
‘ಪಿಟಿಐ’ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಸಿಂಧಿಯಾ ಕಾಂಗ್ರೆಸ್ ತೊರೆದ ಬೆನ್ನಲ್ಲೇ ಶಾಸಕತ್ವ ತೊರೆದಿದ್ದ ಕಾಂಗ್ರೆಸ್‌ನ 22 ನಾಯಕರಲ್ಲಿ 13 ನಾಯಕರು ಪಕ್ಷ ತೊರೆಯಲು ಸಿದ್ಧರಿಲ್ಲ. ಜ್ಯೋತಿರಾಧಿತ್ಯರಿಗೆ ರಾಜ್ಯ ಸಭಾ ಟಿಕೆಟ್ ಕೊಡುವ ಉದ್ದೇಶದಿಂದ ಪಕ್ಷದ ಮೇಲೆ ಒತ್ತಡ ಹೇರಲು ಅವರು ರಾಜೀನಾಮೆ ಸಲ್ಲಿಸಿದ್ದರು ಎಂದು ಆರೋಪಿಸಿದರು.
ಬಿಕ್ಕಟ್ಟಿನ ಕೆಲ ಒಳ ವಿಚಾರಗಳನ್ನು ಹಂಚಿಕೊಂಡಿರುವ ಅವರು, ‘2018ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರೆ ಉಪಮುಖ್ಯಮಂತ್ರಿ ಹುದ್ದೆಯ ಆಫರ್ ಅನ್ನು ಕಾಂಗ್ರೆಸ್ ಹೈಕಮಾಂಡ್, ಸಿಂಧಿಯಾಗೆ ನೀಡಿತ್ತು. ಆದರೆ, ಡಿಸಿಎಂ ಹುದ್ದೆಯಲ್ಲಿ ತಾವು ಸೂಚಿಸುವ ವ್ಯಕ್ತಿಯನ್ನು ಕೂರಿಸಬೇಕೆಂದು ಸಿಂಧಿಯಾ ಪಟ್ಟು ಹಿಡಿದರು.
ನಾಯಕರೊಬ್ಬರ ‘ಚೇಲಾ’ ಆಗಿರುವ ವ್ಯಕ್ತಿಯೊಬ್ಬ ಆ ಸ್ಥಾನದಲ್ಲಿ ಕುಳಿತುಕೊಳ್ಳುವುದನ್ನು ಕಮಲ್‌ನಾಥ್ ಒಪ್ಪಲಿಲ್ಲ. ಆದರೂ, ಸಿಂಧಿಯಾರ ಆಪ್ತರಾಗಿದ್ದ ಆರು ಶಾಸಕರನ್ನು ಕಮಲ್‌ನಾಥ್
ಸಂಪುಟಕ್ಕೆ ಸೇರಿಸಿಕೊಂಡರು ಎಂದರು. ಸಿಂಧಿಯಾ ಪ್ರಸಂಗವೆಲ್ಲವೂ ಮೊದಲೇ ರೂಪಿಸಿದ್ದ ಯೋಜನೆಯ ಪ್ರಕಾರ ನಡೆದಿದೆ ಎಂದರು.
ಗ್ವಾಲಿಯರ್‌ನಲ್ಲಿ ಮಿಶ್ರ ಪ್ರತಿಕ್ರಿಯೆ: ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ಜ್ಯೋತಿರಾಧಿತ್ಯರ ನಡೆಯ ಬಗ್ಗೆ ಅವರ ಸ್ವಕ್ಷೇತ್ರವಾದ ಗ್ವಾಲಿಯರ್‌ನ ಜನತೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸಿಂಧಿಯಾ ಸ್ಪರ್ಧಿಸಿ ಸೋತಿದ್ದ ಗುಣಾ ಕ್ಷೇತ್ರದ ಜನತೆಯಲ್ಲಿ ಕೆಲವರು, ಕಾಂಗ್ರೆಸ್ ಪಕ್ಷದ ನಿರ್ಲಕ್ಷತೆಯಿಂದ ಬೇಸತ್ತು ಸಿಂಧಿಯಾ ಬಿಜೆಪಿ ಸೇರಿದ್ದಾರೆ. ಅದು ಸರಿಯಾದ ನಿರ್ಧಾರ ಎಂದಿದ್ದರೆ, ಇನ್ನೂ ಕೆಲವರು, ಕಾಂಗ್ರೆಸ್‌ನಲ್ಲೇ ನೆಲೆ ಕಾಣದ ಅವರು ಬಿಜೆಪಿಯಲ್ಲಿ ನೆಲೆ ಕಾಣುವರೇ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ಉಲ್ಬಣಿಸಿದ ಬಿಕ್ಕಟ್ಟು ಮಹಾರಾಷ್ಟ್ರದಲ್ಲಿ ಇಲ್ಲ. ಕಾಂಗ್ರೆಸ್, ಶಿವಸೇನೆ ಹಾಗೂ ಎನ್‌ಸಿಪಿಯ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಸಹಭಾಗಿತ್ವ ಹೊಂದಿರುವ ಪಕ್ಷಗಳ ನಡುವೆ ಬಾಂಧವ್ಯವೂ ಉತ್ತಮವಾಗಿದೆ.
— ಶರದ್ ಪವಾರ್, ಎನ್‌ಸಿಪಿ ನಾಯಕ