Advertisement

ಡೈರಿಯ ಪುಟಗಳು…

08:30 PM Dec 15, 2019 | Lakshmi GovindaRaj |

ವಿದ್ಯಾವಂತರು ಕೃಷಿ ಮಾಡುತ್ತೇನೆ ಅಂತ ಹೊರಟರೆ ಪರಿಚಯಸ್ಥರು, ಆತ್ಮೀಯರು ವಿರೋಧ ವ್ಯಕ್ತಪಡಿಸುವ ಸನ್ನಿವೇಶ ನಮ್ಮ ನಡುವೆ ಇದೆ. ಅದರಲ್ಲೂ ಹೈನುಗಾರಿಕೆ, ಪಶುಸಂಗೋಪನೆಯ ಕಡೆ ಹೋದರಂತೂ ವಿರೋಧ ಮೂಡುವುದು ಶತಃಸಿದ್ಧ. ಇದೇ ರೀತಿ ಮನೆಯಲ್ಲಿ ಎಷ್ಟೇ ವಿರೋಧ ವ್ಯಕ್ತವಾದರೂ ವಿದ್ಯಾಭ್ಯಾಸವನ್ನು ಅರ್ಧಕ್ಕೇ ಮೊಟಕುಗಳಿಸಿ ಹಾಲಿನ ಡೈರಿಯನ್ನು ತೆರೆದು ಯಶ ಕಂಡವರು ಜಂಬೂನಾಥ.

Advertisement

ಹಟ ಬಿಡದೆ ಯತ್ನ: ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಹೈನುಗಾರಿಕೆ ಅಧ್ಯಯನ ಮಾಡುತ್ತಿದ್ದ ಜಂಬುನಾಥ, 2016ರಲ್ಲಿ ಹೈನುಗಾರಿಕೆ ಶುರು ಮಾಡಿದರು. ತಮ್ಮ ಸ್ವಂತ ಊರಾದ ಬಳ್ಳಾರಿ ಜಿಲ್ಲೆಯ ಕಮಲಾಪುರದಲ್ಲಿಯೇ ಡೈರಿಯೊಂದನ್ನು ಪ್ರಾರಂಭಿಸಲು ಹೊರಟಾಗ, ಮನೆಯಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು. ದಶಕದ ಹಿಂದೆ ಮನೆಯವರೇ ಶುರುಮಾಡಿದ್ದ ಹಾಲಿನ ಡೈರಿ ತುಂಬಾ ದಿನಗಳ ಕಾಲ ನಡೆದಿರಲಿಲ್ಲ. ಅದರಿಂದ ನಷ್ಟವೂ ಉಂಟಾಗಿತ್ತು.

ಅದರ ಕಹಿ ನೆನಪು ಇದ್ದಿದ್ದರಿಂದ ಮನೆಯವರು ಮತ್ತೆ ಡೈರಿ ತೆರೆಯಲು ಒಪ್ಪಿರಲಿಲ್ಲ. “ಪ್ರತಿದಿನ ಕೆಲಸ ತಪ್ಪಿದ್ದಲ್ಲ. ಕೆಲಸಕ್ಕೆ ಕೂಲಿಗಳು ಸಿಗುವುದಿಲ್ಲ. ಎಲ್ಲವನ್ನೂ ನೀನೇ ಮಾಡಬೇಕಾಗುತ್ತದೆ’ ಎಂದೆಲ್ಲಾ ಬುದ್ಧಿ ಹೇಳಲು ಯತ್ನಿಸಿದರು. ಆದರೆ ಅವ್ಯಾವುದಕ್ಕೂ ಸೊಪ್ಪು ಹಾಕದ ಜಂಬೂನಾಥರವರು ಹಟಕ್ಕೆ ಬಿದ್ದು ಒಂದು ತಿಂಗಳ ಕಾಲ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ , ತಮಿಳುನಾಡು ಹೀಗೆ ನಾನಾ ಕಡೆಗಳಲ್ಲಿ ಸುತ್ತಿ ಅಧ್ಯಯನ ಕೈಗೊಂಡರು.

ಪ್ರಾರಂಭದಲ್ಲಿ ವಿಘ್ನಗಳು: ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ್ದೇ ಅಲ್ಲದೆ, ಉದ್ಯೋಗಕ್ಕೂ ತೆರಳುತ್ತಿರಲಿಲ್ಲವಾದ್ದರಿಂದ ಡೈರಿ ಪ್ರಾರಂಭಿಸಲು ಮನೆಯವರಿಂದ ಹಣಕಾಸಿನ ನೆರವು ಅತ್ಯಗತ್ಯವಾಗಿ ಬೇಕಿತ್ತು. ಕಡೆಗೂ ಮನೆಯವರನ್ನು ಒಪ್ಪಿಸಿ, 3.50 ಲಕ್ಷ ರೂ. ಪಡೆದು ಅದರಲ್ಲಿ 30 ಸಾವಿರ ವೆಚ್ಚದಲ್ಲಿ ಡೈರಿ ಆರಂಭಿಸಿದರು. ಉಳಿದ 3.20 ಲಕ್ಷ ರೂ. ವೆಚ್ಚದಲ್ಲಿ ಗುಜರಾತ್‌ನಿಂದ 5 ಗಿರ್‌ ತಳಿಯ ಹಸುಗಳನ್ನು ತಂದು ಹೈನುಗಾರಿಕೆಯನ್ನು ಪ್ರಾರಂಭಿಸಿದರು.

ಹಸು ಹೋಗಿ ಎಮ್ಮೆ ಬಂದ್ವು: ಗಿರ್‌ ಹಸುವಿನ ಹಾಲಲ್ಲಿ ನೀರಿನ ಪ್ರಮಾಣ ಹೆಚ್ಚಿರುತ್ತದೆ. ಇದರಿಂದ ಪ್ರಾರಂಭದಲ್ಲಿ ಹಸುವಿನ ಹಾಲಿಗೆ ಯಾವುದೇ ಮಾರುಕಟ್ಟೆ ಸಿಗಲಿಲ್ಲ. ಇದರ ಗುಣಮಟ್ಟದ ಬಗ್ಗೆ ಏನೇ ಹೇಳಿದ್ರೂ ಯಾರೂ ಕೇಳಲು ತಯಾರಿರಲಿಲ್ಲ. ಹಸುಗಳು 35ರಿಂದ 40 ಲೀಟರ್‌ವರೆಗೂ ಹಾಲು ನೀಡುತ್ತಿದ್ದವು. ಆಗ, ಪ್ರತಿ ಲೀಟರ್‌ಗೆ 75 ರೂ. ಸಿಗುತ್ತಿತ್ತು. ಹಸುಗಳ ಪೋಷಣೆ ಮತ್ತು ಚಿಕಿತ್ಸಾ ವೆಚ್ಚಗಳಿಂದ ತೊಂದರೆಯೇ ಆಯಿತು. ಆನಂತರ ಅವುಗಳನ್ನು ಮಾರಿ ಎಮ್ಮೆಗಳನ್ನು ತಂದು ಡೈರಿಯನ್ನು ಮುಂದುವರಿಸಿದರು ಜಂಬೂನಾಥ. ಎಮ್ಮೆಗಳಿಗೆ ಬೇಕಾದ 1 ದ್ವಿದಳ ಮತ್ತು 5 ಏಕ ದಳ ಮೇವನ್ನು ತಮ್ಮ ಮೂರೆಕರೆ ಜಾಗದಲ್ಲಿಯೇ ಬೆಳೆಯುತ್ತಿದ್ದಾರೆ. ಜಂಬುನಾಥ ಅವರ ಬಳಿ ಸದ್ಯ 9 ಮುರ್ರಾ ಎಮ್ಮೆ ಮತ್ತು ಒಂದು ಗಿರ್‌ ಎಮ್ಮೆಯ ಜತೆಗೆ ಒಂದು ಹಸುವಿನ ಕರು ಇದೆ.

Advertisement

ಬೆಳಿಗ್ಗೆ 3 ಗಂಟೆಗೆ ಕೆಲಸ ಆರಂಭ: ಎಮ್ಮೆಗಳಿಂದ ಒಂದು ದಿನಕ್ಕೆ 50ರಿಂದ 60 ಲೀಟರ್‌ ಹಾಲು ಸಿಗಲು ಶುರುವಾಯಿತು. ಇದರಿಂದ ಕ್ರಮೇಣ ಅವರ ಜೀವನವೂ ಸುಧಾರಿಸಿತು. ಹಾಲು ಮಾರಾಟದಿಂದಲೇ ದಿನಕ್ಕೆ 3,000 ರೂ. ಅವರ ಕೈ ಸೇರುತ್ತಿತ್ತು. ಅಂದರೆ, ತಿಂಗಳಿಗೆ 90,000 ರೂ. ತಿಂಗಳಿಗೆ ಸಂಪಾದನೆ ಆಗುತ್ತಿತ್ತು. ಪ್ರಾರಂಭದಲ್ಲಿ ಎಮ್ಮೆ ತಂದಾಗ ಹಾಲು ಕರೆಯಲು ಕೆಲಸಗಾರರನ್ನು ನೇಮಿಸಿದ್ದರು.

ನಂತರ ಇತರರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು, ತಾವೇ ಹಾಲು ಕರೆಯುವುದನ್ನು ಕಲಿತರು. ಈಗ, ಬೆಳಿಗ್ಗೆ 3 ಗಂಟೆಗೆಲ್ಲಾ ಎದ್ದು ಹಾಲು ಕರೆದು, ಡೈರಿಯಿಂದ 8 ಕಿ.ಮೀ. ದೂರವಿರುವ ಹಂಪಿಗೆ ಹೋಗುತ್ತಾರೆ. ಹಂಪಿಯ “ಮ್ಯಾಂಗೋ ಟ್ರೀ’ ಎಂಬ ಒಂದೇ ಹೋಟಲ್‌ ಗೆ 35 ಲೀ ಹಾಲು ಹಾಕಿ ಬರುವುದು ಇವರ ನಿತ್ಯದ ಕೆಲಸಗಳಲ್ಲೊಂದು. ನಂತರ ಕಸ ಬಳಿಯುವುದು, ಹಸುಗಳಿಗೆ ಮೇವು ನೀಡುವುದು, ಮತ್ತೆ ಸಾಯಂಕಾಲ ಊರಲ್ಲಿ ಹಾಲು ಮಾರಾಟಕ್ಕೆ ನಿಲ್ಲುವುದು ಈ ಎಲ್ಲಾ ಕೆಲಸಗಳನ್ನೂ ತಾವೊಬ್ಬರೇ ಮಾಡುತ್ತಿದ್ದಾರೆ.

ಹೈನುಗಾರಿಕೆಯಿಂದ ಬಂದ ಲಾಭದಿಂದ ಇದುವರೆಗೂ ತಾವು ಮಾಡಿದ ಸಾಲವನ್ನೆಲ್ಲಾ ತೀರಿಸಿದ್ದಾರೆ. ಹೈನುಗಾರಿಕೆಯಿಂದಲೇ ಇದುವರೆಗೂ ಏನಿಲ್ಲವೆಂದರೂ 7- 8 ಲಕ್ಷ ರೂ. ಸಂಪಾದನೆ ಮಾಡಿದ್ದಾರೆ. ಅಲ್ಲದೆ, ಕಳೆದ ವರ್ಷ ಇನ್ನೂ ಐದು ಎಮ್ಮೆಗಳನ್ನು ಕೊಂಡು ತಂದಿದ್ದಾರೆ. ಇಂದು ಅವರ ಡೈರಿಯ ಹಾಲು ಪ್ರತಿ ಲೀಟರ್‌ಗೆ 55 ರೂ.ನಂತೆ ಮಾರಾಟವಾಗುತ್ತಿದೆ. ಹಾಲಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ, ಇನ್ನೊಂದು ಹೊಸ ಮಳಿಗೆಯನ್ನು ತಮ್ಮೂರಲ್ಲಿಯೇ ಪ್ರಾರಂಭಿಸುವ ಯೋಜನೆಯನ್ನೂ ಜಂಬುನಾಥ ಹಾಕಿಕೊಂಡಿದ್ದಾರೆ.

ಪರಿಶುದ್ಧ ಹಾಲಿನ ಬಗ್ಗೆ ಜನರಲ್ಲಿ ಅರಿವು ಮೂಡುತ್ತಿದೆ. ಅದರ ಫ‌ಲವಾಗಿಯೇ ನಮ್ಮ ಡೈರಿಯ ಹಾಲಿಗೆ ಬೇಡಿಕೆ ಹೆಚ್ಚಾಗಿದೆ. ಲಾಭ ಬರದೆ ಇದ್ದರೂ ಯಾವತ್ತೂ ಗುಣಮಟ್ಟದ ವಿಚಾರದಲ್ಲಿ ರಾಜಿಯಾಗುವುದೇ ಇಲ್ಲ.
-ಜಂಬೂನಾಥ

* ಮೈಲಾರಿ ನಾಯಕ್‌

Advertisement

Udayavani is now on Telegram. Click here to join our channel and stay updated with the latest news.

Next