ಮಣಿಪಾಲ : ದಿಯಾ ಸಿನಿಮಾ ಮೂಲಕ ಚಂದನವನದಲ್ಲಿ ಹೆಸರು ಗಿಟ್ಟಿಸಿಕೊಂಡ ಹೊಸ ಮೊಗ ಅಂದ್ರೆ ಪೃಥ್ವಿ ಅಂಬಾರ್. ಲಾಕ್ ಡೌನ್ ಸಮಯವೇ ಇವರಿಗೆ ವರವಾಗಿ, ನಂತರ ಹತ್ತಾರು ಅವಕಾಶಗಳು ಸಿಗುವಂತಾಯಿತು. ಈ ಯುವ ನಾಯಕ ಉದಯವಾಣಿ ನಡೆಸಿಕೊಡುವ ‘ತೆರೆದಿದೆ ಮನೆ ಬಾ ಅತಿಥಿ’ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಮ್ಮ ಸಿನಿಮಾ ಜರ್ನಿಯನ್ನು ಹಂಚಿಕೊಂಡಿದ್ದಾರೆ.
ತೆರೆಮರೆಯಿಂದ ಮುನ್ನೆಲೆಗೆ ಬಂದ ಕಥೆ ಹೇಳಿ : ಗಾಯನ, ನೃತ್ಯ, ಮಾರ್ಷಲ್ ಆರ್ಟ್, ನಿರೂಪಣೆ ಮಾಡಿಕೊಂಡಿದ್ದ ನನಗೆ ದಿಯಾ ಸಿನಿಮಾ ಹೆಸರು ಕೊಟ್ಟಿತು. ಕೆಲವು ಬಾರಿ ಕೆಲವು ಸಮಯಗಳು ನಮ್ಮನ್ನು ಬೇರೊಂದು ಮಟ್ಟಕ್ಕೆ ಕರೆದೊಯ್ಯುತ್ತವೆ ಎಂಬುದಕ್ಕೆ ನನ್ನ ದಿಯಾ ಸಿನಿಮಾವೇ ಸಾಕ್ಷಿ. ನಮ್ಮದು ಮಿಡ್ಡಲ್ ಕ್ಲಾಸ್ ಜೀವನ. ಇಲ್ಲಿಂದ ಬಂದ ನನಗೆ ಸಿನಿಮಾದಲ್ಲಿ ಹೆಸರು ಮಾಡಲು ಸುಮಾರು 13 ವರ್ಷಗಳೇ ಬೇಕಾಯಿತು.
ದಿಯಾ ಬಗ್ಗೆ ಏನ್ ಹೇಳ್ತೀರಾ : ದಿಯಾ ನನಗೆ ಲೈಫ್ ಕೊಟ್ಟ ಚಿತ್ರ. ಇದಕ್ಕಾಗಿ ನಾವು ಆರು ವರ್ಷ ಕೆಲಸ ಮಾಡಿದ್ದೇವೆ. ಅಶೋಕ್ ಸರ್ ಈ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದು, ಲಾಕ್ ಡೌನ್ ವೇಳೆ ರಿಲೀಸ್ ಆಗಿದ್ದೇ ನಮಗೆ ವರವಾಯ್ತು. ಒಟಿಟಿಯಲ್ಲಿ ಭಾರೀ ಪ್ರಮಾಣದ ಮೆಚ್ಚುಗೆ ಸಿಕ್ಕಿತು. ಕನ್ನಡಿಗರು ನಮ್ಮನ್ನ ಕೈ ಹಿಡಿದ್ರು.
ಪೃಥ್ವಿ ಬಾಲಿವುಡ್ ಗೆ ಹಾರಿದ್ರು ಎಂಬ ಮಾತು ಕೇಳ್ತಾ ಇದೆ : ಹೌದು, ದಿಯಾ ಸಿನಿಮಾ ಹಿಂದಿಯಲ್ಲೂ ರಿಮೇಕ್ ಆಗುತ್ತಿದೆ. ಈ ಸಿನಿಮಾದಲ್ಲೂ ನಾನೇ ಹೀರೋ ಆಗಿ ಬಣ್ಣ ಹಚ್ಚುತ್ತಿದ್ದೇನೆ. ದಿಯಾ ಸಿನಿಮಾ ನಿರ್ದೇಶಕ ಅಶೋಕ್ ಅವರಿಂದ ಹಿಂದಿಯ ಈ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು.
ಶಿವಪ್ಪ ಶೂಟಿಂಗ್ ವೇಳೆ ಶಿವಣ್ಣನ ಜೊತೆ ಇದ್ದ ಅನುಭವ : ಅದೊಂದು ಅದ್ಭುತ ಅನುಭವ. ಅಷ್ಟು ದೊಡ್ಡ ನಟರ ಜೊತೆ ತೆರೆ ಹಂಚಿಕೊಳ್ಳುವುದೇ ಒಂದು ದೊಡ್ಡ ಖುಷಿ. ಇಡೀ ಶಿವಪ್ಪ ಚಿತ್ರದಲ್ಲಿ ಮುಕ್ಕಾಲು ಭಾಗ ಶಿವಣ್ಣ ಜೊತೆಯಲ್ಲೇ ಇರುತ್ತೇನೆ. ಶಿವರಾಜ್ ಕುಮಾರ್ ನಮ್ಮಂತ ಯುವ ನಟರಿಗೆ ಸ್ಪೂರ್ತಿ. ಅವರಲ್ಲಿರುವ ಉತ್ಸುಕತೆ ಮತ್ತು ಹೊಸದನ್ನು ಕಲಿಯುವ ಆಸಕ್ತಿ ತುಂಬಾ ದೊಡ್ಡದು.
ಪುನೀತ್ ಜೊತೆ ಸಿನಿಮಾ ಮಾಡ್ತೀರಂತೆ ನಿಜಾನಾ : ಸದ್ಯಕ್ಕೆ ಮಾಡ್ತಿಲ್ಲ. ಆದ್ರೆ ಮುಂದೊಂದು ದಿನ ಮಾಡುವ ಆಸೆ ಇದೆ. ನನ್ನ ದಿಯಾ ಸಿನಿಮಾವನ್ನು ನೋಡಿ ಅಪ್ಪು ಸರ್ ತುಂಬಾ ಮೆಚ್ಚಿಕೊಂಡಿದ್ರು. ನನಗೆ ಕಾಲ್ ಮಾಡಿ ಖುಷಿ ಪಟ್ಟಿದ್ರು. ಆ ವೇಳೆ ನಡೆದ ಕಾಲ್ ಸಂಭಾಷಣೆಯ ಆಡಿಯೋ ವೈರಲ್ ಆಗಿದ್ದು, ಅದಕ್ಕೆ ಎಲ್ಲರೂ ನನ್ನನ್ನು ಪುನೀತ್ ಜೊತೆ ಸಿನಿಮಾ ಮಾಡ್ತೀಯ ಅಂತ ಕೇಳಿದ್ರು ಅಷ್ಟೆ.
ಮುಂಬರುವ ಸಿನಿಮಾಗಳ ಬಗ್ಗೆ : ಸದ್ಯ ನಾನು ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ಲೈಫ್ ಈಸ್ ಬ್ಯೂಟಿಫುಲ್, ಶುಗರ್ ಲೆಸ್, ಶಿವಪ್ಪ ಮತ್ತು ತುಳುವಿನಲ್ಲಿ ಇಂಗ್ಲಿಷ್ ಸಿನಿಮಾದಲ್ಲಿ ನಟಿಸಿದ್ದೇನೆ. ಈ ಸಿನಿಮಾ ಇದೇ 26ಕ್ಕೆ ರಿಲೀಸ್ ಆಗುತ್ತಿದೆ.
ನಿಮ್ಮ ನಟನೆಯ ಹಿಂದಿನ ಸೀಕ್ರೆಟ್ ಹೇಳಿ ; ನಾನು ನಿಜವಾಗಿಯೂ ನಟನೆಯನ್ನು ಯಾವುದೇ ಶಾಲೆಗೆ ಹೋಗಿ ಕಲಿತಿಲ್ಲ. ಅವಕಾಶಗಳು ಸಿಕ್ಕಾಗ ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡೆ. ಅಲ್ಲದೆ ನನ್ನಲ್ಲಿದ್ದ ನಿರೂಪಣೆ, ಡ್ಯಾನ್ಸಿಂಗ್, ಹಾಡುಗಾರಿಕೆಯೇ ನನ್ನನ್ನು ನಟನನ್ನಾಗಿ ಮಾಡಿದೆ. ಅಲ್ಲದೆ ಕನ್ನಡಿಗರ ಪ್ರೋತ್ಸಾಹ ನನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ.