ಉಡುಪಿ: ಜಿಲ್ಲಾ ಸ್ಪತ್ರೆಯ ಡಯಾಲಿಸಿಸ್ ಘಟಕದಲ್ಲಿ ಕೆಲವು ದಿನಗಳಿಂದ ಡಯಾಲಿಸಿಸ್ ಚಿಕಿತ್ಸೆ ಸ್ಥಗಿತಗೊಳಿಸಲಾಗಿದ್ದು ರೋಗಿಗಳು ಪರದಾಡುವಂತಾಗಿದೆ. ಯಾವುದೇ ಮಾಹಿತಿ ನೀಡದೆ ಡಯಾಲಿಸಿಸ್ ಚಿಕಿತ್ಸೆ ಸ್ಥಗಿತಗೊಳಿಸಿದ ಏಜೆನ್ಸಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸೂಚನೆ ನೀಡಿದರು.
ಶನಿವಾರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಒಂದು ತಿಂಗಳಿನಿಂದ ರೋಗಿಗಳು ಖಾಸಗಿ ಆಸ್ಪತ್ರೆಗೆ ಹೋಗುತ್ತಿರುವ ಮಾಹಿತಿ ಲಭಿಸಿದೆ. ಆದರೆ ಎಸ್‌ಕೆ ಸಂಜೀವಿನಿ ಸಂಸ್ಥೆಯವರು ರಾಜ್ಯದ 122 ಕೇಂದ್ರದ ಯಂತ್ರಗಳನ್ನು ಸ್ಥಗಿತಗೊಳಿಸುವ ಬಗ್ಗೆ ಅ. 1ರಂದು ಸರಕಾರಕ್ಕೆ ಪತ್ರ ಬರೆದಿದ್ದಾರೆ. ಯಂತ್ರಗಳ ದುರಸ್ತಿ ನಡೆಯದ ಕಾರಣ ಸೇವೆ ನೀಡಲಾಗುತ್ತಿಲ್ಲ. ಆರೋಗ್ಯ ಇಲಾಖೆಯ ಆಯುಕ್ತರಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ. ರಾಜ್ಯ ಸರಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.
ರಾಜ್ಯ ಸರಕಾರ ನಡೆಸುವವರು ತಮ್ಮೊಳಗಿನ ಕಿತ್ತಾಟದಲ್ಲಿಯೇ ದಿನಕಳೆಯುತ್ತಿದ್ದಾರೆ. ಬಡವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಬಿಲ್ ಭರಿಸುವವರು ಯಾರು? ರಾಜ್ಯದ ಎಲ್ಲ ಡಯಾಲಿಸಿಸ್ ಕೇಂದ್ರಗಳ ಪರಿಸ್ಥಿತಿ ಇದೆ ರೀತಿ ಇದೆ. ಈ ಕೂಡಲೇ ಸರಕಾರವು ರೋಗಿಗಳ ಡಯಾಲಿಸಿಸ್ ಬಿಲ್ ಅನ್ನು ಸರಕಾರ ಪಾವತಿಸಬೇಕು. ಸಮಸ್ಯೆ ಗೊತ್ತಿದ್ದರೂ ರಾಜ್ಯ ಸರಕಾರ ಪರ್ಯಾಯ ವ್ಯವಸ್ಥೆ ಕಲ್ಪಿಸದಿರುವುದು ಬಡರೋಗಿಗಳನ್ನು ಸಂಕಷ್ಟಕ್ಕೀಡು ಮಾಡಿದೆ. ರಾಜ್ಯ ಸರಕಾರ ಮನವಿ ಮಾಡಿದರೆ ಹೊಸ ಯಂತ್ರಗಳು ಮತ್ತು ತರಬೇತಿಯನ್ನು ಕೇಂದ್ರ ಸರಕಾರದ ಮೂಲಕ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದರು.
ಶಾಸಕರಾದ ಯಶ್‌ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾ ಪ್ರಭಾರಿ ಶಸ್ತ್ರಚಿಕಿತ್ಸಕಿ ವೀಣಾ ಹಾಗೂ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.
ಮಹಿಷ ದಸರ ಎಂಬ ವಿಕೃತಿ ನಿಲ್ಲಿಸಿ
ಉಡುಪಿ: ಮಹಿಷ ದಸರ ಎಂಬ ವಿಕೃತಿಯ ಚಿಂತನೆಯನ್ನು ನಿಲ್ಲಿಸಬೇಕು. ಶ್ರೀಕೃಷ್ಣನ ಊರು, ಕೊಲ್ಲೂರು ಮೂಕಾಂಬಿಕೆ ದೇವಿ ನೆಲೆಸಿರುವ ಉಡುಪಿ ಜಿಲ್ಲೆಯಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರಬೇಡಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ನಮ್ಮ ಧಾರ್ಮಿಕ ನಂಬಿಕೆಯನ್ನು ಪ್ರಶ್ನೆ ಮಾಡುವಂತ ಹಲವಾರು ಶಕ್ತಿಗಳು ಹುಟ್ಟಿಕೊಳ್ಳುತ್ತಿವೆ. ಇಂಥ ವಿಕೃತಿಯ ಮಾನಸಿಕತೆ ಕೊನೆಯಾಗಬೇಕು ಎಂದರು.