Advertisement
ಸಾವು ಇಲ್ಲದ ಊರಲ್ಲಿ ನಾವ್ಯಾರೂ ಹುಟ್ಟಿಲ್ಲ, ನೋವಿಲ್ಲದ ಬೀದಿಯಲ್ಲಿ ನಾವ್ಯಾರೂ ಬದುಕಿಲ್ಲ, ಆಸ್ಪತ್ರೆಗಳಿಗೆ ಖಾಯಿಲೆ ಬಂದಿರಲಿ, ದೇವಸ್ಥಾನಗಳಲ್ಲಿ ಪ್ರಾರ್ಥನೆಗಳು ಛೀರಾಡುತ್ತಿರಲಿ. ಸೊಂಟದ ಮೇಲೆ ಕೊಡ ಹೊರುವ ಹೆಣ್ಮಕ್ಕಳನ್ನು ನೋಡಿ ಕಲೀರಿ, ಕಣ್ಣೀರ ಕೊಡವನ್ನು ಇಳಿಸಿ ಒಮ್ಮೆ ನಗಿ. ಎಲ್ಲರ ತಥದಧನ ಆದ ಮೇಲೆ ಪಫಬಭಮ ಇರಬಹುದು, ಆದರೆ ದ, ಧ ನಂತರ ಬರೋ ನೆಗೆಟಿವ್ ಬಿಟ್ಟು, ಫ,ಬ, ಭ, ಮ ಮೊದಲೇ ಬರೋ ಪಾಸಿಟಿವ್ ಅನ್ನು ಮನದುಂಬಿಕೊಳ್ಳಿ.
Related Articles
Advertisement
ಬದುಕ ಮನ್ನಿಸು ಪ್ರಭುವೇ ಯಾಕೆ ಕೌನ್ಸಲಿಂಗ್‌ಗಳ ಸಂಖ್ಯೆ ಹೆಚ್ಚಿವೆ? ಆತ್ಮಹತ್ಯೆಗೆ ಅವಳು, ಅವನು, ಇವರು, ಅವರು ಹೋಗಿ ಹೋಗಿ ಬೀಳುತ್ತಾರೆ? ನಾಲ್ಕು ಸಲ ಫೋನ್ ಚೆಕ್ ಮಾಡಿ, ಫೇಸ್‌ಬುಕ್ ತಿರುವಿ ಹಾಕಿ, ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು, ಕಣ್ತುಂಬ ಸೀರಿಯಲ್ಲು ಗೋಳನ್ನು ಸುರುವಿಕೊಂಡು, ಕೆಲಸಕ್ಕೆ ಹೋಗಿ ಬೈಸಿಕೊಂಡು, ಗೆಳತಿ ಹತ್ತಿರ ಜಗಳವಾಡಿಕೊಂಡು ಸಂಜೆ ಬೇಸರದ ಒಣತುಟಿಯನ್ನು ಕಣ್ಣ ನೀರಿನ ಒದ್ದೆ ಸವರಿದೆ? ಯಾಕೆ ಟೀವಿ ಹಾಕಿದರೆ ಬರೇ ನೆಗೆಟಿವ್ ಸುದ್ದಿಗಳು, ಯಾಕೆ ಅಕ್ಕನ ಗಂಟಲ ಸೆರೆಯುಬ್ಬಿದೆ, ಯಾಕೆ ಎಲ್ಲರೂ ತಮ್ಮ ತಮ್ಮದೇ ನೋವು, ಸಂಕಟಗಳಲ್ಲಿ ತುಂಬಿ ತುಳುಕುತ್ತಿದ್ದಾರೆ? ಯಾಕೆ ಕೆಲವೇ ವರ್ಷಗಳ ಆಯಸ್ಸು ಎಷ್ಟೋ ಜನುಮಗಳ ಸಂಕಷ್ಟದ ಗಂಟಿನಂತೆ ತೋರತೊಡಗುತ್ತದೆ? ಜೀವನದಲ್ಲಿ ಏನೂ ಉಳಿದೇ ಇಲ್ಲ ಅಂತ ತೀರ್ಮಾನಿಸಿ ಸತ್ತವರ ಕಳೇವರಗಳು ದಿನಕ್ಕೆ ಏಳೆಂಟಾದರೂ ಯಾಕೆ ಕಣ್ಮುಂದೆ ಟಿವಿ ಪರದೆ ಮೇಲೆ ಸಾಗಿ ಹೋಗುತ್ತವೆ? ಔಷಧವೇ ಇಲ್ಲದ ಖಾಯಿಲೆಯಂತಾಗಿರೋ ಬದುಕನ್ನು ಮುಗಿಸಬೇಕಾ, ಏಗಬೇಕಾ, ಹೊತ್ತು ಸಾಗಬೇಕೋ, ಸೋಲಬೇಕಾ, ಗೆಲ್ಲಬೇಕಾ? ನಮ್ಮ ಹೆಚ್ಚಿನ ದುಃಖಗಳು ಬಹುಶಃ ಯಾವುದು ಇರಬಹುದೆಂದರೆ ನಾಳೆ ಮತ್ತು ನಿನ್ನೆ. ಸೋಲು ಮತ್ತು ಸೊನ್ನೆ. ಹಾಗಾಯ್ತು ಹೀಗಾಯ್ತು ಅಂತ ಹೇಳ್ಳೋದು ಕೆಲವರ ಗೋಳು, ಹಾಗಾದ್ರೆ ಹೀಗಾದ್ರೆ ಅಂತ ಇನ್ನೂ ಕೆಲವರ ಅಳಲು. ಸೋತೆ ಅಂತ ಅಳುವುದು, ಸೋಲಬಹುದು ಅಂತ ಭ್ರಮಿಸುವುದು, ಸೋತರೆ ಹಿಂಜರಿಯುವುದು, ನನ್ನ ಬದುಕೇ ಒಂದು ಪ್ರಶ್ನೆ ಪತ್ರಿಕೆಯಂತೆ, ಅದಕ್ಕೆ ಕೊಡುವ ಅಂಕ ಸೊನ್ನೆಯಂತೆ ಅಂತ ಭಾವಿಸಿ ತನ್ನನ್ನು ತಾನು ಕೀಳಾಗಿ ಕಂಡುಕೊಳ್ಳುವುದು. ಇಂಥ ಪೇರಿಸಿಟ್ಟ ಮೆಣಸಿನಕಾಯಿಯ ಉರಿ ಉರಿ ಮಾರುಕಟ್ಟೆಯಲ್ಲಿ ಸಣ್ಣ ಬೆಲ್ಲದ ತುಂಡು ಸೇರಿಕೊಂಡರೂ ಅದನ್ನ ಬಾಯಿಗಿಟ್ಟಾಗಲೂ ಖಾರಖಾರವೇ ಆಗಿ ನಾಲಗೆಗೆ ಕಾಣುತ್ತದೆ. ಕತೆ 1
ಅವರು ತುಂಬ ಚೆನ್ನಾಗಿ ಚಿತ್ರ ಬಿಡಿಸುತ್ತಾರೆ, ಅವರು ಚೆನ್ನಾಗಿ ಹಾಡುತ್ತಾರೆ, ಚೆನ್ನಾಗಿ ಕವಿತೆಗಳನ್ನು ಬರೆಯುತ್ತಾರೆ, ಚೆನ್ನಾಗಿಯೂ ಇದ್ದಾರೆ. ಅವರ ಬದುಕಿನ ಬೆರಳು ಯಾವತ್ತೂ ಆಕಾಶಕ್ಕೇ ಮುಖ ಮಾಡಿದೆ, ಅವರ ಆದಾಯವೂ ಕೆಳಮುಖ ಕಂಡಿದ್ದೇ ಇಲ್ಲ. ಬದುಕಲ್ಲಿ ಸಂತೋಷವನ್ನು ಆಹ್ವಾನಿಸಲು ಬೇಕಾದ ಎಲ್ಲಾ ರತ್ನಗಂಬಳಿಗಳೂ ಅವರ ಬಳಿ ಇವೆ. ಆದರೆ ಅವರು ಬದುಕನ್ನು ತುಂಬ ಮಂಕಾಗಿ, ಆತ್ಮ ಮರುಕದಿಂದ ಪರಿಭಾವಿಸುತ್ತಾರೆ, ಜಗತ್ತಿನ ಎಲ್ಲರ ನೋವನ್ನೂ ಅವರ ಬೆರಳ ತುದಿಗೆ ತಂದುಕೊಂಡು, ಕಷ್ಟ ಅಲ್ಲುಂಟು ಇಲ್ಲಿಂಟು ಅಂತ ಕೈ ಎತ್ತಿ ತೋರುತ್ತಾರೆ. ಆವಾಗ ಅವರ ಯಾವುದೇ ಮಾತು, ಕೃತಿ, ಕ್ಷಣ, ಘಳಿಗೆಗಳಲ್ಲೂ ಒಂದು ಪುಟ್ಟ ಸಂತೋಷದ ರೆಕ್ಕೆಯೂ ಹಾರಿ ಬರುವುದಿಲ್ಲ. ಅವರು ಬರೆವ ಚಿತ್ರದಲ್ಲಾದರೂ ಬಂದು ಕೂರಬಹುದಾಗಿದ್ದ ಸಂತೋಷದ ಟಿಟ್ಟಿಬ ಹಕ್ಕಿ, ಕನಸಿಂದಲೂ ಹಾರಿ ಹೋಗಿದೆ. ಬರೆವ ಪೆನ್ನಿನ ಶಾಯಿ, ಚಿತ್ರಿಸುವ ಕುಂಚದ ಬಣ್ಣ ರಕ್ತವರ್ಣಕ್ಕೆ ತಿರುಗಿ ಕಣ್ಣೀರಿನಲ್ಲಿ ಕಲಕಿದೆ. ಕತೆ 2
ಬಹಳ ಸಂತೋಷವಾಗಿ ಕುಣಿದಾಡಿಕೊಂಡಿದ್ದ ಆಕೆಯನ್ನು ಇದ್ದಕ್ಕಿದ್ದ ಹಾಗೇ ಖಾಯಿಲೆ ಬಂದು ಆವರಿಸಿಕೊಂಡಿತು. ಅದು ಅಂಥಿಂಥ ಖಾಯಿಲೆಯಲ್ಲ. ಪ್ರಾಣವನ್ನೇ ತೆಗೆಯಬಲ್ಲ ಖಾಯಿಲೆ. ಆದರೆ ಆ ಖಾಯಿಲೆ ಬಂದ ತಕ್ಷಣ ಆಕೆ ಇದ್ದಕ್ಕಿದ್ದ ಹಾಗೇ ಧಿಗ್ಗನೆ ಎದ್ದು ಕುಳಿತರು, ಆಪರೇಶನ್ನು, ಆಸ್ಪತ್ರೆಯ ಡೆಟ್ಟಾಲ್ ವಾಸನೆ, ನರ್ಸುಗಳ ಬಿಳಿ ಉಡುಪ ಮೆರವಣಿಗೆಯನ್ನು ಕಣ್ಣಿಂದ ತೆಗೆದು ಹಾಕಲು ಇದ್ದಕ್ಕಿದ್ದ ಹಾಗೇ ಓಡಾಡಲು ಶುರು ಮಾಡಿದರು, ಜಗತ್ತನ್ನು ಸುತ್ತಬೇಕೆಂಬ ಯಾವತ್ತಿನದೋ ಸಂತೋಷವನ್ನು ಆಗ ಕಂಡುಕೊಳ್ಳಲು ನಿರ್ಧರಿಸಿದರು. ಮಗ ಬೆಳೆದಿದ್ದಾನೆ, ಗಂಡನಿಗೆ ತನ್ನ ಅಗತ್ಯವೇನಿಲ್ಲ ಅಂತ ಭಾವಿಸಿ ಸುತ್ತಾಡಿದರು, ಹಿಮಗಿರಿಯ ಕಣಿವೆ ಮುಂದೆ ಉಬ್ಬಸದಿಂದ ನಿಂತು, ಎರಡೂ ಮೊಣಕಾಲ ಮೇಲೆ ಕೈ ಇಟ್ಟು ಮೇಲೆತ್ತಿ ನೋಡಿದರೆ ಶೀತಪ್ರಕೃತಿಯ ಗುಡ್ಡವೂ ಕತ್ತೆತ್ತಿ ನಿಂತು, ಜ್ವರವನ್ನು ಧಿಕ್ಕರಿಸಿತ್ತು.
*
ಸುಲಭವಾಗಿ ಮೇಲಿನ ಕತೆಯನ್ನು ತೀರ್ಮಾನಿಸಬಹುದು, ಒಂದು ನೆಗೆಟಿವ್, ಮತ್ತೂಂದು ಪಾಸಿಟಿವ್. ಆದರೆ ಬದುಕು ಯಾವತ್ತೂ ಪಾಸಿಟಿವ್ ಮಾತ್ರ. ನಮ್ಮ ಸುತ್ತಮುತ್ತ ಅಂಥ ಪಾಸಿಟಿವ್ ವೈಬ್ರೇಷನ್ನು, ಎನರ್ಜಿ ಹಲವರಲ್ಲಿ ಕಾಣಸಿಗುತ್ತದೆ. ಗಂಡ್ಮಕ್ಕಳಿಗಿಂತ ಕೆಟ್ಟ ಜೋಕ್ ಮಾಡಬಲ್ಲ ಕೆಲಸದ ಪದ್ದಿ, ಮೌನವಾಗಿಯೇ ಮನೆಗೆ ಬಂದು, ಕೆಲಸಕ್ಕೆ ನಿಂತರೆ ಗಂಡಸರನ್ನೇ ಮೀರಿಸಿ ದುಡಿದು, ಸಂಜೆ ಹೊರಡುವಾಗ ಧಾರಾವಾಹಿ ಕತೆಗೆ ಕಿವಿ ತೆರೆದು, ಕಣ್ಣಗಲಿಸುವ ಶಾರದಾ, ಎದ್ದು ಗಾಳಿ ಸೇವನೆಗೆ ಹೊರಟುಬಿಡುವ ಬಾಣಂತಿ, ಜಗಳ ಕಾದಿದ್ದು ನೆನಪೇ ಇಲ್ಲದಂತೆ ಮರುದಿನ ಬಂದು ಮಾತಾಡಿಸುವ ಗೆಳತಿ, ಕ್ಲಾಸ್‌ನಲ್ಲಿ ಮೆತ್ತಗೆ ಮಾತಾಡುವ ಸಹಪಾಠಿ, ಎಳೆವ ಕಾಲನ್ನು ಎಳೆದುಕೊಳ್ಳುತ್ತಲೇ ಬರುತ್ತಾ, ಚಂದದ ಹೆಣ್ಮಕ್ಕಳು ಕಂಡ ತಕ್ಷಣ ತನಗೇನೂ ಆಗಿಲ್ಲ ಅಂತ ಸಹಜವಾಗಿ ನಡೆಯುವಂತೆ ನಟಿಸುವ ಸಿದ್ಧರಾಜ, ಬಿಸಿಲಲ್ಲಿ ನಿಂತೇ, ದಾಟುವ ಅಜ್ಜಿಯ ಕೈ ಹಿಡಿದು, ಸಾಗುವ ಟ್ರಾಫಿಕ್ಕನ್ನು ಜಗ್ಗಿ ನಿಲ್ಲಿಸುವ ಪೊಲೀಸಪ್ಪ- ಎಲ್ಲರೂ ಪಾಸಿಟಿವೇ.
ಒಂದು ಕಾಗಪ್ಪ ಹಂಸಕ್ಕನ ಕತೆಯೊಂದಿಗೆ ಈ ಮಾತನ್ನು ಮುಗಿಸೋಣ: ಒಂದು ಕಾಗೆ. ಅದು ಸಂತೋಷವಾಗಿತ್ತಂತೆ, ಹಂಸವೊಂದನ್ನ ನೋಡೋತನಕ. ಹಂಸಾನ ನೋಡಿದ್ದೇ ನೋಡಿದ್ದು, ಅಯ್ಯೋ ಅದು ಬಿಳಿ, ನಾನು ಕಪ್ಪು ಅಂತ ಕೊರಗಲಾರಂಭಿಸಿತು. ಹಂಸವನ್ನ ಕೇಳಿದರೆ ಅದು ಹೇಳ್ತಂತೆ, ಅಯ್ಯೋ ನಾನೂ ಖುಷಿಯಾಗಿದ್ದೆ, ಗಿಣಿ ನೋಡೋತನಕ. ಗಿಣಿಗೆ ನೋಡು, ಎರಡೆರೆಡು ಬಣ್ಣ. ಗಿಳಿಯನ್ನ ಹೋಗಿ ಕೇಳಿದರೆ ಅದೂ ಖುಷಿಯಾಗಿತ್ತಂತೆ, ಎಲ್ಲಿತನ್ಕ ನವಿಲನ್ನ ನೋಡೋತನಕ. ತನಗಾದರೆ ಎರಡೇ ಬಣ್ಣ, ನವಿಲಿಗೆ ಮೈಯೆಲ್ಲಾ ಬಣ್ಣಬಣ್ಣ. ನವಿಲನ್ನ ಹುಡುಕ್ಕೊಂಡು ಕಾಗೆ ಒಂದು ಪಕ್ಷಿ ಸಂಗ್ರಹಾಲಯದತನಕ ಹೋಯ್ತಂತೆ, ಅಯ್ಯೋ ನೀನೇನ್ ಭಾಗ್ಯವಂತ ಅಂತ ಹೇಳ್ತಂತೆ. ಅದಕ್ಕೆ ನವಿಲು ಹೇಳ್ತಂತೆ: “ಅಯ್ಯೋ ನಾನೂ ಹಾಗೇ ಅಂದೊRಂಡಿದ್ದೆ, ನೋಡಿದ್ರೆ ಇಷ್ಟೊಂದ್ ಬಣ್ಣ ಇರೋದಕ್ಕೇ ನಾನ್ ಡಿಫರೆಂಟ್, ಅದಕ್ಕೇ ನನ್ನ ತಗೊಂಡ್ ಬಂದು ಈ ಝೂನಲ್ಲಿಟ್ಟಿದ್ದಾರೆ, ಇಲ್ಲ ಅಂದಿದ್ರೆ ನಾನೂ ನಿನ್ನ ಥರ ಕಾಡು, ಮೇಜು, ಆಕಾಶದಲ್ಲಿ ಹಾರಾಡ್ಕೊಂಡ್ ಇರ್ತಿದ್ದೆ, ನಂಗೆ ನಿನ್ನ ಥರ ಕಾಗೆ ಆಗ್ಬೇಕು ಅಂತ ಆಸೆ!’
ಸಂತೋಷ ಅನ್ನೋದನ್ನ ಸಂತೋಷದಲ್ಲೇ ಹುಡುಕಬೇಕು, ದುಃಖದಲ್ಲಲ್ಲ, ಕೊಳಕು ಕೊಚ್ಚೆಯಲ್ಲಿ ಚಿನ್ನದ ಉಂಗುರವೇ ಸಿಕ್ಕರೂ ಅದು ಮಸುಕಾಗಿರತ್ತಂತೆ. ಹಾಗಂತ ಚಿನ್ನದ್ದು ಅಂತ ಸೂಜಿ ಆಗಿದ್ದರೆ ಚುಚ್ಚುಕೊಳ್ಳೋದಕ್ಕೂ ಆಗಲ್ಲ.
ನಮ್ ನಿಮ್ಮ ಕೈಲಿರೋ ಮೊಬೈಲ್‌ನ ಕವರ್‌ನಲ್ಲಿ ಚಿಟ್ಟೆ ಚಿತ್ರ ಇದ್ದರಷ್ಟೇ ಸಾಲದು, ಮನಸೊÕಳಗೊಂದು ಚಿಟ್ಟೆ ಫಡಫಡಿಸಬೇಕೆಂದರೆ ನಾವು ಭಾರವಾಗಬಾರದು, ಹಗುರಾಗಬೇಕು.
ಮತ್ತೆ ಸಕ್ಕರೆಯಾಗಿ, ಮುತ್ತಿಕೊಳ್ಳುವುದಕ್ಕೆ ನೂರು ಸಂತೋಷದ ಇರುವೆಗಳು ಕಾದುಕೊಂಡಿವೆ. – ಪೂರ್ಣಿಮಾ ಕಳ್ಳಂಬಳ್ಳ