ರಾಮನಗರ: ಜಿಲ್ಲಾ ಕೇಂದ್ರ ರಾಮನಗರದಲ್ಲಿ ಅತಿಸಾರ ಭೇದಿ ಪೀಡಿತ ರೋಗಿಗಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಆಹಾರ, ಗಾಳಿ ಅಥವಾ ನೀರು ಕಲುಷಿತವಾಗಿ, ಈ ಸಮಸ್ಯೆ ಉಂಟಾಗಿರಬಹುದು ಎಂದು ವೈದ್ಯರ ಅಭಿಮತವಾದರೆ, ನಾಯಿಗಳ ಸಂಖ್ಯೆ ಅಧಿಕಗೊಂಡು ಈ ಸಮಸ್ಯೆ ಎದುರಾಗಿದೆ ಎಂಬುದು ನಾಗರಿಕರ ವಾದವಾಗಿದೆ.
ಕಳೆದ ವಾರ ನಗರದ ಎಂ.ಜಿ.ರಸ್ತೆಯಲ್ಲಿ ಸುಮಾರು 10-20 ಮಂದಿ ವ್ಯಾಪರೀ ಮಳಿಗೆಗಳ ಮಾಲೀಕರು ಮತ್ತು ಅಲ್ಲಿ ಕೆಲಸ ಮಾಡುವ ಸಿಬ್ಬಂದಿ ಭೇದಿ ಮತ್ತು ವಾಂತಿಯಿಂದ ನರಳಿದ್ದಾರೆ. ಅನಾರೋಗ್ಯಕ್ಕೆ ಕಾರಣವಾಗಿರುವುದು ಬೀದಿ ನಾಯಿಗಳು ಎಂದು ದೂರಿದ್ದಾರೆ. ಈ ಕುರಿತು ನಗರಸಭೆ ಆಯುಕ್ತರಿಗೂ ಪತ್ರ ಬರೆದಿದ್ದಾರೆ.
ನಗರಸಭೆ ಆಯುಕ್ತರಿಗೆ ದೂರು: ನಗರದ ಬೀದಿಗಳಲ್ಲಿ ನಾಯಿಗಳ ಹಿಂಡು ಸುತ್ತುತ್ತಿರುತ್ತವೆ, ರಸ್ತೆ, ರಸ್ತೆಬದಿಯಲ್ಲಿ ಮಲ, ಮೂತ್ರ ಮಾಡುತ್ತಿವೆ. ವಾಹನಗಳ ಚಕ್ರಗಳಿಗೆ ಸಿಲುಕುವ ಈ ಹೊಲಸು ರಸ್ತೆಯಲ್ಲೆಲ್ಲಾ ಹರಡುತ್ತಿದೆ. ಹೀಗಾಗಿ ನೋಣ, ಕೀಟಗಳ ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗ ಹರಡುತ್ತಿದೆ ಎಂದು ನಗರದ ನಾಗರಿಕರು ನಗರಸಭೆಯ ಆಯುಕ್ತರಿಗೆ ದೂರು ನೀಡಿದ್ದಾರೆ. ಎಂ.ಜಿ.ರಸ್ತೆ ಜಿಲ್ಲೆಯ ಪ್ರಮುಖ ವ್ಯಾಪಾರಿ ಸ್ಥಳವಾಗಿದೆ. ಪ್ರಮುಖ ಬಟ್ಟೆ ಅಂಗಡಿಗಳು, ಆಭರಣಗಳ ಮಳಿಗೆಗಳು ಇಲ್ಲಿವೆ. ದಿನ ನಿತ್ಯ ಸಾವಿರಾರು ಮಂದಿ ಓಡಾಡುವ ರಸ್ತೆ ಇದಾಗಿದೆ. ಈ ರಸ್ತೆಯ ಕ್ರಾಸುಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿವೆ. ದಿನ ನಿತ್ಯ ಸಾವಿರಾರು ಶಾಲಾ, ಕಾಲೇಜು ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿ ಸಂಚರಿಸುತ್ತಾರೆ. ನಾಯಿಗಳ ಮಲ, ಮೂತ್ರದ ಜತೆಗೆ ನಗರದಲ್ಲಿ ಸ್ವತ್ಛತೆಯ ಕೊರತೆಯಿಂದ ನರಳುವಂತಾಗಿದೆ ಎನ್ನುತ್ತಾರೆ ಸ್ಥಳೀಯ ವ್ಯಾಪಾರಿಗಳು.
ಅಧಿಕಾರಿಗಳ ವಿರುದ್ಧ ಆಕ್ರೋಶ: ಬೀದಿ ನಾಯಿಗಳ ವಿಚಾರದಲ್ಲಿ ನಗರಸಭೆಯ ಅಧಿಕಾರಿಗಳು ಪೊಳ್ಳು ಭರವಸೆಗಳನ್ನು ಕೊಡುತ್ತಿದ್ದಾರೆ. ಪ್ರಾಣಿ ದಯಾ ಸಂಘಗಳ ನೆಪವೊಡ್ಡುತ್ತಿದ್ದಾರೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರಸಭೆಯ ಎಲ್ಲಾ 31 ವಾರ್ಡುಗಳಲ್ಲೂ ನಾಯಿಗಳ ಕಾಟ ಅಧಿಕವಾಗಿದೆ ಎಂದು ದೂರಿದ್ದಾರೆ.
ಲಿಖೀತ ದೂರು ಬಂದರೆ ಪರಿಶೀಲನೆ: ನಗರದಲ್ಲಿ ಭೇದಿ ಪ್ರಕರಣಗಳು ಅಧಿಕವಾಗುತ್ತಿರುವ ವಿಚಾರದಲ್ಲಿ ಪ್ರತಿಕ್ರಿಯಿಸಿದ ಡಿಎಚ್‌ಒ ಡಾ.ಅಮರ್‌ನಾಥ್ ತಮ್ಮ ಗಮನಕ್ಕೆ ಬಂದಿಲ್ಲ ಎಂದರು. ಖಾಸಗಿ ವೈದ್ಯರು ಇಂತಹ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ತಮ್ಮ ಗಮನ ಸೆಳೆದಿಲ್ಲ. ಎಂ.ಜಿ.ರಸ್ತೆಯಲ್ಲಿ ಅಂಗಡಿ ಮಾಲೀಕರು, ಸಿಬ್ಬಂದಿ, ನಾಗರಿಕರಿಗೆ ರೋಗಭಾದೆ ಉಂಟಾಗಿರುವ ಲಿಖೀತ ದೂರು ಬಂದರೆ ಬಂದರೆ ತಮ್ಮ ಇಲಾಖೆಯಿಂದ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.
●ಬಿ.ವಿ.ಸೂರ್ಯ ಪ್ರಕಾಶ್