Advertisement

ನಗರಸಭೆ ಅಧಿಕಾರಿಗಳ ಸರ್ವಾಧಿಕಾರಿ ಧೋರಣೆ

11:19 AM Jun 11, 2019 | Suhan S |

ಮಂಡ್ಯ: ಕಳೆದ ವರ್ಷ ಬಜೆಟ್‌ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ನಗರಾಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ನಡಿ ನೀಡಿದ 50 ಕೋಟಿ ರೂ. ಹಣಕ್ಕೆ ಒಂದು ವರ್ಷದ ಬಳಿಕ ಈಗ ಯೋಜನಾ ವರದಿ (ಡಿಪಿಆರ್‌) ಸಿದ್ಧಗೊಂಡಿದೆ. ಹದಿನೈದು ಅಥವಾ ಒಂದು ತಿಂಗಳೊಳಗೆ ಪೂರ್ಣಗೊಳಿಸಬಹುದಾದ ಡಿಪಿಆರ್‌ಗೆ ಒಂದು ವರ್ಷ ಹಿಡಿದಿರುವುದು ನಗರಸಭೆ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ.

Advertisement

ಈಗ ಯೋಜನಾ ವರದಿ ಸಿದ್ಧಗೊಂಡಿದೆಯಾದರೂ ಅದಕ್ಕಿನ್ನೂ ತಾಂತ್ರಿಕ ಹಾಗೂ ಆಡಳಿತಾತ್ಮಕ ಅನುಮೋದನೆ ಸಿಗಬೇಕಿದೆ. ಈ ಪ್ರಕ್ರಿಯೆ ವೇಗವಾಗಿ ನಡೆದರೆ ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳಬಹುದು. ಇಲ್ಲದಿದ್ದರೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ. ಅಧ್ಯಕ್ಷ-ಉಪಾಧ್ಯಕ್ಷರಿಲ್ಲದ ನಗರಸಭೆಯಲ್ಲಿ ಅಧಿಕಾರಿಗಳ ನಡುವೆ ಸಾಮರಸ್ಯದ ಕೊರತೆಯಿಂದ ಆಡಳಿತ ಹಳ್ಳ ಹಿಡಿದಿದೆ.

50 ಕೋಟಿ ವಿಶೇಷ ಪ್ಯಾಕೇಜ್‌: 2018-19ನೇ ಸಾಲಿನ ಆಯವ್ಯಯದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡ್ಯ ನಗರದ ಸರ್ವತೋಮುಖ ಅಭಿವೃದ್ಧಿಗೆ 50 ಕೋಟಿ ರೂ. ವಿಶೇಷ ಪ್ಯಾಕೇಜ್‌ ಘೋಷಿಸಿದ್ದರು. ಅಧಿಕಾರಿಗಳಿಗೆ ಅಭಿವೃದ್ಧಿಯ ಕಾಳಜಿ ಇದ್ದಿದ್ದರೆ ಹಣ ಘೋಷಿಸಿದ ಬೆನ್ನಲ್ಲೇ ಸಮಗ್ರ ಯೋಜನಾ ವರದಿಯನ್ನು ರೂಪಿಸಿಟ್ಟುಕೊಂಡು ಸರ್ಕಾರದ ಆದೇಶ ಹೊರಬಿದ್ದ ಕೂಡಲೇ ತಾಂತ್ರಿಕ ಹಾಗೂ ಆಡಳಿತಾತ್ಮಕ ಅನುಮೋದನೆ ಪಡೆದು ಜನವರಿಯಲ್ಲಿ ಕಾಮಗಾರಿ ಆರಂಭಿಸಬಹುದಿತ್ತು.

ಆದರೆ, ಸರ್ಕಾರ ಬಜೆಟ್‌ನಲ್ಲಿ 50 ಕೋಟಿ ರೂ. ಹಣ ಘೋಷಿಸಿದ್ದರೂ ಅಧಿಕಾರಿಗಳು ಆ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳಲೇ ಇಲ್ಲ. ಸರ್ಕಾರದ ಆದೇಶ ಬರುವವರೆಗೂ ಡಿಪಿಆರ್‌ ತಯಾರಿ ಸಿಟ್ಟುಕೊಳ್ಳುವ ಗೋಜಿಗೇ ಹೋಗಲಿಲ್ಲ. ಸರ್ಕಾರದ ಆದೇಶ 30 ನವೆಂಬರ್‌ 2018ರಲ್ಲಿ ಹೊರಬಿದ್ದ ಬಳಿಕ ಯೋಜನಾ ವರದಿ ಸಿದ್ಧಪಡಿಸುವುದಕ್ಕೆ ಮುಂದಾಗಿ ದ್ದಾರೆ. ಈ ವರದಿ ಸಿದ್ಧಪಡಿಸುವುದಕ್ಕೂ ಎರಡು ಹಂತದಲ್ಲಿ ಟೆಂಡರ್‌ ನಡೆಸಿದ್ದಾರೆ. ಅದೆಲ್ಲಾ ನಡೆಸಿ ಅಂತಿಮವಾಗಿ ಸಮಗ್ರ ಯೋಜನಾ ವರದಿ ಜೂ.10ಕ್ಕೆ ಸಿದ್ಧಗೊಂಡು ಜಿಲ್ಲಾಧಿಕಾರಿ ಬಳಿಗೆ ಹೋಗಿದೆ.

ಇನ್ನು ಇದಕ್ಕೆ ತಾಂತ್ರಿಕ ಹಾಗೂ ಆಡಳಿತಾತ್ಮಕ ಅನುಮೋದನೆ ಪಡೆದುಕೊಂಡು ಕಾಮಗಾರಿ ಆರಂಭಿಸಬೇಕಾದರೆ ಆಗಸ್ಟ್‌ ಇಲ್ಲವೇ ಸೆಪ್ಟೆಂಬರ್‌ ತಿಂಗಳವರೆಗೆ ಕಾಯಲೇಬೇಕು. ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿತನದಿಂದ ನಗರಾಭಿವೃದ್ಧಿ ಎನ್ನುವುದು ಕೇವಲ ಮರೀಚಿಕೆಯಾಗಿ ಉಳಿಯುವಂತಾಗಿದೆ.

Advertisement

17 ಕೋಟಿ ಕಾಮಗಾರಿಗೆ ಬ್ರೇಕ್‌: ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಿಸಿರುವ 50 ಕೋಟಿ ರೂ. ಕಾಮಗಾರಿಯಲ್ಲಿ 17 ಕೋಟಿ ರೂ. ಕಾಮಗಾರಿ ನಡೆಯುವ ಸಾಧ್ಯತೆಗಳು ಕಡಿಮೆ ಇದೆ. ಏಕೆಂದರೆ, ಈ ಹಣದಲ್ಲಿ 10 ಕೋಟಿ ರೂ.ಗಳನ್ನು ನಗರವ್ಯಾಪ್ತಿಯ ಬೆಂಗಳೂರು-ಮೈಸೂರು ಹೆದ್ದಾರಿ ರಸ್ತೆ ಅಭಿವೃದ್ಧಿಗೆ ನಿಗದಿಪಡಿಸಿದೆ.

ಹೆದ್ದಾರಿ ರಸ್ತೆಯನ್ನು ಲೋಕೋಪ ಯೋಗಿ ಇಲಾಖೆ ನಿರ್ಮಾಣ ಮಾಡುತ್ತಿದ್ದು, ನಗರಸಭೆಯಿಂದ ಆ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಮುಂದಾದಲ್ಲಿ ವ್ಯತ್ಯಾಸಗಳಾಗುವ ಸಾಧ್ಯತೆಗಳಾಗು ವುದರಿಂದ ಈ ಹಣವನ್ನು ಲೋಕೋಪಯೋಗಿ ಇಲಾಖೆಗೆ ನೀಡಿ ಆ ಇಲಾಖೆಯಿಂದಲೇ ಕಾಮಗಾರಿ ನಡೆಸಲು ನಗರಸಭೆ ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಸಿಮೆಂಟ್ ಕಾಂಕ್ರೀಟ್: ಇನ್ನು ಕುಂಟುತ್ತಾ ತೆವಳುತ್ತಾ ಸಾಗಿರುವ ನಗರದ ನೂರಡಿ ರಸ್ತೆ ಕಾಮಗಾರಿಗೆ 7.50 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಇದೂ ಸಹ ಸದ್ಯಕ್ಕೆ ಖರ್ಚು ಮಾಡಲಾಗುವುದಿಲ್ಲ. ಏಕೆಂದರೆ, ನೂರಡಿ ರಸ್ತೆಗೆ ಡಾಂಬರು ಹಾಕಿದ ಬಳಿಕ ಆರು ತಿಂಗಳ ಕಾಲ ವಾಹನಗಳ ಸಂಚಾರದಿಂದ ತಹಬದಿಗೆ ಬಂದ ಬಳಿಕ ಸಿಮೆಂಟ್ ಕಾಂಕ್ರೀಟ್ ಹಾಕಲು ನಿರ್ಧರಿಸಲಾಗಿದೆ. ಈಗ ನೂರಡಿ ರಸ್ತೆಯ ಒಂದು ಭಾಗದ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಇನ್ನೊಂದು ಭಾಗದ ರಸ್ತೆ ಅಭಿವೃದ್ಧಿಗೆ ಅದೆಷ್ಟು ಕಾಲ ಹಿಡಿಯುವುದೋ ಗೊತ್ತಿಲ್ಲ. ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿಗಳೆಲ್ಲವೂ ಆಮೆಗತಿಯಲ್ಲಿ ಸಾಗುತ್ತಾ ನಗರದ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದೆ.

● ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next