Advertisement

Environment Report:ಭಾರತ ಸೇರಿದಂತೆ ವಿಶ್ವದಲ್ಲಿ ಇನ್ನೇನಿದ್ದರೂ ಹವಾಮಾನ ಅನಿಶ್ಚಿತ ಕಾಲ !

11:39 AM Feb 29, 2024 | Team Udayavani |

ಜೈಪುರ್: ಭಾರತವೂ ಸೇರಿದಂತೆ ವಿಶ್ವದಲ್ಲಿ ಇನ್ನೇನಿದ್ದರೂ ಹವಾಮಾನ ಅನಿಶ್ಚಿತ ಕಾಲ ! ಇದನ್ನು ಈಗಾಗಲೇ ಅನುಭವಿಸುತ್ತಿದ್ದೇವೆ.‌ಮಳೆ ಬರುವ ಕಾಲಕ್ಕೆ ಮಳೆ ಬಾರದು, ಚಳಿ ಕರೆಯದೇ ದಿಢೀರ್ ಅತಿಥಿಯಂತೆ ಬರುವುದು, ಬಹುತೇಕ ವರ್ಷಪೂರ್ತಿ ಉರಿ, ಸೆಕೆ , ಬಿಸಿಲುಗಾಲ ಎನಿಸುವುದು.ಕರ್ನಾಟಕದಲ್ಲೂ ಕಳೆದ ವರ್ಷ ಹಿಂದಿನ ವರ್ಷಗಳಿಗಿಂತ ಹೆಚ್ಚು ಅತಿ ತಾಪಮಾನ ದಿನಗಳನ್ನು ಅನುಭವಿಸಿದ್ದೇವೆ.

Advertisement

ಹವಾಮಾನ ವೈಪರೀತ್ಯ ಮನೆ ಬಾಗಿಲಿನಲ್ಲಿ ಬಂದು ನಿಂತಿದೆ. ನಾವು ಅಪರಿಚಿತ ಮತ್ತು ಅನಗತ್ಯ ಅತಿಥಿಗೆ ಬಾಗಿಲು ತೆಗೆಯದಿದ್ದರೂ ನಮ್ಮ ಅವೈಜ್ನಾನಿಕ ಅಭಿವೃದ್ದಿ, ಪರಿಸರ ಮಾಲಿನ್ಯ ಇತ್ಯಾದಿ ಅಂಶಗಳು ಬಾಗಿಲು ತೆಗೆಯತೊಡಗಿವೆ.

ಸಿಎಸ್ಇ (ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ ವಾಯಿರ್ ಮೆಂಟ್) ಬಿಡುಗಡೆ ಮಾಡಿದ ದೇಶದ ವಾರ್ಷಿಕ ಪರಿಸರ ವರದಿಯ ಅಂಕಿ ಅಂಶಗಳ ಪ್ರಕಾರ ಕಳೆದ ವರ್ಷ (2023) ಇತಿಹಾಸದಲ್ಲೇ ಅತಿ ಹೆಚ್ಚು ಹವಾಮಾನ ವೈಫರೀತ್ಯ ದಿನಗಳನ್ನು ಕಂಡಿದೆ. 1850-1900 (ಕೈಗಾರಿಕಾ ಯುಗ ಪೂರ್ವ) ರ ದಾಖಲೆಯನ್ನೂ ಹಿಂದಿಕ್ಕಿರುವ 2023 ಅತಿ ಹೆಚ್ಚು ತಾಮಾನ ವರ್ಷವಾಗಿ ದಾಖಲಾಗಿದೆ.

ಹಿಂದಿನ‌ ದಾಖಲೆಗಿಂತ 1.48 ಡಿಗ್ರಿ ಹೆಚ್ಚು ತಾಪಮಾನವನ್ನು ಅನುಭವಿಸಲಾಗಿದೆ. ವರ್ಷದ 365 ರಲ್ಲಿ 318 ದಿನಗಳು ವಿವಿಧ ಹವಾಮಾನ ‌ವೈಪರೀತ್ಯಕ್ಕೆ ಸಾಕ್ಷಿಯಾಗಿವೆ. ಅಂದರೆ ಕೇವಲ 47 ದಿನಗಳು ಮಾತ್ರ ಹಿತಾನುಭವ ನೀಡುವ ದಿನಗಳಾಗಿದ್ದವು. ಇದರರ್ಥ ಮಳೆಗಾಲ, ಚಳಿಗಾಲ, ಸೆಕೆಗಾಲ ಎನ್ನುವುದನ್ನು ಗಾಳಿಗೆ ತೂರಿ ಒಂದೂವರೆ ತಿಂಗಳು‌ ಮಾತ್ರ ಹವಾಮಾನ ಹಿತಕರವೆನಿಸಿತ್ತು.

122 ವರ್ಷಗಳ ಪೈಕಿ ಕಳೆದ ವರ್ಷದ ಆಗಸ್ಟ್ ಮತ್ತು ಸೆಪ್ಟೆಂಬರ್ ಅತಿ ಹೆಚ್ಚು ತಾಪಮಾನದಿಂದ ಕೂಡಿತ್ತು. ಒಟ್ಟೂ ಹವಾಮಾನ ವೈಪರೀತ್ಯದ ಬೆಳವಣಿಗೆಗಳಿಂದ‌ 3287 ಪ್ರಾಣಹಾನಿ ಸಂಭವಿಸಿದ್ದರೆ, 2.21 ದಶಲಕ್ಷ ಹೆಕ್ಟೇರ್ ಪ್ರದೇಶ ಬೆಳೆ ಹಾನಿಯಾಗಿತ್ತು. 1,24, 813 ಜಾನುವಾರುಗಳು ಸತ್ತಿದ್ದವು. ವಿಚಿತ್ರವೆಂದರೆ ಎಲ್ಲ 36 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳೂ‌ ಈ ಹವಾಮಾನ ವೈಪರೀತ್ಯವನ್ನು‌ ಅನುಭವಿಸಿವೆ. ಹಿಮಾಚಲ ‌ಪ್ರದೇಶದಲ್ಲಿ 149, ಮಧ್ಯ ಪ್ರದೇಶ141, ಕೇರಳ ಹಾಗೂ ಉತ್ತರ ಪ್ರದೇಶ 119 ದಿನಗಳನ್ನು ಅನುಭವಿಸುವ ಮೂಲಕ ಅತಿ ಹೆಚ್ಚು ಸಮಸ್ಯೆ ಎದುರಿಸಿದ ರಾಜ್ಯಗಳ ಸಾಲಿನಲ್ಲಿವೆ ಎಂದಿದೆ ವರದಿ.

Advertisement

ಹವಾಮಾನ ವೈಪರೀತ್ಯ ಘಟನೆಗಳನ್ನು ಪ್ರತ್ಯೇಕಿಸಿ ನೋಡುವುದಾದರೆ, ದೇಶದ ಯಾವುದಾದರೂ ಒಂದು ಪ್ರದೇಶದಲ್ಲಿ 208 ದಿನಗಳಲ್ಲಿ ಅತಿ ಮಳೆ, ನೆರೆ, ಭೂಕುಸಿತವಾಗಿದ್ದರೆ, 202 ದಿನಗಳಲ್ಲಿ ಮಿಂಚು, ತೀವ್ರವಾದ ಗಾಳಿ, 49 ದಿನಗಳು‌ ಬಿಸಿಗಾಳಿಯ ತೀವ್ರತೆ ಹೆಚ್ಚಿತ್ತು. ಜತೆಗೆ ಶೀತಗಾಳಿಯ ತೀವ್ರತೆ, ಮೇಘಸ್ಪೋಟಗಳ ದಿನಗಳೂ ಇದ್ದವು.

ಜಾಗತಿಕವಾಗಿ ಭಾರತವೂ ಸೇರಿದಂತೆ 109 ದೇಶಗಳು‌ ಹವಾಮಾನ ವೈಪರೀತ್ಯದ ಬೆಳವಣಿಗೆ/ಘಟನೆಗಳಿಂದ ವಿವಿಧ‌ ರೀತಿಯ ನಷ್ಟವನ್ನು ಅನುಭವಿಸಿವೆ. ಈ ಪೈಕಿ ಆಫ್ರಿಕಾ, ಯುರೊಪ್ ಹಾಗೂ ಪಶ್ಚಿಮ ಏಷ್ಯಾದ 59 ರಾಷ್ಟ್ರಗಳು ಅತಿ ಹೆಚ್ಚು ನಷ್ಟ ಅನುಭವಿಸಿದ್ದರೆ, ಇಂಡೋನೇಶಿಯಾದಲ್ಲಿ ಅತಿಹೆಚ್ಚು ಮಂದಿ ನಷ್ಟಕ್ಕೆ ಗುರಿಯಾಗಿದ್ದಾರೆ. ಲಿಬಿಯಾದಲ್ಕಿ ಅತಿ ಹೆಚ್ಚು ಪ್ರಾಣಹಾನಿ ಸಂಭವಿಸಿದೆ ಎನ್ನುತ್ತದೆ ವರದಿ.

ಸಿಎಸ್ಇ ಯ ಅನಿಲ್ ಅಗರವಾಲ್ ವಾರ್ಷಿಕ ಪರಿಸರ ಮತ್ತು ಅಭಿವೃದ್ದಿ ಸಂವಾದದಲ್ಲಿ ಅರ್ಥಶಾಸ್ತ್ರಜ್ಞರಾದ ನಿತಿನ್ ದೇಸಾಯಿ,‌ಹಿರಿಯ ಪತ್ರಕರ್ತ ಟಿಎನ್ ನಿನಾನ್, ಸಿಎಸ್ಇ ಡಿಜಿ ಸುನೀತಾ ನಾರಾಯಣ್ ವಾರ್ಷಿಕ ವರದಿಯನ್ನು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸುನಿತಾ, ಹವಾಮಾನ ವೈಪರೀತ್ಯದಿಂದ ವಲಸೆಗೆ ಗುರಿಯಾಗುತ್ತಿರುವವರ‌ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ ಎಂದರು. ಅಲ್ಲದೇ, ಹವಾಮಾನ ವೈಪರೀತ್ಯ ಪರಿಣಾಮಗಳನ್ನು ಎದುರಿಸಲು ಕೇವಲ ತಾಂತ್ರಿಕವಾಗಿ ಸಬಲರಾದರೆ ಸಾಲದು. ನೀತಿ‌ ನಿರೂಪಣೆ ಹಾಗೂ ಪರಿಸರ ನಿಯಮ ಅನುಷ್ಠಾನ ಸಂಸ್ಥೆಗಳನ್ನು ಬಲಿಷ್ಠಗೊಳಿಸಬೇಕಿದೆ ಎಂದು ಹೇಳಿದರು.
ಸಿಎಸ್ಇ ಪರಿಸರ ಮತ್ತು ಅಭಿವೃದ್ದಿ ನೀತಿ ನಿರೂಪಣೆಯಲ್ಲಿ ತೊಡಗಿದ್ದು, ಅಧ್ಯಯನ ಕೃತಿಗಳನ್ನು ಪ್ರಕಟಿಸುವುದರ ಜತೆಗೆ ವಿವಿಧ ಕಾರ್ಯಾಗಾರಗಳು, ತರಬೇತಿಗಳನ್ನು‌ ನಿರಂತರವಾಗಿ ಹಮ್ಮಿಕೊಳ್ಳುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next