Advertisement

ಮಧುಮೇಹ ಪಾದದ ತಪಾಸಣೆ ಮತ್ತು ಆರೈಕೆ

07:17 PM Apr 13, 2019 | Sriram |

ಪ್ರಪಂಚಾದ್ಯಂತ ಅಸಾಂಕ್ರಾಮಿಕ ರೋಗದಿಂದ ಬಳಲುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಮುಂದುವರಿದ ರಾಷ್ಟ್ರಗಳಲ್ಲದೆ ಮುಂದುವರಿಯುತ್ತಿರುವ ಮತ್ತು ಹಿಂದುಳಿದ ದೇಶಗಳಲ್ಲಿಯೂ ದಿನಂಪ್ರತಿ ಅಸಾಂಕ್ರಾಮಿಕ ರೋಗಗಳ ಸಂಖ್ಯೆ ಹೆಚ್ಚುತ್ತಿದೆ. ಬದಲಾಗುತ್ತಿರುವ ಜೀವನ ಶೈಲಿ, ಆಹಾರ ಪದ್ಧತಿ, ಕಡಿಮೆಗೊಳ್ಳುತ್ತಿರುವ ದೈಹಿಕ ಚಟುವಟಿಕೆ ಮತ್ತು ವ್ಯಾಯಾಮ, ಬೊಜ್ಜುತನ, ನಗರೀಕರಣ ಇವುಗಳ ಸಂಖ್ಯೆಯನ್ನು ಹೆಚ್ಚಿಸುತ್ತಿವೆ.

Advertisement

ಅಸಾಂಕ್ರಾಮಿಕ ರೋಗಗಳು ಉಲ್ಬಣಿಸುವುದನ್ನು ತಡೆಯಲು ವ್ಯಕ್ತಿಯು ತನ್ನ ಕಾಲ ಮೇಲೆ ತಾನೇ ನಿಂತುಕೊಳ್ಳುವುದು, ನಡೆದಾಡುವುದು ತುಂಬಾ ಮುಖ್ಯ. ಆದರೆ ಕಾಲಲ್ಲಿ ನೋವು, ಸ್ಪರ್ಶ ಜ್ಞಾನದ ತೊಂದರೆ, ಸಮತೋಲನದ ತೊಂದರೆ, ಕಾಲಿಗೆ ಏನಾದರೂ ಘಾಸಿಯಾಗಬಹುದೆಂಬ ಭಯ ಅಥವಾ ಪಾದದಲ್ಲಿ ತೆರೆದ ಹುಣ್ಣು ಅಥವಾ ಗಾಯಗಳಿದ್ದರೆ ನಡೆದಾಡಲು ಮತ್ತು ದೈನಂದಿನ ಚಟುವಟಿಕೆ ಮಾಡಲು ತೊಂದರೆಯಾಗುತ್ತದೆ. ಇಂತಹ ತೊಂದರೆಗಳು ಎದುರಾದಾಗ ಜನರು ಸಾಮಾನ್ಯವಾಗಿ ಓಡಾಡುವುದನ್ನು ಕಡಿಮೆ ಮಾಡುತ್ತಾರೆ. ಇದರಿಂದಾಗಿ ಅವರ ತಾತ್ಕಾಲಿಕ ಹಾಗೂ ದೀರ್ಘ‌ಕಾಲಿಕ ರಕ್ತದಲ್ಲಿನ ಸಕ್ಕರೆ ಅಂಶ, ದೇಹದ ತೂಕ, ಸಮಗ್ರ ಆರೋಗ್ಯ ಸ್ಥಿತಿಯಲ್ಲಿ ಏರುಪೇರು ಉಂಟಾಗುವಂತೆ ಮಾಡುತ್ತದೆ.

ಮಧುಮೇಹದಲ್ಲಿ ಅಧಿಕ ರಕ್ತದಲ್ಲಿನ ಸಕ್ಕರೆ (ಗ್ಲೂಕೋಸ್‌) ಅಂಶದಿಂದಾಗಿ ಚಿಕ್ಕ ಮತ್ತು ದೊಡ್ಡ ರಕ್ತನಾಳಗಳಿಗೆ ಹಾನಿ ಉಂಟಾಗುವ ಅಪಾಯ ಹೆಚ್ಚಿರುತ್ತದೆ. ರಕ್ತನಾಳಕ್ಕೆ ಹಾನಿ ಉಂಟಾದಾಗ ಕಣ್ಣಿನ ರೆಟಿನೋಪತಿ ತೊಂದರೆ, ಮೂತ್ರ ಪಿಂಡದ ತೊಂದರೆ ಅಲ್ಲದೇ ಕಾಲಿನ ನರಗಳ ತೊಂದರೆಯು ಉಂಟಾಗುತ್ತದೆ, ಇದರಿಂದಾಗಿ ಕಾಲಿನಲ್ಲಿ ಹುಣ್ಣು ಉಂಟಾಗುವ ಸಾದ್ಯತೆ ಹೆಚ್ಚುತ್ತದೆ. ಹುಣ್ಣು ತೀವ್ರತರವಾಗಿ ಉಲ್ಬಣಗೊಂಡರೆ ಕಾಲಿನ ಛೇದನವೂ ಉಂಟಾಗಬಹುದು. ಹೀಗೆ ಚಿಕ್ಕ ಮತ್ತು ದೊಡ್ಡ ರಕ್ತನಾಳದ ತೊಂದರೆಯಿಂದಾಗಿ ದೈಹಿಕ ಚಟುವಟಿಕೆಯು ಕುಂಠಿತಗೊಳ್ಳತ್ತದೆ.

ಮಧುಮೇಹವು ದೇಹದ ಎಲ್ಲ ಭಾಗಗಳ ಮೇಲೆ ಋಣಾತ್ಮಕ ಪರಿಣಾಮ ಉಂಟುಮಾಡುತ್ತದೆ, ಮೊದಲಿಗೆ ಪಾದದ ಮೇಲೆ ಪರಿಣಾಮ ಉಂಟುಮಾಡುತ್ತದೆ. ಇದನ್ನು ಮುಂಚಿತವಾಗಿ ಪತ್ತೆ ಹಚ್ಚಿ, ಅದಕ್ಕೆ ತಕ್ಕುದಾದ ಆರೈಕೆಯನ್ನು ಪಡೆಯುವುದೇ ಪ್ರಮುಖ ಬಿಕಿತ್ಸೆಯಾಗಿದೆ. ಪ್ರಪಂಚಾದ್ಯಂತ ಮಧುಮೇಹವು ಹೆಚ್ಚಿದಂತೆಲ್ಲ ಪಾದದ ತೊಂದರೆಗಳು ಮತ್ತು ಹುಣ್ಣಿನ ಸಮಸ್ಯೆಗಳು ಸಹ ಹೆಚ್ಚುತ್ತವೆ. ಆದುದರಿಂದ ತುರ್ತಾಗಿ ಮಧುಮೇಹದ ಪಾದದ ತೊಂದರೆಗಳನ್ನು ತಡೆಗಟ್ಟುವುದು ಬಹಳ ಮುಖ್ಯವಾಗಿದೆ.

ಅಂಕಿ ಅಂಶಗಳು
ಉಡುಪಿ ಜಿಲ್ಲೆಯಾದ್ಯಂತ ಶೇ.14 ಮಧುಮೇಹಿಗಳು ಇದ್ದಾರೆ ಎಂದು ಅಂಕಿ ಅಂಶಗಳು ಹೇಳುತ್ತವೆ. ಅಧ್ಯಯನದ ವರದಿ ಪ್ರಕಾರ ಉಡುಪಿ ಜಿಲ್ಲೆಯಲ್ಲಿ ಶೇ.58 ಮಧುಮೇಹಿಗಳು ಪಾದದ ಮೂಳೆ, ಮಾಂಸ ಖಂಡಗಳ ರಚನೆಯ ತೊಂದರೆ, ಶೇ. 30.2 ಸ್ಪರ್ಶ ಜ್ಞಾನದ ನರದೌರ್ಬಲ್ಯ, ಶೇ. 81.9 ಸ್ವನಿಯಂತ್ರಿತ ನರದೌರ್ಬಲ್ಯ, ಶೇ. 22.2 ರಕ್ತನಾಳದ ತೊಂದರೆಗಳು, ಶೇ. 26.7 ಸೋಂಕು, ಶೇ. 6.4 ಹುಣ್ಣು ಇದೆ ಎಂದು ಹೇಳುತ್ತದೆ. ಪ್ರಪಂಚಾದ್ಯಂತ ಪ್ರತಿ 20 ಸೆಕೆಂಡುಗಳಿಗೆ ಒಬ್ಬ ಮಧುಮೇಹಿಯು ತನ್ನ ಪಾದ ಅಥವಾ ಪಾದದ ಒಂದು ಭಾಗವನ್ನು ಕಳೆದುಕೊಳ್ಳುತ್ತಾರೆ. ಪಾದದಲ್ಲಿ ಹುಣ್ಣಿರುವ ಅರ್ಧಕ್ಕಿಂತಲೂ ಹೆಚ್ಚು ಮಂದಿ ಅದರ ಸೋಂಕಿಗೆ ತುತ್ತಾಗುತ್ತಾರೆ. ಇವರಲ್ಲಿ ಶೇ. 20 ಮಧುಮೇಹಿಗಳು ಸಮಸ್ಯೆ ಉಲ್ಬಣಗೊಂಡು ಪಾದದ ಛೇದನಕ್ಕೆ ಒಳಪಡುತ್ತಾರೆ.

Advertisement

ಪ್ರಪಂಚದಲ್ಲಿ ಮುಂದುವರಿದ ರಾಷ್ಟ್ರಗಳಿಗೆ ತುಲನೆ ಮಾಡಿದಲ್ಲಿ ಭಾರತದಂತಹ ಮುಂದುವರಿಯುತ್ತಿರುವ ದೇಶ ಹಾಗೂ ಇತರ ಹಿಂದುಳಿದ ದೇಶಗಳಲ್ಲಿ ಮಧುಮೇಹದ ಪಾದದ ಸಮಸ್ಯೆಗಳು ಹೆಚ್ಚಿವೆ. ಇದಕ್ಕೆ ಕಾರಣಗಳೇನೆಂದರೆ ಸ್ವತ್ಛತೆ ಹಾಗೂ ನೈರ್ಮಲ್ಯದ ಕೊರತೆ, ಬರೀ ಕಾಲಿನಲ್ಲಿ ಪಾದರಕ್ಷೆ ಇಲ್ಲದೆ ನಡೆದಾಡುವುದು, ಸರಿಯಾದ ಆರೋಗ್ಯ ವ್ಯವಸ್ಥೆ ಇಲ್ಲದಿರುವಿಕೆ, ಆರೋಗ್ಯ ವ್ಯವಸ್ಥೆಯ ಅಸಮರ್ಪಕ ಬಳಕೆ, ಭೌಗೋಳಿಕ ಕಾರಣಗಳು, ಆರ್ಥಿಕ ಸಮಸ್ಯೆಗಳು, ಸಾಂಸ್ಕೃತಿಕ ಆಚರಣೆ ಮತ್ತು ಮಧುಮೇಹದ ಪಾದದ ಸಮಸ್ಯೆಗಳು ತೀವ್ರತರವಾಗಿ ಉಲ್ಬಣಗೊಳ್ಳುವ ತನಕ ಚಿಕಿತ್ಸೆ ಪಡೆಯದೇ ಇರುವುದೇ ಕಾರಣವಾಗಿದೆ.

ಮಧುಮೇಹ ಪಾದದ
ತೊಂದರೆಗಳ ವಿಜ್ಞಾನ
ಮಧುಮೇಹದ ಪಾದದ ಸಮಸ್ಯೆಗಳಲ್ಲಿ ನರದೌರ್ಬಲ್ಯವು ಒಂದು ಅಪಾಯಕಾರಿ ಅಂಶವಾಗಿದೆ. ಕಾಲಿನ ಸಂವೇದನ ನರದೌರ್ಬಲ್ಯ ದಿಂದಾಗಿ ಉಷ್ಣತೆಯನ್ನು ಪತ್ತೆ ಹಚ್ಚುವ ಸಾಮರ್ಥ್ಯ, ರಕ್ಷಣಾತ್ಮಕ ಸ್ಪರ್ಶ ಜ್ಞಾನ, ಕಂಪನ ಗ್ರಹಿಸುವಿಕೆ, ಗಂಟುಗಳ ಸ್ಥಿತಿ ಮತ್ತು ಚಲನೆಯ ಗ್ರಹಿಕೆ, ಪಾದದಡಿಯ ಒತ್ತಡ, ಎಲ್ಲಕ್ಕಿಂತ ಮುಖ್ಯವಾಗಿ ನೋವನ್ನು ಗ್ರಹಿಸುವ ಶಕ್ತಿಯನ್ನು ಕುಂದುತ್ತದೆ. ನರದೌರ್ಬಲ್ಯವು ವ್ಯಕ್ತಿಗೆ ಪಾದದಲ್ಲಿ ಉರಿ, ಜುಮ್ಮೆನಿಸುವಿಕೆ, ಮರಗಟ್ಟುವಿಕೆಯಂತಹ ಸಂವೇದನೆಯನ್ನು ಉಂಟುಮಾಡುತ್ತದೆ. ಇವೆಲ್ಲವುದರಿಂದಾಗಿ ಪಾದದಲ್ಲಿ ಕ್ರಮೇಣವಾಗಿ ಸ್ಪರ್ಶ ಜ್ಞಾನ ಕಡಿಮೆಯಾಗುವುದರಿಂದ ಪಾದದಲ್ಲಿ ಅರಿವಿಗೆ ಬಾರದೆ ಗಾಯಗಳು ಉಂಟಾಗುತ್ತವೆ.

ಸ್ವನಿಯಂತ್ರಿತ ನರದೌರ್ಬಲ್ಯವು ರಕ್ತನಾಳಗಳ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಇದರಿಂದಾಗಿ ಚರ್ಮದ ಮೇಲ್ಮೆ„ ಗುಣ ಮತ್ತು ಅದು ಬಿಗಿತಗೊಳ್ಳುವಂತೆ ಮಾಡುತ್ತದೆ. ಇದರಿಂದಾಗಿ ಚರ್ಮವು ಶುಷ್ಕಗೊಂಡು, ಪಾದವು ಬಿರುಕು ಬಿಡುವಂತೆ ಮಾಡುತ್ತದೆ. ಈ ಶುಷ್ಕತನವು ಹೆಚ್ಚಾಗಿ ಪಾದದ ಅಡಿ ಭಾಗದ ಮೇಲೆ ಪರಿಣಾಮ ಬೀರುತ್ತದೆ. ಪಾದದ ಮೇಲ್ಭಾಗದಲ್ಲಿ ಬೆವರು ಕಂಡುಬಂದು ಶಿಲೀಂಧ‌Å ಸೋಂಕು ಕಂಡುಬರುವಂತಹ ಸಾಧ್ಯತೆ ಇರುತ್ತದೆ. ಇವೆಲ್ಲದುದರಿಂದಾಗಿ ಚರ್ಮದ ಗಡಸುತನ ಘರ್ಷಣೆ ಹೆಚ್ಚಿ ಚರ್ಮವು ದಪ್ಪವಾಗುವುದರೊಂದಿಗೆ ಅದನ್ನು ಕಠಿನಗೊಳಿಸುತ್ತದೆ. ಆ ಭಾಗದಲ್ಲಿ ಒತ್ತಡ ಬಿದ್ದು ಚರ್ಮಕ್ಕೆ ಹಾನಿ ಅಥವಾ ಗಾಯಗಳಾಗುವ ಸಂಭವ ಇರುತ್ತದೆ.

ಮೂಳೆ ಮಾಂಸ ಖಂಡಗಳ ನರದೌರ್ಬಲ್ಯವು ಪಾದದ ಚಿಕ್ಕ ಮಾಂಸ ಖಂಡಗಳ ಮೇಲೆ ಪರಿಣಾಮ ಉಂಟುಮಾಡಿ ಪಾದವು ಕೀಲಿಗಳ ಅಸ್ಥಿರತೆಯನ್ನು ಹೆಚ್ಚಿಸುತ್ತದೆ. ಮಾಂಸ ಖಂಡಗಳು ಬಲ ಕಳೆದುಕೊಳ್ಳವುದರೊಂದಿಗೆ ಅವುಗಳು ಗಾತ್ರದಲ್ಲಿಯೂ ಕುಂಠಿತಗೊಳ್ಳುತ್ತವೆ. ಕ್ರಮೇಣ ಪಾದದ ಮತ್ತು ಬೆರಳುಗಳ ಆಕಾರದಲ್ಲಿ ಬದಲಾವಣೆ ಕಂಡುಬರುತ್ತದೆ. ಇದು ಪಾದದಡಿಯಲ್ಲಿ ದೇಹದ ಭಾರ ಅಸಮರ್ಪಕವಾಗಿ ಹಂಚಿ ಹೋಗುವಂತೆ ಮಾಡುತ್ತದೆ. ಒತ್ತಡ ಶೇಖರಣೆ ಹೆಚ್ಚಾದ ಭಾಗದಲ್ಲಿ ಗಾಯಗಳಾಗುವ ಸಾಧ್ಯತೆ ಇರುತ್ತದೆ.

ಮಧುಮೇಹವನ್ನು ಸರಿಯಾಗಿ ನಿಯಂತ್ರಣ ಮಾಡದೇ ಹೋದಲ್ಲಿ ಅಥವಾ ದೀರ್ಘಾವಧಿಯ ಮಧುಮೇಹವು ರಕ್ತನಾಳದ ಮೇಲೆ ಅಡ್ಡ ಪರಿಣಾಮ ಉಂಟು ಮಾಡುತ್ತದೆ. ರಕ್ತನಾಳದ ಗಡಸುತನ ಅಥವಾ ರಕ್ತನಾಳವು ಸಂಕುಚಿತಗೊಳ್ಳುವಂತೆ ಮಾಡುತ್ತದೆ. ಇದರಿಂದಾಗಿ ಪಾದದ ಚಿಕ್ಕ ರಕ್ತನಾಳಗಳಲ್ಲಿ ರಕ್ತಸಂಚಾರದ ತೊಂದರೆ ಉಂಟಾಗಿ ಗ್ಯಾಂಗ್ರೀನ್‌ ಉಂಟಾಗುವುದು ಅಥವಾ ಗಾಯಗಳಾದಲ್ಲಿ ಅದು ಮಾಯಲು ವಿಳಂಬವಾಗುವ ಸಾಧ್ಯತೆ ಇರುತ್ತದೆ.

ಮಧುಮೇಹಿಗಳ ಕಾಲಿನಲ್ಲಿ ಹುಣ್ಣುಗಳುಂಟಾಗಲು ಸಣ್ಣ ಪ್ರಮಾಣದ ಘಾಸಿ ಅಥವಾ ಅಪಘಾತಗಳು ಪೂರಕವಾಗುತ್ತವೆ. ಅವುಗಳೆಂದರೆ,

ಬಾಹ್ಯ ಕಾರಣಗಳು
-ಪಾದಕ್ಕೆ ಸರಿಯಾಗಿ ಹೊಂದಿಕೊಳ್ಳದ ಪಾದರಕ್ಷೆಯನ್ನು ಧರಿಸುವುದು
– ಹೊಸ ಪಾದರಕ್ಷೆ
– ಸರಿಯಾದ ಕಾಲು ಚೀಲ ಅಥವಾ ಸಾಕ್ಸ್‌ ಧರಿಸದೇ ಇರುವುದು
– ಅಸಮರ್ಪಕವಾಗಿ ಉಗುರುಗಳ ಕತ್ತರಿಸುವಿಕೆ
– ಕೆಲಸದ ಸಮಯದಲ್ಲಿ ಉಂಟಾಗುವ ಘಾಸಿ

ಆಂತರಿಕ ಕಾರಣಗಳು
– ದೀರ್ಘ‌ ಕಾಲದಿಂದ ಮಧುಮೇಹ
– ಕಾಲಿನ ಹುಣ್ಣಿನ ಅಥವಾ ಛೇದನದ ಇತಿಹಾಸ
– ಪ್ರಾಯ
– ತೂಕ
– ಕಣ್ಣಿನ ತೊಂದರೆ (ರೆಟಿನೋಪತಿ)
– ಮೂತ್ರ ಪಿಂಡದ ತೊಂದರೆ
– ಕಾಲಿನ ಆಕಾರದಲ್ಲಿ ಬದಲಾವಣೆ

ಮಧುಮೇಹ ಪಾದದ ತಪಾಸಣೆ
1. ನರದ ತಪಾಸಣೆ
– ಪಾದದ ರಕ್ಷಣಾತ್ಮಕ ಸ್ಪರ್ಶಜ್ಞಾನ: ಮೋನೋಫಿಲಾಮೆಂಟ್‌ ಅನ್ನು ಪಾದದ ಬೇರೆ ಬೇರೆ ಭಾಗಗಳಿಗೆ ಸ್ಪರ್ಶಿಸಿ ಪರೀಕ್ಷಿಸಲಾಗುವುದು.
– ಕಂಪನ ಗ್ರಹಣ ಪರೀಕ್ಷೆ:
ಟ್ಯೂನಿಂಗ್‌ ಫೋರ್ಕ್‌ ಅಥವಾ ವಿಪಿಟಿ (ಕಂಪನ ಗ್ರಹಿಸುವ ಮಿತಿ) ಸಾಧನವನ್ನು ಬಳಸಿ ಮೂಳೆಗಳು ಪ್ರಮುಖವಾಗಿರುವ ಜಾಗದಲ್ಲಿ ಪರೀಕ್ಷಿಸಲಾಗುವುದು
– ಉಷ್ಣತೆಯ ಪರೀಕ್ಷೆ:
ಪಾದದಲ್ಲಿ ಬಿಸಿ ಮತ್ತು ತಂಪು ಇದರ ಗ್ರಹಿಕೆಯನ್ನು ಅರಿಯಲು ಮಾಡುವ ಪರೀಕ್ಷೆ
– ರಿಫ್ಲೆಕ್ಸ್‌ ಪರೀಕ್ಷೆ

2. ರಕ್ತನಾಳದ ಪರೀಕ್ಷೆ
– ಪಾದದ ಉಷ್ಣತೆಯಲ್ಲಿ ಬದಲಾವಣೆ
– ಚರ್ಮದ ಬಣ್ಣದಲ್ಲಿ ಬದಲಾವಣೆ: ನೀಲಿಗಟ್ಟುವಿಕೆ, ಕೆಂಪಗಾಗುವಿಕೆ ಅಥವಾ ಬಿಳಚಿಕೊಳ್ಳುವಿಕೆ.
– ಪಾದದ ಬಾವು
– ಪಾದದ ನಾಡಿ ಮಿಡಿತ ಪರೀಕ್ಷೆ
– ಕಾಲಿನಲ್ಲಿ ರಕ್ತದೊತ್ತಡದ ಪರೀಕ್ಷೆ
– ಡಾಪ್ಲರ್‌ ಪರೀಕ್ಷೆ
– ಟೊ ಬ್ರೇಕಿಯಲ್‌ ಪರೀಕ್ಷೆ

3. ಮೂಳೆ ಹಾಗೂ ಸ್ನಾಯುಗಳ ಪರೀಕ್ಷೆ
– ಪಾದದ ಮೂಳೆಗಳ ರಚನೆಯಲ್ಲಿ ಬದಲಾವಣೆ
– ಕೀಲುಗಳ ಸೀಮಿತ ಚಲನೆ
– ಸ್ನಾಯುಗಳ ಬಿಗಿತ ಮತ್ತು ಅವುಗಳ ಶಕ್ತಿಯ ಪರೀಕ್ಷೆ
– ನಿಂತಿರುವಾಗ ಪಾದದಡಿಯಲ್ಲಿ ಒತ್ತಡ ಪರೀಕ್ಷೆ
– ನಡೆಯುವಾಗ ಪಾದದಡಿಯಲ್ಲಿ ಒತ್ತಡ ಪರೀಕ್ಷೆ
– ನಡೆಯುವಾಗ ಕೀಲಿಗಳ ಚಲನೆಯ ಪರೀಕ್ಷೆ

4. ಪಾದರಕ್ಷೆ ಹಾಗೂ
ಚರ್ಮದ ತಪಾಸಣೆ
– ಪಾದರಕ್ಷೆಯ ವಿಧ
– ಅದರ ರಚನೆ ಹಾಗೂ ಪಾದಕ್ಕೆ ಹೊಂದಿಕೊಳ್ಳವಿಕೆ
– ಪಾದರಕ್ಷೆಯ ದೃಢತೆ
– ಅದರ ಒಳಮೈ ಹಾಗೂ ಹೊರಮೈ
– ಚರ್ಮದ ಸ್ಥಿತಿ
– ಬಿರುಕು
– ಉಗುರುಗಳ ಸ್ಥಿತಿ
– ಹುಣ್ಣು, ಗ್ಯಾಂಗ್ರೀನ್‌ ಮತ್ತು ಸೋಂಕು
– ಬೆರಳುಗಳ ಸಂಧಿಯಲ್ಲಿ ಸೋಂಕು
– ಕೂದಲ ಬೆಳವಣಿಗೆ

ಮಧುಮೇಹ ಪಾದದ ಸಂರಕ್ಷಣಾತ್ಮಕ ಆರೈಕೆ
1. ಲೇಸರ್‌ ಚಿಕಿತ್ಸೆ
ಲೇಸರ್‌ ಚಿಕಿತ್ಸೆಯು ಪಾದದ ಚಿಕ್ಕ ರಕ್ತನಾಳಗಳಲ್ಲಿ ರಕ್ತಸಂಚಾರವು ಹೆಚ್ಚುವಂತೆ ಮಾಡುತ್ತದೆ, ಅಲ್ಲದೇ ಲೇಸರ್‌ ಕಿರಣವನ್ನು ಜೀವಕೋಶಗಳು ಹೀರಿಕೊಂಡು ಅವುಗಳು ಸರಿಯಾಗಿ ಕೆಲಸ ಮಾಡುವಂತೆ ಮಾಡುತ್ತದೆ. ಇದರಿಂದಾಗಿ, ಮಧುಮೇಹಿಗಳಲ್ಲಿ ಕಾಣಿಸಿಕೊಳ್ಳುವ ಪಾದದ ಉರಿ, ಜುಮ್ಮೆನಿಸುವಿಕೆ, ಮರಗಟ್ಟುವಿಕೆ ಇಂತಹ ತೊಂದರೆಗಳನ್ನು ಗುಣಪಡಿಸಲು ಹೆಚ್ಚು ಸಹಕಾರಿಯಾಗಿದೆ. ಇದಲ್ಲದೆ ಬಹು ಸಮಯದಿಂದ ವಾಸಿಯಾಗದೆ ಇರುವಂತಹ ಹುಣ್ಣುಗಳು ಸಹ ಮಾಯಲು ಇದು ತುಂಬ ಸಹಕಾರಿಯಾಗಿರುತ್ತದೆ.

2. ಫ್ಲೋ ಎಡ್‌ (ರಕ್ತ ಸಂಚಾರ ಸುಗಮಕಾರ ಉಪಕರಣ)
ಈ ಫ್ಲೋ ಎಡ್‌ ಉಪಕರಣದಿಂದ ಅನುಕ್ರಮವಾಗಿ ವಿದ್ಯುತ್‌ ತರಂಗಗಳು ಮಿಡಿಯುತ್ತವೆ. ಇದು ಕಾಲಿನ ಮಾಂಸ ಖಂಡಗಳನ್ನು ಹಿಂಡುವಂತೆ ಮಾಡಿ ಆಳದಲ್ಲಿರುವ ರಕ್ತನಾಳಗಳಲ್ಲಿ ರಕ್ತ ಸಂಚಾರ ಹೆಚ್ಚುವಂತೆ ಮಾಡುತ್ತದೆ. ಇದರಿಂದಾಗಿ ನರದೌರ್ಬಲ್ಯ ಮತ್ತು ಹುಣ್ಣು ಬೇಗ ಮಾಯುವಂತೆ ಮಾಡುತ್ತದೆ.

3. ಉಗುರುಗಳ ಆರೈಕೆ
ಮಧುಮೇಹಿಗಳ ಉಗುರುಗಳು ಸೂಕ್ಷ್ಮವಾಗಿದ್ದು ಹೆಚ್ಚಾಗಿ ಇವು ತುಂಬಾ ದಪ್ಪಗಾಗಿರುತ್ತವೆ. ಇವು ಸಾಮಾನ್ಯವಾದ ಉಗುರು ಕತ್ತರಿಸುವ ಸಾಧನದಲ್ಲಿ ತುಂಡರಿಸಲು ಮಧುಮೇಹಿಗಳಿಗೆ ಕಷ್ಟವಾಗುತ್ತದೆ ಅಥವಾ ತುಂಬಾ ಬಲ ಹಾಕಿ ಉಗುರು ಕತ್ತರಿಸುವುದರಿಂದ ಉಗುರಿಗೆ ಘಾಸಿಯಾಗಿ ರಕ್ತಸ್ರಾವ ಕೂಡ ಉಂಟಾಗಬಹುದು. ಇಂತಹ ಉಗುರುಗಳನ್ನು ಮಧುಮೇಹ ಪಾದ ಚಿಕಿತ್ಸಾಲಯದಲ್ಲಿ ಪೊಡಿಯಾಟ್ರಿ ಕಿಟ್‌ಅನ್ನು ಬಳಸಿ ಸರಿಯಾಗಿ ಕತ್ತರಿಸಲಾಗುವುದು.

4. ಪಾದರಕ್ಷೆ
ಮಧುಮೇಹಿಗಳು ಇತರರು ಧರಿಸುವ ಪಾದರಕ್ಷೆಯಲ್ಲದೇ ಒಅಖ/ಒಅಕ ಪಾದರಕ್ಷೆಯನ್ನು ಧರಿಸುವುದು ಉತ್ತಮ. ಇದು ಪಾದದಡಿಯಲ್ಲಿ ಒತ್ತಡ ಸಮರ್ಪಕವಾಗಿ ಹಂಚಿ ಹೋಗುವಂತೆ ಮಾಡುತ್ತದೆ. ಆದರೆ ಇಂತಹ ಪಾದರಕ್ಷೆಯನ್ನು ಧರಿಸುವ ಮುನ್ನ ಪಾದದ ಒತ್ತಡವನ್ನು ಪರೀಕ್ಷಿಸಿ, ವೈದ್ಯರ ಶಿಫಾರಸಿನ ಮೇರೆಗೆ ಖರೀದಿಸುವುದು ಉತ್ತಮ. ಪಾದದಲ್ಲಿ ಹುಣ್ಣುಗಳಿರುವ ಮಧುಮೇಹಿಗಳು ಗಾಯ ಭಾಗಕ್ಕೆ ಒತ್ತಡ ಬೀಳದಂತೆ ಪಾದರಕ್ಷೆಯನ್ನು ಧರಿಸುವುದು ಸೂಕ್ತವಾಗಿರುತ್ತದೆ.

5. ಇನ್ಸೋಲ್‌
ಚಪ್ಪಲಿಯ ಒಳ ಭಾಗದಲ್ಲಿ ಪಾದದ ಅಡಿಗಡೆ ಇರುವ ಮೊದಲ ಭಾಗವನ್ನು ಇನ್ಸೋಲ್‌ ಎನ್ನುತ್ತಾರೆ. ಇದು ಪಾದದ ಅಡಿ ಬದಿಯಲ್ಲಿ ದೇಹದ ಭಾರವು ಸರಿದೂಗಿಸಿಕೊಂಡು ಸಮಾನವಾಗಿ ದೇಹದ ಭಾರವು ಹಂಚಿ ಹೋಗುವಂತೆ ಮಾಡುತ್ತದೆ. ಮಧುಮೇಹಿಗಳಲ್ಲಿ ನರ ದೌರ್ಬಲ್ಯದಿಂದಾಗಿ ಉಂಟಾಗುವ ಪಾದದ ಆಕಾರದಲ್ಲಿ ಬದಲಾವಣೆಯಿಂದಾಗಿ ಪಾದದ ಕೆಲವೊಂದು ಭಾಗದಲ್ಲಿ ಒತ್ತಡ ಶೇಖರಣೆ ಜಾಸ್ತಿಯಾಗಿ ನೋವು ಬರುವಂತಹುದು, ಚರ್ಮದಲ್ಲಿ ಬದಲಾವಣೆ ಅಥವಾ ಹುಣ್ಣು ಉಂಟಾಗುವ ಸಾಧ್ಯತೆ ಇರುತ್ತದೆ. ಅಂತಹ ಸಂದರ್ಭದಲ್ಲಿ ಅವರವರ ಪಾದದ ಆಕಾರಕ್ಕೆ ಅನುಗುಣವಾಗಿ ಇನ್ಸೋಲ್‌ ಅನ್ನು ಕಸ್ತೂರ್ಬಾ ಆಸ್ಪತ್ರೆಯ ಮಧುಮೇಹ ಪಾದ ಚಿಕಿತ್ಸಾಲಯದಲ್ಲಿ ಮಾಡಿಕೊಡಲಾಗುವುದು.

ಮಧುಮೇಹಿಗಳ ಪಾದದ ಆರೈಕೆಗೆ ದಶ ಸೂತ್ರಗಳು
1. ವೈದ್ಯರನ್ನು ನಿಯಮಿತವಾಗಿ ಭೇಟಿ ಮಾಡಿ
– ಪಾದದಲ್ಲಿ ತೊಂದರೆ ಇಲ್ಲದ ಮಧುಮೇಹಿಗಳು: ವರ್ಷಕ್ಕೊಮ್ಮೆ
– ನರದೌರ್ಬಲ್ಯ ಇರುವ ಮಧುಮೇಹಿಗಳು: 6 ತಿಂಗಳಿಗೊಮ್ಮೆ
– ನರದೌರ್ಬಲ್ಯದೊಂದಿಗೆ ರಕ್ತನಾಳದ ತೊಂದರೆ ಅಥವಾ ಕಾಲಿನ ರಚನೆಯಲ್ಲಿ ಬದಲಾವಣೆ: 3 ತಿಂಗಳಿಗೊಮ್ಮೆ
– ಹುಣ್ಣಿನ ಅಥವಾ ಪಾದದ ಛೇದನದ ಇತಿಹಾಸ ಹೊಂದಿರುವವರು: 1-2 ತಿಂಗಳಿಗೊಮ್ಮೆ
2. ಸ್ವಯಂ ಪಾದ ಪರೀಕ್ಷೆ: ಮಧುಮೇಹಿಗಳು ತಮ್ಮ ಪಾದದಲ್ಲಿ ಚರ್ಮ ಅಥವಾ ಉಗುರುಗಳ ಬದಲಾವಣೆ ಉಂಟಾಗಿದೆಯೇ ಎಂದು ದಿನಕ್ಕೊಮ್ಮೆ ಪರೀಕ್ಷಿಸಬೇಕು. ತಾವಾಗಿಯೇ ಬಾಗಿ ನೋಡಲಾಗದೇ ಹೋದಲ್ಲಿ ಕನ್ನಡಿ ಅಥವಾ ಬೇರೆಯವರ ಸಹಾಯ ಪಡೆದು ಪರೀಕ್ಷಿಸಬೇಕು
– ಹುಣ್ಣು
– ಬೊಬ್ಬೆ
– ಚರ್ಮದಲ್ಲಿ ಬಿರುಕು
– ಚರ್ಮದ ಬಣ್ಣದಲ್ಲಿ ಬದಲಾವಣೆ
– ಕೀವು ಅಥವಾ ರಸಿಕೆ
3. ಬರಿಯ ಕಾಲಲ್ಲಿ ನಡೆದಾಡಬಾರದು: ಮನೆಯ ಒಳಗಾಗಲಿ ಅಥವಾ ಹೊರಗಾಗಲಿ ಬರಿಯ ಕಾಲಿನಲ್ಲಿ ನಡೆದಾಡಬಾರದು. ಅನಿವಾರ್ಯ ಪರಿಸ್ಥಿತಿಯಲ್ಲಿ ಬರಿಗಾಲಲ್ಲಿ ನಡೆಯಬೇಕಾದರೆ ಮುಂಜಾನೆ ಅಥವಾ ಮುಸ್ಸಂಜೆ ಸಮಯದಲ್ಲಿ ನಡೆಯಿರಿ.
4. ಪಾದರಕ್ಷೆ: ಆರಾಮದಾಯಕ ಪಾದರಕ್ಷೆ ಧರಿಸಿ, ಅದು ನಿಮ್ಮ ಪಾದಕ್ಕೆ ದೃಢತೆ ಕೊಡುವಂತಿರಲಿ, ಪಾದರಕ್ಷೆಯನ್ನು ಧರಿಸುವ ಮುನ್ನ ಅದರೊಳಗೆ ಪರೀಕ್ಷಿಸಿ
5. ಸಾಕ್ಸ್‌: ಕಾಲಿಗೆ ಸರಿಯಾಗಿ ಹೊಂದುವ ಕಾಲು ಚೀಲ ಧರಿಸಿ, ರಂಧ್ರವಿರದ, ಸರಿಯಾಗಿ ಶುಚಿಗೊಳಿಸಿದ ಹತ್ತಿಯಿಂದ ತಯಾರಿಸಿದ ಕಾಲು ಚೀಲ ಧರಿಸಿ
6. ಕಾಲಿನ ಶುಚಿತ್ವ: ಪ್ರತಿದಿನ ಸಾಬೂನನ್ನು ಬಳಸಿ ಪಾದವನ್ನು ತೊಳೆಯಿರಿ. ಪಾದ ವನ್ನು ತೊಳೆಯಲು ಬಿಸಿಯಾದ ನೀರನ್ನು ಬಳಸಬೇಡಿ. ಪಾದವನ್ನು ತೊಳೆದ ಅನಂತರ ಸರಿಯಾಗಿ ಒರೆಸಿ, ಬೆರಳುಗಳ ಸಂಧಿಯನ್ನು ಸಹ ಒಣಗಿಸಿ.
7. ಬಿಸಿಯಿಂದ ದೂರವಿರಿ: ಪಾದಕ್ಕೆ ಬಿಸಿ ನೀರು, ಚಳಿ ಕಾಯಿಸುವುದು, ಬಿಸಿಯಾದ ವಸ್ತು, ಬೈಕ್‌ನ ಹೊಗೆ ಕೊಳವೆಯಿಂದ ನಿಮ್ಮ ಪಾದವನ್ನು ರಕ್ಷಿಸಿಕೊಳ್ಳಿ.
8. ತೇವಾಂಶ: ಪಾದದ ಚರ್ಮವು ಶುಷ್ಕಗೊಳ್ಳದಂತೆ ತೇವಾಂಶ ಭರಿತ ಮುಲಾಮುಗಳನ್ನು ಅಥವಾ ಎಣ್ಣೆಯನ್ನು ಬಳಸಿ, ಆದರೆ ಬೆರಳುಗಳ ಸಂಧಿಯಲ್ಲಿ ಬಳಸಬೇಡಿ.
9. ಉಗುರುಗಳ ಆರೈಕೆ: ನಿಯಮಿತವಾಗಿ ಉಗುರುಗಳನ್ನು ಕತ್ತರಿಸಿ. ಕತ್ತರಿಸುವಾಗ ನೇರವಾಗಿ, ತೀರ ಚಿಕ್ಕದಾಗದಂತೆ ಕತ್ತರಿಸಿ. ಮನೆಯಲ್ಲೆ ಪಾದಕ್ಕೆ ಯಾವ ತೆರನಾದ ಶಸ್ತ್ರ ಚಿಕಿತ್ಸೆ ಮಾಡಬೇಡಿ.
10. ಮಧುಮೇಹ ನಿಯಂತ್ರಣ: ಮಧುಮೇಹವನ್ನು ಸರಿಯಾಗಿ ನಿಯಂತ್ರಿಸಿ, ನಿಯಮಿತವಾಗಿ ನಿಮ್ಮ ಮಧುಮೇಹವನ್ನು ಪರೀಕ್ಷಿಸಿ ವೈದ್ಯರ ಸಲಹೆ ಮೇರೆಗೆ ಅದಕ್ಕೆ ತಕ್ಕುದಾದ ಚಿಕಿತ್ಸೆ ಪಡೆಯಿರಿ. ಧೂರ್ಮಪಾನ ಮಾಡದಿರಿ.

– ಡಾ| ಅರುಣ್‌ ಜಿ. ಮಯ್ಯ,
ಪ್ರಾಧ್ಯಾಪಕರು ಮತ್ತು ಡೀನ್‌
ಮಧುಮೇಹ ಪಾದ ಚಿಕಿತ್ಸಾಲಯ
ಮಣಿಪಾಲ ಕಾಲೇಜ್‌ ಆಫ್ ಹೆಲ್ತ್‌ ಪ್ರೊಫೆಶನಲ್ಸ್‌, ಮಣಿಪಾಲ ವಿಶ್ವವಿದ್ಯಾಲಯ, ಮಣಿಪಾಲ.

– ಡಾ| ಶುಭಾ ಜಿ. ,
ಪಿಎಚ್‌ಡಿ ಸ್ಕಾಲರ್‌
ಮಧುಮೇಹ ಪಾದ ಚಿಕಿತ್ಸಾಲಯ
ಮಣಿಪಾಲ ಕಾಲೇಜ್‌ ಆಫ್ ಹೆಲ್ತ್‌ ಪ್ರೊಫೆಶನಲ್ಸ್‌, ಮಣಿಪಾಲ ವಿಶ್ವವಿದ್ಯಾಲಯ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next