ಕುಮಟಾ: ಮಧುಮೇಹ ಸಪ್ತಾಹದ ಅಂಗವಾಗಿ ಇಲ್ಲಿನ ಲಯನ್ಸ್ ಕ್ಲಬ್, ಭಾರತೀಯ ವೈದ್ಯಕೀಯ ಸಂಘ, ನೆಲ್ಲಿಕೇರಿ ಬೆಣ್ಣೆ ಪಿಯು ಕಾಲೇಜಿನ ಎನ್‌ಎಸ್‌ಎಸ್ ಘಟಕದ ಸಂಯುಕ್ತ ಆಶ್ರಯದಲ್ಲಿ ಮಧುಮೇಹ ಜಾಗೃತಿ ಹಾಗೂ ಮಾಹಿತಿ ಕಾರ್ಯಕ್ರಮ ನಡೆಯಿತು.
ಜಾಥಾಕ್ಕೆ ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ನಾಯ್ಕ ಚಾಲನೆ ನೀಡಿ, ಮಧುಮೇಹ ಎಂಬುದು ಇಂದಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಕಂಡುಬರುತ್ತಿದೆ ಎಂಬುದು ಬೇಸರದ ಸಂಗತಿ. ಆರೋಗ್ಯ ಮತ್ತು ಶಿಕ್ಷಣ ಉತ್ತಮವಾಗಿದ್ದರೆ ಮನುಷ್ಯ ಏನು ಬೇಕಾದರೂ ಸಾಧಿಸಲು ಸಾಧ್ಯ ಎಂದರು.
ತಿನ್ನುವ ಪ್ರತಿಯೊಂದು ಆಹಾರದಲ್ಲೂ ಸಂಶಯ ಮೂಡುವ ಸ್ಥಿತಿ ಇಂದಿನ ಸಮಾಜದಲ್ಲಿ ನಿರ್ಮಾಣವಾಗಿದೆ. ಮನುಷ್ಯನ ದುರಾಸೆಯಿಂದ ದಿನದಿಂದ ದಿನಕ್ಕೆ ಕಲಬೆರಕೆ ಪದಾರ್ಥಗಳು ಹೆಚ್ಚುತ್ತಿವೆ. ಕಾಯಿಲೆಗಳಿಗೆ ತುತ್ತಾಗುವ ಮೊದಲು ಮುನ್ನೆಚ್ಚರಿಕಾ ಕ್ರಮಗಳನ್ನು ಪ್ರತಿಯೊಬ್ಬರು ರೂಢಿಸಿಕೊಳ್ಳುವುದು ಅಗತ್ಯ. ಸಮಯಕ್ಕೆ ತಕ್ಕಂತೆ ವ್ಯಾಯಾಮ, ಯೋಗಾಸನಗಳನ್ನು ದಿನಚರಿಯಲ್ಲಿ ಅಳವಡಿಸಿಕೊಂಡರೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಲು ಸಾಧ್ಯ. ಸಾರ್ವಜನಿಕರಿಗಾಗಿ ಇಂತಹ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಪ್ರತಿವರ್ಷ ನ.14ನ್ನು ವಿಶ್ವ ಮಧುಮೇಹ ದಿನವಾಗಿ ಆಚರಿಸಲಾಗುತ್ತದೆ. ಮತ್ತು ಇಡೀ ವಾರವನ್ನು ಮಧುಮೇಹ ಸಪ್ತಾಹವೆಂದು ಪರಿಗಣಿಸಿ ಮಧುಮೇಹದ ಜಾಗೃತಿ ಕುರಿತು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಕುಮಟಾ ಲಾಯನ್ಸ್ ಕ್ಲಬ್ ಮಧುಮೇಹದ ಬಗ್ಗೆ ಸಾಮಾನ್ಯ ಜನರಿಗೆ ತಿಳಿವಳಿಕೆ ನೀಡುವ ಉದ್ದೇಶದಿಂದ ಜಾಗೃತಿ ಜಾಥಾ ಹಾಗೂ ಮಾಹಿತಿ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಲಾಯನ್ಸ್ ಅಧ್ಯಕ್ಷ ಡಾ| ಪ್ರಕಾಶ ಪಂಡಿತ ತಿಳಿಸಿದರು.
ಬಗ್ಗೊಂ ರಸ್ತೆಯ ಲಯನ್ಸ್ ಕ್ಲಬ್ ಸಭಾಭವನದಿಂದ ಹೊರಟ ಜಾಗೃತಿ ಜಾಥಾವು ಗಿಬ್ ಸರ್ಕಲ್ ಮುಖಾಂತರ ಬಸ್ತಿಪೇಟೆ, ನೆಲ್ಲಿಕೇರಿ ಹಳೆ ಬಸ್‌ನಿಲ್ದಾಣದಿಂದ ಮಾಸ್ತಿಕಟ್ಟೆ ಸರ್ಕಲ್ ಬಳಿ ಅಂತ್ಯಗೊಂಡಿತು.
ಐಎಂಎ ಕುಮಟಾ ಘಟಕದ ಅಧ್ಯಕ್ಷ ಡಾ| ವೆಂಕಟೇಶ ಶಾನಭಾಗ, ಎನ್‌ಎಸ್ ಎಸ್ ಕುಮಟಾ ಘಟಕದ ಸಂಚಾಲಕ ಪ್ರೊ| ಗಣೇಶ ಭಟ್, ಲಾಯನ್ಸ್ ಕ್ಲಬ್‌ನ ಗಿರೀಶ ಕುಚ್ಚಿನಾಡ, ರಘುನಾಥ ದಿವಾಕರ, ವಿಷ್ಣು ಪಟಗಾರ, ಮಂಗಲಾ ನಾಯ್ಕ, ಬೀರಣ್ಣ ನಾಯಕ, ರೇವತಿರಾವ್, ಎಚ್.ಎನ್. ನಾಯ್ಕ, ವಿ.ಐ. ಹೆಗಡೆ, ಎಮ್.ಎನ್ ಹೆಗಡೆ, ಲಾಯನ್ಸ್ ರೇವಣಕರ್ ಕಣ್ಣಿನ ಆಸ್ಪತ್ರೆಯ ಡಾ| ನವೀನ್ ಹಾಗೂ ಸಿಬ್ಬಂದಿ ಜಾಥಾದಲ್ಲಿ ಪಾಲ್ಗೊಂಡಿದ್ದರು.