ದೇವನಹಳ್ಳಿ: ಹಾಕಿ ಕ್ರೀಡೆ ರಾಷ್ಟ್ರೀಯ ಕ್ರೀಡೆಯನ್ನಾಗಿಸಿದ ಆಟಗಾರ ಧ್ಯಾನ್‌ಚಂದ್ ಅವರ ಕೊಡುಗೆ ಬಗೆಗೆ ಪ್ರತಿ ಕ್ರೀಡಾಪಟುಗಳು ತಿಳಿದುಕೊಳ್ಳಬೇಕು ಎಂದು ಶಾಸಕ ಎಲ್.ಎನ್.ನಾರಾಯಣಸ್ವಾಮಿ ತಿಳಿಸಿದರು. ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ಬೆಟ್ಟಕೋಟೆ ಗ್ರಾಮದ ಶ್ರೀ ರಾಮಕೃಷ್ಣ ಗ್ರಾಮಾಂತರ ಪ್ರೌಢಶಾಲೆ ಆವರಣದಲ್ಲಿ ಜಿಲ್ಲಾಡಳಿತ ಮತ್ತು ಜಿಪಂ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಶಿಕ್ಷಣ ಇಲಾಖೆ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಸಹಯೋಗದೊಂದಿಗೆ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಮತ್ತು ಧ್ಯಾನ್‌ಚಂದ್ ಅವರ ಜನ್ಮದಿನದ ಪ್ರಯುಕ್ತ ಜಿಲ್ಲಾಮಟ್ಟದ ಮುಕ್ತ ಹಾಕಿ ಪಂದ್ಯಾವಳಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಧ್ಯಾನ್‌ಚಂದ್ ಅವರು ಮೇಜರ್ ಆಗಿದ್ದರು. ಹಾಕಿ ಕ್ರೀಡೆಗೆ ಭದ್ರ ಬುನಾದಿ ಹಾಕಿದವರು. ಇಡೀ ವಿಶ್ವದಲ್ಲಿಯೇ ಭಾರತವನ್ನು ಗುರ್ತಿಸುವಂತೆ ಹಾಕಿ ಮೂಲಕ ತೋರಿಸಿದ ಹೆಗ್ಗಳಿಕೆ ಅವರಿಗೆ ಸಲ್ಲಬೇಕು. ವಿದ್ಯಾರ್ಥಿಗಳು ಪಠ್ಯಕ್ಕೆ ನೀಡುವಷ್ಟೇ ಪ್ರಾಮುಖ್ಯತೆ ಪಠ್ಯೇತರ ಚಟುವಟಿಕೆಗೂ ನೀಡಬೇಕು. ಹಾಕಿಯಲ್ಲಿ ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟ ಹಾಗೂ ಅಂತಾರಾಷ್ಟ್ರೀಯ ಮಟ್ಟವನ್ನು ಪ್ರತಿನಿಧಿಸುವ ಶಕ್ತಿ ವಿದ್ಯಾರ್ಥಿಗಳಲ್ಲಿ ಬರಬೇಕು. ಸ್ಪರ್ಧೆಗಳಲ್ಲಿ ಸೋಲು-ಗೆಲುವು ಇದ್ದೇ ಇರುತ್ತದೆ ಎಂದರು.
ವಿದ್ಯಾರ್ಥಿ ಕೃಷ್ಣವೇಣಿ ಮಾತನಾಡಿ, ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಅವರ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದೇವೆ. ರಾಷ್ಟ್ರೀಯ ಮಟ್ಟದಲ್ಲಿ ಹಾಕಿ ಕ್ರೀಡೆಯನ್ನು ಪರಿಚಯಿಸಿದ ಮೊಟ್ಟಮೊದಲಿಗರು ಇವರಾಗಿದ್ದು, ಮೂರು ಬಾರಿ ಪದಕಗಳನ್ನು ದೇಶಕ್ಕೆ ತಂದುಕೊಟ್ಟಂತಹ ಕೀರ್ತಿ ಅವರಿಗೆ ಸಲ್ಲುತ್ತದೆ. 4 ಸಾವಿರ ವರ್ಷಗಳ ಇತಿಹಾಸವನ್ನು ಹಾಕಿ ಕ್ರೀಡೆ ಹೊಂದಿದೆ. ದೇಶಕ್ಕೆ ಮೊದಲ ಬಾರಿ ಕೋಲ್ಕತ್ತಾ ದಿಂದ ಹಾಕಿ ಪ್ರಾರಂಭವಾಗಿ ಇಡೀ ದೇಶಕ್ಕೆ ಪರಿಚಯವಾಗಿದೆ. ಉತ್ತರ ಪ್ರದೇಶದಲ್ಲಿ ಜನಿಸಿದವರು ಧ್ಯಾನ್ ಚಂದ್‌ರಿಗೆ ಪದ್ಮಭೂಷಣ ಮತ್ತು ಮೇಜರ್ ಹುದ್ದೆಗಳನ್ನು ನೀಡಿ ಗೌರವಿಸಿದೆ ಎಂದು ಹೇಳಿದರು.
ಜಿಪಂ ಸದಸ್ಯ ಕೆ.ಸಿ.ಮಂಜುನಾಥ್ ಮಾತನಾಡಿ, ಬೆಟ್ಟಕೋಟೆ ಗ್ರಾಮಾಂತರ ಪ್ರೌಢಶಾಲೆಯ ಮಕ್ಕಳು ಹಾಕಿ ಕ್ರೀಡೆಯಲ್ಲಿ ಹೆಚ್ಚು ಪ್ರಸಿದ್ಧಿ ಹೊಂದಿದ್ದಾರೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹಾಕಿ ಕ್ರೀಡೆಯಲ್ಲಿ ಪಾಲ್ಗೊಂಡು ಗೆಲುವು ಸಾಧಿಸಿದ್ದಾರೆ. ಹಾಕಿ ಎಂದರೆ ಬೆಟ್ಟಕೋಟೆ ಪ್ರತಿಯೊಬ್ಬರಿಗೂ ತಿಳಿಯುತ್ತದೆ. ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹವನ್ನು ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದ ಅಶ್ವಥ್‌ನಾರಾಯಣ್ ಅವರ ಪರಿಶ್ರಮದಿಂದ ಹಾಕಿಯಲ್ಲಿ ಉತ್ತಮ ಹೆಸರು ಮಾಡುವಂತೆ ಆಗಿದೆ. ಧ್ಯಾನ್ ಚಂದ್ ಅವರು ಸ್ವಾತಂತ್ರ ಪೂರ್ವದಲ್ಲಿಯೇ ಹ್ಯಾಟ್ರಿಕ್ ಗೋಲ್ ಭಾರಿಸಿದ್ದರು. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದರು.
ಜಿಪಂ ಉಪಾಧ್ಯಕ್ಷೆ ಕನ್ಯಾಕುಮಾರಿ, ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ರಾಧಮ್ಮ, ತಾಪಂ ಅಧ್ಯಕ್ಷೆ ಚೈತ್ರ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮಂಜುನಾಥ್, ಸದಸ್ಯ ಮುನೇಗೌಡ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಮಾರುತಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮುನಿರಾಜು, ತಾಲೂಕು ಸೊಸೈಟಿ ಮಾಜಿ ಅಧ್ಯಕ್ಷ ಶ್ರೀನಿವಾಸ್ ಮೂರ್ತಿ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಆರ್.ಗೀತಾ, ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣಸ್ವಾಮಿ, ಗ್ರಾಪಂ ಅಧ್ಯಕ್ಷೆ ಸೌಮ್ಯ, ಉಪಾಧ್ಯಕ್ಷೆ ಪಾರ್ವತಮ್ಮ ಇತರರಿದ್ದರು.
ಕ್ರೀಡೆ ಮತ್ತು ಶಿಕ್ಷಣ ಒಂದೇ ನಾಣ್ಯದ ಎರಡು ಮುಖಗಳು. ಯಾವುದೇ ಕ್ರೀಡೆ ಅಥವಾ ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ. ಹಾಗಾಗೀ ಎಲ್ಲರೂ ಸ್ಪರ್ಧಾ ಮನೋಭಾವದಿಂದ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಎಲ್ಲಾ ಕ್ರೀಡೆಗಳಲ್ಲೂ ಸಕ್ರಿಯವಾಗಿ ಭಾಗವಹಿಸಬೇಕು.
-ಎಲ್.ಎನ್.ನಾರಾಯಣಸ್ವಾಮಿ, ಶಾಸಕ