ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಅನೇಕ ನಿರ್ಮಾಪಕರು ನಟರಾಗಿದ್ದಾರೆ, ನಿರ್ದೇಶಕರು ಆಗಿದ್ದಾರೆ. ಆ ಸಾಲಿಗೆ ಈಗ ಶಶಿಧರ ಕೆ.ಎಂ ಕೂಡ ನಿರ್ಮಾಣದ ಜೊತೆಯಲ್ಲಿ ನಟನೆ ಮಾಡುತ್ತಿದ್ದವರು. ಈಗ ಮೊದಲ ಸಲ ನಿರ್ದೇಶನಕ್ಕೂ ಅಣಿಯಾಗುತ್ತಿದ್ದಾರೆ. ಹೌದು, ಈ ಹಿಂದೆ “ಡಾಟರ್ ಆಫ್ ಪಾರ್ವತಮ್ಮ ‘ ಸಿನಿಮಾ ನಿರ್ಮಿಸಿದ್ದ ಶಶಿಧರ್ ಕೆ.ಎಂ. ಇದೀಗ ತಾವೇ ಹೊಸದೊಂದು ಕಥೆ ಬರೆದು, ಸ್ಕ್ರಿಪ್ಟ್ ಕೆಲಸವನ್ನೂ ಮುಗಿಸಿ, ಮೊದಲ ಸಲ ನಿರ್ದೇಶನಕ್ಕೆ ಇಳಿಯುತ್ತಿದ್ದಾರೆ. ಆ ಚಿತ್ರಕ್ಕಿನ್ನೂ ಸದ್ಯ ನಾಮಕರಣ ಮಾಡಿಲ್ಲ.
ಈ ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲೇ ಇದ್ದ ಶಶಿಧರ್ ಅವರಿಗೆ ಒಂದು ಹೊಸ ಆಲೋಚನೆ ಹೊಳೆದಿದೆ. ಆ ಎಳೆ ಇಟ್ಟುಕೊಂಡು ಒಂದು ಕಥೆ ಹೆಣೆದು ಸಿನಿಮಾ ಮಾಡಿದರೆ ಹೇಗೆ ಎಂದು ಯೋಚಿಸಿದ್ದಾರೆ. ಅದಕ್ಕೂ ಮುನ್ನ, ಆ ಎಳೆಯ ಸಿನಿಮಾ ಎಲ್ಲಾದರೂ ಬಂದಿದೆಯಾ ಎಂದು ಹುಡುಕಿದ್ದಾರೆ. ಭಾರತೀಯ ಚಿತ್ರರಂಗದ ಯಾವ ಭಾಷೆಯಲ್ಲೂ ಆ ಎಳೆಯ ಸಿನಿಮಾ ಬಂದಿಲ್ಲ ಎಂದು ಅರಿತುಕೊಂಡ ಶಶಿಧರ್ ಆ ಕಥೆ ಮಾಡಿಕೊಂಡು ಈಗ ನಿರ್ದೇಶನದ ಜವಾಬ್ದಾರಿ ಹೊರಲು ರೆಡಿಯಾಗಿದ್ದಾರೆ.
ಲಾಕ್ ಡೌನ್ ವೇಳೆ ಅವರಿಗೆ ಹೊಳೆದ ಯೋಚನೆ ಬೇರೇನೂ ಅಲ್ಲ, ಅದು ಡಯಾಬಿಟಿಸ್ ಅಂಶ. ಈ ವಿಷಯ ಇಟ್ಟುಕೊಂಡು ಒಂದು ಬ್ಲಾಕ್ ಕಾಮಿಡಿ ಜೊತೆಗೆ ಗಂಭೀರ ವಿಷಯ ಹೇಳಲು ಮುಂದಾಗಿದ್ದಾರೆ. ಅವರು ಹೇಳುವಂತೆ, ಇಂದು ಡಯಾಬಿಟಿಕ್ ಅನ್ನೋದು, ಮಕ್ಕಳಿಂದ ಹಿಡಿದು ದೊಡ್ಡವರಿಗೂ ಇದೆ. ಆದರೆ, ಅದೇ ಸುಮಾರು 30 ವರ್ಷದ ಯುವಕನಿಗೆ ಡಯಾಬಿಟಿಸ್ ಬಂದಾಗ, ಅವರ ಬದುಕು ಹೇಗೆ ಇರುತ್ತೆ. ನಿತ್ಯ ಅವನ ಲೈಫ್ನಲ್ಲಿ ಏನೆಲ್ಲಾ ಏರಿಳಿತಗಳು ಆಗುತ್ತವೆ. ಸಮಾಜದಲ್ಲಿ ಆ ವಿಷಯವನ್ನು ಹೇಳಿಕೊಳ್ಳಲೂ ಆಗದ ವ್ಯಕ್ತಿಗಳು ಎಷ್ಟೆಲ್ಲಾ ಯಾತನೆ ಅನುಭವಿಸುತ್ತಾರೆ ಎಂಬುದನ್ನು ಹೇಳುವ ಪ್ರಯತ್ನ ಮಾಡುತ್ತಿದ್ದಾರಂತೆ.
ಯಾವ ಭಾಷೆಯಲ್ಲೂ ಈ ಕಂಟೆಂಟ್ ಇರದ ಕಾರಣ, ಅವರು ಇದನ್ನೇ ಇಟ್ಟುಕೊಂಡು ಹೊದ ವ್ಯಾಖ್ಯಾನದೊಂದಿಗೆ ಸಿನಿಮಾ ಮಾಡಲು ಹೊರಟಿದ್ದಾರೆ. ಇನ್ನು ಅವರು ತಮ್ಮದೇ ದಿಶಾ ಎಂಟರ್‌ಟೈನರ್ಸ್ ಬ್ಯಾನರ್‌ನಲ್ಲಿ ಅವರು ಈ ಚಿತ್ರ ನಿರ್ಮಿಸುತ್ತಿದ್ದು, ನಿರ್ದೇಶನ ಮಾಡುತ್ತಿದ್ದಾರೆ. ಸದ್ಯಕ್ಕೆ ಸ್ಕ್ರಿಪ್ಟ್ ಕೆಲಸ ಮುಗಿಸಿದ್ದಾರೆ. ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಕಂಟೆಂಟ್ ಸ್ಟ್ರಾಂಗ್ ಆಗಿರುವುದರಿಂದ ಇಲ್ಲಿ ಇಂಥಹ ನಟರೇ ಬೇಕೆಂಬ ಡಿಮ್ಯಾಂಡ್ ಇಲ್ಲ. ಹೊಸ ಪ್ರತಿಭೆಗಳು ಇಲ್ಲಿರಲಿವೆ. ಚಿತ್ರದ ಕಥೆಯೇ ಇಲ್ಲಿ ಜೀವಾಳ. ಇಲ್ಲಿ ಸಂಬಂಧಗಳ ಮೌಲ್ಯ, ಎಮೋಷನ್ಸ್ ಇತ್ಯಾದಿ ಅಂಶಗಳಿವೆ ಎನ್ನುತ್ತಾರೆ ಆವರು.