ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆ ಮೇಲೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಕಣ್ಣಿಟ್ಟಿದ್ದು, ಈ ಹಿನ್ನೆಲೆಯಲ್ಲಿ ನಮ್ಮ ಯೋಧರ ಮೇಲೆ ಉಗ್ರರು ನಡೆಸಿದ ದಾಳಿಯನ್ನು ರಾಜಕೀಯ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳಲು ಹೊರಟಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಸೋಮವಾರ ಪುಲ್ವಾಮ ದಾಳಿ ಕುರಿತಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪುಲ್ವಾಮಾ ದಾಳಿಯ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡಲು ಮುಂದಾಗಬಾರದು. ಬಿಜೆಪಿಯವರು ಮಾತೆತ್ತಿದ್ದರೆ ನಾವೇ ದೇಶಪ್ರೇಮಿಗಳು ಅಂತ ಹೇಳುತ್ತಾರೆ. ಚಿಂತನೆಗಳು ಯಾವುದೇ ಇರಲಿ. ಮಾತುಕತೆ ಮೂಲಕ ಬಗೆಹರಿಸುವ ನಿರ್ಧಾರ ಕೈಗೊಳ್ಳಬೇಕು ಎಂದರು.
ದಾಳಿಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಹೇಗೆ ಬಳಸಿಕೊಳ್ಳಬೇಕೆಂಬುದು ಬಿಜೆಪಿಗೆ ಗೊತ್ತಿದೆ. ಸರ್ಜಿಕಲ್ ಸ್ಟ್ರೈಕ್ ನಡೆಸಿ ಕೇವಲ ಪ್ರಚಾರ ಪಡೆದುಕೊಂಡರು ಅಷ್ಟೇ ಎಂದು ದೂರಿದರು. ಯಾರೋ ಒಬ್ಬರು ಬೇರೆ ಹೇಳಿಕೆ ಕೊಟ್ಟರೆ ಅವರನ್ನು ದೇಶದ್ರೋಹಿ ಅಂತ ಹೇಳುವುದು ಸರಿಯಾ ಎಂದು ಪ್ರಶ್ನಿಸಿದರು.
ದೇವೇಗೌಡರು ಪಿಎಂ ಆಗಿದ್ದಾಗ ರಕ್ತದೋಕುಳಿ ಹರಿದಿದೆಯಾ?
ಪುಲ್ವಾಮಾ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸಬೇಕೆಂಬ ಕೂಗಿನ ಕುರಿತು ಸಿಎಂ ಕುಮಾರಸ್ವಾಮಿ ಅವರನ್ನು ಸುದ್ದಿಗಾರರು ಪ್ರಶ್ನಿಸಿದಾಗ, ಬರೀ ವೇದಿಕೆಯಲ್ಲಿ ಆವೇಶದ ಭಾಷಣದ ಮಾಡುವ ಮೂಲಕ ಸಮಸ್ಯೆ ಬಗೆಹರಿಯುವುದಿಲ್ಲ. ದೇವೇಗೌಡರು ಹತ್ತು ತಿಂಗಳ ಕಾಲ ದೇಶದ ಪ್ರಧಾನಿಯಾಗಿದ್ದಾಗ ರಕ್ತದೋಕುಳಿ ಹರಿದಿತ್ತೇ? ಎಂದು ಪ್ರಶ್ನಿಸಿದರು.