ಮುಜಫರನಗರ, ಉತ್ತರ ಪ್ರದೇಶ : ಈಗೆರಡು ದಿನಗಳ ಹಿಂದೆ ಭಾರತೀಯ ಸೇನಾ ಪಡೆ ಪಾಕ್ ಗಡಿಯೊಳಗೆ ನುಗ್ಗಿ ಎರಡನೇ ಸರ್ಜಿಕಲ್ ನಡೆಸಿದೆಯೇ ? ಇಂತಹ ಒಂದು ಊಹೆಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಮಾತುಗಳು ಪುಷ್ಟಿ ನೀಡಿವೆ.
ಭಾರತೀಯ ಸೇನಾ ಸಿಬಂದಿಗಳು ಈ ಹಿಂದೆ ನಡೆಸಿದ್ದ ಎಂಟೆದೆಯ ಮೊದಲ ಸರ್ಜಿಕಲ್ ಸ್ಟ್ರೈಕ್ ನ ಎರಡನೇ ವರ್ಷಾಚರಣೆ ಕಳೆದ ಸೆ.29ರಂದು ನಡೆದಿತ್ತು. ಆ ಸಂದರ್ಭದಲ್ಲಿ ಉತ್ತರ ಪ್ರದೇಶದ ಮುಜಫರನಗರಲ್ಲಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು, “ಕಳೆದ ಮೂರು ಅಥವಾ ಎರಡು ದಿನಗಳಲ್ಲಿ ಭಾರತ – ಪಾಕ್ ಗಡಿಯಲ್ಲಿ ಅದೇನೋ ಮಹತ್ವದ ಸಂಗತಿ ನಡೆದಿದೆ. ಕೆಲವರಿಗೆ ಮಾತ್ರವೇ ಅದು ಏನೆಂಬುದು ಗೊತ್ತಿದೆ. ಆ ಬಗ್ಗೆ ನಾನು ಈಗಲೇ ವಿವರವಾಗಿ ಏನನ್ನೂ ಹೇಳಬಯಸುವುದಿಲ್ಲ. ಆದರೂ ಬಹಳ ಮಹತ್ವದ ವಿದ್ಯಮಾನ ಕಳೆದ 2 – 3 ದಿನಗಳ ಅವಧಿಯಲ್ಲಿ ಭಾರತ – ಪಾಕ್ ಗಡಿಯಲ್ಲಿ ನಡೆದಿದೆ ಎಂದಷ್ಟೇ ಈಗ ಹೇಳಬಯಸುತ್ತೇನೆ’ ಎಂದು ಹೇಳಿದ್ದರು.
ಬಿಎಸ್‌ಎಫ್ ಹೆಡ್ ಕಾನ್‌ಸ್ಟೆಬಲ್ ನರೇಂದ್ರ ಸಿಂಗ್ ಎಂಬವರನ್ನು ಪಾಕ್ ಸೈನಿಕರು ಈಚೆಗೆ ಹತ್ಯೆಗೈದು ಅವರ ದೇಹವನ್ನು ಛಿದ್ರ ಛಿದ್ರಗೊಳಿಸಿದ ಅಮಾನುಷ ದುಷ್ಕೃತ್ಯವನ್ನು ಖಂಡಿಸಿ ಮಾತನಾಡುತ್ತಿದ್ದ ರಾಜನಾಥ್ ಸಿಂಗ್, ಸರ್ಜಿಕಲ್ ಸ್ಟ್ರೈಕ್ ನಂತಹ ದಾಳಿಗಳನ್ನು ನಾವು ಈಗಲೂ ಮಾಡುತ್ತಿದ್ದೇವೆ; ಮುಂದೆಯೂ ಮಾಡುವವರಿದ್ದೇವೆ’ ಎಂದು ಹೇಳಿದರು.
“ಪಾಕಿಸ್ಥಾನ ನಮ್ಮ ಮೇಲೆ ಗುಂಡು ಹಾರಿಸುವ ವರೆಗೂ ನಾವು ಗುಂಡು ಹಾರಿಸಬಾರದು ಎಂದು ನಾನು ನಮ್ಮ ಯೋಧರಿಗೆ ಹೇಳಿದ್ದೇನೆ; ಆದರೆ ಪಾಕ್ ಸೈನಿಕರು ಗುಂಡು ಹಾರಿಸಿದ ಬಳಿಕ ನಾವು ಹಾರಿಸುವ ಗುಂಡುಗಳನ್ನು ನಾವು ಲೆಕ್ಕ ಹಾರಬಾರದು ಎಂದು ಕೂಡ ಹೇಳಿದ್ದೇನೆ’ ಎಂದು ರಾಜನಾಥ್ ಸಿಂಗ್ ಹೇಳಿದರು.
ಈ ನಡುವೆ ಪಾಕ್ ವಿದೇಶಾಂಗ ಸಚಿವರು “ಭಾರತದೊಂದಿಗೆ ನಮಗೆ ಯುದ್ಧ ಬೇಕಾಗಿಲ್ಲ; ನಮಗೆ ಬೇಕಿರುವುದು ಶಾಂತಿ, ಸಾಮರಸ್ಯ. ಅದನ್ನು ನಾವು ಪರಸ್ಪರ ಮಾತುಕತೆಯಿಂದಲೇ ಸಾಧಿಸಬೇಕಿದೆ’ ಎಂದು ಹೇಳಿರುವುದು ಕೂಡ ಗಮನಾರ್ಹವಾಗಿದ್ದು ಇದು ಭಾರತೀಯ ಸೇನಾ ಪಡೆಗಳು ಕಳೆದ 2 -3 ದಿನಗಳಲ್ಲಿ ನಡೆಸಿರಬಹುದಾದ ಎರಡನೇ ಸರ್ಜಿಕಲ್ ಸ್ಟ್ರೈಕ್‌ನ ಫಲಶ್ರುತಿಯೇ ಇರಬಹುದೆಂದು ತರ್ಕಿಸಲಾಗುತ್ತಿದೆ.