Advertisement
ಈ ಹಿಂದೆ ಜಿಲ್ಲಾಸ್ಪತ್ರೆಗಳಲ್ಲಿ ಬಿಪಿಎಲ್ ಕುಟುಂಬ ಸದಸ್ಯರಿಗೆ ಒಂದಿಷ್ಟು ರೋಗ ಪತ್ತೆ ಪರೀಕ್ಷೆಗಳು ಉಚಿತವಾಗಿದ್ದವು. ಇನ್ನು ಕೆಲವು ಪರೀಕ್ಷೆಗಳಿಗೆ ಶೇ.50ರಷ್ಟು ಶುಲ್ಕ ಪಾವತಿಸಬೇಕಿತ್ತು. ಪ್ರಸ್ತುತ ಅದರ ವ್ಯಾಪ್ತಿಯನ್ನು 2018 -19 ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯ “ಉಚಿತ ರೋಗಪತ್ತೆ ಪರೀಕ್ಷೆಗಳು’ ಎಂಬ ಕಾರ್ಯಕ್ರಮದಡಿ ಎಲ್ಲಾ ವರ್ಗದ ಜನರಿಗೂ ಸಂಪೂರ್ಣ ಉಚಿತ ರೋಗಪತ್ತೆ ಪರೀಕ್ಷೆ ಸೇವೆ ನೀಡುವಂತೆ ವಿಸ್ತರಣೆ ಮಾಡಿ ರಾಜ್ಯ ಆರೋಗ್ಯ ಇಲಾಖೆಯು ಆದೇಶ ಹೊರಡಿಸಿದೆ.
ದುಬಾರಿ ಶುಲ್ಕದ ಎಂಆರ್‌ಐ, ಸಿಟಿ ಸ್ಕ್ಯಾನ್, ಥೈರಾಡ್ ಪರೀಕ್ಷೆ ಸೇರಿದಂತೆ ಹೃದ್ರೋಗ ಪರೀಕ್ಷೆಗಳಾದ ಇಸಿಜಿ ಹಾಗೂ ಎಕೋ, ಯಕೃತ್, ಕಿಡ್ನಿ ತಪಾಸಣಾ ಪರೀಕ್ಷೆ, ಕ್ಷ-ಕಿರಣ, ರಕ್ತ ಗುಂಪಿನ ಪರೀಕ್ಷೆಯಿಂದ ಹಿಡಿದು ಎಲ್ಲಾ ಬಗೆಯ ರಕ್ತ ಪರೀಕ್ಷೆಗಳು, ಮೂತ್ರ ಪರೀಕ್ಷೆ, ಮಲೇರಿಯಾ, ಡೆಂಗ್ಯೂ ಪರೀಕ್ಷೆಗಳು, ಅಲ್ಟಾಸೌಂಟ್ ಸ್ಕ್ಯಾನಿಂಗ್, ಕೊಬ್ಬಿನಾಂಶ ಪರೀಕ್ಷೆಗಳು ಸೇರಿದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಎಲ್ಲಾ 58 ಪರೀಕ್ಷೆಗಳು ಈ ಕಾರ್ಯಕ್ರಮದ ವ್ಯಾಪ್ತಿಗೆ ಬರುತ್ತವೆ. ಈಗಾಗಲೇ ಈ ಉಚಿತ ಪರೀಕ್ಷೆ ಸೇವೆಯನ್ನು ನಮ್ಮ ಆಸ್ಪತ್ರೆಯಲ್ಲಿ ಅ.08 ರಿಂದಲೇ ನೀಡಲಾಗುತ್ತಿದೆ ಎಂದು ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆ ಅಧೀಕ್ಷಕ ಡಾ.ಭಾನುಮೂರ್ತಿ ತಿಳಿಸಿದರು.
Related Articles
Advertisement
ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿ ಈ ವಿಶೇಷ ಕಾರ್ಯಕ್ರಮವನ್ನು ಆರಂಭಿಸಿದ್ದು, ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಸಹಾಯಕವಾಗಲಿದೆ. ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಯ ಪ್ರಯೋಗಾಲಯಗಳಲ್ಲಿ ಲಭ್ಯವಿರುವ ಎಲ್ಲಾ ರೀತಿಯ ರೋಗಪತ್ತೆ ಪರೀಕ್ಷೆಗಳನ್ನು ಉಚಿತವಾಗಿ ಮಾಡುವಂತೆ ಕಳೆದ ವಾರ ಆದೇಶ ನೀಡಲಾಗಿದೆ.– ಸ್ವಾತಂತ್ರಕುಮಾರ್ ಬಣಕಾರ್, ಉಪನಿರ್ದೇಶಕರು. ರಕ್ತಕೋಶ. ಈ ಕಾರ್ಯಕ್ರಮದಡಿ ರಕ್ತದ ಗುಂಪಿನ ಪರೀಕ್ಷೆಯಿಂದ ಹಿಡಿದು ಸಿಟಿ, ಎಂಆರ್‌ಐ ಸ್ಕ್ಯಾನ್‌ವರೆಗೂ ಎಲ್ಲಾ ವಿಧದ ಪರೀಕ್ಷೆಗಳು ಉಚಿತವಾಗಿ ಮಾಡಲಾಗುತ್ತಿದೆ. ಪ್ರಸ್ತುತ ಆಸ್ಪತ್ರೆಗಳಲ್ಲಿ ಯಾವ ಯಾವ ರೋಗ ಪತ್ತೆಗೆ ಪ್ರಯೋಗಾಲಯಗಳ ಸೌಲಭ್ಯವಿದಯೋ ಅಲ್ಲಿ ಉಚಿತ ಸೇವೆ ಸಿಗಲಿದೆ. ಮುಂದಿನ ದಿನಗಳಲ್ಲಿ ಎಲ್ಲಾ 58 ರೋಗಗಳ ಪ್ರಯೋಗಾಲಯಗಳನ್ನು ಜಿಲ್ಲಾಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಆರಂಭಿಸಲು ಚಿಂತನೆ ನಡೆಸಲಾಗುತ್ತಿದೆ.
– ರೇಣುಕಾ, ಉಪನಿರ್ದೇಶಕರು ಉಚಿತ ರೋಗ ಪತ್ತೆ ಪರೀಕ್ಷೆಗಳ ಕಾರ್ಯಕ್ರಮ. ಉಚಿತ ಯೋಜನೆಯ ಮಾಹಿತಿಯೇ ಜನಕ್ಕಿಲ್ಲ.
ಕಳೆದ ವಾರವೇ ಈ ಉಚಿತ ರೋಗಪತ್ತೆ ಕಾರ್ಯಕ್ರಮಕ್ಕೆ ಇಲಾಖೆ ಆದೇಶಿಸಿದ್ದರೂ ಕೂಡ ಈ ಕುರಿತು ಸಾರ್ವಜನಿಕರಲ್ಲಿ ಮಾಹಿತಿ ಇಲ್ಲ. ಯಾವುದೇ ಮಾಹಿತಿ ಫಲಕಗಳಾಗಲಿ ಅಥವಾ ಸುತ್ತೋಲೆಗಳಾಗಲಿ ಆಸ್ಪತ್ರೆಗಳಲ್ಲಿ ಕಾಣುತ್ತಿಲ್ಲ. ಹೀಗಾಗಿ, ಅನಗತ್ಯ ಶುಲ್ಕ ವಸೂಲಿಯಾಗುವ ಸಾಧ್ಯತೆ ಅಥವಾ ಹೇಗಿದ್ದರೂ ಹಣ ನೀಡಬೇಕು ಎಂದು ಖಾಸಗಿ ಪ್ರಯೋಗಾಲಯ ಮೊರೆಹೋಗುತ್ತಿದ್ದಾರೆ. ಆದ್ದರಿಂದ ಇಲಾಖೆಯೂ ಈ ಜನಸ್ನೇಹಿ ಕಾರ್ಯಕ್ರಮದ ಮಾಹಿತಿಯನ್ನು ಜನರಿಗೆ ತಿಳಿಸುವತ್ತ ಕ್ರಮವಹಿಸಬೇಕಿದೆ. – ಜಯಪ್ರಕಾಶ್ ಬಿರಾದಾರ್